ಟ್ರಂಪ್ ಅಧಿಕಾರಕ್ಕೇ ಕುತ್ತು ತಂದಿದೆ ‘ನ್ಯೂಯಾರ್ಕ್ ಟೈಮ್ಸ್‌’ನ ಅನಾಮಿಕ ಲೇಖನ!

ಅಮೆರಿಕ ಅಧ್ಯಕ್ಷ ಟ್ರಂಪ್ ನಾನಾ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಜೊತೆಗೇ ವಿವಾದಗಳಿಗೂ ಹತ್ತಿರಾಗುತ್ತಿದ್ದಾರೆ. ಈ ಮಧ್ಯೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವೇ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ‘ನ್ಯೂಯಾರ್ಕ್ ಟೈಮ್ಸ್‌’ನ ಅನಾಮಿಕ ಲೇಖನವೊಂದು ಸೃಷ್ಟಿಸಿದೆ

ಡಿ ವಿ ರಾಜಶೇಖರ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ವಿವಾದಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ವಲಸೆ ನೀತಿ, ಇರಾನ್ ಜೊತೆಗಿನ ಪರಮಾಣು ಒಪ್ಪಂದ, ನ್ಯಾಟೋ, ಹವಾಮಾನ ವೈಪರೀತ್ಯ, ವಿದೇಶ ವಸ್ತುಗಳ ಆಮದಿನ ಮೇಲೆ ಹೆಚ್ಚುವರಿ ತೆರಿಗೆ, ಉತ್ತರ ಕೊರಿಯಾ ಜೊತೆ ಮಾತುಕತೆ, ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ, ಪ್ಯಾಲೆಸ್ಟೇನ್ ಜನರಿಗೆ ನೆರವು, ಹೀಗೆ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನ ನೀತಿಗಳನ್ನೇ ಅನುಸರಿಸುವ ಮೂಲಕ ಅವರು ಎಬ್ಬಿಸಿದ ವಿವಾದಗಳಿಗೆ ಕೊನೆ ಮೊದಲಿಲ್ಲ. ಆದರೆ, ಇದೀಗ ವಿವಾದ ಎದ್ದಿರುವುದು ಭಿನ್ನ ಕಾರಣಕ್ಕಾಗಿ. ಈಗ ವಿವಾದ ಅವರಿಗೇ ಸಂಬಂಧಿಸಿದ್ದು ಎನ್ನುವುದೇ ವಿಶೇಷ. ಈ ವಿವಾದ ಎಷ್ಟು ದೊಡ್ಡದಾಗಿದೆ ಎಂದರೆ, ಅವರನ್ನು ಅಧಿಕಾರದಿಂದ ಇಳಿಸುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಅಧ್ಯಕ್ಷ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ ಪ್ರಕರಣದ ಆಧಾರದ ಮೇಲೆ ಅವರ ವಿರುದ್ಧ ಕಾಂಗ್ರೆಸ್ ಮುಂದೆ ಛೀಮಾರಿ ಹಾಕುವ ನಿರ್ಣಯ ತಂದು ಆ ಮೂಲಕ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೇ ಅಥವಾ ಅದಕ್ಷತೆಯ ಕಾರಣ ಕೊಟ್ಟು ಸಂವಿಧಾನದ ೨೫ನೇ ತಿದ್ದುಪಡಿಯ ಅನ್ವಯ ಅಧಿಕಾರದಿಂದ ಕೆಳಗಿಳಿಸಬಹುದೇ ಎಂಬ ಬಗ್ಗೆ ವಿರೋಧಿ ವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.

ಟ್ರಂಪ್ ಅವರು ಆಡಳಿತ ನಡೆಸಲು ಯೋಗ್ಯರಲ್ಲ. ಅವರ ಹುಚ್ಚು ನಿರ್ಧಾರಗಳು ದೇಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಅವರು ಪ್ರಜಾತಂತ್ರ ಪರವಾದಿಯಲ್ಲ, ಸರ್ವಾಧಿಕಾರಿಗಳ ಪರವಾದಿ ಎನ್ನುವ ಆರೋಪ ಈಗಾಗಲೇ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಆದರೆ, ಈಗ ಈ ಆರೋಪ ಶ್ವೇತಭವನದಲ್ಲಿ ಅವರ ಆಡಳಿತದ ಭಾಗವಾಗಿರುವವರಿಂದಲೇ ಕೇಳಿಬಂದಿರುವುದು ಟ್ರಂಪ್ ಅವರ ದಕ್ಷತೆಯ ಬಗ್ಗೆಯೇ ಅನುಮಾನಗಳನ್ನು ಹುಟ್ಟುಹಾಕಿದೆ.

ಟ್ರಂಪ್ ಅವರ ವಿರುದ್ಧ ಇದೀಗ ಅವರ ಆಡಳಿತದ ಭಾಗವಾಗಿರುವ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಬರೆದ ಅನಾಮಿಕ ಲೇಖನವೊಂದನ್ನು ಅಮೆರಿಕದ ಪ್ರಸಿದ್ಧ ದಿನಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್ ತನ್ನ ಸಂಪಾದಕೀಯ ಪುಟದ ಪಕ್ಕದ ಒಪೆಡ್ ಪುಟದಲ್ಲಿ ಪ್ರಕಟಿಸಿ ಕೋಲಾಹಲ ಎಬ್ಬಿಸಿದೆ. ಸಾಮಾನ್ಯವಾಗಿ ಯಾವುದೇ ಪತ್ರಿಕೆ ಲೇಖಕರ ಹೆಸರಿಲ್ಲದ ಲೇಖನವನ್ನು ಪ್ರಕಟಿಸುವುದಿಲ್ಲ. ಲೇಖನದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳಿಗೆ ಲೇಖಕರು ಜವಾಬ್ದಾರರಾಗಿರಬೇಕೆಂಬ ಕಾರಣಕ್ಕೆ ಈ ನಿಯಮ ಪಾಲಿಸಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ಸಿದ್ಧ ಮಾದರಿಯನ್ನು ಅನುಸರಿಸದೆ ಅನಾಮಿಕ ಲೇಖನವೊಂದನ್ನು ಪ್ರಕಟಿಸಿದೆ. ಲೇಖನ ಬರೆದಿರುವವರು ಸರ್ಕಾರದ ಹಿರಿಯ ಸ್ಥಾನದಲ್ಲಿರುವವರು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕೆ ಓದುಗರ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಅವರ ವಿರುದ್ಧ ಟ್ರಂಪ್ ಸರ್ಕಾರದ ಗೋಪ್ಯ ಕಾಯ್ದೆ ಅನ್ವಯ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬಹುದಾದ ಸಾಧ್ಯತೆ ಇರುವುದರಿಂದಾಗಿ ಮತ್ತು ಒಟ್ಟಾರೆ ದೇಶದ ಹಿತದೃಷ್ಟಿಯಿಂದ ಹೀಗೆ ಅನಾಮಿಕ ಲೇಖನ ಪ್ರಕಟಿಸಲಾಗಿದೆ ಎಂದು ಪತ್ರಿಕೆ ಸ್ಪಷ್ಟಪಡಿಸಿದೆ. ಈ ಲೇಖನ ಎಷ್ಟು ಪರಿಣಾಮ ಬೀರಿದೆ ಎಂದರೆ, ಅದನ್ನು ಬರೆದವರು ತಾವಲ್ಲ ಎಂದು ಉನ್ನತ ಸ್ಥಾನದಲ್ಲಿರುವ ಅನೇಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವೈಸ್ ಪ್ರೆಸಿಡೆಂಟ್ ಮೈಕ್ ಪೆನ್ಸ್, ರಾಷ್ಟ್ರೀಯ ಭದ್ರತಾ ವಿಭಾಗದ ಡೈರೆಕ್ಟರ್ ಡಾನ್ ಕೋಟ್ಸ್ ಅಂಥವರೇ ಆ ಲೇಖನ ತಮ್ಮದಲ್ಲ ಎಂದಿದ್ದಾರೆ!

ಅಧ್ಯಕ್ಷರ ಆಡಳಿತ ಕಚೇರಿಯಾದ ಶ್ವೇತಭವನದಲ್ಲಿ ಟ್ರಂಪ್ ಅವರ ಆಡಳಿತ ವಿಧಾನ ಮತ್ತು ಅವರ ನಿರ್ಧಾರಗಳ ಬಗ್ಗೆ ಪ್ರತಿರೋಧ ವ್ಯಕ್ತ ಮಾಡುವವರ ಸಂಖ್ಯೆ ಸಾಕಷ್ಟಿದೆ. ತಾವು ಕೂಡ ಈ ಪ್ರತಿರೋಧದ ಭಾಗವಾಗಿರುವುದಾಗಿ ಆ ಅನಾಮಿಕ ಹಿರಿಯ ಅಧಿಕಾರಿ ಲೇಖನದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಬದ್ಧತೆ ಇರುವುದು ಟ್ರಂಪ್ ಅವರಿಗಲ್ಲ, ದೇಶಕ್ಕೆ. ದೇಶದ ಪ್ರಜಾತಂತ್ರ ಮೌಲ್ಯಗಳನ್ನು ರಕ್ಷಿಸಲು ಮತ್ತು ದೇಶದ ಹಿತಾಸಕ್ತಿಯ ವಿರುದ್ಧ ಕೆಲಸ ಮಾಡುತ್ತಿರುವ ಟ್ರಂಪ್ ಅವರ ಪ್ರಯತ್ನಗಳನ್ನು ತಮ್ಮ ಕೈಲಾದಷ್ಟು ಪ್ರಮಾಣದಲ್ಲಿ ನಿಷ್ಫಲಗೊಳಿಸಲು ಶ್ವೇತಭವನದ ಸಿಬ್ಬಂದಿ ನಿರ್ಧರಿಸಿದ್ದಾರೆ. ಸಂವಿಧಾನ ಬಿಕ್ಕಟ್ಟನ್ನು ಸೃಷ್ಟಿಸಲು ತಾವು ಬಯಸುವುದಿಲ್ಲ. ಹೀಗಾಗಿ, ಅವರೆಲ್ಲ ಪ್ರತಿರೋಧದ ಮಾರ್ಗ ತುಳಿದಿದ್ದಾರೆಂದು ಅನಾಮಿಕ ಲೇಖಕ ಬರೆದಿದ್ದಾರೆ. ಅವರ ಪ್ರಕಾರ, ಆಡಳಿತ ಛಿದ್ರವಾಗಿದೆ. ಟ್ರಂಪ್ ಅವರು ತಮ್ಮ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ತೋಚಿದಂತೆ ನಿರ್ಧರಿಸುವುದು ಅವರ ಮಾಮೂಲಿ ಆಡಳಿತ ವೈಖರಿಯಾಗಿದೆ. ಹೀಗಾಗಿ, ಅಮೆರಿಕದ ಜನರು ಒಂದು ನಿರ್ಧಾರ ತೆಗೆದುಕೊಳ್ಳಬೇಕಿದೆ ಎನ್ನುವುದು ಆ ಲೇಖಕರ ಅಭಿಪ್ರಾಯ.

ಈ ಲೇಖನ ಪ್ರಕಟವಾದ ಸಂದರ್ಭದಲ್ಲಿಯೇ ಹಿಂದೆ ವಾಟರ್ಗೇಟ್ ಹಗರಣವನ್ನು ಬಯಲಿಗೆಳೆದ ಪತ್ರಕರ್ತರಲ್ಲಿ ಒಬ್ಬರಾದ ಬಾಬ್ ವುಡ್ವರ್ಡ್ ಅವರ ಶೀಘ್ರ ಬಿಡುಗಡೆಯಾಗಲಿರುವ ಹೊಸ ಪುಸ್ತಕ 'ಫಿಯರ್, ಟ್ರಂಪ್ ಇನ್ ದಿ ವೈಟ್‌ಹೌಸ್'ನ ಪ್ರಮುಖ ಅಂಶಗಳು ಬಹಿರಂಗವಾದವು. ಟ್ರಂಪ್ ಅವರ ಆಡಳಿತ ವೈಖರಿಗೆ ಅವರ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳು ಹೇಗೆ ಬೇಸರಗೊಂಡಿದ್ದಾರೆ, ಹತಾಶೆಯಿಂದಾಗಿ ಒಳಗೊಳಗೇ ಹೇಗೆ ಜಗಳಗಳು ನಡೆಯುತ್ತಿವೆ ಎನ್ನುವ ಬಗ್ಗೆ ಆ ಪುಸ್ತಕದಲ್ಲಿ ಬರೆಯಲಾಗಿದೆ. ಕೆಲವು ಸೂಕ್ಷ್ಮ ವಿಚಾರಗಳು ಟ್ರಂಪ್ ಅವರಿಗೆ ತಿಳಿಯದಂತೆ ಹೇಗೆ ನೋಡಿಕೊಳ್ಳಲಾಗುತ್ತದೆ ಎನ್ನುವ ಕುರಿತ ಮಾಹಿತಿಯೂ ಈ ಪುಸ್ತಕದಲ್ಲಿದೆ. ಅಷ್ಟೇ ಅಲ್ಲ, ಟ್ರಂಪ್ ಅವರ ಆಲೋಚನಾ ಕ್ರಮ ಎಂಥದ್ದು ಎನ್ನುವುದನ್ನು ಹೇಳಲು ಎರಡು ಪ್ರಕರಣಗಳಲ್ಲಿ ಅವರು ಆಡಿದರೆನ್ನಲಾದ ಮಾತುಗಳನ್ನು ನಮೂದಿಸಲಾಗಿದೆ. ೨೦೧೭ರಲ್ಲಿ ಮಕ್ಕಳ ಮೇಲೆ ಆಸಿಡ್ ದಾಳಿ ನಡೆದಾಗ ಸಿರಿಯಾದ ಅಧ್ಯಕ್ಷ ಅಸ್ಸಾದ್ ಅವರನ್ನು ಈಗಿಂದೀಗಲೇ ಕೊಲ್ಲಬೇಕು ಎಂದು ಟ್ರಂಪ್ ಅವರು ರಕ್ಷಣಾ ಕಾರ್ಯದರ್ಶಿ ಜಿಮ್ ಮಟ್ಟೀಸ್‌ಗೆ ಸೂಚಿಸಿದರಂತೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಅವರ ಜೊತೆ ಮಾತುಕತೆಗೆ ಒಂದು ದಿನ ಮೊದಲು ಟ್ರಂಪ್, "ಇದು ಇಬ್ಬರು ನಾಯಕರ ನಡುವಣ ಭೇಟಿ, ಟ್ರಂಪ್ ವರ್ಸಸ್ ಕಿಮ್," ಎಂದಿದ್ದರಂತೆ. ವಿಶ್ವದ, ದೇಶದ ಹಿತಾಸಕ್ತಿಗಿಂತ ಅವರಿಗೆ ಅವರ ಅಹಂ ತೃಪ್ತಿಪಡಿಸಿಕೊಳ್ಳುವುದೇ ಮುಖ್ಯವಾಗಿತ್ತು ಎಂದು ಬಾಬ್ ವುಡ್ವರ್ಡ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಒಂದರ ಹಿಂದೆ ಒಂದರಂತೆ ಬಹಿರಂಗವಾದ ಈ ಮಾಹಿತಿಗಳಿಂದ ಟ್ರಂಪ್ ಕೆಂಡಾಮಂಡಲವಾಗಿದ್ದಾರೆ. ‘ನ್ಯೂಯಾರ್ಕ್ ಟೈಮ್ಸ್’ ಅನಾಮಿಕ ಲೇಖನ ಬರೆದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಅಟಾರ್ನಿ ಜನರಲ್ ಜೆಫ್ ಸೆಷನ್ಸ್ ಅವರಿಗೆ ಸೂಚಿಸಿದ್ದಾರೆ. ವುಡ್ವರ್ಡ್ ಪುಸ್ತಕ ಒಂದು ಕಟ್ಟುಕತೆ, ಬೂಸಾ ಎಂದು ಛೇಡಿಸಿದ್ದಾರೆ. ಇದಕ್ಕೆಲ್ಲ ಜನರು ತಲೆಕೆಡಿಸಿಕೊಳ್ಳಬಾರದೆಂದು ಅವರು ಕರೆ ನೀಡಿದ್ದಾರಾದರೂ, ಅವರೇ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿದೆ. ಏಕೆಂದರೆ, ಅವರು ತಮ್ಮ ಭಾಷಣವೊಂದರಲ್ಲಿ ಛೀಮಾರಿ ನಿರ್ಣಯ ಮತ್ತು ೨೫ನೇ ಸಂವಿಧಾನ ತಿದ್ದುಪಡಿ ಅನ್ವಯ ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನಗಳನ್ನು ಖಂಡಿಸಿದ್ದಾರೆ. ಜನರೇ ಈ ಪ್ರಯತ್ನಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಅವರು ಹೇಳಿದ್ದಾರೆ.

ಟ್ರಂಪ್ ಅವರು ಹತಾಶಗೊಳ್ಳಲು ಇನ್ನೂ ಕೆಲವು ಕಾರಣಗಳಿವೆ. ಚುನಾವಣೆ ಕಾಲದಲ್ಲಿ ಬಾಯಿ ಬಿಡದಿರಲೆಂದು ಟ್ರಂಪ್ ಅವರು ಲೈಂಗಿಕ ಸಂಬಂಧ ಪಡೆದಿದ್ದ ನೀಲಿಚಿತ್ರ ತಾರೆಯೊಬ್ಬರಿಗೆ ಹಣ ನೀಡಿದ ಬಗ್ಗೆ ಅವರ ಸ್ವಂತ ವಕೀಲ ಮೈಕೆಲ್ ಕೊಹೆನ್ ತಪ್ಪೊಪ್ಪಿಕೊಂಡುಬಿಟ್ಟಿದ್ದಾರೆ. ತಾವು ನಟಿಗೆ ನೀಡಿದ ಹಣವನ್ನು ಟ್ರಂಪ್ ಅವರು ತಮಗೆ ನೀಡಿರುವುದಾಗಿಯೂ ಹೇಳಿಬಿಟ್ಟಿದ್ದಾರೆ. ತಮಗೇನೂ ತಿಳಿಯದೆಂದು ಹೇಳುತ್ತಿದ್ದ ಟ್ರಂಪ್, ಈಗ ಕೊಹೆನ್ ಅವರಿಂದಾಗಿ ಇಕ್ಕಟ್ಟಿಗೆ ಸಿಕ್ಕಿದ್ದಾರೆ. ಅಧ್ಯಕ್ಷ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಆರೋಪ ಕುರಿತಂತೆ ರಾಬರ್ಟ್ ಮುಲ್ಲರ್ ಅವರು ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಟ್ರಂಪ್ ಅವರ ಚುನಾವಣಾ ಪ್ರಚಾರದ ಜವಾಬ್ದಾರಿ ಹೊತ್ತಿದ್ದ ಜಾರ್ಜ್ ಪಪಡುಪಲೋಸ್ ಅವರ ತನಿಖೆ ನಡೆದಿದೆ. ಮೊದಮೊದಲು ರಷ್ಯಾ ಹಸ್ತಕ್ಷೇಪಕ್ಕೂ ತಮಗೂ ಸಂಬಂಧವಿಲ್ಲ ಎಂದು ಅವರು ಹೇಳುತ್ತ ಬಂದಿದ್ದರು. ಹಲವು ತನಿಖೆಗಳ ನಂತರ ಈಗ ಅವರು ತಮಗೆ ರಷ್ಯಾದ ಕೆಲವು ಏಜೆಂಟರ ಪರಿಚಯವಿತ್ತು ಅಥವಾ ಅವರ ಜೊತೆ ಸಂಪರ್ಕ ಇಟ್ಟುಕೊಂಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಸುಳ್ಳು ಹೇಳಿದ ಆರೋಪದ ಮೇಲೆ ಈಗ ನ್ಯಾಯಾಲಯ ಎರಡು ವಾರಗಳ ಕಾಲ ಜೈಲುಶಿಕ್ಷೆ ವಿಧಿಸಿದೆ. ಅಂತಿಮವಾಗಿ ಈ ಪ್ರಕರಣ ಎಲ್ಲಿ ತಮಗೆ ಸುತ್ತಿಕೊಳ್ಳುತ್ತದೆಯೋ ಎಂದು ಟ್ರಂಪ್ ಬೆದರಿದಂತೆ ಕಾಣುತ್ತಿದೆ. ಹಲವು ಪ್ರಕರಣಗಳು ಟ್ರಂಪ್ ಅವರನ್ನು ಕ್ರಮೇಣ ಸುತ್ತಿಕೊಳ್ಳುತ್ತಿವೆ. ಪತ್ರಿಕೆಗಳನ್ನು ಟ್ರಂಪ್, ಜನರ ಶತ್ರುಗಳು ಎಂದು ಬಣ್ಣಿಸುತ್ತ ಬಂದಿದ್ದಾರೆ. ತಮ್ಮನ್ನು ಮತ್ತು ತಮ್ಮ ನೀತಿಗಳನ್ನು ವಿರೋಧಿಸುವ ಪತ್ರಿಕೆಗಳ ವಿರುದ್ಧ ಸಮರ ಸಾರಿದ್ದಾರೆ. ಶ್ವೇತಭವನದ ಪತ್ರಿಕಾಗೋಷ್ಠಿಗಳಿಂದ ಕೆಲವು ಪತ್ರಿಕೆಗಳ ವರದಿಗಾರರನ್ನು ಹೊರಹಾಕಿದ ನಿದರ್ಶನಗಳಿವೆ. ಕೆಲವು ಮುಖ್ಯ ಪತ್ರಿಕೆಗಳು ಕೂಡ ಟ್ರಂಪ್ ಅವರ ಒತ್ತಡಕ್ಕೆ, ಬೆದರಿಕೆಗೆ ಮಣಿಯದೆ ಕೆಲಸ ಮಾಡುತ್ತ ಬಂದಿವೆ. ಇದೊಂದು ಒಳ್ಳೆಯ ಬೆಳವಣಿಗೆ.

ಇದನ್ನೂ ಓದಿ : ಡೊನಾಲ್ಡ್‌ ಟ್ರಂಪ್ ನಿಕಟ ಸಲಹೆಗಾರರಲ್ಲಿ ಶಿಕ್ಷೆಗೊಳಗಾದವರು ಯಾರ್ಯಾರು?

ಒಟ್ಟಾರೆ, ಟ್ರಂಪ್ ಅವರ ವಿರುದ್ಧ ದೊಡ್ಡ ಆಂದೋಲನವೇ ನಡೆಯುತ್ತಿದೆ. ಆದರೆ, ಈಗ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಕಷ್ಟ. ಛೀಮಾರಿ ಹಾಕಬೇಕಾದರೆ ಕಾಂಗ್ರಸ್‌ನಲ್ಲಿ ವಿರೋಧಿಗಳಿಗೆ ಬಹುಮತ ಇರಬೇಕು. ಮುಂದಿನ ತಿಂಗಳು ಮಧ್ಯಂತರ ಚುನಾವಣೆ ನಡೆಯಲಿದ್ದು, ಅದರಲ್ಲಿ ಡೆಮಾಕ್ರಟಿಕ್ ಪಕ್ಷ ಹೆಚ್ಚು ಸ್ಥಾನ ಗಳಿಸಿದರೆ ಅಂಥದ್ದೊಂದು ಪ್ರಯತ್ನ ಸಾಧ್ಯ. ಹಾಗೆಯೇ, ಸಂವಿಧಾನದ ೨೫ನೇ ತಿದ್ದುಪಡಿಯನ್ವಯ ಅವರನ್ನು ಅಧಿಕಾರದಿಂದ ಇಳಿಸಬೇಕಾದರೆ ಜನಪ್ರತಿನಿಧಿ ಸಭೆಯ ಬೆಂಬಲ ಬೇಕು. ಸದ್ಯಕ್ಷೆ ಅಂಥ ಬೆಂಬಲ ಕಂಡುಬರುವುದಿಲ್ಲ.

Donald Trump White House ಶ್ವೇತ ಭವನ The New York Times ಡೊನಾಲ್ಡ್ ಟ್ರಂಪ್‌ ನ್ಯೂಯಾರ್ಕ್ ಟೈಮ್ಸ್‌ ಸಂವಿಧಾನದ ೨೫ ನೇ ತಿದ್ದುಪಡಿ ಅಮೆರಿಕ ರಾಜಕೀಯ Trump Government Republican Russian President Vladimir Putin North Korean leader Kim Jong-un
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?