ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್‍ ಎದುರಿನ ಮೊದಲ ಸವಾಲು ಆರ್ಥಿಕ ಬಿಕ್ಕಟ್ಟು

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಪ್ರಧಾನಿ ಆದ ಖುಷಿಯಲ್ಲಿ ಕಾಲ ಕಳೆಯುವಂಥ ಪರಿಸ್ಥಿತಿ ಇಲ್ಲ. ಆರ್ಥಿಕ ಬಿಕ್ಕಟ್ಟು ತಲೆದೋರಿದೆ. ಭಯೋತ್ಪಾದನೆಯೂ ಬೆನ್ನತ್ತಿದೆ. ಹೀಗೆ, ಇಮ್ರಾನ್ ಎದುರು ಹಲವು ಸವಾಲುಗಳಿವೆ

ಡಿ ವಿ ರಾಜಶೇಖರ

ಇಮ್ರಾನ್ ಖಾನ್ ಅವರು ಶನಿವಾರ (ಆ.೧೮) ಪಾಕಿಸ್ತಾನದ ೨೨ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರ, ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯು ಅವರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಿತ್ತು. ಆ ವೇಳೆ, ಇಮ್ರಾನ್ ಬೆಂಬಲವಾಗಿ 176 ಸದಸ್ಯರು ಮತ ನೀಡಿದರೆ, ಮೂರು ಪಕ್ಷಗಳ ಅಭ್ಯರ್ಥಿ ಯಾಗಿದ್ದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸೋದರ ಸೆಹಬಾಜ್ ಷರೀಪ್ ಅವರಿಗೆ ಕೇವಲ 96 ಸದಸ್ಯರು ಬೆಂಬಲ ನೀಡಿದ್ದರು.

ಇತ್ತೀಚೆಗೆ ನಡೆದ ರಾಷ್ಟ್ರೀಯ ಅಸೆಂಬ್ಲಿಯ ( ಸಂಸತ್) ಚುನಾವಣೆಯಲ್ಲಿ ಇಮ್ರಾನ್ ಅವರ ಪಕ್ಷ ಬಹುಮತ ಗಳಿಸಿಲಿಲ್ಲ. ಆದರೆ, ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಇತರ ಕೆಲವು ಸಣ್ಣ ಪಕ್ಷಗಳ ನೆರವಿನಿಂದ ಸರ್ಕಾರ ರಚಿಸಿದ್ದಾರೆ. ಇಮ್ರಾನ್ ಖಾನ್‍ಗೆ ಮಿಲಿಟರಿ ಬೆಂಬಲ ಇರುವುದರಿಂದ ಸರ್ಕಾರ ನಡೆಸಲು ಅವರಿಗೆ ತೊಂದರೆಯೇನೂ ಆಗದು. ಆದರೆ ಅವರ ಸರ್ಕಾರ ಮಿಲಿಟರಿಯ ಕೃಪಾಕಟಾಕ್ಷದಲ್ಲಿ ಇರಬೇಕಾಗುತ್ತದೆ. ಹಾಗೆ ನೋಡಿದರೆ, ಇತ್ತೀಚಿನ ದಶಕಗಳಲ್ಲಿ ಅಧಿಕಾರಕ್ಕೆ ಬಂದವರೆಲ್ಲರೂ ಮಿಲಿಟರಿ ನೆರವು ಪಡೆದಿದ್ದರು. ಮಿಲಿಟರಿ ಬೆಂಬಲ ನಿಂತ ತಕ್ಷಣ ಅವರು ಅಧಿಕಾರ ಕಳೆದುಕೊಂಡಿದ್ದಾರೆ. ಹಿಂದಿನ ಪ್ರಧಾನಿ ನವಾಜ್ ಷರೀಫ್ ಅವರು ಅಧಿಕಾರ ಕಳೆದುಕೊಂಡಿದ್ದು ಹೀಗೆಯೇ. ಇಮ್ರಾನ್ ಅವರ ಭವಿಷ್ಯ ಕೂಡ ಮಿಲಿಟರಿಯ ಬೆಂಬಲವನ್ನೇ ಅವಲಂಬಿಸಿದೆ.

ಇದೇನೇ ಇದ್ದರೂ ಇಮ್ರಾನ್ ಖಾನ್ ಅವರು ಅಧಿಕಾರ ವಹಿಸಿಕೊಂಡ ತಕ್ಷಣ ಎದುರಾಗುವ ದೊಡ್ಡ ಸಮಸ್ಯೆ ಕುಸಿಯುತ್ತಿರುವ ದೇಶದ ಅರ್ಥವ್ಯವಸ್ಥೆ. ವಿದೇಶಿ ವಿನಿಮಯ ಕೊರತೆಯನ್ನು ದೇಶ ಎದುರಿಸುತ್ತಿದೆ. ಆರ್ಥಿಕ ವಿಚಾರದಲ್ಲಿ ದೇಶ ಆಂತರಿಕವಾಗಿ ದೃಢವಾಗಿಲ್ಲ. ಅಂತಾರಾಷ್ಟ್ರೀಯ ಹಣಕಾಸು ನೆರವು ಸಂಸ್ಥೆಗಳಿಂದ ಅದರಲ್ಲಿಯೂ ಐಎಂಎಫ್‍ನಿಂದ ಅಪಾರ ಪ್ರಮಾಣದಲ್ಲಿ ಹಣ ಸಾಲ ಪಡೆಯಲಾಗಿದೆ. 1980ರಿಂದ 12 ಬಾರಿ 8 ಸಾಲ ಪಡೆದು ಹಣ ತೀರಿಸಲಾಗದೆ ಮತ್ತೆ ಮರುಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ತಿಂಗಳಿಗೆ ಮೂರು ಬಿಲಿಯನ್ ಡಾಲರಿನಷ್ಟು ಹಣ ಬಡ್ಡಿಯಾಗಿ ಕಟ್ಟಬೇಕಾಗುತ್ತಿದೆ. ಕಳೆದ ಡಿಸೆಂಬರ್ ತಿಂಗಳಿಂದೀಚೆಗೆ ನಾಲ್ಕು ಬಾರಿ ರುಪಾಯಿಯನ್ನು ಅಪಮೌಲ್ಯಗೊಳಿಸಲಾಗಿದೆ. ಹಣದುಬ್ಬರ, ಬೆಲೆ ಏರಿಕೆ ಅನಿಯಂತ್ರಿತವಾಗಿದೆ. ವಿಚಿತ್ರ ಎಂದರೆ, ದೇಶದಲ್ಲಿ ತೆರಿಗೆ ಪಾವತಿಸುತ್ತಿರುವವರು ಶೇ.1ರಷ್ಟು ಜನರು ಮಾತ್ರ. ತೆರಿಗೆ ಕಳ್ಳತನ ವಿಪರೀತವಾಗಿರುವುದರಿಂದ ದೇಶಕ್ಕೆ ಆದಾಯವೇ ಇಲ್ಲದಾಗಿದೆ. ಪರಿಸ್ಥಿತಿ ನಿಭಾಯಿಸಲು ಮತ್ತೆ ಐಎಂಎಫ್ ಮೊರೆಹೋಗುವುದು ಅನಿವಾರ್ಯವಾದಂತಿದೆ. ಐಎಂಎಫ್ ಸಾಲ ಎಂದರೆ ಅನೇಕ ನಿರ್ಬಂಧಗಳು. ಅದನ್ನು ಪಾಲಿಸುವುದು ಅಷ್ಟು ಸುಲಭವಲ್ಲ. ಆರ್ಥಿಕ ಶಿಸ್ತು ಘೋಷಿಸಿದರೆ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಹೀಗಾಗಿ, ಇಮ್ರಾನ್‍ಗೆ ನಿಜವಾದ ಸವಾಲು ಆರ್ಥಿಕ ಪರಿಸ್ಥಿತಿಯನ್ನು ಒಂದು ಹಿಡಿತಕ್ಕೆ ತೆಗೆದುಕೊಳ್ಳುವುದೇ ಆಗಿದೆ. ಟ್ರಂಪ್ ಅಮೆರಿಕದ ಅಧ್ಯಕ್ಷರಾದ ನಂತರ ನೆರವಿನ ಹಣದಲ್ಲಿ ಅಪಾರ ಕಡಿತವಾಗಿದೆ. ಈಗ ಪಾಕಿಸ್ತಾನ ನಂಬಿಕೊಂಡಿರುವುದು ಚೀನಾ-ಪಾಕಿಸ್ತಾನ ಆರ್ಥಿಕ ವಲಯದ ಹೆಸರಿನಲ್ಲಿ ಚೀನಾದಿಂದ ಬರುವ ಹಣ. ಚೀನಾ ಅದನ್ನು ಯೋಜನೆಗೆ ಮಾತ್ರ ಸೀಮಿತಗೊಳಿಸಿದರೆ ಪಾಕಿಸ್ತಾನಕ್ಕೆ ಸಂಕಷ್ಟ ಎದುರಾಗಲಿದೆ. ಸಾಲ ಮಾಡುವುದು ಸುಲಭ; ಆದರೆ ಆದನ್ನು ತೀರಿಸುವುದು ನಿಜವಾದ ಸಮಸ್ಯೆ.

ಇದನ್ನೂ ಓದಿ : ಕಾಶ್ಮೀರ ವಿವಾದ; ಭಾರತದ ಜೊತೆ ಬಾಂಧವ್ಯ ಸುಧಾರಿಸುವ ಇಮ್ರಾನ್ ನಾಟಕ

ಇಮ್ರಾನ್‍ ಖಾನ್‍ಗೆ ಎದುರಾಗಲಿರುವ ಮತ್ತೊಂದು ಸಮಸ್ಯೆ, ದೇಶದಲ್ಲಿ ಭೂತವಾಗಿ ಬೆಳೆದಿರುವ ಉಗ್ರವಾದ. ಇದು ಆಫ್ಘಾನಿಸ್ತಾನ್ ಸಮಸ್ಯೆಗೂ ತಳಕು ಹಾಕಿಕೊಂಡಿದೆ. ಇಮ್ರಾನ್ ಖಾನ್ ಮೊದಲಿನಿಂದಲೂ ಆಂತರಿಕವಾಗಿ ಮತ್ತು ಆಫ್ಘಾನಿಸ್ತಾನದ ಉಗ್ರವಾದಿಗಳ (ತಾಲಿಬಾನ್) ಜೊತೆ ಮಾತುಕತೆ ನಡೆಸಬೇಕೆಂದು ಸಲಹೆ ಮಾಡುತ್ತ ಬಂದಿದ್ದಾರೆ. ಚುನಾವಣೆಗಳಳ್ಲಿ ಅವರ ಪಕ್ಷಕ್ಕೆ ಉಗ್ರಗಾಮಿಗಳ ಬೆಂಬಲ ಇತ್ತು ಎಂದು ಹೇಳಲಾಗಿದೆ. ಈಗ ಅವರೇ ಅಧಿಕಾರಕ್ಕೆ ಬಂದಿರುವುದರಿಂದ ಏನು ಮಾಡುತ್ತಾರೆ, ಉಗ್ರಗಾಮಿಗಳ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎನ್ನುವುದು ಕುತೂಹಲಕಾರಿ.

ಕಾಶ್ಮೀರ ಸಮಸ್ಯೆ ಅವರ ಮುಂದಿರುವ ಮತ್ತೊಂದು ಸವಾಲು. ಮೊದಲಿಂದಲೂ ಅವರು ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಸಮರ್ಥಿಸುತ್ತ ಬಂದಿದ್ದಾರೆ. ವಿಶ್ವಸಂಸ್ಥೆ ನಿರ್ಣಯದ ಪ್ರಕಾರ ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕು ಎನ್ನುವುದು ಅವರ ನಿಲುವು. ಅದಕ್ಕೆ ಭಾರತ ಒಪ್ಪುವುದಿಲ್ಲ. ಕಾಶ್ಮೀರ ಭಾರತದ ಅವಿಭಾಜ್ಯ ಭಾಗ ಎಂಬುದು ಈಗಾಗಲೇ ನಿರ್ಧಾರವಾಗಿರುವ ವಿಚಾರ ಎನ್ನುವುದು ಭಾರತದ ನಿಲುವು. ಅಲ್ಲಿಗೆ ಮಾತುಕತೆ ನಡೆಯುವ ಸಾಧ್ಯತೆಯೇ ಇಲ್ಲ. ಈ ಪ್ರಶ್ನೆಯನ್ನು ಬದಿಗಿಟ್ಟು ಎರಡೂ ದೇಶಗಳ ನಡುವೆ ಗಡಿ ಮೂಲಕ ವಾಣಿಜ್ಯ ವಹಿವಾಟು ಪುನರಾರಂಭಿಸುವ ಬಗ್ಗೆ ಮಾತುಕತೆ ನಡೆಸಲು ಉಭಯ ನಾಯಕರು ಒಪ್ಪಿದರೆ ಅದೊಂದು ಉತ್ತಮ ಬೆಳವಣಿಗೆಯಾಗುತ್ತದೆ.

ಗಡಿಯ ಮೂಲಕ ಉಗ್ರರು ನುಸುಳಿ ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುವುದು ನಿಲ್ಲುವವರೆಗೆ ಮಾತುಕತೆ ಸಾಧ್ಯವಿಲ್ಲ ಎಂಬ ನಿಲುವನ್ನು ಭಾರತ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ, ಉಗ್ರರು ಗಡಿ ನುಸುಳುವುದಕ್ಕೆ ಬೆಂಬಲ ಕೊಡುತ್ತಿರುವುದು ಪಾಕಿಸ್ತಾನದ ಮಿಲಿಟರಿ. ಅದನ್ನು ನಿಲ್ಲಿಸಬೇಕೆಂದು ಮಿಲಿಟರಿಗೆ ಸೂಚಿಸುವ ಅಧಿಕಾರ ಇಮ್ರಾನ್‍ಗೆ ಇರುವ ಸಾಧ್ಯತೆ ಇಲ್ಲ. ಹೀಗಾಗಿ, ಗಡಿ ಪರಿಸ್ಥಿತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಇದೇನೇ ಇದ್ದರೂ, ಇಮ್ರಾನ್ ಖಾನ್ ಸಾಕಷ್ಟು ಇಚ್ಛಾಶಕ್ತಿ ಇರುವವರು. ಹೀಗಾಗಿ, ಅವರ ಇಚ್ಛಾಶಕ್ತಿಯಿಂದ ಪರಿಸ್ಥಿತಿಯಲ್ಲಿ ಬದಲಾವಣೆ ಆದರೆ ಅದೊಂದು ದೊಡ್ಡ ಪವಾಡವೇ ಸರಿ.

ಪಾಕಿಸ್ತಾನ Pakistan Economics Assembly ಭಯೋತ್ಪಾದನೆ Terrorism ಇಮ್ರಾನ್ ಖಾನ್ Imran Khan ಆರ್ಥಿಕ ಬಿಕ್ಕಟ್ಟು ಸಂಸತ್ತು ಪ್ರಮಾಣವಚನ ದಿನ Oath Taking Day
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?