ಇಮ್ರಾನ್‌ಗೆ ಮೋದಿ ಪತ್ರ | ಭಾರತ-ಪಾಕ್ ಮಾತುಕತೆ ಕುರಿತು ಅನವಶ್ಯಕ ಗೊಂದಲ

ಇಮ್ರಾನ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬರೆದ ಪತ್ರ ಉಭಯ ದೇಶಗಳ ನಡುವೆ ಮಾತುಕತೆಗೆ ಸಂಬಂಧಿಸಿದಂತೆ ವಿವಾದ ಎಬ್ಬಿಸಿದೆ. ಭಾರತ- ಪಾಕ್‌ ನಡುವಣ ಮಾತುಕತೆ ಪುನರಾರಂಭದ ಸಾಧ್ಯತೆಗಳು ಇಮ್ರಾನ್ ಖಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊಸದರಲ್ಲಿಯೇ ಇಲ್ಲವಾಗಿವೆ

ಡಿ ವಿ ರಾಜಶೇಖರ

ಹೊಸ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ವಹಿಸಿಕೊಂಡ ದಿನದಿಂದಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದ ಎದ್ದಿದೆ. ಎರಡೂ ದೇಶಗಳ ನಡುವೆ ಮಾತುಕತೆ ಪುನರಾರಂಭದ ವಿಚಾರಕ್ಕೆ ಸಂಬಂಧಿಸಿದಂತೆಯೇ ಈ ವಿವಾದ . ಎರಡೂ ದೇಶಗಳ ನಡುವೆ ಬಾಂಧವ್ಯ ವೃದ್ಧಿ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಇಟ್ಟರೆ ಪಾಕಿಸ್ತಾನ ಎರಡು ಹೆಜ್ಜೆ ಮುಂದೆ ಇಡುತ್ತದೆ ಎಂದು ಇಮ್ರಾನ್ ಖಾನ್ ಹಿಂದೆ ಹೇಳಿದ್ದರು. ಅಧಿಕಾರ ವಹಿಸಿಕೊಂಡ ನಂತರ ಈ ದಿಕ್ಕಿನಲ್ಲಿ ಅವರು ಮುಂದಡಿ ಇಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈವರೆಗೆ ಅವರ ಕಡೆಯಿಂದ ಅಂಥ ಯಾವುದೇ ಪ್ರಯತ್ನ ನಡೆದಿಲ್ಲ.

ವಿಚಿತ್ರ ಎಂದರೆ ಇಮ್ರಾನ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬರೆದ ಪತ್ರ ಉಭಯ ದೇಶಗಳ ನಡುವೆ ಮಾತುಕತೆಗೆ ಸಂಬಂಧಿಸಿದಂತೆ ವಿವಾದ ಎಬ್ಬಿಸಿದೆ. ಪ್ರಧಾನಿ ಇಮ್ರಾನ್ ಖಾನ್‍ಗೆ ಮೋದಿ ಅವರು ಬರೆದಿರುವ ಪತ್ರದಲ್ಲಿ ಮಾತುಕತೆ ಪುನರಾರಂಭಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ವಿದೇಶಾಂಗ ಖಾತೆ ಸಚಿವ ಶಾ ಮಹಮೂದ್ ಖುರೇಶಿ ಅವರು ಹೇಳಿದ್ದೇ ವಿವಾದದ ಹಿಂದೆ ಇರುವ ವಿಚಾರ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಭಾರತದ ಬಿಜೆಪಿ ಮತ್ತು ಕಾಂಗ್ರೆಸ್ ವಲಯದಲ್ಲಿ ಕೋಲಾಹಲ ಎದ್ದಿತು. ಕಾಶ್ಮೀರ ಗಡಿಯಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನಾ ಚಟುವಟಿಕೆ ನಿಲ್ಲದ ಹೊರತು ಮಾತುಕತೆ ಇಲ್ಲ ಎನ್ನುವುದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ನಿಲುವು. ಇದು ಹಠಾತ್ತನೆ ಬದಲಾದದ್ದು ಏಕೆ ಎನ್ನುವುದು ಹಲವರ ಪ್ರಶ್ನೆ. ವಿರೋಧ ಪಕ್ಷಗಳೂ ಸರ್ಕಾರದ ಈ ನಡೆಗೆ ಆಶ್ಚರ್ಯ ವ್ಯಕ್ತಮಾಡಿದರು. ವಿವಾದ ದೊಡ್ಡದಾಗುತ್ತಿದ್ದಂತೆಯೇ ಮೋದಿ ಅವರು ಅಂಥ ಪ್ರಸ್ತಾವ ಮಾಡಿಲ್ಲ ಎಂದು ಸರ್ಕಾರದ ಕಡೆಯಿಂದ ಸ್ಪಷ್ಟನೆ ಬಂದರೆ ಅತ್ತ ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಶಿ ಅವರೂ ಸ್ಪಷ್ಟನೆ ನೀಡಿ ಮೋದಿ ಅವರು ಇಮ್ರಾನ್ ಖಾನ್ ಅವರಿಗೆ ಬರೆದ ಪತ್ರದಲ್ಲಿ ಮಾತುಕತೆ ಪುನರಾರಂಭದ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ ವಿವಾದ ಬಗೆಹರಿದಂತೆ ಕಾಣುತ್ತಿಲ್ಲ. ಹಾಗೆ ನೋಡಿದರೆ ಈ ಬೆಳವಣಿಗೆ ಎರಡೂ ದೇಶಗಳ ನಡುವೆ ಇರುವ ವೈಮನಸ್ಯವನ್ನು ಹೊರಗೆಡವಿದೆ.

ಮೋದಿ ಅವರು ತಮ್ಮ ಪತ್ರದಲ್ಲಿ ಮಾತುಕತೆ ಪುನರಾರಂಭದ ಪ್ರಸ್ತಾಪವನ್ನು ಮುಂದಿಟ್ಟಿಲ್ಲ ಎನ್ನುವುದು ನಿಜ. ಆದರೆ ಅವರು ಬಳಸಿರುವ ಪದಗಳು ಅದನ್ನೇ ಸೂಚಿಸುತ್ತಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ದೃಷ್ಟಿಯಿಂದ ಮೋದಿ ಪತ್ರದ ಬಗ್ಗೆ ಖುರೇಶಿ ಅವರ ಮೊದಲ ಗ್ರಹಿಕೆ ಸರಿಯಾಗಿಯೇ ಇದೆ. ಆದರೆ ನೇರವಾಗಿ ಆ ಪ್ರಸ್ತಾಪ ಬಂದಿಲ್ಲದಿರುವುದರಿಂದ ಅವರು ಹಾಗೆ ಹೇಳಿಲ್ಲ ಎಂದು ಹೇಳಲೂ ಅವಕಾಶವಿದೆ. ಹೀಗಾಗಿ ಖುರೇಶಿ ಅದನ್ನೆ ಹೇಳಿ ವಿವಾದದಿಂದ ಪಾರಾಗಿದ್ದಾರೆ. ಎರಡೂ ದೇಶಗಳ ಸಂಬಂಧಗಳು ಎಷ್ಟು ಸೂಕ್ಷ್ಮವಾದುವು ಎನ್ನುವುದಕ್ಕೆ ಇದಕ್ಕಿಂತಾ ಬೇರೆ ನಿದರ್ಶನ ಬೇಕಿಲ್ಲ. ಎರಡೂ ದೇಶಗಳ ನಡುವೆ ಶಾಂತಿ ನೆಲೆಸಬೇಕಿದೆ. ಆದರೆ ಆ ದಿಸೆಯಲ್ಲಿ ಯಾರು ಮೊದಲ ಹೆಜ್ಜೆ ಇಡಬೇಕು ಎನ್ನುವ ವಿಚಾರದಲ್ಲಿ ಪರಸ್ಪರ ಹಿಂಜರಿಕೆ. ಜೊತೆಗೆ ಕಾಶ್ಮೀರ ವಿಚಾರದಲ್ಲಿ ಎರಡೂ ದೇಶಗಳು ಪ್ರತಿಷ್ಠೆಗೆ ಅಂಟಿಕೊಂಡಿವೆ. ಎರಡೂ ದೇಶಗಳ ನಡುವೆ ಮಾತುಕತೆ ನಡೆಯಬೇಕು ಎಂದು ಹೊಸ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರಾದರೂ ಅದಕ್ಕೆ ಅವರು ಹಾಕಿರುವ ಷರತ್ತು ಕಾಶ್ಮೀರದಲ್ಲಿ ವಿಶ್ವಸಂಸ್ಥೆ ನಿರ್ಣಯದ ಅನ್ವಯ ಜನಮತಗಣನೆ ನಡೆಯಬೇಕೆಂಬುದು, ಈ ವಿಚಾರದಲ್ಲಿ ಭಾರತದ ನಿಲುವು ಕೂಡಾ ಅಷ್ಟೇ ಖಚಿತವಾದುದು. ಕಾಶ್ಮೀರ ಪ್ರದೇಶ ಭಾರತದ ಅವಿಭಾಜ್ಯ ಭಾಗ. ಈ ವಿಚಾರದಲ್ಲಿ ರಾಜಿಯೇ ಇಲ್ಲ ಎನ್ನುವುದು ಭಾರತದ ನಿಲುವು. ಸಮಸ್ಯೆ ಇರುವುದೇ ಇಲ್ಲಿ. ಉಭಯ ದೇಶಗಳ ನಡುವಣ ಸಮಸ್ಯೆಗಳ ಪರಿಹಾರ ದಿಸೆಯಲ್ಲಿ ಮಾತುಕತೆ ಆರಂಭವಾಗಬೇಕಾದರೆ ಮೊದಲು ಕಾಶ್ಮೀರ ಗಡಿಯಲ್ಲಿ ಉಗ್ರವಾದಿಗಳು ನುಸುಳುವುದು ನಿಲ್ಲಬೇಕು, ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ನಿಲ್ಲಬೇಕು ಎನ್ನುವುದು ಭಾರತದ ಷರತ್ತು. ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೂ ತನಗೂ ಸಂಬಂಧವಿಲ್ಲ ಎನ್ನುವುದು ಪಾಕಿಸ್ತಾನದ ಸ್ಪಷ್ಟನೆ. ಆದರೆ ಭಾರತ ಇದನ್ನು ಒಪ್ಪುವುದಿಲ್ಲ. ಹೀಗಾಗಿಯೇ ಎರಡೂ ದೇಶಗಳ ನಡುವೆ ವೈಮನಸ್ಯ ಮುಂದುವರಿದಿದೆ.

ಇದನ್ನೂ ಓದಿ : ಕಾಶ್ಮೀರದಿಂದ | ಮಹಿಳೆಯರಿಗಾಗಿ ನಿರ್ಮಾಣ ಆಗಲಿದೆಯೇ ‘ಹೊಸ ಪಾಕಿಸ್ತಾನ’?

ಪ್ರಧಾನಿ ಇಮ್ರಾನ್ ಖಾನ್ ಬಹಿರಂಗವಾಗಿಯೇ ಕಾಶ್ಮೀರ ಪ್ರತ್ಯೇಕತಾವಾದಿಗಳ ಹೋರಾಟವನ್ನು ಈಹಿಂದೆ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಲ್ಲಿ ಜನಮತಗಣನೆ ನಡೆಯಬೇಕು ಎಂದೂ ಆಗ್ರಹಿಸಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಮೇಲೆ ಅವರ ನಿಲುವೇನೂ ಬದಲಾಗುವ ಸಾಧ್ಯತೆ ಇಲ್ಲ. ಏಕೆಂದರೆ ಪಾಕಿಸ್ತಾನದ ನೀತಿಗಳನ್ನು ನಿರ್ಧರಿಸುವುದು ಅಲ್ಲಿನ ಮಿಲಿಟರಿ. ಇಮ್ರಾನ್ ಖಾನ್ ಕೂಡಾ ಮಿಲಿಟರಿ ನೆರವಿನಿಂದ ಅಧಿಕಾರಕ್ಕೆ ಬಂದಿರುವುದರಿಂದ ಮಿಲಿಟರಿ ನಿರ್ದೇಶಿತ ನೀತಿಗಳಲ್ಲಿ ಬದಲಾವಣೆ ಆಗುತ್ತದೆ ಎಂದು ನಿರೀಕ್ಷೆ ಮಾಡುವಂತಿಲ್ಲ. ಎಲ್ಲಕ್ಕಿಂತಾ ಹೆಚ್ಚಾಗಿ ಮೋದಿ ಅವರ ಬಗ್ಗೆ ಇಮ್ರಾನ್ ಖಾನ್‌ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಗುಜರಾತ್ ಗಲಭೆ ಭಾರತದ ಇತಿಹಾಸದಲ್ಲಿ ದೊಡ್ಡ ಕಪ್ಪು ಚುಕ್ಕೆ, ಮೋದಿ ಮುಸ್ಲಿಮ್ ವಿರೋಧಿ ಎಂದೆಲ್ಲಾ ಇಮ್ರಾನ್ ಈ ಮೊದಲು ಟೀಕಿಸಿದ್ದುಂಟು. ಇಂಥ ಅಭಿಪ್ರಾಯ ಇಟ್ಟುಕೊಂಡು ಮೋದಿ ಅವರ ಜೊತೆ ಮಾತುಕತೆ ಅವರು ಮುಂದಾಗುವರೇ ಎನ್ನುವುದು ದೊಡ್ಡ ಪ್ರಶ್ನೆ.

ಇದೇನೇ ಇದ್ದರೂ ಹೊಸದಾಗಿ ನೇಮಕಗೊಂಡಿರುವ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ಎರಡೂ ದೇಶಗಳ ನಡುವೆ ಮಾತುಕತೆಗಳು ನಿರಂತರವಾಗಿ ನಡೆಯಬೇಕು, ಅದು ಅನಿವಾರ್ಯ ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಜೊತೆ ಮಾತುಕತೆಗಳನ್ನು ಆರಂಭಿಸಲು ತಾವು ಬಯಸುವುದಾಗಿ ಮತ್ತು ಆ ಮೂಲಕ ಶಾಂತಿ ಸ್ಥಾಪನೆಯಾಗಲಿದೆ ಎಂದೂ ಅವರು ಆಶಿಸಿದ್ದಾರೆ. ವಿದೇಶಾಂಗ ನೀತಿಯನ್ನು ವಿದೇಶಾಂಗ ಇಲಾಖೆ ರೂಪಿಸುತ್ತದೆಯೇ ಹೊರತು ಮಿಲಿಟರಿಯಲ್ಲ ಎಂದು ಅವರು ಹೇಳಿರುವುದನ್ನು ನೋಡಿದರೆ ಮಿಲಿಟರಿ ಮತ್ತು ನಾಗರಿಕ ಸರ್ಕಾರದ ನಡುವೆ ಎಂದಾದರೂ ಸಂಘರ್ಷ ಸಿಡಿಯುವುದು ಖಚಿತ ಎನಿಸುತ್ತದೆ. ಪಾಕಿಸ್ತಾನದ ಮಿಲಿಟರಿ ತನ್ನ ಧೋರಣೆ ಬದಲಾಯಿಸಿಕೊಂಡರೆ ಮಾತ್ರ ಉಭಯ ದೇಶಗಳ ನಡುವೆ ಬಾಂಧವ್ಯ ಸುಧಾರಣೆ ಸಾಧ್ಯ.

ಭಾರತ ಪಾಕಿಸ್ತಾನ ಪ್ರಧಾನಿ ನರೇಂದ್ರ ಮೋದಿ PM Narendra Modi ಪತ್ರ Letter ಇಮ್ರಾನ್ ಖಾನ್ Imran Khan India-Pakistan
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?