ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ

ಪ್ರಜಾತಂತ್ರ ಮೌಲ್ಯಗಳನ್ನು ಧಿಕ್ಕರಿಸುತ್ತಿರುವುದಕ್ಕಾಗಿ ತನ್ನ ಸದಸ್ಯ ದೇಶವಾಗಿರುವ ಹಂಗೇರಿಯ ಪ್ರಧಾನಿ ವಿಕ್ಟರ್ ಆರ್ಬಾನ್ ಅವರಿಗೆ ಛೀಮಾರಿ ಹಾಕಲು ಯೂರೋಪ್ ಒಕ್ಕೂಟ ನಿರ್ಧರಿಸುವ ಮೂಲಕ ಬೆಳೆಯುತ್ತಿರುವ ವೇಗವಾಗಿ ಬಲಪಂಥದ ವಿರುದ್ಧ ಮೊದಲ ಹೆಜ್ಜೆ ಇಟ್ಟಿದೆ

ಡಿ ವಿ ರಾಜಶೇಖರ

ಯುರೋಪಿನ ಹಿಂದಿನ ಕಮ್ಯುನಿಸ್ಟ್ ದೇಶಗಳಲ್ಲಿ ಪ್ರಜಾತಂತ್ರದ ಬೇರುಗಳು ಗಟ್ಟಿಯಾಗದೆ ರಾಷ್ಟ್ರೀಯವಾದ, ಬಲಪಂಥ, ಸರ್ವಾಧಿಕಾರ, ವಲಸೆವಿರೋಧಿ ಭಾವನೆ ವೇಗದಲ್ಲಿ ಬೆಳೆಯುತ್ತಿರುವುದು ಸಹಜವಾಗಿಯೇ ಯೂರೋಪ್ ಒಕ್ಕೂಟಕ್ಕೆ ಆತಂಕ ಹುಟ್ಟಿಸಿದೆ. ಮತ್ತೆ ಸರ್ವಾಧಿಕಾರ ತಲೆ ಎತ್ತದಂತೆ ಮತ್ತು ಪ್ರಜಾತಂತ್ರ ಮೌಲ್ಯಗಳ ಆಧಾರದಲ್ಲಿ ಸರ್ಕಾರಗಳು ರಚನೆಯಾಗಿ ಸಮಾನತೆ ಸ್ಥಾಪಿಸುವ ಉದ್ದೇಶದಿಂದ ಯೂರೋಪ್ ಒಕ್ಕೂಟ (ಇಯು) ರಚನೆಯಾಯಿತು. ಆದರೆ ಆಗುತ್ತಿರುವುದೇ ಬೇರೆ. ಕಟ್ಟಾ ಕಮ್ಮುನಿಷ್ಟರ ನೆಲೆಯಾಗಿದ್ದ ಕಡೆಗಳಲ್ಲೂ ಕಟ್ಟಾ ಬಲಪಂಥ, ಮೃದು ಸರ್ವಾಧಿಕಾರ ಕುಡಿಯೊಡೆಯುತ್ತಿದೆ. ಯೂರೋಪಿನ ಹಲವು ದೇಶಗಳಲ್ಲಿ ಉಗ್ರ ಬಲಪಂಥ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ. ಅಷ್ಟೇ ಅಲ್ಲ ಅಂಥ ಶಕ್ತಿಗಳು ಒಗ್ಗೂಡುವ ಪ್ರಯತ್ನಗಳೂ ನಡೆಯುತ್ತಿವೆ. ಈ ಬೆಳವಣಿಗೆಯಿಂದ ಆತಂಕಗೊಂಡಿರುವ ಯೂರೋಪ್ ಒಕ್ಕೂಟ ಹಂಗೇರಿಯ ವಿಕ್ಟರ್ ಆರ್ಬನ್ ಸರ್ಕಾರದ ವಿರುದ್ಧ ಮೊದಲ ಪ್ರಹಾರ ನಡೆಸಲಿದೆ. ಅವರಿಗೆ ಛೀಮಾರಿ ಹಾಕಲು ಒಕ್ಕೂಟ ಬಹುಮತದಿಂದ ನಿರ್ಧರಿಸಿದೆ.

2010ರಲ್ಲಿ ವಿಕ್ಟರ್ ಆರ್ಬನ್ ಮೊದಲ ಬಾರಿಗೆ ಹಂಗೇರಿಯ ಪ್ರಧಾನಿಯಾದಾಗ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವರು ತೆಗೆದುಕೊಂಡ ಕ್ರಮಗಳನ್ನು ಯೂರೋಪ್ ಒಕ್ಕೂಟ ಸ್ವಾಗತಿಸಿತ್ತು. ಆದರೆ ಇದನ್ನೇ ಆಧಾರ ಮಾಡಿಕೊಂಡು ಆರ್ಬನ್ ಕ್ರಮೇಣ ಅಧಿಕಾರ ಗಟ್ಟಿಮಾಡಿಕೊಂಡು ರಾಷ್ಟ್ರೀಯವಾದವನ್ನು ತಮ್ಮ ಮೂಲ ಸಿದ್ಧಾಂತವನ್ನಾಗಿಸಿಕೊಂಡರು.

ಅರಬ್, ಆಫ್ರಿಕಾ ವಲಯದಲ್ಲಿನ ಆಂತರಿಕ ಸಂಘರ್ಷಗಳಿಂದಾಗಿ ಜನರು ವಲಸೆ ಬರಲಾರಂಭಿಸಿದರು. ಇದನ್ನು ಮುಸ್ಲಿಮರ ಆಕ್ರಮಣವೆಂದೇ ಪ್ರಚಾರ ಮಾಡಿದರು. ದೇಶದಲ್ಲಿ ಕ್ರಿಶ್ಚಿಯನ್ ಡೆಮಾಕ್ರಸಿ ಸ್ಥಾಪಿಸುವುದಾಗಿ ಘೋಷಿಸಿದರು. ಬಹುಪಾಲು ಕ್ರಿಶ್ಚಿಯನ್ನರೇ ಇದ್ದ ಹಂಗೇರಿಯಲ್ಲಿ ಅವರ ಘೋಷಣೆ ಮನೆಮಾತಾಯಿತು. ವಲಸಿಗರನ್ನು ತಡೆಯಲು ದೇಶದ ದಕ್ಷಿಣದ ಗಡಿಯಲ್ಲಿ ಮುಳ್ಳು ತಂತಿ ಗೋಡೆ ನಿರ್ಮಿಸಿದರು. ಕಮ್ಯುನಿಸಂ ಪತನದ ಹಿನ್ನೆಲೆಯಲ್ಲಿ ಬರ್ಲಿನ್ ಗೋಡೆ ಉರುಳಿದ ನಂತರ ಮೊದಲು ನಿರ್ಮಾಣಗೊಂಡುದು ಹಂಗೇರಿಯೇ ಗೋಡೆಯೇ.

ಕಳೆದ ಏಪ್ರಿಲ್‍ನಲ್ಲಿ ನಡೆದ ಸಂಸತ್ ಚುನಾವಣೆಗಳಲ್ಲಿ ಆಬರ್ನ್ ಎರಡನೆಯ ಬಾರಿಗೂ ಬಹುಮತದಿಂದ ಆಯ್ಕೆಯಾದರು. ಎರಡನೆ ಬಾರಿ ಅಧಿಕಾರ ಸಿಕ್ಕನಂತರ ಸಂವಿಧಾನವನ್ನೇ ಬದಲಿಸಿದರು. ಚುನಾವಣೆ ನಿಯಮಗಳನ್ನು ಬದಲಿಸಿ ಎರಡು ಪಕ್ಷಗಳ ರಾಜಕೀಯ ವ್ಯವಸ್ಥೆಯನ್ನು ಜಾರಿಗೆ ತಂದರು. ನ್ಯಾಯಾಂಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಮಾಧ್ಯಮಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲಾರಂಭಿಸಿತು. ನಾಗರಿಕ ಹಕ್ಕುಗಳು ಮೊಟಕುಗೊಳಿಸಲಾಯಿತು. ಆರ್ಬನ್ ತಮ್ಮ ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಇತರ ದೇಶಗಳಲ್ಲಿರುವ ಕಟ್ಟಾ ಬಲಪಂಥೀಯ ಮತ್ತು ವಲಸೆ ವಿರೋಧಿ ಪಕ್ಷಗಳ ನಾಯಕರ ಜೊತೆ ಸಂಬಂಧ ಕುದುರಿಸಿದರು. ಆಸ್ಟ್ರಿಯಾದ ಫ್ರೀಡಂ ಪಕ್ಷದ ನಾಯಕ ಹೆಂಜ್ ಕ್ರೋಶೆ, ಫ್ರಾನ್ಸಿನ ನ್ಯಾಷನಲಿಸ್ಟ್ ಪಕ್ಷದ ಲೀ ಪೆನ್, ಇಟಲಿಯ ಮಟ್ಟಿಯೋ ಸಾಲ್ವನಿ, ಡಚ್ ಇಮ್ರಿಗ್ರಂಟ್ ವಿರೋಧಿ ಪಕ್ಷದ ನಾಯಕ ಗೇರ್ಟ್ ವೈಲ್ಡರ್ಸ್, ಪೋಲೆಂಡ್ ಪ್ರಧಾನಿ ಮಾಟಿಸ್ ಮೊರವಿಕ್ಕಿ ಮುಂತಾದವರು ಆರ್ಬನ್‍ಗೆ ಬೆಂಬಲವಾಗಿ ನಿಂತಿದ್ದಾರೆ. ಬಹುಶಃ ಈ ಬೆಂಬಲದಿಂದಾಗಿಯೇ ಅವರು ಯೂರೋಪ್ ಒಕ್ಕೂಟ ನೀಡಿದ ಯಾವುದೇ ಸಲಹೆಯನ್ನು ಅಂಗೀಕರಿಸುತ್ತಿಲ್ಲ. ಮುಖ್ಯವಾಗಿ ವಲಸಿಗರನ್ನು ತಡೆಯಬಾರದೆಂಬ ಒಕ್ಕೂಟದ ನಿರ್ದೇಶನವನ್ನು ಅವರು ಧಿಕ್ಕರಿಸಿದರು.

ಇದನ್ನೂ ಓದಿ : ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ

ಕಳೆದ ಕೆಲವು ವರ್ಷಗಳಿಂದ ಯೂರೋಪ್ ಒಕ್ಕೂಟದಲ್ಲಿ ಹಂಗೇರಿಯ ನೀತಿಗಳು ಚರ್ಚೆಗೆ ಬರುತ್ತಲೇ ಇದ್ದವು. ಹಲವು ಬಾರಿ ಒಕ್ಕೂಟ ಸಲಹೆಗಳನ್ನೂ ನೀಡಿತ್ತು. ಸರ್ಕಾರದ ಹಸ್ತಕ್ಷೇಪವಿಲ್ಲದ ನ್ಯಾಯಾಂಗ ವ್ಯವಸ್ಥೆ. ಪೂರ್ಣ ಮಾಧ್ಯಮ ಸ್ವಾತಂತ್ರ್ಯ, ಬಹುಪಕ್ಷೀಯ ವ್ಯವಸ್ಥೆ, ಜನಾಂಗ ಆಧಾರದ ನೀತಿಗಳ ನಿಷೇಧ, ಮಾನವ ಹಕ್ಕುಗಳ ರಕ್ಷಣೆಗೆ ಬದ್ಧತೆ, ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳಿಸಬೇಕು ಮುಂತಾದ ಹತ್ತು ಹಲವು ನೀತಿಗಳು, ಕಟ್ಟುಪಾಡುಗಳನ್ನು ಯೂರೋಪ್ ಒಕ್ಕೂಟ ತನ್ನ ಸದಸ್ಯ ದೇಶಗಳಿಗೆ ವಿಧಿಸಿದೆ. ಈ ಮೂಲ ನೀತಿಗಳನ್ನು ಉಲ್ಲಂಘಿಸಿದ ಹಲವು ದೂರುಗಳು ಒಕ್ಕೂಟಕ್ಕೆ ಬರುತ್ತಲೇ ಇದ್ದವು. ಆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಒಕ್ಕೂಟ ಬೆಳೆಯುತ್ತಿರುವ ಈ ಬೆಲವಣಿಗೆಗೆ ತಡೆ ಒಡ್ಡಲು ಮೊದಲ ಬಾರಿಗೆ ಹಂಗೇರಿ ವಿರುದ್ಧ ಒಕ್ಕೂಟದ ಸಭೆಯಲ್ಲಿ ಆರ್ಬನ್‍ಗೆ ವಾಗ್ದಂಡನೆ ವಿಧಿಸುವ ನಿರ್ಣಯ ಮಂಡಿಸಲಾಗಿತ್ತು. ನಿರ್ಣಯ ಬಹುಮತದಿಂದ ಒಪ್ಪಿಗೆ ಪಡೆದಿದೆ. ಈ ನಿರ್ಧಾರ ಇದೀಗ 28 ಸದಸ್ಯರ ಶಿಸ್ತು ಸಮಿತಿಯ ಮುಂದೆ ಬರುತ್ತದೆ. ಶಿಸ್ತು ಸಮಿತಿಯಲ್ಲಿ ಒಪ್ಪಿಗೆ ಸಿಕ್ಕರೆ ಆರ್ಬನ್‍ಗೆ ಛೀಮಾರಿ ಹಾಕಲಾಗುವುದು.

ಇದು ಮೊದಲ ಪ್ರಕರಣವಾದ್ದರಿಂದ ಮುಂದಿನ ಕ್ರಮಗಳು ಇನ್ನೂ ಚರ್ಚೆಗೆ ಒಳಗಾಗಬೇಕಿದೆ. ಸಾಮಾನ್ಯವಾಗಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗುವುದು ಮತ್ತು ಹಣಕಾಸು ನೆರವನ್ನು ಸ್ಥಗಿತಗೊಳಿಸಲಾಗುವುದು. ಆದರೆ ಇದೆಲ್ಲಾ ಊಹೆ ಮಾತ್ರ. ಏಕೆಂದರೆ ಸಮಸ್ಯೆ ದೊಡ್ಡದಿದೆ ಅಷ್ಟೇ ಅಲ್ಲ ಸೂಕ್ಷ್ಮವಾದುದಾಗಿದೆ. ಮುಂದಿನ ಸರದಿ ಪೋಲೆಂಡ್ ದೇಶದ್ದು. ಹಂಗೇರಿ ಅನುಭವದ ಆಧಾರದ ಮೇಲೆ ಯೂರೋಪ್ ಒಕ್ಕೂಟ ಪೋಲೆಂಡ್ ವಿರುದ್ಧದ ಕ್ರಮ ತೆಗೆದುಕೊಳ್ಳಲಿದೆ.

ಆರ್ಬನ್ ವಿರುದ್ಧದ ಕ್ರಮವನ್ನು ಈಗಾಗಲೇ ಅವರ ಇತರ ದೇಶಗಳ ನಾಯಕರು ಖಂಡಿಸಿದ್ದಾರೆ. ಇದು ಹಸ್ತಕ್ಷೇಪ ಎಂದು ಪೋಲೆಂಡ್ ಪ್ರಧಾನಿ ಮಾಟಿಷ್ ಮೊರಿವಿಕ್ಕಿ ಪ್ರತಿಕ್ರಿಯಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಒಕ್ಕೂಟದ ಚುನಾವಣೆಯಲ್ಲಿ ವಲಸೆ ವೀರೋಧಿ ದೇಶಗಳೆಲ್ಲಾ ಒಂದಾಗಿ ಕಣಕ್ಕಿಳಿಯಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟಿದ್ದಾರೆ. ಯೂರೋಪ್ ಒಕ್ಕೂಟಕ್ಕೆ ಇದೊಂದು ದೊಡ್ಡ ಸವಾಲು. ಯೂರೋಪಿನಲ್ಲಿ ಕಮ್ಯುನಿಸ್ಟ್ ವ್ಯವಸ್ಥೆ ಕುಸಿದ ನಂತರ ಮಾದರಿ ಪರ್ಯಾಯ ಮತ್ತು ವಿಶ್ವಾಸಾರ್ಹ ರಾಜಕೀಯ ವ್ಯವಸ್ಥೆಯೊಂದು ಇನ್ನೂ ರೂಪುಗೊಂಡಿಲ್ಲ. ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪದ್ಧತಿಯ ಪ್ರಜಾತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಪ್ರಯತ್ನ ಯಶಸ್ವಿಯಾಗಿಲ್ಲ. ನಿರೀಕ್ಷಿತ ಗತಿಯಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಜನರು ಹತಾಶಗೊಳ್ಳುತ್ತಿದ್ದಾರೆ. ರಾಷ್ಟ್ರೀಯತಾವಾದ ಬಲಗೊಳ್ಳುತ್ತಿದೆ. ಕಟ್ಟಾ ಬಲಪಂಥದತ್ತ ಜನರು ಹೊರಳುತ್ತಿದ್ದಾರೆ. ಈ ಅಲೆಯನ್ನು ತಡೆಯುವ ಪ್ರಯತ್ನಗಳು ಇದೀಗ ಆರಂಭವಾಗಿದೆ. ಇದರಲ್ಲಿ ಯೂರೋಪ್ ಒಕ್ಕೂಟ ಸಫಲಾಗುತ್ತದೆಯೋ ಇಲ್ಲವೋ ಎಂಬುದು ತೀವ್ರ ಕುತೂಹಲಕಾರಿ.

Prime Minister ಪ್ರಧಾನಮಂತ್ರಿ ಯುರೋಪಿಯನ್‌ ಒಕ್ಕೂಟ European Union ಬಲಪಂಥೀಯ ರಾಜಕೀಯ ಕಮ್ಯುನಿಸಂ Hungary ಹಂಗೇರಿ Right Wing ಬಲಪಂಥೀಯ ವಿಚಾರಧಾರೆ ವಿಕ್ಟರ್‌ ಅರ್ಬಾನ್‌ European Viktor Orban
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
ಟ್ರಂಪ್ ಅಧಿಕಾರಕ್ಕೇ ಕುತ್ತು ತಂದಿದೆ ‘ನ್ಯೂಯಾರ್ಕ್ ಟೈಮ್ಸ್‌’ನ ಅನಾಮಿಕ ಲೇಖನ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?