ಕ್ಷಿ ನಂತರ ಇದೀಗ ಪುಟಿನ್ ಭೇಟಿ; ಪ್ರಧಾನಿ ಮೋದಿ ಲೆಕ್ಕಾಚಾರ ಏನಿರಬಹುದು?

ಕಳೆದ ತಿಂಗಳು ಚೀನಾದ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದ ಮೋದಿ ಅವರು ಇದೀಗ ರಷ್ಯಾದ ಅಧ್ಯಕ್ಷ ಪುಟಿನ್ ಜೊತೆ ಅಂಥದ್ದೇ ಮಾತುಕತೆ ನಡೆಸಿದ್ದಾರೆ. ಇತ್ತೀಚಿಗೆ ರಷ್ಯಾ ಮತ್ತು ಇರಾನ್ ಮೇಲೆ ಟ್ರಂಪ್ ವಿಧಿಸಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಇದು ಕುತೂಹಲ ಮೂಡಿಸಿದೆ

ಡಿ ವಿ ರಾಜಶೇಖರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ನೀತಿಗಳು ಕ್ರಮೇಣ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಲಾರಂಭಿಸಿವೆ. ಮುಖ್ಯವಾಗಿ ರಷ್ಯಾ ಮತ್ತು ಇರಾನ್ ಮೇಲೆ ಟ್ರಂಪ್ ಅವರು ವಿಧಿಸಿರುವ ವಾಣಿಜ್ಯ ವಹಿವಾಟು ನಿರ್ಬಂಧಗಳು ಭಾರತಕ್ಕೆ ಸಮಸ್ಯೆ ತಂದೊಡ್ಡುತ್ತಿವೆ. ಈ ಹಿನ್ನೆಲೆಯಲ್ಲಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಭಾರತಕ್ಕೆ ಈಗ ಬಂದೊದಗಿದೆ.

ಕಳೆದ ತಿಂಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಅಧ್ಯಕ್ಷ ಕ್ಷಿ ಜಿನಪಿಂಗ್ ಅವರನ್ನು ವುಹಾನ್ ನಗರದಲ್ಲಿ ಅನೌಪಚಾರಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಾತುಕತೆ ಉಭಯ ದೇಶಗಳ ಸಮಸ್ಯೆಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅಂತಾರಾಷ್ಟ್ರೀಯ ವಾಣಿಜ್ಯ ಸಂಬಂಧಗಳ ಬಗ್ಗೆಯೂ ಇತ್ತು. ಟ್ರಂಪ್ ಅವರು ಚೀನಾದ ಮೇಲೂ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದರು. ಆ ನಿರ್ಬಂಧಗಳಿಂದ ಚೀನಾದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಆ ಸಂದರ್ಭದಲ್ಲಿ ಮಾರುಕಟ್ಟೆಯ ಹೊಸ ಮಾರ್ಗಗಳನ್ನು ಹುಡುಕುವ ಉದ್ದೇಶವಿಟುಕೊಂಡೇ ಕ್ಷಿ ಅವರು ಭಾರತದ ಜೊತೆಗಿನ ಬಾಂಧವ್ಯ ಸುಧಾರಿಸಿಕೊಳ್ಳಲು ಮೋದಿ ಭೇಟಿಯನ್ನು ಬಳಸಿಕೊಂಡಿದ್ದರು. ಭಾರತಕ್ಕೂ ಚೀನಾದ ಜೊತೆ ಬಾಂಧವ್ಯ ಅಭಿವೃದ್ಧಿ ಮಾಡಿಕೊಳ್ಳುವ ತುರ್ತು ಇತ್ತು. ಹೀಗಾಗಿ ಇಬ್ಬರೂ ತಮ್ಮದೇ ಕಾರಣಗಳಿಗಾಗಿ ಮಾತುಕತೆ ನಡೆಸಿದರು. ಇದೀಗ ಅಂಥದೇ ಸರದಿ ರಷ್ಯಾ ಮತ್ತು ಭಾರತಕ್ಕೆ ಬಂದೊದಗಿದೆ.

ಕ್ರೈಮಿಯಾ ಪ್ರದೇಶವನ್ನು ಅತಿಕ್ರಮಿಸಿಕೊಂಡ ರಷ್ಯಾ ವಿರುದ್ಧ ಅಮೆರಿಕ ಅಷ್ಟೇ ಅಲ್ಲ ಯೂರೋಪ್ ಒಕ್ಕೂಟ ಕೂಡಾ ಆರ್ಥಿಕ, ವಾಣಿಜ್ಯ ನಿರ್ಬಂಧಗಳನ್ನು ಹೇರಿದೆ. ಅಮೆರಿಕದ ಕಳೆದ ಅಧ್ಯಕ್ಷ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮತ್ತಷ್ಟು ಆರ್ಥಿಕ, ವಾಣಿಜ್ಯ ನಿರ್ಬಂಧಗಳನ್ನು ಟ್ರಂಪ್ ಪ್ರಕಟಿಸಿದ್ದಾರೆ. ಹೊಸ ನಿರ್ಬಂಧಗಳ ಪ್ರಕಾರ ರಷ್ಯಾದ ಜೊತೆ ವಾಣಿಜ್ಯ ವಹಿವಾಟು ನಡೆಸುವ ದೇಶಗಳ ವಿರುದ್ಧವೂ ಅಮೆರಿಕ ಕ್ರಮ ತೆಗೆದುಕೊಳ್ಳಲಿದೆ. ಸಮಸ್ಯೆ ಇರುವುದು ಇಲ್ಲಿಯೇ. ಭಾರತ ಶೇ 60 ರಷ್ಟು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಪಡೆಯುತ್ತಿದೆ. ಈ ವಿಚಾರದಲ್ಲಿ ಭಾರತ ಮತ್ತು ರಷ್ಯಾದ ಬಾಂಧವ್ಯ ಹಳೆಯದು. ಅತಿ ಕಷ್ಟ ಕಾಲದಲ್ಲಿ ಭಾರತಕ್ಕೆ ನೆರವಾಗಿರುವ ದೇಶ ರಷ್ಯಾ.

ಟ್ರಂಪ್ ಅವರು ಈಗ ತಂದಿರುವ ವಾಣಿಜ್ಯ ನಿರ್ಬಂಧಗಳು ನೇರವಾಗಿ ಭಾರತ ಮತ್ತು ರಷ್ಯಾ ನಡುವಣ ಮಿಲಿಟರಿ ಬಾಂಧವ್ಯಕ್ಕೇ ಆಘಾತ ಉಂಟುಮಾಡಲಿವೆ. ಬಹುಶಃ ಈ ಬಿಕ್ಕಟಿನಿಂದ ಹೊರಬರುವುದು ಹೇಗೆ ಎಂಬ ವಿಚಾರದಲ್ಲಿ ಚರ್ಚಿಸಲು ಮೋದಿ ಅವರು ಪುಟಿನ್ ಭೇಟಿ ಮಾಡಿರುವುದು ಖಚಿತ. ಅಮೆರಿಕದ ಆಡಳಿತ ಇನ್ನೂ ಭಾರತದ ಮೇಲೆ ಆ ನಿರ್ಬಂಧಗಳನ್ನು ಹೇರಿಲ್ಲ ಎನ್ನುವುದು ನಿಜವಾದರೂ ಶೀಘ್ರದಲ್ಲಿಯೇ ಅವು ಬರಲಿವೆ. ನಿರ್ಬಂಧಗಳು ಜಾರಿಗೆ ಬಂದರೆ ರಷ್ಯಾದ ವಾಣಿಜ್ಯ ವಹಿವಾಟಿನ ಮೇಲಷ್ಟೇ ಪರಿಣಾಮ ಬೀರುವುದಿಲ್ಲ, ಅಮೆರಿಕದ ಜೊತೆಗಿನ ವಾಣಿಜ್ಯ ಮತ್ತಿತರ ಬಾಂಧವ್ಯದ ಮೇಲೂ ಪರಿಣಾಮ ಆಗಲಿದೆ. ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ವಿಶ್ವಾಸವನ್ನು ಉಭಯ ನಾಯಕರು ವ್ಯಕ್ತ ಮಾಡಿದ್ದಾರೆ. ಆದರೆ ಸಮಸ್ಯೆ ಉದ್ಭವವಾದಾಗಲೇ ಅದರ ಪರಿಣಾಮ ಅರ್ಥವಾಗುವುದು.

ಇರಾನ್ ಮೇಲೂ ಟ್ರಂಪ್ ಅವರು ವಾಣಿಜ್ಯ ವಹಿವಾಟು ನಿರ್ಬಂಧಗಳನ್ನು ಹೇರಿದ್ದಾರೆ. ಅವು ಅತ್ಯಂತ ಕಠಿಣವಾದುವು ಎಂದು ಅವರೇ ವರ್ಣಿಸಿದ್ದಾರೆ. ಇರಾನ್ ಮತ್ತು ಭಾರತದ ವಾಣಿಜ್ಯ ಬಾಂಧವ್ಯ ಹಳೆಯದು. ಭಾರತದಲ್ಲಿ ಬಳಕೆಯಾಗುವ ಶೇ 60 ಭಾಗ ತೈಲ ಇರಾನ್‍ನಿಂದ ಆಮದು ಮಾಡಿಕೊಂಡದ್ದು. ತೈಲ, ಅನಿಲಕ್ಕಾಗಿ ಭಾರತವು ಇರಾನ್ ದೇಶವನ್ನೇ ಅವಲಂಬಿಸಿದೆ. ಇದು ಇಂದಿ ನಿನ್ನೆಯದಲ್ಲ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ವಹಿವಾಟು. ಹಿಂದಿನಿಂದಲೂ ಅಮೆರಿಕವು ಇರಾನ್ ಮೇಲೆ ನಿರ್ಬಂಧಗಳನ್ನು ಹೇರುತ್ತ ಬಂದಿದೆ. ಭಾರತ ನೇರವಾಗಿ ಇರಾನ್‍ನಿಂದ ತೈಲ ಸಾಗಾಣಿಕ ಮಾಡಿಕೊಳ್ಳಲು ಹೆಣಗಾಡುತ್ತ ಬಂದಿದೆ. ಹಣಕೊಡಲೂ ನಿರ್ಬಂಧಗಳು ಅಡ್ಡಿಯಾಗುತ್ತಿವೆ. ಡಾಲರ್‍ಗೆ ಬದಲಾಗಿ ಯೂರೋ ಕರೆನ್ಸಿಯಲ್ಲಿಯೇ ಹಣ ಸಂದಾಯಮಾಡಲಾಗುತ್ತಿದೆ. ಈಗ ಅಮೆರಿಕ ಅದಕ್ಕೂ ಕುತ್ತು ತರುವ ಸಾಧ್ಯತೆ ಕಾಣುತ್ತಿದೆ.

ಇದನ್ನೂ ಓದಿ : ರಷ್ಯಾ ವರ್ಚಸ್ಸು ಮರುಸ್ಥಾಪನೆಗೆ ಒಲವು; ಅಧ್ಯಕ್ಷರಾಗಿ ಪುಟಿನ್ ಮತ್ತೆ ಆಯ್ಕೆ

ಇರಾನ್ ಜೊತೆಗೆ ಯಾವುದೇ ರೀತಿಯ ವಹಿವಾಟು ನಡೆಸದಂತೆ ನಿರ್ಬಂಧಗಳನ್ನು ಹೇರಲಾಗಿರುವುದರಿಂದ ಬಿಕ್ಕಟ್ಟು ಉದ್ಭವವಾಗುವ ಸಂಭವವಿದೆ. ಅಂಥ ಸಂದರ್ಭದಲ್ಲಿ ಮಧ್ಯಪ್ರಾಚ್ಯ ದೇಶಗಳಿಂದ ಹೆಚ್ಚು ಹಣಕೊಟ್ಟು ತೈಲ ಪಡೆಯಬಹುದಾದರೂ ಅದೊಂದು ತಾತ್ಕಾಲಿಕ ಪರಿಹಾರ ಮಾತ್ರ ಆಗಬಹುದಷ್ಟೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ರಷ್ಯಾ ಮಾತುಕತೆ ನಡೆಸಿದ್ದು ಉತ್ತಮ ಬೆಳವಣಿಗೆ ಎನ್ನುವುದರಲ್ಲಿ ಅನುಮಾನವಿಲ್ಲ. ಅದರಲ್ಲಿಯೂ ಭಾರತ, ಚೀನಾ ಮತ್ತು ರಷ್ಯಾ ನಡುವೆ ಉತ್ತಮ ಬಾಂಧವ್ಯ ಸಾಧಿತವಾದರೆ ಅಮೆರಿಕದ ಒತ್ತಡವನ್ನು ಎದುರಿಸುವುದು ಅಷ್ಟು ಕಷ್ಟವಾಗಲಾರದು ಎನ್ನುವುದು ಒಂದು ಲೆಕ್ಕಾಚಾರ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಏರುತ್ತಿರುವುದು ಭಾರತಕ್ಕೆ ದೊಡ್ಡ ಹೊಡೆತ. ಅಪಾರ ಪ್ರಮಾಣದಲ್ಲಿ ಹಣವನ್ನು ತೈಲ ಆಮದಿಗೆ ಭಾರತ ವೆಚ್ಚಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಇರಾನ್‍ಗೆ ಸಂಬಂಧಿಸಿದ ನಿರ್ಬಂಧಗಳನ್ನು ಅಮೆರಿಕದ ಆಡಳಿತ ಭಾರತದ ಮೇಲೂ ಹೇರಲು ಆರಂಭಿಸಿದರೆ ನಿಜವಾದ ಆರ್ಥಿಕ ಸಂಕಷ್ಟ ಎದುರಾಗಲಿದೆ. ಈ ಸಂಕಷ್ಟದಿಂದ ಹೊರಬರಲು ರಷ್ಯಾ, ಚೀನಾ ಮೈತ್ರಿ ನೆರವಾಗುವುದೇ ಎನ್ನವುದು ಕುತೂಹಲಕಾರಿ.

Vladimir Putin Donald Trump ಅಮೆರಿಕ Russia America ಡೊನಾಲ್ಡ್‌ ಟ್ರಂಪ್‌ ರಷ್ಯಾ ತೈಲ ಮಾರುಕಟ್ಟೆ PM Narendra Modi ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಿ ಎಂ ನರೇಂದ್ರ ಮೋದಿ
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?