ಪಾಕಿಸ್ತಾನದಲ್ಲಿ ಚುನಾವಣೆಗೆ ಮುನ್ನ ತಾರಕಕ್ಕೇರಿದ ರಾಜಕೀಯ ಗೊಂದಲ

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಗೆ ಜು.25ರಂದು ಚುನಾವಣೆ ನಡೆಯಲಿದೆ. ಆದರೆ, ಚುನಾವಣೆಗೆ ಮುನ್ನ ದೇಶದ ರಾಜಕೀಯದಲ್ಲಿ ಗೊಂದಲ ಇಣುಕಿವೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಬಹುಪಾಲು ಅವರ ಕುಟುಂಬದ ಸದಸ್ಯರು ಶಿಕ್ಷೆಗೆ ಒಳಗಾಗಿರುವುದು ಇದಕ್ಕೆ ಕಾರಣ

ಡಿ ವಿ ರಾಜಶೇಖರ

ಪಾಕಿಸ್ತಾನದ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಬಹುಪಾಲು ಅವರ ಕುಟುಂಬದ ಸದಸ್ಯರು ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿ ನ್ಯಾಯಾಲಯಗಳಿಂದ ಶಿಕ್ಷೆಗೆ ಒಳಗಾಗಿದ್ದಾರೆ. ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಅವರ ಮೇಲೆ ನಿಷೇಧ ಹೇರಲಾಗಿದೆ. ಲಂಡನ್‍ನಲ್ಲಿ ಕೊಂಡಿರುವ ಫ್ಲ್ಯಾಟ್‌ಗಳಿಗೆ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಮಾಹಿತಿ ಮುಚ್ಚಿಟ್ಟ ಮತ್ತು ಅದಕ್ಕಾಗಿ ಅಕ್ರಮ ಹಣ ಬಳಸಿದ ಆರೋಪವೂ ಸೇರಿದಂತೆ ಪನಾಮಾ ಪೇಪರ್ಸ್ ಬಹಿರಂಗ ಮಾಡಿದ ಹಲವು ಅಕ್ರಮಗಳಿಗೆ ಸಂಬಂಧಿಸಿದಂತೆ ಅವರು ಈ ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ, ಅವರು ಈಗಾಗಲೇ ಲಂಡನ್‍ಗೆ ಪಲಾಯನ ಮಾಡಿರುವುದರಿಂದ ಬಂಧನ ಸಾಧ್ಯವಿಲ್ಲವಾಗಿದೆ.

ಷರೀಫ್ ಅವರಷ್ಟೇ ಅಲ್ಲ, ಅವರ ಹೆಂಡತಿ, ಮಗಳು, ಅಳಿಯನ ಮೇಲೂ ಹತ್ತು ಹಲವು ಆರೋಪ ಬಂದಿವೆ. ಅವರು ಕೂಡ ಚುನಾವಣಾ ಸ್ಪರ್ಧೆಯಿಂದ ನಿಷೇಧಿತರಾಗಿದ್ದಾರೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿರುವ ಷಹಜಾದ್ ಷರೀಪ್ ಹೊರತುಪಡಿಸಿದರೆ ಮತ್ತಾರೂ ಜು.25ರಂದು ನಡೆಯಲಿರುವ ರಾಷ್ಟ್ರೀಯ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದಂತಾಗಿದೆ. ದೇಶದಲ್ಲಿ ಅತಿ ಜನಪ್ರಿಯವಾಗಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್ ಷರೀಫ್) ಈಗ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿರುವ ಷರೀಫ್ ಅವರ ಸೋದರ ಷಹಜಾದ್ ಮೇಲೆ ಕೂಡ ಆರೋಪಗಳಿವೆ. ಅವುಗಳ ಆಧಾರದ ಮೇಲೆ ಅವರ ಮೇಲೂ ಚುನಾವಣಾ ನಿಷೇಧ ಹೇರಿದರೆ ಅಲ್ಲಿಗೆ ಇಡೀ ಕುಟುಂಬ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಗುತ್ತದೆ. ಹೊಸ ನಾಯಕತ್ವ ಆ ನಂತರ ಮಾತ್ರ ಪಕ್ಷದಲ್ಲಿ ಹುಟ್ಟಲು ಸಾಧ್ಯ ಎನ್ನುವ ಸ್ಥಿತಿ ತಲೆದೋರಿದೆ.

ಏನೇ ಆಗಲಿ, ಜುಲೈ 13ರಂದು ತಾವು ಮತ್ತು ನವಾಜ್ ಷರೀಫ್ ಪಾಕಿಸ್ತಾನಕ್ಕೆ ಬರುವುದಾಗಿ ಅವರ ಪತ್ನಿ ಕುಲಸೂಮ್ ಲಂಡನ್‍ನಲ್ಲಿ ಪ್ರಕಟಿಸಿದ್ದಾರೆ. ದೇಶಕ್ಕೆ ಬಂದ ತಕ್ಷಣ ಅವರನ್ನು ಬಂಧಿಸುವುದು ಖಚಿತ. ಅವರಿಗೂ ಅದು ತಿಳಿದಿದೆ. ಆದರೂ ದೇಶಕ್ಕೆ ಬಂದು ಪರಿಸ್ಥಿತಿ ಎದುರಿಸುವುದಾಗಿ ಅವರು ಪ್ರಕಟಿಸಿರುವುದು ಬಹುಶಃ ಪಕ್ಷದ ಕಾರ್ಯಕರ್ತರನ್ನು ಪ್ರೋತ್ಸಾಹಿಸಲು ಮಾತ್ರ ಇರಬಹುದು. ಏಕೆಂದರೆ, ಷರೀಫ್ ಅವರು ಹಿಂದೆ ಮಿಲಿಟರಿಯಿಂದ ಪದಚ್ಯುತಗೊಂಡಾಗ ಮತ್ತು ನ್ಯಾಯಾಲಯದಲ್ಲಿ ಶಿಕ್ಷಗೊಳಗಾದ ಸಂದರ್ಭದಲ್ಲಿ ನೆಲೆಸಿದ್ದುದು ದುಬೈ ಮತ್ತು ಲಂಡನ್‍ನಲ್ಲಿ. ಈಗಲೂ ಅದೇ ಆಗುತ್ತದೆ ಎಂದು ಊಹಿಸುವುದು ತಪ್ಪಾಗಲಾರದು. ಷರೀಫ್ ಅವರು ದೇಶದ ಹೊರಗಿದ್ದರೂ ಅವರ ಪಕ್ಷ ಪಿಎಂಎಲ್-ಎನ್ ಮಿಕ್ಕ ಪಕ್ಷಗಳಿಗಿಂತ ಹೆಚ್ಚು ಜನಪ್ರಿಯ. ಈ ಜನಪ್ರಿಯತೆ ಈ ಬಾರಿಯ ಚುನಾವಣೆಗಳಲ್ಲೂ ಕೆಲಸ ಮಾಡುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟ.

ನವಾಜ್ ಷರೀಫ್ ಅವರ ಪಕ್ಷದ ನಂತರ ಅತ್ಯಂತ ಜನಪ್ರಿಯವಾಗಿರುವ ಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ). ಬೆನಜೀರ್ ಭುಟ್ಟೊ ಅವರ ಹತ್ಯೆ ಆದ ನಂತರವೂ ಅವರ ಹೆಸರಿನಲ್ಲಿಯೇ ಪಿಪಿಪಿ ರಾಜಕೀಯ ನಡೆಸುತ್ತ ಬಂದಿತ್ತು. ಬೆನಜಿರ್ ಹತ್ಯೆಯ ನಂತರ ಅವರ ಪತಿ ಜರದಾರಿ ಪಕ್ಷದ ಜವಾಬ್ದಾರಿ ಹೊತ್ತರೂ, ಭ್ರಷ್ಟಾಚಾರ ಹಗರಣಗಳಲ್ಲಿ ಶಿಕ್ಷಗೊಳಗಾಗಿ, ಹತ್ತಕ್ಕೂ ಹೆಚ್ಚು ವರ್ಷ ಕಾಲ ಜೈಲಿನಲ್ಲಿದ್ದು, ಈಗ ಹೊರಬಂದಿದ್ದಾರೆ. ಅವರ ಪುತ್ರ ಬಿಲ್ವಾಲಾ ಲಂಡನ್‍ನಿಂದ ಬಂದು ಇಲ್ಲಿಯೇ ನೆಲೆಸಿ ಪಕ್ಷಕ್ಕೆ ಜೀವ ತುಂಬಲು ಯತ್ನಿಸುತ್ತಿದ್ದಾರೆ. ಆದರೆ, ಪಕ್ಷ ಹಳೆಯ ವರ್ಚಸ್ಸನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತಿಲ್ಲ.

ಬಹುಶಃ ಈ ಕಾರಣದಿಂದಲೇ ಪಿಪಿಪಿ ಈಗ ಹೆಸರಾಂತ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಜೊತೆ ಸಹಯೋಗ ಮಾಡಿಕೊಂಡಿದೆ. ನವಾಜ್ ಷರೀಫ್ ಪಕ್ಷ ಹೊರತುಪಡಿಸಿ ಮಿಕ್ಕಲ್ಲ ವಿರೋಧ ಪಕ್ಷಗಳು ಒಂದು ವೇದಿಕೆಗೆ ತರಲು ಪಿಪಿಪಿ ನಾಯಕ ಜರದಾರಿ ಪ್ರಯತ್ನಿಸುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎನ್ನುವುದನ್ನು ಕಾದುನೋಡಬೇಕು.

ಈ ಮಧ್ಯೆ, ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು ನವಾಜ್ ಷರೀಫ್ ಪಕ್ಷಕ್ಕೆ ಸವಾಲೊಡ್ಡುವ ಸ್ಥಿತಿಯಲ್ಲಿದೆ. ಇಮ್ರಾನ್ ಖಾನ್ ಅವರು ತಾಲಿಬಾನ್ ಉಗ್ರವಾದಿಗಳ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ನವಾಜ್ ಷರೀಪ್ ಪಕ್ಷದ ನಾಯಕರು ಮಾಡುತ್ತಿದ್ದಾರೆ. ಆದರೆ, ಇಮ್ರಾನ್ ಅವರ ಜನಪ್ರಿಯತೆಗೆ ತಡೆಯೊಡ್ಡುವಂಥ ಯಾವುದೇ ಬೆಳವಣಿಗೆ ಕಾಣುತ್ತಿಲ್ಲ. ಇಮ್ರಾನ್ ಖಾನ್ ಕ್ರಿಕೆಟ್ ಆಟದಲ್ಲಿ ಜನಪ್ರಿಯತೆ ಗಳಿಸಿರಬಹುದು. ಅವರಿಗೆ ಭಾರತದಲ್ಲಿಯೂ ಅಭಿಮಾನಿಗಳಿರಬಹುದು. ಆದರೆ ಕಾಶ್ಮರ ವಿಚಾರದಲ್ಲಿ ಅವರು ಭಿನ್ನ ನಿಲುವನ್ನೇನೂ ಉಳ್ಳವರಾಗಿಲ್ಲ. ಅಲ್ಲಿ ನಡೆಯುತ್ತಿರುವ ಉಗ್ರವಾದಿಗಳ ಹೋರಾಟದ ಪರ ಅವರ ನಿಲುವಿದೆ. ಹೀಗಾಗಿ, ರಹಸ್ಯವಾಗಿ ಅವರಿಗೆ ಕಾಶ್ಮೀರ ಉಗ್ರವಾದಿ ಪರ ಇರುವ ನಾಯಕರು ಬೆಂಬಲ ನೀಡುವ ಸಾಧ್ಯತೆ ಇಲ್ಲದಿಲ್ಲ.

ಇದನ್ನೂ ಓದಿ : ಚೀನಾ-ಪಾಕಿಸ್ತಾನ ಭಾಯಿ ಭಾಯಿ ಲೆಕ್ಕಾಚಾರದ ಮೈತ್ರಿ ಎಷ್ಟು ಕಾಲ?

ಈ ಚುನಾವಣೆಗಳ ಮತ್ತೊಂದು ವಿಶೇಷ, ದೇಶದ ಉಗ್ರವಾದಿ ಸಂಘಟನೆಗಳು ಪ್ರತ್ಯಕ್ಷವಾಗಿ, ಕೆಲವು ಕಡೆ ಪರೋಕ್ಷವಾಗಿ ಚುನಾವಣೆಯಲ್ಲಿ ಸಕ್ರಿಯವಾಗಿರುವುದು. ಮುಂಬೈ ದಾಳಿಯ ರುವಾರಿ ಜಮಾದ್ ಉದ್ ದುವಾ ಸಂಘಟನೆಯ ನಾಯಕ ಹಫೀಜ್ ಸಯ್ಯದ್ ಕೆಲವು ಕಡೆ ಚುನಾವಣೆ ಪ್ರಚಾರ ಕಾರ್ಯಕ್ರಮ ಸಂಘಟಿಸಿದ ವರದಿಗಳಿವೆ. ಅಂಥ ಸಭೆಗಳಿಗೆ ಪೊಲೀಸರ ಭದ್ರತೆ ಇರುವುದು ಬಹಿರಂಗವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸದಂತೆ ನ್ಯಾಯಾಲಯ ನಿಷೇಧ ಹೇರಿದ್ದರೂ ಅವರು ಸಕ್ರಿಯವಾಗಿರುವುದು ಆತಂಕ ಹುಟ್ಟಿಸುವ ವಿಚಾರವಾಗಿದೆ.

ಅದೇ ರೀತಿ, ನಿಷೇಧಿತ ಅಹು ಸುನ್ನತ್ ವಾ ಜಮಾತ್ (ಎಎಸ್‍ಡಬ್ಲ್ಯುಎ) ಮತ್ತು ಕೆಲವು ಪ್ರಮುಖ ತಾಲಿಬಾನ್ ಸಂಘಟನೆಗಳ ನಾಯಕರು ಚುನಾವಣೆಯಲ್ಲಿ ಸಕ್ರಿಯವಾಗಿರುವುದು ಕಂಡುಬಂದಿದೆ. ಸದ್ಯಕ್ಕೆ ದೇಶದಲ್ಲಿ ಹಿಂಸಾಚಾರವೇನೂ ನಡೆದಿಲ್ಲ. ದೇಶದ ರಾಜಕೀಯದಲ್ಲಿ ಮೊದಲಿನಿಂದಲೂ ಪ್ರಮುಖ ಪಾತ್ರ ವಹಿಸುತ್ತ ಬಂದಿರುವ ಮಿಲಿಟರಿ ಸದ್ಯಕ್ಕೆ ತಟಸ್ಥವಾಗಿದೆ. ಮಿಲಿಟರಿ ಒಲವು ಯಾರತ್ತ ಎನ್ನುವುದು ಇದುವರೆಗೆ ಬಹಿರಂಗವಾಗಿಲ್ಲ. ಮಿಲಿಟರಿ ಅಧಿಕಾರ ಮೊಟಕುಗೊಳಿಸಲು ತಮ್ಮ ಅಧಿಕಾರಾವಧಿಯಲ್ಲಿ ವಿಫಲ ಪ್ರಯತ್ನ ನಡೆಸಿದ್ದ ನವಾಜ್ ಷರೀಫ್ ಅವರ ವಿಚಾರದಲ್ಲಿ ಮಿಲಿಟರಿ ಮೃದು ಧೋರಣೆ ತಳೆದಿಲ್ಲ. ಹಾಗೆಯೇ, ತಾಲಿಬಾನ್ ಜೊತೆಗಿನ ಮೈತ್ರಿಯನ್ನು ಮಿಲಿಟರಿ ಅಧಿಕಾರಿಗಳು ಮುಂದುವರಿಸಿಕೊಂಡು ಹೋಗಿದ್ದಾರೆ ಎನ್ನುವ ಅಭಿಪ್ರಾಯ ಎಲ್ಲ ಕಡೆ ಇದೆ. ಕಾಶ್ಮೀರದಲ್ಲಿ ಪ್ರತ್ಯೇಕತಾ ಹೋರಾಟವನ್ನು ನಡೆಸುತ್ತಿರುವವರಿಗೆ ಬೆಂಬಲವಾಗಿರುವ ಉಗ್ರವಾದಿ ನಾಯಕರಿಗೆ ಮಿಲಿಟರಿ ಬೆಂಬಲ ಮುಂದುವರಿದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಚುನಾವಣೆ ಚಿತ್ರಣ ಇನ್ನೂ ಅಸ್ಪಷ್ಟವಾಗಿಯೇ ಇದೆ.

ನ್ಯಾಷನಲ್ ಅಸೆಂಬ್ಲಿಯ (ಪಾಕ್ ಸಂಸತ್) 342 ಸ್ಥಾನಗಳಿಗೆ ಈಗ ಚುನಾವಣೆ ನಡೆಯುತ್ತಿದೆ. ಈ ಪೈಕಿ, 272 ಸ್ಥಾನಗಳು ಮಾತ್ರ ಸಾಮಾನ್ಯ ವರ್ಗದವು. ಉಳಿದ ಸ್ಥಾನಗಳು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತಿತರ ವಿವಿಧ ಮೀಸಲು ವರ್ಗಗಳಿಗೆ ಸೇರಿದವು. ಬಹುಮತ ಗಳಿಸಲು ಕನಿಷ್ಠ 172 ಸ್ಥಾನ ಗಳಿಸಬೇಕು. ಪಾಕಿಸ್ತಾನ ಸಂವಿಧಾನದ ಪ್ರಕಾರ, ಸುಪ್ರೀಂ ಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರು ಉಸ್ತುವಾರಿ ಪ್ರಧಾನಿಯಾಗಿರುತ್ತಾರೆ. ಚುನಾವಣೆಯನ್ನು ನಡೆಸುವ ಹೊಣೆ ಇವರದಾಗಿರುತ್ತದೆ.

Politics ರಾಜಕೀಯ ಪಾಕಿಸ್ತಾನ Pakistan ಚುನಾವಣೆಗಳು Nawaz Sharif ನವಾಜ್ ಷರೀಫ್ ಸಂಸತ್ ಚುನಾವಣೆ Parliamentary Election Political Confusion ರಾಜಕೀಯ ಗೊಂದಲ
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?