ಪಾಕಿಸ್ತಾನ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಕ್ಷದ ಮೇಲುಗೈ?

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಗೆ ಬುಧವಾರ ಚುನಾವಣೆ ನಡೆಯಲಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್, ಮಾಜಿ ಕ್ರಿಕೆಟ್ ತಾರೆ ಇಮ್ರಾನ್ ಖಾನ್ ಮತ್ತು ಮಾಜಿ ಪ್ರಧಾನಿ ಬೆನೆಜಿರ್ ಭುಟ್ಟೋ ಅವರ ಪುತ್ರ ಬಿಲ್ವಾಲಾ ಭುಟ್ಟೊ ಅವರ ಭವಿಷ್ಯವನ್ನು ಮತದಾರರು ಈ ಚುನಾವಣೆಯಲ್ಲಿ ನಿರ್ಧರಿಸಲಿದ್ದಾರೆ

ಡಿ ವಿ ರಾಜಶೇಖರ

ಪಾಕಿಸ್ತಾನದ ಸಂಸತ್ ಚುನಾವಣೆಗಳು ಈ ಬಾರಿ ತೀವ್ರ ಕುತೂಹಲ ಕೆರಳಿಸಿವೆ. ಮಾಜಿ ಪ್ರಧಾನಿ ನವಾಜ್ ಷರೀಫ್, ಮಾಜಿ ಕ್ರಿಕೆಟ್ ತಾರೆ ಇಮ್ರಾನ್ ಖಾನ್ ಮತ್ತು ಮಾಜಿ ಪ್ರಧಾನಿ ದಿವಂಗತ ಬೆನೆಜಿರ್ ಭುಟ್ಟೋ ಅವರ ಪುತ್ರ ಬಿಲ್ವಾಲಾ ಭುಟ್ಟೊ ಅವರ ಭವಿಷ್ಯವನ್ನು ಮತದಾರರು ಈ ಚುನಾವಣೆಯಲ್ಲಿ ನಿರ್ಧರಿಸಲಿದ್ದಾರೆ.

ಮಿಲಿಟರಿಯನ್ನು ಎದುರು ಹಾಕಿಕೊಂಡಿರುವ ನವಾಜ್ ಷರೀಫ್ ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕಿಟಿದ್ದಾರೆ. ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತಾಗಿದೆ. ನ್ಯಾಯಾಲಯದ ತೀರ್ಪಿನಿಂದಾಗಿ ಅವರು ಈಗ ಜೈಲಿನಲ್ಲಿದ್ದಾರೆ. ಚುನಾವಣೆ ಪ್ರಚಾರವೂ ಮಾಡದಂತಾಗಿದೆ. ಆದರೆ, ಅವರ ತಮ್ಮ ಪಂಜಾಬ್ ಮುಖ್ಯಮಂತ್ರಿ ಷಹಬಾಜ್ ಷರೀಫ್ ನಾಯಕತ್ವದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್ ಷರೀಫ್) -ಪಿಎಂಎಲ್‌ಎನ್- ಪಕ್ಷ ಚುನಾವಣೆಯಲ್ಲಿ ಸೆಣಸುತ್ತಿದೆ. ನವಾಜ್ ಷರೀಫ್ ಅವರನ್ನು ನಿಷ್ಕ್ರಿಯಗೊಳಿಸಲಾಗಿದ್ದರೂ ಪಕ್ಷ ಇಂದಿಗೂ ಜನಪ್ರಿಯವಾಗಿದೆ. ಮುಖ್ಯವಾಗಿ, ಪಂಜಾಬ್ ಪ್ರಾಂತ್ಯದಲ್ಲಿ ಬಲವಾಗಿದೆ. ಅಧಿಕಾರದಲ್ಲಿದ್ದಾಗ ದೇಶದ ಇತರ ಪ್ರಾಂತ್ಯಗಳಲ್ಲಿಯೂ ನವಾಜ್ ಷರೀಫ್ ಮತದಾರರ ಬೆಂಬಲ ಪಡೆದಿದ್ದರು. ಅಧಿಕಾರ ಇಲ್ಲದಿರುವಾಗ ಈಗ ಏನಾಗುತ್ತದೆ ಎನ್ನುವುದು ಕುತೂಹಲಕಾರಿ.

ನವಾಜ್ ಷರೀಫ್ ಅವರ ಪಕ್ಷಕ್ಕೆ ಈ ಬಾರಿ ದೊಡ್ಡ ಸವಾಲು ಒಡ್ಡಿರುವ ಪಕ್ಷ ಮಾಜಿ ಕ್ರಿಕೆಟ್ ತಾರೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹರೀಕ್ ಎ ಇನ್ಸಾಫ್ (ಪಿಟಿಐ). ಮಿಲಿಟರಿ ಈ ಬಾರಿ ಇಮ್ರಾನ್ ಖಾನ್ ಅವರಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ ಮಿಲಿಟರಿಯ ಬೆಂಬಲವಿಲ್ಲದೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದನ್ನು ಈ ಹಿಂದಿನ ಚುನಾವಣೆಗಳು ಸಾಬೀತು ಮಾಡಿವೆ. ಈ ಬಾರಿ ಮಿಲಿಟರಿಯು ಇಮ್ರಾನ್ ಖಾನ್‍ಗೆ ಬೆಂಬಲ ನೀಡಿರುವುದರಿಂದ ಅವರ ಪಕ್ಷವೇ ಅಧಿಕಾರಕ್ಕೆ ಬರಬಹುದೆಂಬುದು ರಾಜಕೀಯ ತಜ್ಞರ ಲೆಕ್ಕಾಚಾರ. ಮಿಲಿಟರಿ ಕೂಡ ಅವರಿಗೆ ಚುನಾವಣೆಯಲ್ಲಿ ಅನುಕೂಲವಾಗುವಂಥ ಕ್ರಮಗಳನ್ನೇ ತೆಗೆದುಕೊಳ್ಳುತ್ತ ಬಂದಿದೆ. ನವಾಜ್ ಷರೀಫ್ ಅವರ ಸಾವಿರಾರು ಬೆಂಬಲಿಗರನ್ನು ಜೈಲಿಗೆ ಅಟ್ಟಿದೆ. ನವಾಜ್ ಷರೀಫ್ ಬೆಂಬಲದ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ : ಚೀನಾ-ಪಾಕಿಸ್ತಾನ ಭಾಯಿ ಭಾಯಿ ಲೆಕ್ಕಾಚಾರದ ಮೈತ್ರಿ ಎಷ್ಟು ಕಾಲ?

ಇಮ್ರಾನ್ ಖಾನ್ ಮೇಲ್ನೋಟಕ್ಕೆ ಪ್ರಜಾಪ್ರಭುತ್ವವಾದಿಯಂತೆ ಕಂಡರೂ ಅಧಿಕಾರಕ್ಕಾಗಿ ಅವರು ಎಂಥ ನಿಲುವು ತಳೆಯಲೂ ಹಿಂಜರಿಯುವುದಿಲ್ಲ ಎನ್ನುವುದು ಈಗಾಗಲೇ ಬಯಲಾಗಿದೆ. ರಹಸ್ಯವಾಗಿ ಅವರು ಉಗ್ರವಾದಿ ಸಂಘಟನೆಗಳ ಜೊತೆ ಉತ್ತಮ ಬಾಂಧವ್ಯ ಪಡೆದಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಅವರು ಈ ಭಯೋತ್ಪಾದನಾ ಸಂಘಟನೆಗಳ ನಿಲುವನ್ನು ಬೆಂಬಲಿಸುತ್ತ ಬಂದಿದ್ದಾರೆ. ನವಾಜ್ ಷರೀಫ್ ಅವರು ಭಾರತ ಪರವಾದಿ ಎಂದು ಆರೋಪ ಮಾಡಿ ಅಲ್ಲಿನ ಜನರಲ್ಲಿ ರಾಷ್ಟ್ರೀಯ ಭಾವನೆ ಉಂಟುಮಾಡಲು ಯತ್ನಿಸಿದ್ದೂ ಇದೆ. ಹೀಗಾಗಿ ಇಮ್ರಾನ್ ಅವರೇ ಮುಂದಿನ ಪ್ರಧಾನಿ ಎಂಬ ಮಾತು ಪಾಕಿಸ್ತಾನದಲ್ಲಿ ಹೆಚ್ಚು ಕೇಳಿಬರುತ್ತಿದೆ. ಪಂಜಾಬ್ ಪ್ರಾಂತ್ಯದಲ್ಲಿ ನವಾಜ್ ಷರೀಫ್ ಅವರ ಹಲವು ಬೆಂಬಲಿಗರು ಈಗಾಗಲೇ ಇಮ್ರಾನ್ ಪಕ್ಷ ಸೇರಿದ್ದಾರೆ. ಪಂಜಾಬ್ ಪ್ರಾಂತ್ಯದಿಂದ ಇಮ್ರಾನ್ ಹೆಚ್ಚು ಸ್ಥಾನಗಳನ್ನು ಗಳಿಸಿದರೆ ಅವರ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಆದರೆ, ಇದುವರೆಗೆ ಅವರಿಗೆ ಬೆಂಬಲವಾಗಿದ್ದ ಖೈಬರ್ ಪ್ರಾಂತ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ಥಳೀಯ ಬಲಪಂಥೀಯ ಪಕ್ಷಗಳು ಬಲಗೊಂಡಿದ್ದು, ಜನರು ಇಮ್ರಾನ್ ವಿರುದ್ಧವಾಗಿ ಮತ ಚಲಾಯಿಸುವ ಸಾಧ್ಯತೆಗಳಿವೆ. ಸಿಂಧ್ ಪ್ರಾಂತ್ಯದಲ್ಲಿ ಜನರು ಇನ್ನೂ ಬೆನಜಿರ್ ಭುಟ್ಟೋ ಪಕ್ಷವಾದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಗೇ (ಪಿಪಿಪಿ) ಬೆಂಬಲವಾಗಿದ್ದಾರೆ. ಆದರೆ, ಒಟ್ಟಾರೆ ದೇಶದಲ್ಲಿ ಅವರ ಬೆಂಬಲ ಕಡಿಮೆಯಾಗಿದೆ.

ಬ್ರಿಟನ್‍ನಲ್ಲಿದ್ದ ಬೆನಜಿರ್ ಭುಟ್ಟೋ ಪುತ್ರ ಬಿಲ್ವಾಲ್ ಪಾಕಿಸ್ತಾನಕ್ಕೆ ಬಂದು ನೆಲೆಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ, ಅವರ ಪ್ರಭಾವ ಕಡಿಮೆಯೇ. ಜನಬೆಂಬಲ ಅವರ ಪಕ್ಷಕ್ಕೆ ಹೆಚ್ಚು ವ್ಯಕ್ತವಾದರೆ ಅವರನ್ನು ಬೆದರಿಸಿ ಇಮ್ರಾನ್‍ಗೆ ಬೆಂಬಲ ನೀಡುವಂತೆ ಮಿಲಿಟರಿ ಮಾಡಬಹುದೆಂದು ಈಗಾಗಲೇ ವಂದಂತಿಗಳು ಹಬ್ಬಿವೆ. ಅವರ ತಂದೆ ಮಾಜಿ ಪ್ರಧಾನಿ ಜರದಾರಿ ಅವರು ಬ್ಯಾಂಕ್ ಹಗರಣವೊಂದರಲ್ಲಿ ಸಿಕ್ಕಿಕೊಂಡು ವಿಚಾರಣೆ ಎದುರಿಸುತ್ತಿದ್ದಾರೆ. ಚುನಾವಣೆಗಳಲ್ಲಿ ಅಧಿಕಾರಕ್ಕೆ ಬರುವಷ್ಟು ಸ್ಥಾನ ತಮ್ಮ ಪಕ್ಷಕ್ಕೆ ಬರದಿರುವ ಸಂದರ್ಭದಲ್ಲಿ ಈ ಹಗರಣ ಬಳಸಿಕೊಂಡು ಪಿಪಿಪಿಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರ ಇಮ್ರಾನ್‍ಗೆ ಇದೆ ಎನ್ನಲಾಗಿದೆ. ಇತ್ತೀಚಿನ ಚುನಾವಣಾಪೂರ್ವ ಸಮೀಕ್ಷೆಗಳು ಇಮ್ರಾನ್ ಅವರ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳನ್ನು ಎತ್ತಿ ಹೇಳಿವೆ.

ಪಾಕಿಸ್ತಾನದಲ್ಲಿ ಇನ್ನೂ ಜನತಂತ್ರ ವ್ಯವಸ್ಥೆ ಬೇರೂರಿಲ್ಲ. ಸ್ವಾತಂತ್ರ್ಯ ಗಳಿಸಿದ ನಂತರದ ಏಳು ದಶಕಗಳಲ್ಲಿ ದೇಶ ಮಿಲಿಟರಿ ಅಧಿಕಾರಿಗಳ ಹಿಡಿತಕ್ಕೆ ಹೋಗಿದ್ದೇ ಹೆಚ್ಚು. ಈ ಬಾರಿ ದೇಶದಲ್ಲಿ ಅಪರೂಪ ಎನ್ನುವಂತೆ ಚುನಾಯಿತ ಸಂಸತ್ತು ತನ್ನ ಐದು ವರ್ಷದ ಅವಧಿಯನ್ನು ಪೂರೈಸಿದೆ. ಅಷ್ಟೇ ಅಲ್ಲ, ಮಿಲಿಟರಿ ಅಧಿಕಾರಿಗಳ ತೆಕ್ಕೆಗೆ ಒಳಗಾಗದೆ ಚುನಾವಣೆ ನಡೆಯುತ್ತಿದೆ. ಹಾಗೆಂದ ಮಾತ್ರಕ್ಕೆ ಮಿಲಿಟರಿ ಪ್ರಜಾತಂತ್ರ ವ್ಯವಸ್ಥೆ ಮತ್ತು ಅಧಿಕಾರದ ಮೇಲಿನ ತನ್ನ ಪರೋಕ್ಷ ಹಿಡಿತವನ್ನು ಬಿಟ್ಟಿದೆ ಎಂದಲ್ಲ. ಮಿಲಿಟರಿ ದೇಶದ ರಾಜಕೀಯ ವ್ಯವಸ್ಥೆಯ ಹಿಂದೆ ಇದ್ದೇ ಇದೆ. ಬಹುಶಃ ರಾಜಕೀಯ ಅಧಿಕಾರವನ್ನು ಪರೋಕ್ಷವಾಗಿ ನಿಯಂತ್ರಿಸುವ ತನ್ನ ತಂತ್ರವನ್ನು ಬಿಟ್ಟುಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿಯೇ ಬುಧವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ (ಸಂಸತ್ತು) ಚುನಾವಣೆ ನಡೆಯಲಿದೆ. ದೇಶದಲ್ಲಿ 20 ಕೋಟಿಗೂ ಹೆಚ್ಚು ಜನರಿದ್ದರೂ ಮತದಾರರ ಸಂಖ್ಯೆ ಸುಮಾರು 10 ಕೋಟಿ 60 ಲಕ್ಷ. ಸಂಸತ್ತಿನ 342 ಸ್ಥಾನಗಳ ಪೈಕಿ 272 ಸ್ಥಾನಗಳಿಗೆ ನೇರ ಚುನಾವಣೆ ನಡೆಯಲಿದೆ. 60 ಸ್ಥಾನಗಳಿಗೆ ಮಹಿಳೆಯರಿಗೆ 10 ಸ್ಥಾನಗಳು ಅಲ್ಪಸಂಖ್ಯಾತರಿಗೆ ಮೀಸಲು. ನೆರೆಯ ದೇಶವಾಗಿರುವುದರಿಂದ ಮತ್ತು ಸಾಕಷ್ಟು ವೈಮನಸ್ಯ ಇರುವುದರಿಂದ ಭಾರತಕ್ಕೆ ಪಾಕಿಸ್ತಾನದ ಈ ಚುನಾವಣೆ ಬಹಳ ಮುಖ್ಯ.

ಕಳೆದ ಒಂದು ವರ್ಷದಿಂದ ಪಾಕಿಸ್ತಾನದ ರಾಜಕೀಯ ಹಲವು ತಿರುವುಗಳನ್ನು ಪಡೆದಿದೆ. ಅಧಿಕಾರದಲ್ಲಿದ್ದ ನವಾಜ್ ಷರೀಫ್ ಭ್ರಷ್ಟಾಚಾರ ಹಗರಣವೊಂದರ ಕಾರಣದಿಂದ ರಾಜಿನಾಮೆ ಕೊಡಬೇಕಾಗಿ ಬಂತು. ಮೊದಲಿನಿಂದಲೂ ಮಿಲಿಟರಿ ಜೊತೆಗೆ ಉತ್ತಮ ಬಾಂಧವ್ಯ ಪಡೆದಿದ್ದ ನವಾಜ್ ಷರೀಫ್ ಕ್ರಮೇಣ ಮಿಲಿಟರಿಯ ಅವಕೃಪೆಗೆ ಒಳಗಾದರು. ಮಿಲಿಟರಿಯ ಅಧಿಕಾರ ಮೊಟಕುಗೊಳಿಸುವ ಅವರ ಪ್ರಯತ್ನ ಅವರಿಗೆ ಸಮಸ್ಯೆಯನ್ನು ತಂದೊಡ್ಡಿತು. ಉತ್ತರದಾಯಿ ಆಯೋಗ ಅವರ ವಿರುದ್ಧದ ಭ್ರಷ್ಟಾಚಾರದ ಪ್ರಕರಣಗಳ ತನಿಖೆ ಆರಂಭಿಸಿತು. ಲಂಡನ್‍ನಲ್ಲಿ ಅವರು ಕೊಂಡ ನಾಲ್ಕು ಫ್ಲಾಟ್‍ಗಳಿಗೆ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಸರಿಯಾದ ಲೆಕ್ಕ ಕೊಟ್ಟಿಲ್ಲವೆಂಬ ಕಾರಣ ನೀಡಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾ ಮಾಡಿತು. ಪನಾಮಾ ಪೇಪರ್ಸ್ ಬಯಲು ಮಾಡಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಭ್ರಷ್ಟಾಚಾರಕ್ಕೆ ಸಹಕಾರ ಮಾಡಿದ್ದಕ್ಕಾಗಿ ಅವರ ಪುತ್ರಿ ಮತ್ತು ಪತ್ನಿಗೂ ಶಿಕ್ಷೆ ವಿಧಿಸಿತು. ಈ ಎಲ್ಲ ತೀರ್ಪುಗಳ ಹಿನ್ನೆಲೆಯಲ್ಲಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಅವರ ಸ್ಥಾನಕ್ಕೆ ಪಕ್ಷ ಮತ್ತೊಬ್ಬರನ್ನು ನೇಮಿಸಿತು. ಈ ಮಧ್ಯೆ, ಪತ್ನಿ ಚಿಕಿತ್ಸೆಗಾಗಿ ನವಾಜ್ ಷರೀಫ್ ಲಂಡನ್‍ಗೆ ತೆರಳಿದ್ದರಿಂದ ಅವರ ಬಂಧನವಾಗಲಿಲ್ಲ. ಚುನಾವಣೆಯಲ್ಲಿ ಯಾವುದೇ ರೀತಿ ಭಾಗವಹಿಸದಂತೆ ಅವರ ಮೇಲೆ ನ್ಯಾಯಾಲಯ ನಿಷೇಧ ವಿಧಿಸಿದ್ದರಿಂದಾಗಿ ಪಕ್ಷದ ಪರವೂ ಪ್ರಚಾರ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ಪುತ್ರಿ ಮರಿಯಂ ಅವರು ನವಾಜ್ ಅವರ ಉತ್ತರಾಧಿಕಾರಿ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೋರ್ಟ್ ಮರಿಯಂಗೂ ಶಿಕ್ಷೆ ವಿಧಿಸಿ ಚುನಾವಣೆ ಸ್ಪರ್ಧೆಗೆ ನಿಷೇಧ ವಿಧಿಸಿದ್ದರಿಂದ ಅವರೂ ಚುನಾವಣೆಯಲ್ಲಿ ಸ್ಪರ್ಧಿಸದಂತಾಯಿತು.

ಪಕ್ಷವೇ ಮುಳುಗಿಹೋಗುವಂಥ ಸ್ಥಿತಿ; ದೇಶಕ್ಕೆ ಬಂದ ತತ್‍ಕ್ಷಣ ಬಂಧಿಸಲಾಗುತ್ತದೆ ಎಂದು ತಿಳಿದಿದ್ದರೂ ನವಾಜ್ ಷರೀಫ್ ತಮ್ಮ ಪುತ್ರಿಯೊಂದಿಗೆ ಲಂಡನ್‍ನಿಂದ ಕೊನೆಯ ಗಳಿಗೆಯಲ್ಲಿ ವಾಪಸ್ ಬಂದರು. ದೇಶದಲ್ಲಿಯಾದರೂ ಇದ್ದರೆ ಬೆಂಬಲಿಗರು ಉತ್ಸಾಹದಿಂದ ಚುನಾವಣೆ ಎದುರಿಸಬಹುದೆಂಬುದು ಅವರ ಲೆಕ್ಕಾಚಾರವಾಗಿತ್ತು. ಅಂತೆಯೇ, ದೇಶಕ್ಕೆ ಬಂದ ತತ್‍ಕ್ಷಣ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸಹಜವಾಗಿಯೇ ಪಕ್ಷ ಚುರುಕುಗೊಂಡಿದ್ದು, ನವಾಜ್ ಷರೀಫ್ ಅವರ ತಮ್ಮ ಷಹಬಾಜ್ ಷರೀಫ್ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್ ( ನವಾಜ್ ಷರೀಫ್) ಅಧಿಕಾರಕ್ಕೆ ಬಂದರೆ ಅವರ ತಮ್ಮ ಷಹಬಾಜ್ ಪ್ರಧಾನಿ. ಆ ನಂತರ ನವಾಜ್ ಅವರ ಮೇಲಿನ ಪ್ರಕರಣಗಳನ್ನೆಲ್ಲ ಮುಕ್ತಾಯಗೊಳಿಸಿ ಮತ್ತೆ ಪ್ರಧಾನಿ ಆಗಬಹುದೆಂಬುದು ನವಾಜ್ ಅವರ ಲೆಕ್ಕಾಚಾರ. ಆದರೆ, ಈ ಲೆಕ್ಕಾಚಾರ ನಿಜವಾಗುವುದೇ ಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆ. ಆದರೆ, ನವಾಜ್ ಷರೀಫ್ ಅವರ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಇಮ್ರಾನ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವುದು ರಾಜಕೀಯ ವೀಕ್ಷಕರ ಲೆಕ್ಕಾಚಾರ.

ಇಮ್ರಾನ್ ಪ್ರಧಾನಿಯಾದರೆ ಭಾರತ-ಪಾಕ್ ಸಂಬಂಧ ಸುಧಾರಿಸುತ್ತದೆಯೇ?

ಇಮ್ರಾನ್ ಖಾನ್ ಇದುವರೆಗೆ ಭಾರತದ ಬಗ್ಗೆ ವ್ಯಕ್ತಮಾಡಿರುವ ಮತ್ತು ಅಲ್ಲಿನ ಜನರ ಮುಂದಿಟ್ಟಿರುವ ವಿಚಾರಗಳನ್ನು ನೋಡಿದರೆ, ಸಂಬಂಧ ಸುಧಾರಣೆಯಾಗುವ ಸಾಧ್ಯತೆ ತೀರಾ ಕಡಿಮೆ. ಕಾಶ್ಮೀರ ವಿಚಾರದಲ್ಲಿ ಪ್ರತ್ಯೇಕತಾವಾದಿಗಳ ವಾದವನ್ನೇ ಅವರು ಮಂಡಿಸುತ್ತಿರುವುದರಿಂದ ಪರಿಸ್ಥಿತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಪಾಕಿಸ್ತಾನದ ಮಿಲಿಟರಿಯ ಭಾರತ ವಿರೋಧಿ ನೀತಿ ಗೊತ್ತಿರುವುದೇ ಆಗಿದೆ. ಇಮ್ರಾನ್ ಅಧಿಕಾರಕ್ಕೆ ಬಂದರೆ ಅದರಲ್ಲಿ ಮಿಲಿಟರಿಯ ಪಾತ್ರವೂ ಇರುತ್ತದೆ. ಆದ್ದರಿಂದ ಅವರು ಮಿಲಿಟರಿ ನಿಲುವಿನ ವಿರುದ್ಧ ಹೋಗಲಾರರು. ಆದರೂ ಇಮ್ರಾನ್, ಹಿಂದಿನ ಪಾಕಿಸ್ತಾನದ ನಾಯಕರಂತೆ ವರ್ತಿಸಲಾರರು, ಅವರು ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಸ್ಥಾಪಿಸಲು ಯತ್ನಿಸಬಹುದು ಎಂಬುದು ಭಾರತದ ಸಹಜ ಆಶಯ.

ಚುನಾವಣೆ Election ಪಾಕಿಸ್ತಾನ Pakistan ಇಮ್ರಾನ್ ಖಾನ್ Imran Khan Nawaz Sharif ನವಾಜ್ ಷರೀಫ್ ಸಂಸತ್ ಚುನಾವಣೆ
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?