ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಕೆಪಿಎಸ್ಸಿ ಅಕ್ರಮ: ತೀರ್ಪು ಪಾಲಿಸದ ರಾಜ್ಯ ಸರ್ಕಾರದಿಂದ ಮುಂದೂಡಿಕೆ ತಂತ್ರ?
ಐಎಎಸ್‌ ಅಧಿಕಾರಿಯ ನವಜಾತ ಶಿಶುವಿನ ಜೀವಕ್ಕೆ ಅಪಾಯ ಆರೋಪ ಸಾಬೀತು?

ಅಕ್ರಮ ಅದಿರು ಸಾಗಾಣಿಕೆ ಪ್ರಕರಣ; ವಸೂಲಾಗದ ದಂಡ 134 ಕೋಟಿ ರು.

ಅಕ್ರಮವಾಗಿ ಸಾವಿರಾರು ಮೆಟ್ರಿಕ್ ಟನ್ ಅದಿರು ಸಾಗಾಣಿಕೆ ಮಾಡಿರುವ ಆರೋಪಕ್ಕೆ ಗುರಿಯಾಗಿದ್ದಾರೆ ಶಾಸಕರಾದ ಆನಂದ್​ ಸಿಂಗ್​, ಬಿ ನಾಗೇಂದ್ರ, ಸ್ವಸ್ತಿಕ್ ನಾಗರಾಜ್ ಮತ್ತು ಖಾರದಪುಡಿ ಮಹೇಶ್. ಇವರು ನಿರ್ಹಹಿಸುತ್ತಿರುವ, ಗುರುತಿಸಿಕೊಂಡಿರುವ ಕಂಪನಿಗಳಿಂದ ದಂಡ ಇನ್ನೂ ವಸೂಲಾಗಿಯೇ ಇಲ್ಲ!

ಮಹಾಂತೇಶ್ ಜಿ

ಅಕ್ರಮವಾಗಿ ಸಾವಿರಾರು ಮೆಟ್ರಿಕ್ ಟನ್ ಪ್ರಮಾಣದ ಅದಿರು ಸಾಗಾಣಿಕೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಶಾಸಕರಾದ ಆನಂದ್ ಸಿಂಗ್‌, ಬಿ ನಾಗೇಂದ್ರ ಸೇರಿದಂತೆ ಮತ್ತಿತರೆ ಪ್ರಭಾವಿಗಳಿಗೆ ಸೇರಿರುವ ಕಂಪನಿಗಳಿಂದ ಬರಬೇಕಿದ್ದ ದಂಡದ ಒಟ್ಟು ಮೊತ್ತ 134 ಕೋಟಿ ರೂಪಾಯಿಯನ್ನು ಸರ್ಕಾರ ವಸೂಲು ಮಾಡದಿರುವುದು ಆರ್ ಟಿ ಐ ದಾಖಲೆಗಳಿಂದ ಬಹಿರಂಗಗೊಂಡಿದೆ.

ದಂಡ ಪಾವತಿಸಿರುವ ಮತ್ತು ಪಾವತಿಸಿರದ ಕಂಪನಿಗಳು, ಉದ್ಯಮಿಗಳ ವಿವರ ಕುರಿತು ದಿ ಸ್ಟೇಟ್ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ‌ ಗಣಿ ಭೂ ವಿಜ್ಞಾನ ಇಲಾಖೆ ‘ದಂಡ ಪಾವತಿಸಿರುವ ಮಾಹಿತಿ ಶೂನ್ಯ’ ಎಂದು ಉತ್ತರಿಸಿದೆ.

ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ್ದ ವರದಿ ಆಧರಿಸಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಸಲ್ಲಿಸಿದ್ದ ವರದಿ ಆಧರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಒಟ್ಟು 105 ಮಂದಿ ಗಣಿ ಉದ್ಯಮಿ, ಅದಿರು ರಫ್ತುದಾರರಿಗೆ ದಂಡ ವಸೂಲಾತಿಯ ನೋಟೀಸ್ ನೀಡಿತ್ತು.

ಈ ಪೈಕಿ 24 ಪ್ರಕರಣಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿ ದಂಡ ವಸೂಲಾತಿಗೆ ವಿಶೇಷ ತನಿಖಾ ತಂಡ ಸೂಚಿಸಿತ್ತು. ಇದರಲ್ಲಿ ಒಟ್ಟು 17 ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ದಂಡದ ಮೊತ್ತ ಪಾವತಿಸಲು 2017ರ ಮಾರ್ಚ್ 17, 24 ರಂದು ನೋಟೀಸ್ ಜಾರಿ ಮಾಡಲಾಗಿತ್ತು. ದಂಡ ಪಾವತಿಗೆ 2017ರ ಏಪ್ರಿಲ್5 ಕೊನೆ ದಿನಾಂಕ ನಿಗದಿಪಡಿಸಿತ್ತು. ಗಡುವು ಮೀರಿ 5 ತಿಂಗಳಾದರೂ ಕಂಪನಿ, ಉದ್ಯಮಿಗಳು ದಂಡದ ಮೊತ್ತವನ್ನು ಪಾವತಿ ಮಾಡದಿರುವುದು ಆರ್ ಟಿ ಐ ದಾಖಲೆಗಳಿಂದ ಗೊತ್ತಾಗಿದೆ.

ಶಾಸಕ ಆನಂದ್ ಸಿಂಗ್ , ಬಿ.ನಾಗೇಂದ್ರ ನಿರ್ದೇಶಕರು, ಪಾಲುದಾರರಾಗಿರುವ ಕಂಪನಿಗಳು, ಜನಾರ್ದನ ರೆಡ್ಡಿ ಅವರೊಂದಿಗೆ ಗುರುತಿಸಿಕೊಂಡಿರುವ ಸ್ವಸ್ತಿಕ್ ನಾಗರಾಜ್ ಮತ್ತು ಖಾರದಪುಡಿ ಮಹೇಶ್‌ರಿಗೆ ಸೇರಿದ ಕಂಪನಿಗಳು ದಂಡ ಪಾವತಿಸದ ಕಂಪನಿಗಳ ಪಟ್ಟಿಯಲ್ಲಿವೆ.

18,240,870.29 ಮೆಟ್ರಿಕ್ ಟನ್ ಅದಿರು ಸಾಗಾಣಿಕೆ ಮಾಡಿದ್ದ ಗಣಿ ಗುತ್ತಿಗೆದಾರರು, ಗುತ್ತಿಗೆದಾರರೇತರು, ಕಂಪನಿಗಳಿಂದ ಒಟ್ಟು 134, 03,63,674 ರೂ.ದಂಡ ವಸೂಲಾಗಬೇಕಿತ್ತು. ಗಣಿ ಗುತ್ತಿಗೆ ಪ್ರದೇಶದಿಂದ ತೆಗೆದ ಕಬ್ಬಿಣದ ಅದಿರಿನ ಪ್ರಮಾಣ ಆಧರಿಸಿ ನಷ್ಟವನ್ನು ಲೆಕ್ಕಾಚಾರ ಮಾಡಿತ್ತು.

ಉದ್ಯಮಿಗಳಿಂದ ಸರ್ಕಾರಕ್ಕೆ ಪತ್ರ: ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡಿರುವ ಪ್ರಭಾವಿ ಕಂಪನಿಗಳು, ಗಣಿ ಗುತ್ತಿಗೆದಾರರು, ಗಣಿ ಗುತ್ತಿಗೆದಾರರೇತರಿಂದ ‘ನಷ್ಟ ವಸೂಲು ಮಾಡುವ ಸಂಬಂಧ ನೋಟೀಸ್‌ ಜಾರಿಗೊಳಿಸಿರುವ ಕ್ರಮವು ನ್ಯಾಯಸಮ್ಮತವಾಗಿಲ್ಲ’ ಎಂದು ಕಂಪನಿಗಳು, ಉದ್ಯಮಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ಎಂಎಂಆರ್ ಡಿ ಕಾಯ್ದೆಯಂತೆ ದಂಡ ವಸೂಲು ಕ್ರಮವನ್ನು ಇಲಾಖೆ ಕೈಗೊಂಡಲ್ಲಿ ನ್ಯಾಯಾಲಯದ ಮುಂದಿರುವ ಪ್ರಕರಣಗಳ ಮೇಲೆ ಪರಿಣಾಮ ಉಂಟಾಗಲಿದೆ. ಒಂದೇ ಕೃತ್ಯಕ್ಕೆ ಎರಡು ಬಗೆಯಲ್ಲಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಉದ್ಯಮಿಗಳು, ಕಂಪನಿಗಳು ಇಲಾಖೆಗೆ ಪತ್ರ ಬರೆದಿದ್ದಾರೆ.

ಕಂಪನಿಗಳು, ಉದ್ಯಮಿಗಳು ಬರೆದಿರುವ ವಿವರಣ ಪತ್ರಗಳ ಆಧರಿಸಿ ಏನು ಕ್ರಮ ಕೈಗೊಳ್ಳಬೇಕು ಎಂದು ಗಣಿ ಭೂ ವಿಜ್ಞಾನ ಇಲಾಖೆ, ಸರ್ಕಾರದಿಂದ ಮಾರ್ಗದರ್ಶನ ಬಯಸಿ 2017ರ ಜೂನ್ 21 ಮತ್ತು ಅಕ್ಟೋಬರ್‌ 6ರಂದು ಪತ್ರ ಬರೆದಿದೆ.

ಎಂಎಂಆರ್ ಡಿ ಕಾಯ್ದೆಯ ಅನ್ವಯ ವಿಶೇಷ ತನಿಖಾ ತಂಡವು ದೋಷಾರೋಪಣೆ ಪಟ್ಟಿ ದಾಖಲಿಸಿತ್ತು. ಹಾಗೆಯೇ, ಗಣಿ ಗುತ್ತಿಗೆದಾರರು, ಗಣಿ ಗುತ್ತಿಗೆದಾರರೇತರಿಗೆ ಎಂಎಂಡಿಆರ್ ಕಾಯ್ದೆ ಸೆಕ್ಷನ್ 25ರ ಅಡಿಯಲ್ಲಿ ವಿಧಿಸಿದ್ದ ದಂಡವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡಬಹುದು ಎಂದು ಅಡ್ವೋಕೇಟ್ ಜನರಲ್ ಅಭಿಪ್ರಾಯ ನೀಡಿದ್ದರು.

ರಾಜ್ಯದ 10 ಬಂದರುಗಳು ಮತ್ತು ಗೋವಾ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳ ವಿವಿಧ ಬಂದರುಗಳಿಂದ ರಫ್ತಾದ 2.98 ಕೋಟಿ ಟನ್ ಅದಿರನ್ನು ಹೊರತುಪಡಿಸಿ ಬಳ್ಳಾರಿಯಿಂದ 6 ರೈಲ್ವೆ ನಿಲ್ದಾಣ ಮತ್ತು 14 ರೈಲ್ವೇ ಸೈಡಿಂಗ್ ಗಳಿಂದ 2006ರಿಂದ 2010ರವರೆಗೆ ಒಟ್ಟು 20 ಕೋಟಿ ಟನ್ ಗೂ ಅಧಿಕ ಪ್ರಮಾಣದಲ್ಲಿ ಅದಿರು ರಫ್ತಾಗಿದೆ ಎಂದು ರೈಲ್ವೇ ಇಲಾಖೆ ದಾಖಲೆಗಳು ಬಹಿರಂಗಪಡಿಸಿದ್ದವು.

ಅದೇ ರೀತಿ ಲೋಕಾಯುಕ್ತರ 2ನೇ ಭಾಗದ ವರದಿಯ ಅಧ್ಯಾಯ 3ರಲ್ಲಿ 2006-07ರಿಂದ 2010ರ ಅವಧಿಯಲ್ಲಿ ರೈಲ್ವೆ ಮೂಲಕ 45,59,365 ಮೆಟ್ರಿಕ್ ಟನ್ ಪ್ರಮಾಣದಷ್ಟು ಅದಿರು ರಫ್ತಾಗಿತ್ತು. ಇವರೆಲ್ಲರಿಂದ ನಷ್ಟ ವಸೂಲು ಮಾಡಲು ಲೋಕಾಯುಕ್ತರು ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.

ಅಕ್ರಮವಾಗಿ 50,000 ಮೆಟ್ರಿಕ್‌ ಟನ್‌ಗೂ ಅಧಿಕ ಪ್ರಮಾಣದಲ್ಲಿ ಅದಿರು ಸಾಗಿಸಿದ್ದ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದ್ದು, 50,000 ಮೆಟ್ರಿಕ್‌ ಟನ್‌ ಗಿಂತ ಕಡಿಮೆ ಪ್ರಮಾಣದಲ್ಲಿ ಅದಿರು ಸಾಗಿಸಿದ್ದ ಪ್ರಕರಣಗಳನ್ನು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ.

ದಂಡ ಪಾವತಿಸದ ಪ್ರಮುಖರ ಪಟ್ಟಿ

ಆನಂದ್ ಸಿಂಗ್
  • ಬಿ ಪಿ ಆನಂದ್ ಕುಮಾರ್ ಅಲಿಯಾಸ್ ಆನಂದ್ ಸಿಂಗ್

ಮಾಲೀಕ, ವೈಷ್ಣವಿ ಆನಂದ್ ಪ್ರಾಜೆಕ್ಟ್ ಪ್ರೈವೈಟ್ ಲಿಮಿಟೆಡ್

ಪಾಲುದಾರ, ಎಸ್ ಬಿ ಮಿನರಲ್ಸ್

19,855 ಮೆಟ್ರಿಕ್ ಟನ್ ಅದಿರು ಸಾಗಾಣಿಕೆ

2,65,25,936 ರೂ. ವಸೂಲಿಗೆ ನೋಟಿಸ್

ಬಿ ನಾಗೇಂದ್ರ
  • ಕೆ ವಿ ನಾಗರಾಜ್ ಅಲಿಯಾಸ್ ಸ್ವಸ್ತಿಕ್ ನಾಗರಾಜ್

7,000 ಮೆಟ್ರಿಕ್ ಟನ್ ಅದಿರು ಸಾಗಾಣಿಕೆ

96,40,556 ರೂ. ವಸೂಲಿಗೆ ನೋಟಿಸ್

ಖಾರದಪುಡಿ ಮಹೇಶ
  • ಕೆ ಮಹೇಶ್ ಕುಮಾರ್ ಅಲಿಯಾಸ್ ಖಾರದಪುಡಿ ಮಹೇಶ

5,000 ಮೆಟ್ರಿಕ್ ಟನ್ ಅದಿರು ಸಾಗಾಣಿಕೆ

68,86,112 ರೂ. ವಸೂಲಿಗೆ ನೋಟಿಸ್

  • ಬಿ ನಾಗೇಂದ್ರ, ಈಗಲ್ ಟ್ರೇಡರ್ಸ್ ಅಂಡ್ ಲಾಜಿಸ್ಟಿಕ್ಸ್

29,385 ಮೆಟ್ರಿಕ್ ಟನ್ ಅದಿರು ಸಾಗಾಣಿಕೆ

3,90,44,044 ರೂ. ವಸೂಲಿಗೆ ನೋಟಿಸ್

illegal mining Lokayukta Report Santhosh Hegde Penalty Iron ore export ಲೋಕಾಯುಕ್ತ ವರದಿ ಅಕ್ರಮ ಗಣಿಗಾರಿಕೆ ದಂಡ ಸಂತೋಷ್ ಹೆಗ್ಡೆ ಕಬ್ಬಿಣದ ಅದಿರು ರಫ್ತು
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಕೆಪಿಎಸ್ಸಿ ಅಕ್ರಮ: ತೀರ್ಪು ಪಾಲಿಸದ ರಾಜ್ಯ ಸರ್ಕಾರದಿಂದ ಮುಂದೂಡಿಕೆ ತಂತ್ರ?
ಐಎಎಸ್‌ ಅಧಿಕಾರಿಯ ನವಜಾತ ಶಿಶುವಿನ ಜೀವಕ್ಕೆ ಅಪಾಯ ಆರೋಪ ಸಾಬೀತು?
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು