ಪುಟಿನ್ ಅವರನ್ನು ಸಮರ್ಥಿಸಿಕೊಂಡ ಟ್ರಂಪ್, ಅಮೆರಿಕದಲ್ಲಿ ಆಕ್ರೋಶ

ಫಿನ್‍ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿಯಲ್ಲಿ ಸೋಮವಾರ ನಡೆದ, ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಮತ್ತು ಟ್ರಂಪ್ ಅವರ ನಡುವೆ ನಡೆದ ಶೃಂಗಸಭೆ ಇದೀಗ ವಿವಾದಕ್ಕೆ ತುತ್ತಾಗಿದೆ. ಸ್ವಂತ ಹಿತಾಸಕ್ತಿಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಹಿತಾಸಕ್ತಿ ಬಲಿಕೊಟ್ಟರೇ ಎಂಬ ಪ್ರಶ್ನೆ ಹುಟ್ಟಿದೆ

ಡಿ ವಿ ರಾಜಶೇಖರ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸರ್ಕಾರ 2016ರ ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದೆ ಎಂಬ ಆರೋಪ ಒಂದು ಕಟ್ಟುಕತೆ ಎಂದು ಹೇಳುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ಉನ್ನತ ಗೂಢಚಾರ ಸಂಸ್ಥೆಯ ಅಭಿಪ್ರಾಯವನ್ನು ತಿರಸ್ಕರಿಸಿರುವುದು ದೊಡ್ಡ ವಿವಾದ ಸೃಷ್ಟಿಸಿದೆ.

ಫಿನ್‍ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿಯಲ್ಲಿ ಸೋಮವಾರ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಟ್ರಂಪ್ ಅವರ ನಡುವೆ ಶೃಂಗಸಭೆ ನಡೆಯಿತು. ಆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಅವರು, ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂಬ ಪುಟಿನ್ ಮಾತನ್ನು ಸಮರ್ಥಿಸಿಕೊಂಡರು.

ಅಮೆರಿಕದ ಚುನಾವಣೆಗಳಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿಲ್ಲ ಎಂಬ ಪುಟಿನ್ ಅವರ ಮಾತನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಗೂಢಚಾರ ಸಂಸ್ಥೆಯ ಅಭಿಪ್ರಾಯವನ್ನೇ ತಿರಸ್ಕರಿಸಿದ ಟ್ರಂಪ್ ಎಂಥ ದೇಶಾಭಿಮಾನಿ ಎಂಬ ಟೀಕೆಗಳು ಈಗ ಅಮೆರಿಕದಲ್ಲಿ ವ್ಯಾಪಕವಾಗಿ ಕೇಳಿಬಂದಿವೆ. “ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪ ತಮ್ಮ ವಿರೋಧಿ ಡೆಮಾಕ್ರಟಿಕ್ ಪಕ್ಷದಿಂದ ಬಂದದ್ದು. ಅದರಲ್ಲಿ ಹುರುಳಿಲ್ಲ,” ಎಂದು ಟ್ರಂಪ್ ಹೇಳಿದ್ದಾರೆ. ಚುನಾವಣೆ ಹಸ್ತಕ್ಷೇಪ ಹಗರಣ ತನಿಖೆ ನಡೆಸುತ್ತಿರುವ ಸಮಿತಿ ಈಗಾಗಲೇ 12 ಮಂದಿ ರಷ್ಯಾದ ಮಿಲಿಟರಿ ಗೂಢಚಾರರ ಮೇಲೆ ದೋಷಾರೋಪಣೆ ಮಾಡಿದೆ. ಹೀಗಿದ್ದರೂ ಆ ತನಿಖೆ ಪೂರ್ವಗ್ರಹಪೀಡಿತ ಎಂದು ಬಹಿರಂಗವಾಗಿ ಟ್ರಂಪ್ ಹೇಳಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಚುನಾವಣೆಗಳಲ್ಲಿ ರಷ್ಯಾ ಹಸ್ತಕ್ಷೇಪ ಕುರಿತಂತೆ ಸಾಕ್ಷ್ಯಾಧಾರ ಇರುವ ನೂರಕ್ಕೂ ಹೆಚ್ಚು ಪುಟಗಳ ಮಾಹಿತಿಯನ್ನು ಟ್ರಂಪ್ ಅವರಿಗೆ ಗೂಢಚಾರ ಇಲಾಖೆ ಮೊದಲೇ ಒದಗಿಸಿತ್ತು. ಆದರೂ ಆ ಮಾಹಿತಿಯನ್ನು ಟ್ರಂಪ್ ತಿರಸ್ಕರಿಸಿ ಪುಟಿನ್ ಹೇಳಿದ್ದೇ ಸರಿ ಎಂಬಂತೆ ಮಾತನಾಡಿರುವುದು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದೆ. ಟ್ರಂಪ್ ಹೀಗೆ ಮಾಡಲು ಕಾರಣವೂ ಇದೆ. ಹಸ್ತಕ್ಷೇಪ ನಡೆದಿರುವುದು ಅವರು ಸ್ಪರ್ಧಿಸಿದ್ದಾಗಲೇ. ಹಸ್ತಕ್ಷೇಪ ನಡೆದಿದೆ ಎಂದು ಒಪ್ಪಿಕೊಂಡರೆ ಅವರ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂಬ ಅರ್ಥ ಬರುತ್ತದೆ. ಹೀಗಾಗಿ ಅವರು ರಷ್ಯಾ ಹಸ್ತಕ್ಷೇಪವನ್ನು ಒಪ್ಪುತ್ತಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಿತ್ರ ವ್ಯಕ್ತಿ. ಸರಿ ಇರಲಿ, ತಪ್ಪಿರಲಿ ತಮಗೆ ಅನ್ನಿಸಿದ್ದನ್ನು ಮಾಡುವವರು. ಹಳೆಯ ಯಾವುದನ್ನೂ ಅಷ್ಟು ಸುಲಭವಾಗಿ ಒಪ್ಪುವವರಲ್ಲ. ಹೀಗಾಗಿಯೇ, ಹಲವಾರು ಅಂತಾರಾಷ್ಟ್ರೀಯ ಒಪ್ಪಂದಗಳು ರದ್ದಾಗಿವೆ. ಅವರ ತೆರಿಗೆ ನೀತಿಗಳು ಇದೀಗ ತೆರಿಗೆ ಯುದ್ಧಕ್ಕೆ ದಾರಿಮಾಡಿಕೊಟ್ಟಿವೆ. ಇವು ಸಾಲದೆಂಬಂತೆ ರಷ್ಯಾ ಕುರಿತಂತೆ ಇದೀಗ ಹೊಸ ಅವಾಂತರವನ್ನು ಅವರು ಸೃಷ್ಟಿಸಿದ್ದಾರೆ.

ಎರಡೂ ದೇಶಗಳ ಮಧ್ಯೆ ಭಿನ್ನಾಭಿಪ್ರಾಯಗಳು, ದ್ವೇಷ ಭಾವನೆಗಳು ಹೆಚ್ಚಾಗಿ ಇತ್ತೀಚಿನ ವರ್ಷಗಳಲ್ಲಿ ವೈಮನಸ್ಯ ಬಹಿರಂಗಗೊಂಡಿತ್ತು. ರಷ್ಯಾದ ವಿರುದ್ಧ ವಾಣಿಜ್ಯ ದಿಗ್ಬಂಧನ ವಿಧಿಸುವ ಹಂತಕ್ಕೆ ಅಮೆರಿಕ ಹೋಗಿತ್ತು. ಇಷ್ಟೆಲ್ಲ ಪ್ರತಿಕೂಲ ವಾತಾವರಣದ ಮಧ್ಯೆ ಎರಡೂ ದೇಶಗಳ ನಾಯಕರು ಹೆಲ್ಸಿಂಕಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು ಎನ್ನುವುದೇ ಕುತೂಹಲ ಹುಟ್ಟಿಸಿದ ವಿಚಾರ.

ಈ ಶೃಂಗಸಭೆಗೆ ನಿರ್ದಿಷ್ಟ ಕಾರ್ಯಸೂಚಿ ಇರಲಿಲ್ಲ. ಅಂದರೆ, ಯಾವ ವಿಚಾರ ಬೇಕಾದರೂ ಅವರು ಚರ್ಚಿಸಬಹುದಾಗಿತ್ತು, ಚರ್ಚೆ ನಡೆದಿದೆ. ಟ್ರಂಪ್ ಅವರು ಹೇಳುವ ಪ್ರಕಾರ ಮಾತುಕತೆ ಉತ್ತಮವಾಗಿತ್ತು. ಪುಟಿನ್ ಅವರು ಕೂಡ ಇದೇ ಅರ್ಥದ ಮಾತು ಆಡಿದ್ದಾರೆ. ಎರಡೂ ವೈಮನಸ್ಯವಿದ್ದ ದೇಶಗಳಾದ್ದರಿಂದ ಮಾತಿನ ಚಕಮಕಿ ಆಗಬಹುದೆಂಬ ಲೆಕ್ಕಾಚಾರ ತಲೆಕೆಳಗಾಗಿದೆ.

ಇದನ್ನೂ ಓದಿ : ಕಿಮ್-ಟ್ರಂಪ್ ಭೇಟಿ ಫಲಪ್ರದ; ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ ಪೇಟೆ

“ಡೊನಾಲ್ಡ್ ಟ್ರಂಪ್ ಅವರು ಪುಟಿನ್ ಎದಿರು ಸಣ್ಣ ಬಾಲಕನಂತೆ ಕಾಣಿಸಿದ್ದಾರೆ. ಅವರು ಹೇಳಿದ್ದೆನ್ನೆಲ್ಲ ನಂಬಿ ಅವರ ಸೇವಕನಂತೆ ಟ್ರಂಪ್ ನಡೆದುಕೊಂಡಿದ್ದಾರೆ,” ಎಂಬಂಥ ಟೀಕೆಗಳು ಅಮೆರಿಕದಲ್ಲಿ ವ್ಯಕ್ತವಾಗಿವೆ. “ಟ್ರಂಪ್ ಅವರ ನಡವಳಿಕೆ ಒಂದು ದೊಡ್ಡ ದುರಂತ. ಅಮೆರಿಕದ ವರ್ಚಸ್ಸಿಗೆ ಆಘಾತ ತರುವಂಥದು ಎಂದು ಹಲವು ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ. ರಷ್ಯಾ ಅಮೆರಿಕದ ಮಿತ್ರರಾಷ್ಟ್ರವಲ್ಲ, ಅಮೆರಿಕದ ಆದರ್ಶ ಮತ್ತು ಮೂಲಭೂತ ತತ್ವಗಳಿಗೆ ರಷ್ಯಾದ ನೀತಿಗಳು ಹೊಂದಾಣಿಕೆ ಆಗುವುದಿಲ್ಲ ಎನ್ನುವುದನ್ನು ಟ್ರಂಪ್ ತಿಳಿಯಬೇಕಿತ್ತು,” ಎಂದು ರಿಪಬ್ಲಿಕನ್ ಪಕ್ಷದ ಹಿರಿಯ ನಾಯಕ ಹಾಗೂ ಸ್ಪೀಕರ್ ಪಾಲ್ ರೆಯಾನ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಹಲವು ಮಂದಿ ರಿಪಬ್ಲಿಕನ್ ಪಕ್ಷದ ಮುಖಂಡರು ಟ್ರಂಪ್ ಅವರ ಹೇಳಿಕೆಯಿಂದ ಆಘಾತ ವ್ಯಕ್ತಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಟ್ರಂಪ್ ನಾಯಕತ್ವದ ಬಗ್ಗೆ ರಿಪಬ್ಲಿಕನ್ ಪಕ್ಷದಲ್ಲಿಯೇ ಅವಿಶ್ವಾಸ ವ್ಯಕ್ತವಾದರೆ ಆಶ್ಚರ್ಯವಿಲ್ಲ.

ಇದೇನೇ ಇದ್ದರೂ ಪುಟಿನ್-ಟ್ರಂಪ್ ನಡುವಣ ಮಾತುಕತೆಗಳು ಮುಂದುವರಿದು ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಬರುವಂತಾದರೆ ಆಗ ವಿಶ್ವ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು.

Vladimir Putin Donald Trump ಅಮೆರಿಕ Russia Election America ಡೊನಾಲ್ಡ್‌ ಟ್ರಂಪ್ ರಷ್ಯಾ ವ್ಲಾಡಿಮಿರ್ ಪುಟಿನ್ ಅಮೆರಿಕ ಚುನಾವಣೆ
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?