ಟರ್ಕಿ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾದ ಎರ್ಡೋಗನ್; ಸರ್ವಾಧಿಕಾರಕ್ಕೆ ಜನಮನ್ನಣೆ

ತೀವ್ರ ಕುತೂಹಲ ಕೆರಳಿಸಿದ್ದ ಟರ್ಕಿ ಚುನಾವಣೆಯಲ್ಲಿ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರು ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ಎರ್ಡೋಗನ್ ಅವರು ಕಳೆದ 15 ವರ್ಷಗಳಿಂದ ಪ್ರಧಾನಿಯಾಗಿ, ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದು, ಇದೀಗ ಇನ್ನೂ ಐದು ವರ್ಷ ಕಾಲ ಆಡಳಿತ ನಡೆಸಲಿದ್ದಾರೆ

ಡಿ ವಿ ರಾಜಶೇಖರ

ತೀವ್ರ ಪ್ರತಿಸ್ಪರ್ಧೆ ಎದುರಿಸುತ್ತಿದ್ದ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರು ಟರ್ಕಿಯ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ, ಆಡಳಿತಾರೂಢ ಜಸ್ಟೀಸ್ ಡೆವಲಪ್‍ಮೆಂಟ್ ಪಾರ್ಟಿ (ಎಕೆಪಿ) ಕೂಡ ಸಂಸತ್ ಚುಣಾವಣೆಗಳಲ್ಲಿ ಮತ್ತೆ ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮತ್ತು ಸಂಸತ್ತಿಗೆ ಒಟ್ಟಿಗೆ ಚುನಾವಣೆಗಳು ಇದೇ ಭಾನುವಾರ ನಡೆದಿದ್ದು, ಅಧಿಕೃತವಾಗಿ ಮಂಗಳವಾರ ಫಲಿತಾಂಶಗಳು ಪ್ರಕಟವಾಗುವ ನಿರೀಕ್ಷೆ ಇದೆ. ಅವರ ವಿರುದ್ಧ ಸ್ಪರ್ಧಿಸಿದ್ದ ಎಡಪಂಥೀಯ, ಜಾತ್ಯತೀತ ಪಕ್ಷವೆಂದೇ ಕರೆಯಲಾದ ಸಿಎಚ್‍ಪಿಯ ಅಧ್ಯಕ್ಷ ಈಗ ಜೈಲಿನಲ್ಲಿರುವ ಸೆಲೆಹೆಟ್ಟಿನ್ ಡೆಮಿಟ್ರಸ್ ಸೋಲು ಕಂಡಿದ್ದಾರೆ.

ಎರ್ಡೋಗನ್ ಅವರು ಕಳೆದ 15 ವರ್ಷಗಳಿಂದ ಪ್ರಧಾನಿಯಾಗಿ, ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದು, ಇದೀಗ ಇನ್ನೂ ಐದು ವರ್ಷ ಕಾಲ ಆಡಳಿತ ನಡೆಸಲಿದ್ದಾರೆ. 2016ರಲ್ಲಿ ಅವರ ವಿರುದ್ಧ ವಿಫಲ ಕ್ಷಿಪ್ರ ಕ್ರಾಂತಿ ನಡೆದು, ಅವರನ್ನು ಪದಚ್ಯುತಗೊಳಿಸುವ ಯತ್ನ ನಡೆಯಿತು. ಅದನ್ನು ಮಿಲಿಟರಿ ಬಲದಿಂದ ದಮನ ಮಾಡಿದ ಎರ್ಡೋಗನ್ ಅವರು, ಅಧಿಕಾರವನ್ನು ಬಲಪಡಿಸಿಕೊಳ್ಳಲು ತುರ್ತುಪರಿಸ್ಥಿತಿ ಘೋಷಿಸಿದ್ದರು. ನಂತರ ಅಧ್ಯಕ್ಷರ ಅಧಿಕಾರ ಹೆಚ್ಚಿಸಿಕೊಳ್ಳುವ ದಿಸೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದರು. ಕಳೆದ ವರ್ಷದ ಏಪ್ರಿಲ್‍ನಲ್ಲಿ ಈ ಪ್ರಸ್ತಾವನೆ ಬಗ್ಗೆ ಜನಮತ ಗಣನೆ ಮಾಡಲಾಯಿತು. ಅವರ ಪ್ರಸ್ತಾವನೆಗೆ ಜನರು ಒಪ್ಪಿಗೆ ಕೊಟ್ಟ ನಂತರ 2019ಕ್ಕೆ ನಡೆಯಬೇಕಿದ್ದ ಚುನಾವಣೆಗಳನ್ನು 18 ತಿಂಗಳ ಮೊದಲೇ ನಡೆಸಿದರು. ಲೆಕ್ಕಾಚಾರದಂತೆಯೇ ಅವರಿಗೆ ಗೆಲುವಾಗಿದೆ. ಅಧ್ಯಕ್ಷರಿಗೆ ಅಪರಿಮಿತ ಅಧಿಕಾರ ಸಂವಿಧಾನದತ್ತವಾಗಿಯೇ ಈಗ ಸಿಕ್ಕಿದೆ. ಪ್ರಧಾನಿ ಸ್ಥಾನ ರದ್ದಾಗಲಿದೆ. ಸುಪ್ರೀಂ ಕೋರ್ಟ್‍ಗೆ ಹಿರಿಯ ನ್ಯಾಯಮೂರ್ತಿಗಳನ್ನು ನೇಮಿಸುವ ಅಧಿಕಾರ ಈಗ ಅಧ್ಯಕ್ಷರಿಗೆ ಇದೆ. ತಮಗೆ ಬೇಕಾದವರನ್ನು ಮಂತ್ರಿಗಳನ್ನಾಗಿ ನೇಮಿಸಿಕೊಳ್ಳಬಹುದು. ದೇಶದ ಭದ್ರತೆ ವಿಚಾರದಲ್ಲಿ ಅವರದೇ ಅಂತಿಮ ನಿರ್ಧಾರ. ಒಂದು ರೀತಿಯಲ್ಲಿ ಅವರು ಸರ್ವಾಧಿಕಾರಿ; ಪ್ರಜಾತಂತ್ರದ ಮಾದರಿಯಲ್ಲಿ ಆಯ್ಕೆಯಾದ ಸರ್ವಾಧಿಕಾರಿ.

ಟಿರ್ಕಿ ಆರ್ಥಿಕ ಸಂಕಷ್ಟದಲ್ಲಿದೆ. ಹಣದುಬ್ಬರ ಜನರನ್ನು ಕಂಗಾಲಾಗಿಸಿದೆ. ಜೊತೆಗೆ ಸಿರಿಯಾ ಬಿಕ್ಕಟಿನಿಂದಾಗಿ ವಿಚಿತ್ರ ಒತ್ತಡಕ್ಕೆ ಒಳಗಾಗಿದೆ. ಸಿರಿಯಾ ಸಂಘರ್ಷದಲ್ಲಿ ಇಸ್ಲಾಮಿಕ್ ಉಗ್ರರನ್ನು ನಾಶಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಟರ್ಕಿಯವರೇ ಆದ ಖರ್ದ್‍ರ ವಿರುದ್ಧ ಹೋರಾಡಬೇಕಾಗಿದೆ. ಟರ್ಕಿಯಲ್ಲಿ ಖರ್ದರು ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಈಗ ಅವರು ಸಿರಿಯಾ ಯುದ್ಧದಲ್ಲಿ ಯಶಸ್ಸು ಸಾಧಿಸಿದ್ದು ಅನೇಕ ಪ್ರದೇಶಗಳ ಹಿಡಿತ ಸಾಧಿಸಿದ್ದಾರೆ. ಅಲ್ಲಿ ನೆಲೆಯೂರಲು ಅವರಿಗೆ ಅವಕಾಶ ನೀಡಿದರೆ ಮುಂದೆ ತಮಗೆ ದೊಡ್ಡ ತಲೆನೋವಾಗಬಹುದೆಂಬ ಊಹೆ ಎರ್ಡೋಗನ್ ಅವರದ್ದು. ಹೀಗಾಗಿ, ಟರ್ಕಿ ಸೇನೆ ಸಿರಿಯಾದ ಖರ್ದ್ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ವಿಚಿತ್ರ ಎಂದರೆ, ಸಂಸತ್ ಚುನಾವಣೆಗಳಲ್ಲಿ ಖರ್ದ್‍ರ ಎಚ್‍ಡಿಪಿ 67 ಸ್ಥಾನಗಳನ್ನು ಗೆದ್ದಿದೆ. ಮುಖ್ಯ ವಿರೋಧ ಪಕ್ಷವಾದ ಸಿಎಚ್‍ಪಿ 146 ಸ್ಥಾನಗಳನ್ನು ಗೆದ್ದಿದ್ದರೆ, ಆಡಳಿತ ಎಕೆಪಿ 290 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ ಎರ್ಡೋಗನ್ ಅವರ ಆಡಳಿತದ ದಾರಿ ಸುಗಮವಾಗಿಲ್ಲ.

ಇದೇನೇ ಇದ್ದರೂ, ಮುಸ್ಲಿಮ್ ಜಗತ್ತಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತ ಬಂದಿರುವ ಎರ್ಡೋಗನ್ ಮುಂದೆಯೂ ಗಮನಾರ್ಹರಾಗಿ ಉಳಿಯಲಿದ್ದಾರೆ. ಮುಸ್ಲಿಮ್ ಜಗತ್ತಿನಲ್ಲಿ ಒಂದು ರೀತಿಯ ಸಮತೋಲನ ಸಾಧಿಸಲು ಎರ್ಡೋಗನ್ ಮೊದಲಿನಿಂದ ಪ್ರಯತ್ನಿಸುತ್ತಲೂ ಬಂದಿದ್ದಾರೆ. ಸುನ್ನಿ ದೇಶವಾದರೂ ಷಿಯಾ ಪ್ರಾಬಲ್ಯದ ಇರಾನ್ ಜೊತೆ ಬಾಂಧವ್ಯ ಉತ್ತಮ ಬಾಂಧವ್ಯ ಬೆಳೆಸಿದ್ದರು. ಅದೇ ರೀತಿ, ಸಿರಿಯಾ ಅಧ್ಯಕ್ಷ ಅಸ್ಸಾದ್ ಜೊತೆಗೂ ಬಾಂಧವ್ಯ ಹೊಂದಿದ್ದರು. ಬಾಂಧವ್ಯದಲ್ಲಿ ಈಗ ಸ್ವಲ್ಪ ಏರುಪೇರಾಗಿದ್ದರೂ ಎರ್ಡೋಗನ್ ಅವರು ಮುಸ್ಲಿಮ್ ದೇಶಗಳಲ್ಲಿ ಸಮತೋಲನದ ನಾಯಕರೆಂದೇ ಹೆಸರಾಗಿದ್ದಾರೆ. ಅಷ್ಟೇ ಅಲ್ಲ ಅಮೆರಿಕ, ಬ್ರಿಟನ್‍ನಂಥ ಉದಾರ ನೀತಿಯ ದೇಶಗಳ ಜೊತೆ, ಅಂತೆಯೇ ಕಮ್ಯನಿಸ್ಟ್ ದೇಶ ರಷ್ಯಾದ ಜೊತೆಗೂ ಉತ್ತಮ ಬಾಂಧವ್ಯ ಸಾಧಿಸಿದವರು.

ಇನ್ನು, ಇಸ್ಲಾಮ್ ಧರ್ಮ ವಿಚಾರದಲ್ಲಿಯೂ ಉದಾರ ಧೋರಣೆ ಮತ್ತು ಪಾಶ್ಚಾತ್ಯರ ಉದಾರವಾದವನ್ನು ಸ್ವಲ್ಪಮಟ್ಟಿಗೆ ಅಳವಡಿಸಿಕೊಳ್ಳಲು ಅವಕಾಶ ನೀಡಿದ ವಿಧಾನ ಎರ್ಡೋಗನ್ ಅವರ ಹೊಸ ಮಾದರಿಯೆಂದೇ ಹೆಸರಾಗಿದೆ. ಆಡಳಿತದಲ್ಲಿ ಧರ್ಮವನ್ನು ಬೆರೆಸದ, ಧರ್ಮನಿರಪೇಕ್ಷ ಮತ್ತು ಅಧ್ಕಕ್ಷರಿಗೆ ಹೆಚ್ಚು ಅಧಿಕಾರವಿರುವ, ಸಂವಿಧಾನಾತ್ಮಕ, ಆಧುನಿಕ ಮತ್ತು ಉದಾರವಾದಿ ಮುಸ್ಲಿಮ್ ದೇಶವಾಗಿ ಟರ್ಕಿಯನ್ನು ಪರಿಭಾವಿಸಲಾಗುತ್ತಿದೆ. ಇದನ್ನೇ ಟರ್ಕಿ ಮಾದರಿ ಎಂದು ಕರೆಯಲಾಗುತ್ತಿದೆ. ಭಾರತದಿಂದ ಹಿಡಿದು ಯೋರೋಪಿನವರೆಗೆ ಆಡಳಿತಾರೂಢರು ಬಹುಪಾಲು ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ ಅಥವಾ ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಸ್ವಲ್ಪ ಧರ್ಮ, ಸ್ವಲ್ಪ ಸರ್ವಾಧಿಕಾರ, ಸ್ವಲ್ಪ ಪ್ರಜಾತಂತ್ರ, ಸ್ವಲ್ಪ ಪಾಶ್ಚಾತ್ಯ ಉದಾರವಾದ ಬೆರೆಸಿ ಅಧಿಕಾರ ನಡೆಸುವುದೇ ಈ ಮಾರ್ಗ.

ಇದನ್ನೂ ಓದಿ : ಮುಸ್ಲಿಂ ಮಹಿಳೆಯರ ಉಡುಗೆ ವಿಷಯದಲ್ಲಿ ಟರ್ಕಿ, ಟ್ಯುನೀಷಿಯಾ ಮಾದರಿ ಆಗಬಾರದೇ?

ಆದರೆ, ಇತ್ತೀಚಿನ ವರ್ಷಗಳಲ್ಲಿ ಟರ್ಕಿಯಲ್ಲಿ ಈ ಮಾದರಿ ದಿಕ್ಕುತಪ್ಪುತ್ತಿರುವಂತೆ ಕಾಣುತ್ತಿದೆ. ಎರ್ಡೋಗನ್ ಅವರ ಸರ್ವಾಧಿಕಾರಿ ಧೋರಣೆ ವಿರೋಧಿಸಿ ಟರ್ಕಿಯಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಚಳವಳಿ ನಡೆಯುತ್ತ ಬಂದಿದೆ. 2016ರಲ್ಲಿ ವಿಫಲ ಕ್ಷಿಪ್ರ ಕ್ರಾಂತಿ ಯತ್ನ ನಡೆಯಿತು. ಅದರಲ್ಲಿ ಸೇನೆಯೂ ಭಾಗವಹಿಸಿತ್ತು. ದೇಶದ ವಿಚಾರವಂತರು, ವಿಜ್ಞಾನಿಗಳು, ಪತ್ರಕರ್ತರು, ಕಲಾ ಪ್ರಪಂಚದ ಪ್ರಮುಖರೂ ಭಾಗವಹಿಸಿದ್ದರು. ಎರ್ಡೋಗನ್ ಅಧಿಕಾರ ಗಟ್ಟಿಮಾಡಿಕೊಳ್ಳಲು ಜೈಲಿಗೆ ಅಟ್ಟಿದವರ ಸಂಖ್ಯೆ ಊಹೆಗೂ ಮೀರಿದ್ದು. ಈಗ ಲಭ್ಯವಿರುವ ಮಾಹಿತಿ ಪ್ರಕಾರ, 1 ಲಕ್ಷ ಅರವತ್ತು ಸಾವಿರ ಜನರನ್ನು ಜೈಲಿಗೆ ಕಳುಹಿಸಲಾಗಿದೆ. ಇವರಲ್ಲಿ ಕನಿಷ್ಠ 50 ಸಾವಿರ ಜನರು ಸಂಶಯದ ಮೇಲೆ ಬಂಧಿಸಿದವರು. ಮಿಲಿಟರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದ 1.70 ಲಕ್ಷ ಜನರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅತಿ ಹೆಚ್ಚು ಮಂದಿ ಪತ್ರಕರ್ತರನ್ನು ಜೈಲಿಗೆ ಹಾಕಿರುವುದು ಎರ್ಡೋಗನ್ ಅವರ ಆಡಳಿತದಲ್ಲಿಯೇ. ಮಾನವ ಹಕ್ಕುಗಳ ದಮನಕ್ಕೆ ಟರ್ಕಿ ಸರ್ಕಾರ ಕುಖ್ಯಾತಿ ಪಡೆದಿದೆ. ಬಹುಶಃ ಎರ್ಡೋಗನ್ ಅವರ ದಮನಕಾರಿ ನೀತಿಗಳು ಮುಂದೆ ಮತ್ತಷ್ಟು ಬಲಿಷ್ಠಗೊಂಡರೆ ಆಶ್ವರ್ಯವಿಲ್ಲ. ಇದೇನೇ ಇದ್ದರೂ, ಇಸ್ಲಾಮಿಕ್ ದೇಶಗಳ ರಾಜಕೀಯದಲ್ಲಿ ಮುಂದೆಯೂ ಎರ್ಡೋಗನ್ ಪಾತ್ರ ಮಹತ್ವದ್ದಾಗಿರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಚುನಾವಣೆ Turkey Election ಟರ್ಕಿ ಅಧ್ಯಕ್ಷೀಯ ಚುನಾವಣೆ ರಿಸೆಪ್ ತಯ್ಯಿಪ್ ಎರ್ಡೋಗನ್ ಜಸ್ಟೀಸ್ ಡೆವಲಪ್‍ಮೆಂಟ್ ಪಾರ್ಟಿ ಸೆಲೆಹೆಟ್ಟಿನ್ ಡೆಮಿಟ್ರಸ್ Presidential Election Recep Tayyip Erdogan Justice and Development Party
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?