ಕಿಮ್ ಜೊತೆಗಿನ ಶೃಂಗಸಭೆ ರದ್ದು ಮಾಡಿದ ಟ್ರಂಪ್; ಆಘಾತ ತಂದ ನಿರ್ಧಾರ

ಉ.ಕೊರಿಯಾ ಅಧ್ಯಕ್ಷ ಕಿಮ್ ಜೊತೆ ಸಿಂಗಪುರದಲ್ಲಿ ಮುಂದಿನ ಜೂ.12ರಂದು ನಡೆಯಬೇಕಿದ್ದ ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಹಠಾತ್ತನೆ ರದ್ದು ಮಾಡಿದ್ದಾರೆ. ಈ ನಿರ್ಧಾರವು ಅಂತಾರಾಷ್ಟ್ರೀಯವಾಗಿ ಅಮೆರಿಕದ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದ್ದು, ಟ್ರಂಪ್ ಟೀಕೆಗೆ ಒಳಗಾಗಿದ್ದಾರೆ

ಡಿ ವಿ ರಾಜಶೇಖರ

ಏನಾಯಿತು? ಟ್ರಂಪ್ ಹಠಾತ್ತನೆ ಮಾತುಕತೆ ರದ್ದು ಮಾಡಿದ್ದು ಏಕೆ? ಯಾರಿಗೂ ಗೊತ್ತಿಲ್ಲ. ದಕ್ಷಿಣ ಕೊರಿಯಾಗೂ ಗೊತ್ತಿರಲಿಲ್ಲ. ಜಪಾನ್ ಮತ್ತು ಚೀನಾಕ್ಕಂತೂ ಸೂಚನೆಯೇ ಇರಲಿಲ್ಲ. ಟ್ರಂಪ್ ಪ್ರಕಟಣೆ ಹೊರಬಿದ್ದ ತಕ್ಷಣ ಮಧ್ಯರಾತ್ರಿಯಲ್ಲಿಯೇ ಸಂಪುಟದ ತುರ್ತು ಸಭೆ ನಡೆಸಿದ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್, ಈ ಬೆಳವಣಿಗೆ ಬಗ್ಗೆ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ. ತಾವು ನಡೆಸಿದ ಪ್ರಯತ್ನಗಳು ವಿಫಲವಾದದ್ದರ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಜಪಾನ್ ಕೂಡ ಅಚ್ಚರಿ ಹೊರಹಾಕಿದೆ. ಚೀನಾ ಅದೊಂದು ಪ್ರಮುಖ ವಿಷಯವೆಂದೇ ಪರಿಗಣಿಸಿಲ್ಲ. ಚೀನಾ ಕಮ್ಯುನಿಸ್ಟ್ ಪಾರ್ಟಿಯ ಅಧಿಕೃತ ಪತ್ರಿಕೆ ಆ ಸುದ್ದಿಯನ್ನು 21ನೇ ಪುಟದಲ್ಲಿ ಪ್ರಕಟಿಸಿದೆ. ಶೃಂಗಸಭೆ ರದ್ದು ಮಾಡಿದ ಟ್ರಂಪ್ ನಿರ್ಧಾರದ ಬಗ್ಗೆ ವಿರೋಧಿ ಡೆಮಾಕ್ರಟಿಕ್ ಪಕ್ಷದ ನಾಯಕರು ಗೇಲಿ ಮಾಡಿದ್ದಾರೆ.

ಟ್ರಂಪ್ ಯಾವ ನಿರ್ಧಾರಗಳನ್ನೂ ಸರಿಯಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಇದೂ ಒಂದು ಉದಾಹರಣೆ ಎಂದು ಅವರು ಟೀಕಿಸಿದ್ದಾರೆ. ಉತ್ತರ ಕೊರಿಯಾ ಜೊತೆ ಮಾತುಕತೆ ವಿಚಾರವನ್ನು ಟ್ರಂಪ್ ಈ ಹಿಂದೆ ಹಠಾತ್ತನೆ ಪ್ರಕಟಿಸಿದ್ದರು. ಆಗಲೇ ಈ ಮಾತುಕತೆಯನ್ನು ಟ್ರಂಪ್ ರದ್ದು ಮಾಡಬಹುದಾದ ಸಾಧ್ಯತೆಗಳ ಬಗ್ಗೆ ಜನರು ತಮಾಷೆ ಮಾಡಿದ್ದರು. ಈಗ ಅದೇ ಆಗಿದೆ. ರದ್ದು ಮಾಡುವುದು ಅವರಿಗೆ ಒಂದು ರೀತಿಯ ಖುಷಿ. ತಾಪಮಾನ ಕುರಿತ ಪ್ಯಾರಿಸ್ ಒಪ್ಪಂದ, ಕ್ಯೂಬಾ, ಇರಾನ್ ಜೊತೆಗಿನ ಒಪ್ಪಂದ, ಹೀಗೆ ಹಿಂದಿನ ಸರ್ಕಾರದ ಹಲವು ನಿರ್ಧಾರಗಳನ್ನು ರದ್ದು ಮಾಡಿದ್ದಾರೆ. ಅದೇ ದಾರಿಯಲ್ಲಿಯೇ ಈಗ ಉತ್ತರ ಕೊರಿಯಾ ಜೊತೆಗಿನ ಮಾತುಕತೆ ರದ್ದಾಗಿದೆ ಎಂದು ಅಪಹಾಸ್ಯ ಮಾಡಲಾಗುತ್ತಿದೆ.

ಟ್ರಂಪ್ ಅವರ ಈ ನಿರ್ಧಾರಗಳು ಅಂತಾರಾಷ್ಟ್ರೀಯವಾಗಿ ಅಮೆರಿಕದ ವಿಶ್ವಾಸಾರ್ಹತೆಗೆ ಧಕ್ಕೆ ತಂದಿವೆ. ಟ್ರಂಪ್ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲದಂಥ ಸ್ಥಿತಿ ಬಂದಿದೆ. ಟ್ರಂಪ್ ಅವರ ನಿಲುವುಗಳು ಅಂತಾರಾಷ್ಟ್ರೀಯ ಬಾಂಧವ್ಯಗಳನ್ನೇ ತಲೆಕೆಳಗು ಮಾಡಿವೆ. ವಾಣಿಜ್ಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅವರ ನಿರ್ಧಾರಗಳು ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಉತ್ತರ ಕೊರಿಯಾ ಜೊತೆಗಿನ ನೇರ ಮಾತುಕತೆ ರದ್ದು ಮಾಡಿರುವುದರಿಂದ ಕೊರಿಯಾ ಬಿಕ್ಕಟ್ಟು ಉಲ್ಬಣಗೊಂಡಂತಾಗಿದೆ.

ಶೃಂಗಸಭೆ ಮಾಡಿರುವ ಟ್ರಂಪ್, ಆ ಕುರಿತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‍ಗೆ ಒಂದು ಪತ್ರ ಬರೆದಿದ್ದಾರೆ. “ಪ್ರಚೋದನಕಾರಿ ಮಾತು ಮತ್ತು ಅಪಾಯಕಾರಿ ಪ್ರತಿಕೂಲದ ನಡೆಗಳು ಇಂಥ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯಿತು,” ಎಂದು ಟ್ರಂಪ್ ಪತ್ರದಲ್ಲಿ ತಿಳಿಸಿದ್ದಾರೆ. ಅಂಥದ್ದೇನಾಯಿತು ಎನ್ನುವುದು ಬಹಿರಂಗವಾಗಿಲ್ಲ. ಆದರೆ, ಕೆಲವು ವಿಚಾರಗಳು ರಾಜಕೀಯ ವಲಯದಲ್ಲಿ ಪ್ರಸ್ತಾಪವಾಗುತ್ತಿವೆ. ಟ್ರಂಪ್ ಅವರ ಜೊತೆ ಶೃಂಗಸಭೆ ಘೋಷಣೆ ಆದ ನಂತರವೂ ಅಮೆರಿಕ ಮತ್ತು ದಕ್ಷಿಣ ಕೊರಿಯಾ ತನ್ನ ಜಂಟಿ ಮಿಲಿಟರಿ ಕವಾಯತನ್ನು ಸಂಘಟಿಸಿದ್ದು ಉತ್ತರ ಕೊರಿಯಾವನ್ನು ರೇಗಿಸಿತ್ತು. ಉತ್ತರ ಕೊರಿಯಾ ಪ್ರತಿಭಟಿಸಿದ ನಂತರವೂ ಎರಡೂ ದೇಶಗಳು ವಾಯು ಮತ್ತು ನೌಕಾಪಡೆ ಕವಾಯತು ನಡೆಸಿದವು.

ಕೋಪಗೊಂಡ ಉತ್ತರ ಕೊರಿಯಾದ ನಾಯಕರು ದಕ್ಷಿಣ ಕೊರಿಯಾ ಜೊತೆ ಬಾಂಧವ್ಯು ಕಡಿತ ಮಾಡುವುದಾಗಿ ಘೋಷಿಸಿದರು. ಇದು ಟ್ರಂಪ್ ಅವರಿಗೆ ಇಷ್ಟವಾಗಲಿಲ್ಲ. ಟ್ರಂಪ್ ಜೊತೆ ಮಾತುಕತೆ ಸಫಲವಾದರೆ ತನ್ನಲ್ಲಿರುವ ಪರಮಾಣು ತಂತ್ರಜ್ಞಾನವನ್ನು ನಾಶ ಮಾಡುವುದಾಗಿ ಉತ್ತರ ಕೊರಿಯಾ ಘೋಷಿಸಿತ್ತು. ಹೇಗೆ ನಾಶ ಮಾಡಬೇಕು, ಅದಕ್ಕೆ ಅನುಸರಿಸಬೇಕಾದ ವಿಧಾನಗಳಾವುವು ಎಂಬ ಬಗ್ಗೆ ಅಮೆರಿಕದ ಆಡಳಿತದಲ್ಲಿ ಚರ್ಚೆ ನಡೆದಿತ್ತು. ಆ ಸಂದರ್ಭದಲ್ಲಿ ಲಿಬಿಯಾ ಮಾದರಿ ಅನುಸರಿಸಬಹುದು ಎಂದು ಅಮೆರಿಕದ ಉಪಾಧ್ಯಕ್ಷ ಪೆನ್ಸ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಬೋಲ್ಟನ್ ಅವರು ಸಲಹೆ ಮಾಡಿದ್ದರು. ಅಮೆರಿಕ ಪ್ರಸ್ತಾಪಿಸಿದ ಲಿಬಿಯಾ ಮಾದರಿ ಉತ್ತರ ಕೊರಿಯಾವನ್ನು ಕೆರಳಿಸಿತ್ತು. ಅದಕ್ಕೆ ಕಾರಣವೂ ಇತ್ತು. ಲಿಬಿಯಾ ಪ್ರಕರಣದಲ್ಲಿ ಪರಮಾಣು ತಂತ್ರಜ್ಞಾನವನ್ನು ನಾಶ ಮಾಡಿದ ನಂತರದ ದಿನಗಳಲ್ಲಿ ಅದಕ್ಕೆ ಒಪ್ಪಿದ್ದ ಆ ದೇಶದ ಅಧ್ಯಕ್ಷ ಮುಮ್ಮರ್ ಗಡಾಫಿ ಅವರನ್ನು ಕೊಲ್ಲಲಾಯಿತು. ಕಿಮ್ ಅವರ ಕೋಪಕ್ಕೆ ಕಾರಣವಾದದ್ದು ಇದೇ.

ಇದನ್ನೂ ಓದಿ : ಬೆರಗಿನ ಜೊತೆ ಸಂಶಯಕ್ಕೂ ಕಾರಣವಾದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ನಡೆ

ಅಮೆರಿಕ ತನ್ನನ್ನೂ ಮುಗಿಸಲು ಯೋಚಿಸುತ್ತಿರಬಹುದು ಎಂಬ ಅನುಮಾನ ಕಿಮ್ ಅವರಲ್ಲಿ ಮೂಡಿತು. ಬಹುಶಃ ಇದೇ ಕಾರಣಕ್ಕೆ ಶೃಂಗಸಭೆ ತಯಾರಿಗೆ ಉತ್ತರ ಕೊರಿಯಾ ಅಧಿಕಾರಿಗಳು ಅಷ್ಟೇನೂ ಉತ್ಸಾಹ ತೋರಿಸಲಿಲ್ಲ ಎನ್ನಲಾಗಿದೆ. ಟ್ರಂಪ್ ಅವರಿಗೆ ಈ ಅಸಹಕಾರ ಧೋರಣೆ ಇಷ್ಟವಾಗಲಿಲ್ಲ. ಹೀಗಾಗಿ, ಉತ್ತರ ಕೊರಿಯಾ ಜೊತೆಗೆ ಮಾತುಕತೆಯ ಸಮಸ್ಯೆಯೇ ಬೇಡ ಎಂದು ಶೃಂಗಸಭೆಯನ್ನು ರದ್ದು ಮಾಡಿದ್ದಾರೆ ಎಂದು ಊಹಿಸಲಾಗಿದೆ. ಕಿಮ್ ಜೊತೆಗೆ ಮಾತುಕತೆ ನಡೆಸಲು ತೀರ್ಮಾನಿಸಿದಾಗಲೂ ಟ್ರಂಪ್ ಯಾರೊಡನೆಯೂ ಮಾತುಕತೆ ನಡೆಸಿರಲಿಲ್ಲ. ಈಗ ಶೃಂಗಸಭೆ ರದ್ದು ಮಾಡಿದ ನಿರ್ಧಾರ ಘೋಷಿಸುವ ಮೊದಲೂ ಯಾರೊಂದಿಗೂ ಚರ್ಚಿಸಿಲ್ಲದಿರುವುದು ಟ್ರಂಪ್ ಅವರ ಸರ್ವಾಧಿಕಾರಿ ಧೋರಣೆಗೆ ನಿದರ್ಶನ. ಟ್ರಂಪ್ ಅವರ ನಿರ್ಧಾರ ಸರಿಯೋ ತಪ್ಪೋ ಎನ್ನುವುದು ಬೇರೆ ವಿಚಾರ; ಆದರೆ, ಅವರ ಆಡಳಿತ ಶೈಲಿ ಭಾರಿ ಟೀಕೆಗೆ ಒಳಗಾಗಿದೆ. ಶೃಂಗಸಭೆ ರದ್ದು ಮಾಡಿದ್ದರೂ ಎಂದು ಬೇಕಾದರೂ ತಾವು ಮಾತುಕತೆಗೆ ಸಿದ್ಧ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಹೇಳಿದ್ದಾರಾದರೂ ಮುಂದೇನಾಗುತ್ತದೆ ಎನ್ನುವುದನ್ನು ಈಗಲೇ ಊಹಿಸುವುದು ಕಷ್ಟ.

ಉತ್ತರ ಕೊರಿಯಾ ಮೇಲೆ ಕಠಿಣ ಆರ್ಥಿಕ, ವಾಣಿಜ್ಯ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದೆಂದು ಟ್ರಂಪ್ ಹೇಳಿದ್ದಾರೆ. ಚೀನಾ ಜೊತೆ ಉತ್ತರ ಕೊರಿಯಾ ಉತ್ತಮ ವಾಣಿಜ್ಯ ಬಾಂಧವ್ಯ ಹೊಂದಿದೆ. ಹೊಸ ನಿರ್ಬಂಧಗಳು ಜಾರಿಗೆ ಬಂದರೆ ಚೀನಾ ಸಂಕಷ್ಟಕ್ಕೆ ಒಳಗಾಗುತ್ತದೆ. ಅಮೆರಿಕ ಈಗಾಗಲೇ ಚೀನಾ ಮೇಲೂ ವಾಣಿಜ್ಯ ನಿರ್ಬಂಧಗಳನ್ನು ಹೇರಿದೆ. ಇದರಿಂದ ಚೀನಾಕ್ಕೆ ತುಂಬಾ ತೊಂದರೆಯಾಗುತ್ತಿದೆ. ನಿಂರ್ಬಧಗಳನ್ನು ಸಡಿಲಗೊಳಿಸಲು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಟ್ರಂಪ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ನಿರ್ಬಂಧಗಳು ಸಡಿಲಗೊಳ್ಳುವ ಸಾಧ್ಯತೆಗಳಿವೆ. ಇಂಥ ಸಂದರ್ಭದಲ್ಲಿ ಉತ್ತರ ಕೊರಿಯಾ ಮೇಲಿನ ನಿಂರ್ಬಂಧಗಳು ಚೀನಾವನ್ನು ಮತ್ತಷ್ಟು ಸಂಕಷ್ಟಕ್ಕೆ ಒಳಗುಮಾಡುತ್ತದೆ. ಉತ್ತರ ಕೊರಿಯಾ ಚೀನಾಕ್ಕೆ ತಂದೊಡ್ಡಿರುವ ಸಮಸ್ಯೆ ಇದು. ಇನ್ನು, ಯಾವ್ಯಾವ ದೇಶಕ್ಕೆ ಸಮಸ್ಯೆ ತಂದೊಡ್ಡುತ್ತದೆ ಎನ್ನುವುದು ಮುಂಬರುವ ದಿನಗಳಲ್ಲಿ ಬಯಲಾಗಲಿದೆ.

North Korea ಉತ್ತರ ಕೊರಿಯಾ Donald Trump ಅಮೆರಿಕ ಚೀನಾ China America Kim Jong-un ಕಿಮ್ ಜಾಂಗ್ ಉನ್ ಡೊನಾಲ್ಡ್‌ ಟ್ರಂಪ್‌ South Korea ದಕ್ಷಿಣ ಕೊರಿಯಾ
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?