ಅಮೆರಿಕದ ದಿಗ್ಗಜರು ಮೆಕೇನ್‌ ನೆನೆಯುತ್ತಿದ್ದರೆ, ಟ್ರಂಪ್‌ ಗಾಲ್ಫ್‌ ಆಡುತ್ತಿದ್ದರು!

ಅಮೆರಿಕದ ರಾಜಕೀಯ ಧುರೀಣ ಜಾನ್‌ ಮೆಕೇನ್‌ ತಮ್ಮ ಸಾವಿನಲ್ಲೂ ಪ್ರಬಲ ರಾಜಕೀಯ ಸಂದೇಶವನ್ನು ನೀಡಿದ್ದಾರೆ. ತಮ್ಮದೇ ಪಕ್ಷದವರಾದ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ತಮ್ಮ ಅಂತ್ ಸಂಸ್ಕಾರದಿಂದ ದೂರವಿರಿಸುವುದು ಅವರ ಇಚ್ಛೆಯಾಗಿತ್ತು. ಇತ್ತೀಚೆಗೆ ವಾಜಪೇಯಿ ಅಗಲಿಕೆಯ ವೇಳೆ ಭಾರತೀಯರೂ ಸದ್ಯದ ರಾಜಕಾರಣದಲ್ಲಿ ಅತ್ಯಗತ್ಯವಿರುವ ಮೌಲ್ಯಗಳನ್ನು ಪೊರೆಯಬೇಕಾದ ಸಂದೇಶವನ್ನು ಗ್ರಹಿಸಿದ್ದನ್ನು ಇಲ್ಲಿ ನೆನೆಯಬಹುದು

ನಟರಾಜು ವಿ

ಅಮೆರಿಕದ ರಿಪಬ್ಲಿಕನ್‌ ಪಕ್ಷದ ಹಿರಿಯ ರಾಜಕೀಯ ಧುರೀಣ ಜಾನ್‌ ಮೆಕೇನ್‌ ಅವರ ಸಾವಿನ ನಂತರದ ಶೋಕಾಚರಣೆಯ ಸುತ್ತ ನಡೆದ ಚರ್ಚೆಗಳು, ಎದ್ದ ವಿವಾದಗಳು ಅಮೆರಿಕನ್ನರನ್ನು ಮಾತ್ರವೇ ಅಲ್ಲದೆ ಜಾಗತಿಕ ರಾಜಕಾರಣವನ್ನು ಆಸ್ಥೆಯಿಂದ ಗಮನಿಸುವ ಎಲ್ಲರಲ್ಲೂ ವಿಶೇಷ ಆಸಕ್ತಿಗೆ ಕಾರಣವಾದವು. ಜಾನ್‌ ಮೆಕೇನ್‌ ಅವರಲ್ಲಿ ಅಮೆರಿಕನ್ನರು ಓರ್ವ ದೇಶಭಕ್ತ, ಧೈರ್ಯಶಾಲಿ ವೀರ ಯೋಧನನ್ನು ಕಂಡಿದ್ದರು. ವಿಯೆಟ್ನಾಂ ಯುದ್ಧದಲ್ಲಿ ಜಾನ್‌ ಮೆಕೇನ್‌ ನಿರ್ವಹಿಸಿದ ಪಾತ್ರದ ಬಗ್ಗೆ ಭಿನ್ನಾಭಿಪ್ರಾಯಗಳೇನೇ ಇದ್ದರೂ ದೇಶಭಕ್ತಿಯ ಚೌಕಟ್ಟಿನೊಳಗೆ ಅವರನ್ನಿರಿಸಿ ನೋಡಿದ ಬಹುತೇಕ ಅಮೆರಿಕನ್ನರಿಗೆ ಅವರೊಬ್ಬ ರಾಷ್ಟ್ರಭಕ್ತ ಎಂದೆನಿಸಿದ್ದರಲ್ಲಿ ಸಂಶಯವಿಲ್ಲ. ಇನ್ನು ಮೆಕೇನ್‌ ತಮ್ಮ ರಾಜಕೀಯ ಜೀವನದುದ್ದಕ್ಕೂ ನಡೆದುಕೊಂಡ ರೀತಿ ಅವರ ಎದುರಾಳಿಗಳಲ್ಲೂ ಅವರೆಡೆಗೆ ವಿಶೇಷ ಗೌರವಕ್ಕೆ ಕಾರಣವಾಗಿತ್ತು. ಇದರ ಹೆಗ್ಗುರುತು ಎನ್ನುವಂತೆ ವಾಷಿಂಗ್‌ಟನ್‌ನ ನ್ಯಾಷನಲ್‌ ಕ್ಯಾಥೆಡ್ರಲ್‌ನಲ್ಲಿ ನಡೆದ ಅವರ ಅಂತ್ಯ ಸಂಸ್ಕಾರದ ಸಭೆಯಲ್ಲಿ ಅಮೆರಿಕದ ಮೂವರು ಮಾಜಿ ಅಧ್ಯಕ್ಷರು ಹಾಜರಿದ್ದರು. ಇದರಲ್ಲಿ ಅಮೆರಿಕದ ರಾಷ್ಟ್ರಾಧ್ಯಕ್ಷ ಹುದ್ದೆಯ ರಿಪಬ್ಲಿಕನ್‌ ಅಭ್ಯರ್ಥಿಯಾಗಲು ಸೆಣೆಸಿದ ವೇಳೆ ಅವರನ್ನು ಹಿಂದಿಕ್ಕಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ನಂತರ ಅಮೆರಿಕದ ಅಧ್ಯಕ್ಷರೂ ಆದ ಜಾರ್ಜ್‌ ಬುಷ್‌ ಒಬ್ಬರಾದರೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರನ್ನು ಎದುರಿಸಿ ಗೆದ್ದ ಡೆಮೊಕ್ರಟಿಕ್‌ ಪಕ್ಷದ ಒಬಾಮಾ ಮತ್ತೊಬ್ಬರು. ಇದಲ್ಲದೆ ಬಿಲ್‌ ಕ್ಲಿಂಟನ್‌ ಕೂಡ ಹಾಜರಿದ್ದರು.

ತಮ್ಮ ಸಂಸದೀಯ ಪಟುತ್ವ, ಎಲ್ಲರನ್ನೂ ಒಳಗೊಳ್ಳುವ ಮನೋಭಾವದ ಮೂಲಕ ಮೆಕೇನ್‌ ಪಕ್ಷಾತೀತವಾಗಿ ಮನ್ನಣೆಗಳಿಸಿದ್ದರು. ಮೆಕೇನ್‌ ಅವರ ಸಾವಿಗೆ ಪಕ್ಷಾತೀತವಾಗಿ ವ್ಯಕ್ತವಾದ ಸಂತಾಪ, ಅವರಿಗೆ ಅಮೆರಿಕದ ಜನತೆ ಮಿಡಿದ ರೀತಿ ಭಾರತೀಯರ ಪಾಲಿಗೆ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವವನ್ನು ನೆನಪಿಸಿದ್ದರಲ್ಲಿ ಅಚ್ಚರಿ ಇಲ್ಲ. ವಾಜಪೇಯಿ ಅವರ ಅಗಲಿಕೆಗೆ ಪಕ್ಷಾತೀತವಾಗಿ ರಾಜಕೀಯ ನಾಯಕರು ಮಿಡಿದ ರೀತಿ, ಅವರಿಗೆ ಗೌರವ ಸಲ್ಲಿಸಲು ಒಗ್ಗೂಡಿದ ಬಗೆಯನ್ನು ಈ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳಬಹುದು. ಈ ಹೋಲಿಕೆಗಳು ಇಷ್ಟಕ್ಕೆ ನಿಲ್ಲುವುದಿಲ್ಲ, ವಾಜಪೇಯಿ ಅವರನ್ನು, ಅವರದೇ ಪಕ್ಷ ಅಧಿಕಾರದಲ್ಲಿರುವ ಈ ಸಂದರ್ಭದಲ್ಲಿ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರಿಗೆ ವಿರುದ್ಧವಾದ ನೆಲೆಯಲ್ಲಿ ರಾಜಕೀಯವಾಗಿ ವಿಶ್ಲೇಷಿಸಲಾಗಿದೆ. ಇದೇ ಕಾರಣಕ್ಕೆ, ವಾಜಪೇಯಿ ಅವರ ನಿರ್ಗಮನದಲ್ಲಿ, ಸದ್ಯದ ಭಾರತಕ್ಕೆ ಅಗತ್ಯವಿರುವ ರಾಜಕೀಯ ಸಂದೇಶವನ್ನು ಕಂಡುಕೊಳ್ಳಲಾಯಿತು. ವಾಜಪೇಯಿ, ಮೆಕೇನ್‌ ಅವರಂತಹ ನಾಯಕರೊಟ್ಟಿಗೆ ಅಭಿಪ್ರಾಯಭೇದದಾಚೆಗೂ ಸಂವಾದಗಳು ಸಾಧ್ಯವಿದ್ದವು. ಪಕ್ಷ, ಸಿದ್ಧಾಂತದಾಚೆಗೂ ಸ್ವಸ್ಥ ಚರ್ಚೆಗಳು ಸಾಧ್ಯವಿದ್ದವು. ಇದುವೇ ಈ ಇಬ್ಬರು ನಾಯಕರನ್ನು ಗೌರವಿಸಲು ಕಾರಣವೂ ಆಗಿತ್ತು.

ವಿಪರ್ಯಾಸವೆಂದರೆ, ಮೆಕೇನ್‌ ಅವರ ಅಂತ್ಯ ಸಂಸ್ಕಾರದ ಸಭೆಗೆ ಅವರದೇ ಪಕ್ಷದಿಂದ ಚುನಾಯಿತರಾಗಿ ಅಮೆರಿಕದ ಅಧ್ಯಕ್ಷ ಹುದ್ದೆಗೇರಿರುವ ಡೊನಾಲ್ಡ್‌ ಟ್ರಂಪ್‌ ಅವರಿಗೆ ಆಹ್ವಾನವಿರಲಿಲ್ಲ. ಮೆಕೇನ್‌ ಅವರು ತಮ್ಮ ಸಾವಿನಲ್ಲಿಯೂ ಅಮೆರಿಕದ ಪ್ರಜಾಪ್ರಭುತ್ವ ಎತ್ತಿಹಿಡಿಯ ಬಯಸುವ ಚರ್ಚೆ, ಸಂವಾದಗಳಿಗೆ ಮುಕ್ತವಾದ ಬಹುತ್ವದ ಸಂಕೇತವಾಗಿ ಹೊರಹೊಮ್ಮಿದರು.

ಇಲ್ಲಿ ಒಂದು ಉದಾಹರಣೆಯನ್ನು ಗಮನಿಸಬಹುದು. 2008ರ ಅಧ್ಯಕ್ಷೀಯ ಚುನಾವಣೆಯ ವೇಳೆ ಮಿನ್ನೆಸೋಟಾ ರಾಜ್ಯದ ಚುನಾವಣಾ ಸಭೆಯೊಂದರಲ್ಲಿ ಮೆಕೇನ್‌ ಮತದಾರರೊಂದಿಗೆ ಸಂವಾದವನ್ನು ನಡೆಸಿದ್ದರು. ಈ ವೇಳೆ ಮಹಿಳೆಯೊಬ್ಬಳು, “ನಾನು ಒಬಾಮಾರನ್ನು ನಂಬುವುದಿಲ್ಲ. ನಾನು ಆತನ ಬಗ್ಗೆ ಓದಿದ್ದೇನೆ, ಆತ ನಮ್ಮವನಲ್ಲ, ಅರಬ್‌,” ಎಂದಿದ್ದರು. ಆದರೆ, ಕೂಡಲೇ ಮೈಕ್‌ ಅನ್ನು ಆಕೆಯಿಂದ ಪಡೆದ ಮೆಕೇನ್‌, “ತಪ್ಪು ಮೇಡಂ, ಆತ ಸಹ ಓರ್ವ ಉತ್ತಮ ಕುಟುಂಬದಿಂದ ಬಂದಿರುವ ವ್ಯಕ್ತಿ, ಗೌರವಾನ್ವಿತ ನಾಗರಿಕ. ನನ್ನ ಮತ್ತು ಅವರ ನಡುವೆ ಕೆಲವೊಂದು ಪ್ರಾಥಮಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಚುನಾವಣಾ ಪ್ರಚಾರ ಕೇವಲ ಅವುಗಳ ಸುತ್ತ ಮಾತ್ರ,” ಎಂದಿದ್ದರು. ಬಹುಶಃ ಇಂತಹದ್ದೇ ಕಾರಣಗಳಿಗೆ ಇರಬಹುದು, ಅಮೆರಿಕನ್ನರು ತಮ್ಮ ಬಗ್ಗೆ ತಾವೇ ಹೆಮ್ಮೆ ಪಡುವಂತಹ ವಿಶಿಷ್ಟ ‘ಅಮೆರಿಕನ್‌ ಮೌಲ್ಯ’ಗಳೇನಿವೆ, ಅದರ ಸಮರ್ಥ ಪ್ರತಿನಿಧಿಯಾಗಿ ಮೆಕೇನ್‌ ಅವರನ್ನು ಅಮೆರಿಕದ ಜನತೆ ಗುರುತಿಸಿದ್ದರು.

ಬದಲಾದ ಜಾಗತಿಕ, ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಮೆರಿಕದೊಳಗೆ ಸುಪ್ತವಾಗಿದ್ದ ಜನಾಂಗೀಯವಾದ, ಅಸಹನೆಯ ಭಾವನೆಗಳಿಗೆ ‘ಪ್ರೊಟೆಕ್ಷನಿಸಂ’ ನಿಲುವುಗಳ ಮೂಲಕ ರಾಜಕೀಯ ಅಭಿವ್ಯಕ್ತಿಯನ್ನು ನೀಡಿ ಅಧಿಕಾರ ಹಿಡಿದ ಟ್ರಂಪ್‌ ಅವರಿಗೆ ವಿರುದ್ಧ ನೆಲೆಯಲ್ಲಿ ಅವರದೇ ಪಕ್ಷದ ಹಿರಿಯ ನಾಯಕ ಮೆಕೇನ್‌ ಗೋಚರಿಸುತ್ತಿದ್ದರು. ಮೆಕೇನ್‌ ಅವರು ಬದುಕಿದ್ದಾಗ ಹೇಗೆ ಟ್ರಂಪ್‌ ಅವರನ್ನು ತಮ್ಮ ನಿರ್ಭೀತ ನಿಲುವುಗಳ ಮೂಲಕ ಪ್ರತಿರೋಧಿಸಿದ್ದರೋ, ಹಾಗೆಯೇ ತಮ್ಮ ಸಾವನ್ನೂ ಟ್ರಂಪ್‌ ಆಡಳಿತ ವೈಖರಿಯ ವಿರುದ್ಧದ ಕಟು ಭಾಷ್ಯವಾಗಿರುವಂತೆ ನೋಡಿಕೊಂಡರು. ಅಮೆರಿಕವನ್ನು ಆಂತರಿಕವಾಗಿ ಹಾಗೂ ಜಾಗತಿಕವಾಗಿ ಒಡೆಯುವಂತಹ ಯಾವುದೇ ಸಿದ್ಧಾಂತಗಳು ಅದು ‘ಪ್ರೊಟೆಕ್ಷನಿಸಂ’, ‘ಐಸೊಲೇಷನಿಸಂ’ ಅಥವಾ ಮತ್ತಾವುದೇ ಇರಲಿ. ಅದರ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದು ಮೆಕೇನ್‌ ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದರು. ಬಹುಮುಖ್ಯವಾಗಿ, ಸುಳ್ಳು ಪ್ರಚಾರಗಳು, ಕಪೋಲಕಲ್ಪಿತ ಸಂಚುಗಳನ್ನು ಹರಡುವವರ ವಿರುದ್ಧ ಎಚ್ಚರದಿಂದಿರಬೇಕು ಎಂದು ಪ್ರತಿಪಾದಿಸುತ್ತಿದ್ದರು. ಸಹಜವಾಗಿಯೇ ಇಂತಹ ಮಾತುಗಳು ಎಲ್ಲ ಬಗೆಯ ಪ್ರಚಾರತಂತ್ರಗಳ ಮೂಲಕವೇ ಅಧಿಕಾರಗಳಿಸಿದ್ದ ಟ್ರಂಪ್‌ ಅವರಿಗೆ ನುಂಗಲಾರದ ತುತ್ತಾಗಿದ್ದವು. ಮೆಕೇನ್‌ ಅವರ ಟ್ರಂಪ್‌ ವಿರುದ್ಧದ ಈ ಹೋರಾಟ ಸಾವಿನ ಆಚೆಗೂ ವಿಸ್ತರಿಸಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಿದುಳಿನ ಕ್ಯಾನ್ಸರ್‌ನಿಂದ ನರಳುತ್ತಿದ್ದ ಮೆಕೇನ್‌ ಅವರ ಇಚ್ಛೆಯಂತೆಯೇ ಅವರ ಅಂತಿಮ ಸಂಸ್ಕಾರದ ಶೋಕಸಭೆಗೆ ಅಮೆರಿಕದ ಅಧ್ಯಕ್ಷರಾದ ಅವರದೇ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರಿಗೆ ಆಹ್ವಾನವಿರಲಿಲ್ಲ. ಟ್ರಂಪ್‌ ಅವರ ಕಟುಟೀಕಾರರಲ್ಲಿ ಮೆಕೇನ್‌ ಸದಾ ಮುಂಚೂಣಿಯಲ್ಲಿದ್ದರು. ತಾವು ಪ್ರತಿನಿಧಿಸುತ್ತಿದ್ದ ರಾಜಕಾರಣದ ಭಾಗವಾಗಿ ಟ್ರಂಪ್‌ ಅವರನ್ನು ಮೆಕೇನ್‌ ಯಾವತ್ತೂ ಪರಿಗಣಿಸಲಿಲ್ಲ. ಅದೇ ರೀತಿ, ಟ್ರಂಪ್‌ ಸಹ ಮೆಕೇನ್‌ ಅವರ ಬಗ್ಗೆ ಬದುಕಿದ್ದಾಗಲೂ, ಸಾವಿನ ನಂತರವೂ ಉತ್ತಮ ಮಾತುಗಳನ್ನಾಡಲಿಲ್ಲ. ಮೆಕೇನ್‌ ಅವರ ಸಾವಿಗೆ ಶ್ವೇತಭವನ ಅಧಿಕೃತ ಶೋಕಸಂದೇಶವನ್ನೂ ಹೊರಡಿಸಲಿಲ್ಲ. ಇದರ ಅಗತ್ಯತೆಯ ಬಗ್ಗೆ ಶ್ವೇತಭವನದ ಅಧಿಕಾರಿಗಳು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರಾದರೂ ಟ್ರಂಪ್‌ ಆ ಅಭಿಪ್ರಾಯಗಳಿಗೆ ಮನ್ನಣೆ ನೀಡಲಿಲ್ಲ. ಬದಲಿಗೆ, ಮೆಕೇನ್‌ ಸಾವಿನ ಕುರಿತಾದ‌ ಶೋಕ ಸಂದೇಶವನ್ನು ತಮ್ಮ ಟ್ವಿಟರ್‌ ಹಾಗೂ ಇನ್ಸ್ಟಾಗ್ರಾಂ ಖಾತೆಗಳಿಗೆ ಮಾತ್ರವೇ ಸೀಮಿತಗೊಳಿಸಿಕೊಂಡರು. ಅಷ್ಟೇ ಅಲ್ಲ, ಮೆಕೇನ್‌ ಅವರ ಸಾವಿನ ನಂತರ ಅವರ ರಾಜಕಾರಣ ಪ್ರತಿನಿಧಿಸಿದ ಮೌಲ್ಯಗಳ ಬಗ್ಗೆ ಮಾತನಾಡುವಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೂ ಟ್ರಂಪ್‌ ತಮ್ಮ ನೇತ್ಯಾತ್ಮಕ ಮೌನದ ಮೂಲಕವೇ ಉತ್ತರಿಸಿದರು.

ಇದನ್ನೂ ಓದಿ : ಸಂಕಲನ | ಅಟಲ್‌ ಬಿಹಾರಿ ವಾಜಪೇಯಿ ಕುರಿತ ವಿಡಿಯೋ, ಫೋಟೊ, ಬರಹಗಳು

ಈ ಹಿಂದೆ, ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್ ಅವರು, ಮೆಕೇನ್‌ ನನಗೆ ‘ವಾರ್‌ ಹೀರೋ’ ಅಲ್ಲ ಎಂದಿದ್ದರು. “ಯುದ್ಧದಲ್ಲಿ ಸೆರೆ ಸಿಕ್ಕವರಿಗಿಂತ ಸಿಕ್ಕದೆ ಇದ್ದವರು ನನ್ನ ಹೀರೋಗಳು,” ಎಂದು ವಿಯೆಟ್ನಾಂ ಯುದ್ಧದಲ್ಲಿ ದೀರ್ಘ ಅವಧಿಗೆ ಸೆರೆಯಾಳಾಗಿದ್ದ ಮೆಕೇನ್‌ ಅವರನ್ನು ಪರೋಕ್ಷವಾಗಿ ಕುಟುಕಿದ್ದರು. ಮುಂದೆ, ಟ್ರಂಪ್‌ ಅಮೆರಿಕದ ಅಧ್ಯಕ್ಷರಾದ ಮೇಲೆ ದೇಶದ ನಾಗರಿಕರಿಗಾಗಿ ಒಬಾಮಾ ಅಡಳಿತದಲ್ಲಿ ರೂಪಿಸಲಾದ ‘ಒಬಾಮಾ ಕೇರ್’ ಯೋಜನೆಯನ್ನು ಹಿಂಪಡೆಯಲು ಅವರ ನೇತೃತ್ವದ ಸರ್ಕಾರ ಮುಂದಾದಾಗ ಅದನ್ನು ತಿರಸ್ಕರಿಸಿ ಮೆಕೇನ್‌ ಮತ ಹಾಕಿದ್ದರಿಂದಾಗಿ ಟ್ರಂಪ್ ಮುಖಭಂಗ ಅನುಭವಿಸಿದ್ದರು. ನೀತಿನಿರೂಪಣೆಯನ್ನು ತಡೆಯುವ ಮೂಲಕ ಮೆಕೇನ್ ನನ್ನ ವಿರುದ್ಧದ ವೈಯಕ್ತಿಕ ದ್ವೇಷವನ್ನು ಸಾಧಿಸಿದರು ಎಂದು ಟ್ರಂಪ್‌ ಈ ಕುರಿತು ಅಭಿಪ್ರಾಯ ಪಟ್ಟಿದ್ದರು. ಅಗಲಿದ ಹಿರಿಯ ನಾಯಕರ ಗೌರವಾರ್ಥವಾಗಿ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವುದು ವಾಡಿಕೆ. ಶೋಕಾಚರಣೆಯ ಅವಧಿಗೂ ಮುನ್ನವೇ ಶ್ವೇತ ಭವನದ ಮೇಲೆ ಧ್ವಜ ಅರ್ಧ ಮಟ್ಟದಿಂದ ಪೂರ್ಣ ಮಟ್ಟಕ್ಕೆ ಹಾರಿದ್ದೂ ಸಹ ದೊಡ್ಡ ಸುದ್ದಿಯಾಯಿತು. ಹೀಗೆ ಸುದ್ದಿ ದೊಡ್ಡದಾದ ನಂತರ, ಟ್ರಂಪ್‌ ಲಿಖಿತ ನಿರ್ದೇಶನದಂತೆ ಮತ್ತೆ ಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸಲಾಯಿತು. ಟ್ರಂಪ್‌ ಅವರಿಗೆ ಮೆಕೇನ್‌ ಎಡೆಗಿದ್ದ ಧೋರಣೆಯನ್ನು ಬಿಂಬಿಸುವಂತೆ ಶ್ವೇತ ಭವನದ ಅಧಿಕಾರಿಗಳು ಈ ವಿಚಾರದಲ್ಲಿ ನಡೆದುಕೊಂಡರು ಎನ್ನುವ ಅರ್ಥದಲ್ಲಿ ಮಾಧ್ಯಮಗಳು ಪರೋಕ್ಷವಾಗಿ ವರದಿಯನ್ನೂ ಮಾಡಿದವು.

ಅಂತ್ಯ ಸಂಸ್ಕಾರದ ಸಂತಾಪ ಸೂಚಕ ಸಭೆಯಲ್ಲಿ ಮೆಕೇನ್‌ ಅವರ ಮಗಳು ಮೆಗಾನ್‌ ತಮ್ಮ ತಂದೆಯನ್ನು ನೆನೆದು ಮಾತನಾಡುತ್ತಾ, “ಜಾನ್‌ ಮೆಕೇನ್‌ ಅವರ ಅಮೆರಿಕವನ್ನು ಯಾರೂ ಹೊಸದಾಗಿ ಭವ್ಯವಾಗಿಸುವ(ಗ್ರೇಟ್‌) ಅಗತ್ಯವಿಲ್ಲ . ಏಕೆಂದರೆ, ಅದು ಯಾವಾಗಲೂ ಭವ್ಯವಾಗಿತ್ತು,” ಎಂದರು. ಅವರ ಈ ಮಾತು ಪರೋಕ್ಷವಾಗಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಗುರಿಯಾಸಿಕೊಂಡು ಮಾಡಿದ ಟೀಕೆಯಾಗಿತ್ತು. ‘ಅಮೆರಿಕವನ್ನು ಮತ್ತೆ ಭವ್ಯವಾಗಿಸೋಣ,” (ಮೇಕ್‌ ಅಮೆರಿಕಾ ಗ್ರೇಟ್‌ ಅಗೇಯ್ನ್) ಎನ್ನುವುದು ಟ್ರಂಪ್‌ ಅವರು ಅಧ್ಯಕ್ಷೀಯ ಚುನಾವಣೆ ವೇಳೆ ಮಾಡಿದ ಘೋಷಣೆಯಾಗಿತ್ತು. ಇತ್ತ, ಮೆಗಾನ್‌ ಮಾಡಿದ ಟೀಕೆಗೆ ಪ್ರತಿಕ್ರಿಯೆ ಎನ್ನುವಂತೆ ಟ್ರಂಪ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ, “ಮೇಕ್‌ ಅಮೆರಿಕಾ ಗ್ರೇಟ್‌ ಅಗೇಯ್ನ್‌” ಎಂದು ಟ್ವೀಟ್‌ ಮಾಡಿದರು. ಅದೇನೇ ಇದ್ದರೂ, ಮೆಕೇನ್‌ ಅಂತಹ ಮುತ್ಸದ್ದಿ ರಾಜಕಾರಣಿಯ ಅಂತ್ಯಕ್ರಿಯೆಯಲ್ಲಿ ಅವರನ್ನು ನೆನೆಯುವುದು ಎಂದರೆ, ಅದು ಒಬಾಮಾ ಅವರೇ ಹೇಳಿದಂತೆ, “ಅಮೂಲ್ಯವೂ ಹಾಗೂ ಅದ್ವಿತೀಯವೂ ಆದ ಗೌರವ”. ಇಂತಹ ಗೌರವ ತನಗೆ ದೊರೆತದ್ದಕ್ಕಾಗಿ ಒಬಾಮಾ ಅತ್ತ ಧನ್ಯವಾದ ಹೇಳುತ್ತಿದ್ದರೆ, ಇತ್ತ ಇದೇ ವೇಳೆ, ಡೊನಾಲ್ಡ್‌ ಟ್ರಂಪ್‌ ಅವರು ಟ್ರಂಪ್‌ ನ್ಯಾಷನಲ್‌ ಕ್ಲಬ್‌ನಲ್ಲಿ ಗಾಲ್ಫ್‌‌ ಆಡುವುದರಲ್ಲಿ ಮಗ್ನರಾಗಿದ್ದರು.

ಡೊನಾಲ್ಡ್ ಟ್ರಂಪ್ Funeral Donald Trump Barack Obama Atal Bihari Vajpayee ಅಟಲ್‌ ಬಿಹಾರಿ ವಾಜಪೇಯಿ ಬರಾಕ್‌ ಒಬಾಮಾ Jhon McCain Bill Clinton Geroge Bush Meghan McCain McCain’s Memorial Service ಜಾನ್‌ ಮೆಕೇನ್‌ ಬಿಲ್‌ ಕ್ಲಿಂಟನ್‌ ಜಾರ್ಜ್‌ ಬುಷ್‌ ಮೆಕೇನ್ ಅಂತ್ಯ ಸಂಸ್ಕಾರ ಸಭೆ ಮೆಗಾನ್‌ ಮೆಕೇನ್‌
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು