ಕಾಶ್ಮೀರ ವಿವಾದ; ಭಾರತದ ಜೊತೆ ಬಾಂಧವ್ಯ ಸುಧಾರಿಸುವ ಇಮ್ರಾನ್ ನಾಟಕ

ಪಾಕಿಸ್ತಾನದ ನೂತನ ಪ್ರಧಾನಿ ಆಗಲಿರುವ ಇಮ್ರಾನ್ ಖಾನ್ ಈಗಾಗಲೇ ಕಾಶ್ಮೀರ ಸೇರಿದಂತೆ ಹಲವು ವಿಷಯದ ಬಗ್ಗೆ ತಮ್ಮ ನಿಲುವು ಬಹಿರಂಗ ಮಾಡಿದ್ದಾರೆ. ಭ್ರಷ್ಟಾಚಾರಮುಕ್ತ ಪಾಕಿಸ್ತಾನ ಕಟ್ಟುವ, ಭಾರತದ ಜೊತೆ ಬಾಂಧವ್ಯ ಸುಧಾರಿಸುವ ಇಮ್ರಾನ್ ಆಶಯ ಕಾರ್ಯಗತಗೊಳ್ಳುವುದೇ?

ಡಿ ವಿ ರಾಜಶೇಖರ

ಪಾಕಿಸ್ತಾನದ ನೂತನ ಪ್ರಧಾನಿ ಆಗಲಿರುವ ಇಮ್ರಾನ್ ಖಾನ್ ಈಗಾಗಲೇ ಕಾಶ್ಮೀರ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಮ್ಮ ನಿಲುವು ಬಹಿರಂಗ ಮಾಡಿದ್ದಾರೆ. ಮೇಲ್ನೋಟಕ್ಕೆ ಅವರು ವಾಸ್ತವವಾದಿ ಎಂದೆನಿಸಿದರೂ, ಆಳದಲ್ಲಿ ಹಿಂದಿನ ರಾಜಕಾರಣಿಗಳಿಗಿಂತ ಭಿನ್ನರಲ್ಲ ಎನ್ನುವುದನ್ನು ತಿಳಿಯುವುದು ಕಷ್ಟವಲ್ಲ.

"ಕಾಶ್ಮೀರ ಸೇರಿದಂತೆ ಎಲ್ಲ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಪಾಕಿಸ್ತಾನ ಸಿದ್ಧವಿದೆ. ನೆರೆಯ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳ ಆಟ ನಿಲ್ಲಬೇಕು. ಅದು ಇಡೀ ಉಪಖಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಬಾಂಧವ್ಯ ಸುಧಾರಣೆ ವಿಚಾರದಲ್ಲಿ ಅವರು (ಭಾರತ) ನಮ್ಮತ್ತ ಒಂದು ಹೆಜ್ಜೆ ಮುಂದೆ ಇಟ್ಟರೆ ನಾವು (ಪಾಕಿಸ್ತಾನ) ಎರಡು ಹೆಜ್ಜೆ ಇಡುತ್ತೇವೆ. ಆ ದಿಕ್ಕಿನಲ್ಲಿ ಮಾತುಕತೆ ಮೊದಲು ಆರಂಭವಾಗಬೇಕು. ಬಲೂಚಿಸ್ತಾನದಲ್ಲಿನ ದುರ್ಘಟನೆಗಳಿಗೆ ಭಾರತವೇ ಕಾರಣ. ಎರಡೂ ದೇಶಗಳ ನಡುವಣ ದೊಡ್ಡ ಸಮಸ್ಯೆ ಕಾಶ್ಮೀರ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಎಲ್ಲ ಅಂತಾರಾಷ್ಟ್ರೀಯ ಸಂಘಟನೆಗಳು ಹೇಳಿವೆ. ಕಾಶ್ಮೀರ ವಿವಾದ ವಿಶ್ವಸಂಸ್ಥೆಯ ನಿರ್ಣಯದ ಪ್ರಕಾರ ಆಗಬೇಕು." -ಇದು ಒಂದು ದಿನದ ಹಿಂದೆ ಇಮ್ರಾನ್ ಹೇಳಿದ ಮಾತು.

ಅಂದರೆ, ಜನಾಭಿಪ್ರಾಯ ಸಂಗ್ರಹದ ಮೂಲಕ ಕಾಶ್ಮೀರದ ಭವಿಷ್ಯ ನಿರ್ಧಾರವಾಗಬೇಕು ಎಂದೇ ಅರ್ಥ. ಇದುವರೆಗೆ ಪಾಕಿಸ್ತಾನದ ರಾಜಕಾರಣಿಗಳು, ಮಿಲಿಟರಿ ಹೇಳಿಕೊಂಡು ಬಂದಿರುವುದೂ ಇದೇ ಆಗಿದೆ. ಭಾರತ ಈ ನಿಲುವನ್ನು ಒಪ್ಪುವುದಿಲ್ಲ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ; ಅದರ ಭವಿಷ್ಯ ಈಗಾಗಲೇ ನಿರ್ಧಾರವಾಗಿದೆ ಎನ್ನುವುದು ಭಾರತದ ನಿಲುವು. ಉಭಯ ದೇಶಗಳ ನಡುವಣ ಸಂಬಂಧ ಹದಗೆಟ್ಟಿದ್ದು ಏಕೆ ಎನ್ನುವುದು ಇಮ್ರಾನ್ ಖಾನ್‍ಗೆ ತಿಳಿಯದಿರುವುದೇನಲ್ಲ. ಕಾಶ್ಮೀರವನ್ನು ಭಯೋತ್ಪಾದನೆಯ ಮೂಲಕ ರಣರಂಗವನ್ನಾಗಿಸಿ ಕಾಶ್ಮೀರದ ಜನರ ಬದುಕನ್ನು ಹಾಳುಮಾಡಿದ್ದು ಯಾರು ಎನ್ನುವ ಪ್ರಶ್ನೆಯನ್ನು ಇಮ್ರಾನ್ ಮೊದಲು ತಮಗೆ ತಾವೇ ಕೇಳಿಕೊಳ್ಳಬೇಕು. ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವವರಾರು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಧೈರ್ಯ ಅವರಿಗಿದೆಯೇ? ಮುಂಬೈ ದಾಳಿಯ ಹಿಂದಿನ ಸಂಚುಕೋರರ ಬಗ್ಗೆ ನಿಖರ ಮಾಹಿತಿ ನೀಡಿದ ನಂತರವೂ ಅವರ ವಿರುದ್ಧ ಪಾಕಿಸ್ತಾನ ಏಕೆ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಪ್ರಶ್ನೆಗೆ ಇಮ್ರಾನ್ ಉತ್ತರ ಹೇಳಬೇಕಾಗುತ್ತದೆ. ಎರಡೂ ದೇಶಗಳ ನಡುವೆ ಮಾತುಕತೆಗಳು ಸುಮ್ಮನೆ ನಿಂತಿಲ್ಲ, ಅದಕ್ಕೆ ಕಾರಣಗಳಿವೆ. ಕಾಶ್ಮೀರದಲ್ಲಿ ಉಗ್ರರ ದಾಳಿ ನಿಲ್ಲಬೇಕು, ಮುಂಬೈ ದಾಳಿಯ ಸಂಚುಕೋರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತ ಮತ್ತೆ ಬೇಡಿಕೆ ಇಟ್ಟರೆ ಇಮ್ರಾನ್ ಅದಕ್ಕೆ ಸಿದ್ಧರಿರುವರೇ? ಮಾತುಕತೆ ಆರಂಭವಾಗಬೇಕಾದರೆ ಇಮ್ರಾನ್ ಕೂಡ ಭಾರತದ ಈ ಬೇಡಿಕೆಗಳನ್ನು ಪೂರೈಸಬೇಕು. ಅದು ಅವರಿಂದ ಸಾಧ್ಯವಿದೆಯೇ? ಇಲ್ಲವಾದರೆ, ಮಾತುಕತೆ ಆರಂಭವಾಗಲಿ ಎನ್ನುವುದು ಕೇವಲ ನಾಟಕವಾಗುತ್ತದೆ.

ಮುಸ್ಲಿಂ ಭಯೋತ್ಪಾದನೆ ಕುರಿತಂತೆ ಈ ಹಿಂದೆ ಅವರು ಪತ್ರಕರ್ತರೊಬ್ಬರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳು ಸಾಕಷ್ಟು ವಿವಾದ ಎಬ್ಬಿಸಿದ್ದವು. “ತಾಲಿಬಾನ್ ಆಗಲಿ ಅಥವಾ ಮತ್ತಾವುದೇ ಉಗ್ರವಾದವಾಗಲೀ ಉದಯವಾಗಲು ಕಾರಣಗಳಿವೆ. ಜನರ ಸಮಸ್ಯೆಗಳು ಇತ್ಯರ್ಥವಾಗದೆ ಇದ್ದಾಗ ಅಥವಾ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯವಾಗದೆ ಇದ್ದಾಗ ಜನರು ಬಂಡಾಯ ಏಳುತ್ತಾರೆ. ಮುಸ್ಲಿಂ ಉಗ್ರವಾದವೂ ಹಾಗೆಯೇ ಉದಯವಾದದ್ದು. ವಿಶ್ವದಲ್ಲಿ ಮುಸ್ಲಿಂ ಉಗ್ರವಾದ ದೊಡ್ಡದಾಗಲು ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಕಾರಣ. ಇರಾಕ್ ಮೇಲೆ ಮಿಲಿಟರಿ ದಾಳಿ ಮುಸ್ಲಿಂ ಉಗ್ರವಾದ ಭಯಾನಕ ಸ್ವರೂಪ ತಳೆಯಲು ಕಾರಣವಾಯಿತು. ಬುಷ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕು,” ಎಂದು ಇಮ್ರಾನ್ ಆ ಸಂದರ್ಶನದಲ್ಲಿ ಹೇಳಿರುವುದು ವರದಿಯಾಗಿದೆ.

ಪಾಕಿಸ್ತಾನದಲ್ಲಿ ತಾಲಿಬಾನ್ ಮತ್ತಿತರ ಉಗ್ರವಾದಿ ಸಂಘಟನೆಗಳ ಜೊತೆ ಇಮ್ರಾನ್ ಅವರಿಗೆ ನಂಟಿರುವ ಹಿನ್ನೆಲೆಯಲ್ಲಿ ಅವರ ಈ ಮೇಲಿನ ಮಾತುಗಳನ್ನು ಅರ್ಥೈಸಿಕೊಳ್ಳಬೇಕು. ತಾಲಿಬಾನ್ ಜೊತೆ ಮಾತುಕತೆ ನಡೆಸಬೇಕೆಂದು ಮೊದಲಿಂದಲೂ ಪಾಕಿಸ್ತಾನ ಸರ್ಕಾರವನ್ನು ಅವರು ಒತ್ತಾಯಿಸುತ್ತ ಬಂದಿದ್ದಾರೆ. ಈಗ ಅವರೇ ಅಧಿಕಾರಕ್ಕೆ ಬರುವುದರಿಂದ ತಾಲಿಬಾನ್ ಜೊತೆ ಅವರ ನಂಟು ಹೆಚ್ಚಬಹುದು. ತಾಲಿಬಾನ್ ಸಕ್ರಿಯವಾಗಿರುವ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಮುಕ್ತ ಗಡಿ ಇರಬೇಕೆಂದು ಅವರು ಈಗ ಹೊಸ ವಾದ ಮಂಡಿಸಿದ್ದಾರೆ. ಈ ವಾದವನ್ನು ಆಫ್ಘಾನಿಸ್ತಾನ, ಅಮೆರಿಕ ಅಷ್ಟೇ ಏಕೆ ಭಾರತವೂ ಒಪ್ಪುವ ಸಾಧ್ಯತೆ ಇಲ್ಲ. ಭಯೋತ್ಪಾದನೆ ವಿಶ್ವವ್ಯಾಪಿ ಆಗಿರುವ ಹಿನ್ನೆಲೆಯಲ್ಲಿ ಅವರ ಈ ಮಾತುಗಳು ಮುಸ್ಲಿಂ ಭಯೋತ್ಪಾದನೆಯನ್ನು ಸಮರ್ಥಿಸುವಂತಿವೆ. ಅವರ ಈ ನಿಲುವು ಅಂತಾರಾಷ್ಟ್ರೀಯವಾಗಿ ಅವರಿಗೆ ಸಮಸ್ಯೆ ತಂದೊಡ್ಡಬಹುದು.

ಸೌದಿ ಅರೇಬಿಯಾ ಜೊತೆ ಬಾಂಧವ್ಯ ಸುಧಾರಣೆಗೆ ಪ್ರಯತ್ನಿಸುವುದಾಗಿ ಇಮ್ರಾನ್ ಹೇಳಿದ್ದಾರೆ. ಆದರೆ, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವೆ ಈಗಾಗಲೇ ಬಾಂಧವ್ಯ ಹಳಸಿದೆ. ಯೆಮನ್‍ನಲ್ಲಿ ಸೌದಿ ಅರೇಬಿಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಈ ಮಿಲಿಟರಿ ಕಾರ್ಯಾಚರಣೆಗೆ ಸೈನಿಕರನ್ನು ಕಳುಹಿಸುವಂತೆ ಸೌದಿ ಅರೇಬಿಯಾ ಸರ್ಕಾರ ಈ ಹಿಂದೆ ಪಾಕಿಸ್ತಾನವನ್ನು ಕೋರಿತ್ತು. ಆದರೆ, ಆ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು. ಇದೇ ಕಾರಣವಾಗಿ ಎರಡೂ ದೇಶಗಳ ನಡುವೆ ಆರ್ಥಿಕ ಬಾಂಧವ್ಯ ಕೆಟ್ಟಿದೆ. ಅದನ್ನು ಸುಧಾರಿಸುವುದೆಂದರೆ ತನ್ನ ಸೈನಿಕರನ್ನು ಯೆಮನ್‍ನಲ್ಲಿ ಯುದ್ಧಕ್ಕಿಳಿಸುವುದೇ ಆಗಿದೆ. ಇದು ನಿಜವಾಗಿಯೂ ಸೂಕ್ಷ್ಮ ವಿಚಾರ. ಇಮ್ರಾನ್ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಸುಲಭವಲ್ಲ. ಈಗಾಗಲೇ ಅಮೆರಿಕದ ಜೊತೆ ಪಾಕಿಸ್ತಾನದ ಬಾಂಧವ್ಯ ಕೆಟ್ಟಿದೆ. ಭಯೋತ್ಪಾದನೆ ನಿಗ್ರಹಕ್ಕೆಂದು ನೀಡಿದ ಅಪಾರ ಹಣವನ್ನು ಪಾಕಿಸ್ತಾನ ಭಯೋತ್ಪಾದನೆ ಹೆಚ್ಚಿಸಲು ಬಳಸಿದೆ ಎನ್ನುವ ಆರೋಪ ಬಂದ ಹಿನ್ನೆಲೆಯಲ್ಲಿ ಅನುದಾನ ಕಡಿತವಾಗಿದೆ. ಆರ್ಥಿಕವಾಗಿ ಇದು ಪಾಕಿಸ್ತಾನಕ್ಕೆ ಭಾರಿ ಹೊಡೆತ. ಅನುದಾನದಲ್ಲಿ ಖೋತಾ ಮಾಡಲು ಈಗ ಅಮೆರಿಕದ ಜೊತೆ ಸೌದಿ ಅರೇಬಿಯಾವೂ ಸೇರಿದೆ.

ಇದನ್ನೂ ಓದಿ : ಕಡೆಗೂ ರಾಜಕೀಯವಾಗಿ ಗೆದ್ದ ಕ್ರಿಕೆಟ್ ವಿಶ್ವಕಪ್ ವಿಜೇತ ಇಮ್ರಾನ್ ಖಾನ್!

ದೇಶ ಆರ್ಥಿಕವಾಗಿ ಕಷ್ಟದಲ್ಲಿದೆ. ಐಎಂಎಫ್ ಪಡೆದಿದ್ದ 5 ಬಿಲಿಯನ್ ಡಾಲರ್ ಸಾಲದ ಕಂತು ಕಟ್ಟಿಲ್ಲ. ಅರ್ಥಿಕ ಮಿತವ್ಯಯ ಘೋಷಿಸಬೇಕೆಂದು ಐಎಂಎಫ್ ಒತ್ತಡ ಹೇರುತ್ತಿದೆ. ಅದನ್ನು ಮಾಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಡಾಲರ್ ಎದುರು ಪಾಕಿಸ್ತಾನದ ರುಪಾಯಿ ಬೆಲೆ ಕುಸಿದಿದೆ. ಹಣದುಬ್ಬರ ವಿಪರೀತವಾಗಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ನಿರುದ್ಯೋಗ ಸಮಸ್ಯೆ ದೊಡ್ಡದಾಗಿದೆ. ಪರಿಸ್ಥಿತಿ ನಿಭಾಯಿಸುವುದು ಸುಲಭವಲ್ಲ. ಆರ್ಥಿಕ ವ್ಯವಸ್ಥೆಯನ್ನು ಚೀನಾ ಮಾದರಿಯಲ್ಲಿ ಪುನರ್ರೂಪಿಸುವುದಾಗಿ ಇಮ್ರಾನ್ ಹೇಳುತ್ತಿದ್ದಾರೆ. 65 ಬಿಲಿಯನ್ ಡಾಲರ್ ವೆಚ್ಚದಲ್ಲಿ ಚೀನಾ ಆರ್ಥಿಕ ವಲಯ ನಿರ್ಮಿಸುತ್ತಿದೆ. ನಿರ್ಮಾಣ ವೆಚ್ಚವನ್ನು ಚೀನಾ ಸಾಲವಾಗಿ ಪರಿವರ್ತಿಸಲಿದೆ. ಯೋಜನೆಯಿಂದ ತನಗೆ ಎಷ್ಟು ಅನುಕೂಲವಾಗಲಿದೆ ಎಂಬ ಬಗ್ಗೆ ಪಾಕಿಸ್ತಾನ ಖಚಿತ ವಿವರ ಪಡೆಯಬೇಕಿದೆ. ಭಾರತ ಈಗಾಗಲೇ ಈ ಯೋಜನೆ ಬಗ್ಗೆ ವಿರೋಧ ವ್ಯಕ್ತ ಮಾಡಿದ್ದು, ಮುಂದೆ ಸಮಸ್ಯೆ ತಂದೊಡ್ಡಬಹುದು. ವಿವಾದದಿಂದಾಗಿ ಈಗಾಗಲೇ ಚೀನಾ ಕಾಮಗಾರಿಯಲ್ಲಿ ನಿಧಾನಗತಿ ಅನುಸರಿಸುತ್ತಿದೆ ಎಂಬ ವರದಿಗಳಿವೆ. ಇಮ್ರಾನ್ ಈ ಯೋಜನೆಯನ್ನು ಪುನರ್ ಪರಿಶೀಲನೆಗೆ ಒಡ್ಡಬೇಕಾಗಿ ಬರಬಹುದು.

ದೇಶದ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಭಾರತದೊಡನೆ ವಾಣಿಜ್ಯ ಸಂಬಂಧ ಮತ್ತೆ ಆರಂಭಿಸುವ ವಿಚಾರವನ್ನು ಇಮ್ರಾನ್ ಪ್ರಸ್ತಾಪಿಸಿದ್ದಾರೆ. ಭಾರತದೊಡನೆ ಯಾವುದೇ ರೀತಿಯ ಬಾಂಧವ್ಯ ವೃದ್ಧಿ ಕಾಶ್ಮೀರ ಸಮಸ್ಯೆಗೆ ಸಂಬಂಧ ಪಡೆದಿದೆ. ಕಾಶ್ಮೀರದ ಉಗ್ರಗಾಮಿಗಳಿಗೆ ನೆರವು ಕೊಡುವುದನ್ನು ನಿಲ್ಲಿಸಿದರೆ ಮಾತ್ರ ಭಾರತ ಅಂಥ ಬಾಂಧವ್ಯ ಪುನರಾರಂಭಕ್ಕೆ ಒಪ್ಪಬಹುದು. ಆದರೆ, ಕಾಶ್ಮೀರ ಪ್ರತ್ಯೇಕತಾವಾದಿಗಳ ಪರ ಇರುವ ಇಮ್ರಾನ್, ಅಲ್ಲಿ ಉಗ್ರಗಾಮಿ ಚಟುವಟಿಕೆ ತಡೆಯುವರೇ ಎಂಬುದೇ ಪ್ರಶ್ನೆ. ವಾಣಿಜ್ಯ ವಹಿವಾಟು ಎರಡೂ ದೇಶಗಳ ನಡುವೆ ಪುನರಾರಂಭವಾದರೆ ಒಳ್ಳೆಯದೇ. ಆದರೆ, ಅದು ಸಾಧ್ಯವಾಗುವಂಥ ವಾತಾವರಣ ನಿರ್ಮಿಸಲು ಪಾಕಿಸ್ತಾನದ ಸೇನೆ ಸಿದ್ಧವಿದೆಯೇ, ಸಿದ್ಧವಿಲ್ಲದಿದ್ದರೆ ಸೇನೆಯನ್ನು ಮನವೊಲಿಸುವ ಕೆಲಸವನ್ನು ಇಮ್ರಾನ್ ಮಾಡುವರೇ? ಪಾಕಿಸ್ತಾನವನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಇಮ್ರಾನ್ ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕು.

ಕಾಶ್ಮೀರ ವಿವಾದ Kashmir Crisis corruption ಭ್ರಷ್ಟಾಚಾರ ಪಾಕಿಸ್ತಾನ India vs Pakistan ಜಮ್ಮು ಮತ್ತು ಕಾಶ್ಮೀರ ತಾಲಿಬಾನ್ Taliban Nawaz Sharif ನವಾಜ್ ಷರೀಫ್ ಇಮ್ರಾನ್ ಖಾನ್‌
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?