ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ

ಜಾನುಲಿ | ‘ನಾನು ಹಿಂದೆ ಸರಿದಿದ್ದರಿಂದಲೇ ರಾಮಕೃಷ್ಣ ಹೆಗಡೆ ಸಿಎಂ ಆದರು’

1983 ಚುನಾವಣೆಗೆ ಪೂರ್ವ ಮತ್ತು ನಂತರ ರಾಜ್ಯ ರಾಜಕೀಯದಲ್ಲಿ ನಡೆದ ಬೆಳವಣಿಗೆಗಳು, ರಾಮಕೃಷ್ಣ ಹೆಗಡೆಯವರ ಸಹಿತ ಪ್ರಮುಖ ನಾಯಕರ ನಡುವಿನ ಸಂಬಂಧ, ಬಂಗಾರಪ್ಪನವರ ಜೊತೆಗೆ ಉಂಟಾದ ವಿರಸ- ಸಮಾಧಾನ ಎಲ್ಲವನ್ನೂ ಮಾಜಿ ಪ್ರಧಾನಿ ದೇವೇಗೌಡರು ವಿವರಿಸಿದ್ದಾರೆ

ದೊಡ್ಡಳ್ಳಿ ಗೋಲಿಬಾರ್ ಪ್ರಕರಣ ಒಂದು ಅಂತ್ಯ ಕಾಣುವ ಹೊತ್ತಿಗೆ 1983 ಚುನಾವಣೆ ಘೋಷಣೆ ಆಯ್ತು. ಅದಕ್ಕೆ ಮುಂಚೆ 1981-82ರ ಸಾಲಿನಲ್ಲಿ ನಡೆದ ರಾಜ್ಯ ರಾಜಕಾರಣದ ಬೆಳವಣಿಗೆಗಳನ್ನೂ ಕೂಡ ನಾನು ಸ್ಥೂಲವಾಗಿ ಹೇಳಬೇಕಾಗುತ್ತದೆ. ಗುಂಡೂರಾಯರ ಸರ್ಕಾರದ ವಿರುದ್ಧ ವ್ಯಾಪಕವಾದ ವಿರೋಧ ಜನಮಾನಸದಿಂದ ಮೂಡಿ ಬಂದಿತ್ತು. ಗುಂಡೂರಾಯರು ವ್ಯಕ್ತಿಗತವಾಗಿ ಒಳ್ಳಯವರಾದರೂ, ಅವರಿಗೆ ಸರಿಯಾದ ಮಾರ್ಗದರ್ಶನ, ಸಲಹೆ ಇಲ್ಲದ ಕಾರಣವೋ, ಅವರ ಅಪಕ್ವತೆಯೋ ಅನೇಕ ತಪ್ಪುಗಳು ಪ್ರಮಾದಗಳು ನಡೆಯುತ್ತಾ ಹೋಯಿತು. ಹಾಗಾಗಿ ಗುಂಡೂರಾಯರ ಸರ್ಕಾರದ ವಿರುದ್ಧವಾಗಿ ಎರಡು ವ್ಯಾಪಕವಾದ ಚಳವಳಿಗಳಾದವು. ಒಂದು ಗೋಕಾಕ್ ಚಳವಳಿ ಮತ್ತೊಂದು ರೈತ ಚಳವಳಿ.

ನಾನು ಈ ಗೋಕಾಕ್ ಚಳವಳಿ ಮತ್ತು ರೈತ ಚಳವಳಿಯನ್ನು ಹೇಳುವುದಕ್ಕೂ ಮುಂಚೆ ಇನ್ನೊಂದು ಸಂದರ್ಭವನ್ನು ಜ್ಞಾಪಿಸಲೇ ಬೇಕಾಗುತ್ತದೆ. ಗುಂಡೂರಾಯರ ಸರ್ಕಾರದಲ್ಲಿ ಸಿಎಂ ಇಬ್ರಾಹಿಂ ಅವರು ಸಚಿವರಾಗಿದ್ದರು. ಅವರ ಮೇಲೆ ರೋಲೆಕ್ಸ್ ವಾಚ್ ಪ್ರಕರಣದ ಗುರುತರವಾದ ಆಪಾದನೆ ಬಂತು. ಆಪಾದನೆ ಹಿನ್ನೆಯಲ್ಲಿ ಇಡೀ ಸಚಿವ ಸಂಪುಟವೇ ರಾಜೀನಾಮೆ ನೀಡಬೇಕು ಎನ್ನುವ ಮಟ್ಟಕ್ಕೆ ವಿಧಾನಸಭೆಯಲ್ಲಿ ಮತ್ತು ವಿಧಾನಪರಿಷತ್‌ನಲ್ಲಿ ದೊಡ್ಡ ಗಲಾಟೆಯೇ ನಡೆಯಿತು. ಪತ್ರಿಕೆಗಳಲ್ಲಿಯೂ ಕೂಡ ಅದಕ್ಕೆ ವ್ಯಾಪಕವಾದ ಪ್ರಚಾರ ಸಿಕ್ಕಿತ್ತು. ಇಬ್ರಾಹಿಂ ಅವರನ್ನು ಉಳಿಸಿಕೊಳ್ಳಲು ಗುಂಡೂರಾಯರು ಹರಸಾಹಸಪಟ್ಟರು. ಆ ಸಂದರ್ಭದಲ್ಲಿ ನಾನು ತೆಗೆದುಕೊಂಡ ನಿಲುವು ನಿಮ್ಮೆಲ್ಲರಲ್ಲೂ ಕುತೂಹಲ ಮೂಡಿಸಿರಬಹುದು. ನಾನು ಗುಂಡೂರಾಯರಿಗೆ ಹೇಳಿದೆ, "ನೀವು ಇಬ್ರಾಹಿಂ ಅವರ ರಾಜೀನಾಮೆ ತೆಗೆದುಕೊಳ್ಳುವುದು ಅನಿವಾರ್ಯ. ನೀವು ಈ ಸಂದರ್ಭದಲ್ಲಿ ಇಬ್ರಾಹಿಂ ಅವರಿಗೆ ರಕ್ಷಣೆ ಕೊಟ್ಟರೆ ಖಂಡಿತವಾಗಿಯೂ ಸರ್ಕಾರಕ್ಕೆ ಕೆಟ್ಟಹೆಸರು ಬರಲಿದೆ" ಎಂದು ಸಲಹೆ ನೀಡಿದೆ. ಅದರಂತೆ ಇಬ್ರಾಹಿಂ ಅವರು ರಾಜೀನಾಮೆ ಕೊಟ್ಟರು. ಅದು ಒಂದು ಘಟನೆ.

ಆದರೆ ಯಾವಾಗ ಗೋಕಾಕ್ ಚಳವಳಿ ಮತ್ತು ರೈತ ಚಳವಳಿ ವ್ಯಾಪಕವಾಗಿ ಹರಡಲು ಆರಂಭವಾಯಿತೋ ಗುಂಡೂರಾಯರ ಸರ್ಕಾರಕ್ಕೆ ಅದು ತಿರುಗುಬಾಣವಾಗುತ್ತದೆ ಎನ್ನುವ ಭಾವನೆ ವ್ಯಾಪಕವಾಯಿತೋ ಅದು ಪರೋಕ್ಷವಾಗಿ ಜನತಾ ಪಕ್ಷಕ್ಕೆ ಶಕ್ತಿ ಮತ್ತು ಉತ್ಸಾಹ ತುಂಬಿತು. ಅಷ್ಟೊತ್ತಿಗಾಗಲೇ ಅರಸು ಅವರು ನಮ್ಮನ್ನು ಅಗಲಿದ್ದರು. ಅವರ ಸಾವು ನಮಗೆಲ್ಲರಿಗೂ ನೋವುಂಟು ಮಾಡಿತ್ತು. ಅರಸು ಅವರ ಅಕಸ್ಮಿಕ ಸಾವಿನಿಂದಾದ ಶೂನ್ಯವನ್ನು ತುಂಬಲು ಸಾಧ್ಯವಿರಲಿಲ್ಲ. ಆದರೆ ಅವರು ಕಟ್ಟಿದ್ದ ಕ್ರಾಂತಿ ರಂಗ ಎಂಬ ಪ್ರಾದೇಶಿಕ ಪಕ್ಷವನ್ನು ಸಬಲಗೊಳಿಸಬೇಕೆಂಬ ನಿಟ್ಟಿನಲ್ಲಿ ಹಿರಿಯರಾದ ಜೆ ಎಚ್ ಪಟೇಲರು, ಬಿ ರಾಚಯ್ಯನವರು, ಅಬ್ದುಲ್ ನಜೀರ್ ಸಾಬರವರೆಲ್ಲ ಸೇರಿ ಶಕ್ತಿ ತುಂಬು ಪ್ರಯತ್ನ ಮಾಡಿದರು. ಕ್ರಾಂತಿ ರಂಗ ಮತ್ತೊಂದು ಕಾಂಗ್ರೆಸ್ಸೇತರ ಸರ್ಕಾರ ಆಗಬೇಕೆಂಬ ಕಾರಣಕ್ಕೆ ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದರು. ಅದೇ ಹೊತ್ತಿನಲ್ಲಿ ಬಂಗಾರಪ್ಪ ಅವರೂ ಕೂಡ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಗುಂಡೂರಾಯರ ಸಂಪುಟದಿಂದ ಹೊರಬಂದು ಕ್ರಾಂತಿ ರಂಗದ ಕೈ ಜೋಡಿಸಿದ್ದರು.

ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ಸೇತರ ಪಕ್ಷವೊಂದು ಸರ್ಕಾರ ರಚನೆ ಮಾಡಲು ಪೂರಕವಾದ ವಾತಾವರಣ ಇದೆ ಎಂಬುದು ಕಂಡು ಬಂದಿತ್ತು. ಆಗ ಒಂದು ಒಕ್ಕೂಟ ಮಾಡಿಕೊಳ್ಳುವುದು ಒಳಿತೆಂಬ ತೀರ್ಮಾನಕ್ಕೆ ಬರಲಾಗಿ, ಜನತಾ ಪಕ್ಷ ಮತ್ತು ಕ್ರಾಂತಿ ರಂಗದ ನಡುವೆ ಒಂದು ಒಪ್ಪಂದ ಏರ್ಪಟ್ಟು ಒಕ್ಕೂಟ ರಚನೆಯಾಯಿತು. ಜನತಾ ಪಕ್ಷ ಮತ್ತು ಕ್ರಾಂತಿ ರಂಗ ಪಕ್ಷಗಳೆರಡೂ ಸೇರಿ ಸಮನ್ವಯಗೊಂಡ ಮತ್ತು ಸರ್ವ ಸಮ್ಮತವಾದ ಚುನಾವಣಾ ಪ್ರಣಾಳಿಕೆಯನ್ನು ಘೋಷಣೆ ಮಾಡಿದವು. ಜನಗಳ ಕೈಗೆ ಅಧಿಕಾರ ಎಂಬ ಘೋಷ ವಾಕ್ಯದೊಂದಿಗೆ ಪ್ರಣಾಳಿಕೆಯನ್ನು ಜನರ ಮುಂದೆ ಇಟ್ಟೆವು. ಆ ಪ್ರಣಾಳಿಕೆಯೊಂದಿಗೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಜನತಾಪಕ್ಷ ಮತ್ತು ಕ್ರಾಂತಿ ರಂಗದ ಪರವಾಗಿ ನಾವು ಮತಯಾಚನೆ ಮಾಡುವ ಕೆಲಸಕ್ಕೆ ಮುಂದಾದೆವು. ಆ ಸಂದರ್ಭದಲ್ಲಿ ನಿಜ ಹೇಳಬೇಕೆಂದರೆ ಜನತಾ ಪರಿವಾರದಿಂದ ನಾನು, ಬೊಮ್ಮಾಯಿ ಮತ್ತು ಲಕ್ಷ್ಮೀ ಸಾಗರ್ ಅವರೆಲ್ಲರೂ ಕೆಲಸ ಮಾಡುತ್ತಿದ್ದೆವು. ಕ್ರಾಂತಿ ರಂಗದ ಪರವಾಗಿ ಜೆ ಎಚ್ ಪಟೇಲರು, ರಾಚಯ್ಯನವರು, ಬಂಗಾರಪ್ಪನವರು ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಆಯಾ ನಾಯಕರು ಅವರವರ ಪಕ್ಷದ ಮೂಲಕ ಒಕ್ಕೂಟದ ಪರವಾಗಿ ಕೆಲಸ ಮಾಡುತ್ತಿದ್ದೆವು. ಆ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರು ರಾಜ್ಯ ರಾಜಕಾರಣದಲ್ಲಿ ಅಷ್ಟೇನೂ ಮಹತ್ವದ ಪಾತ್ರ ವಹಿಸದೇ ಇದ್ದರೂ ಸಹ ಪ್ರಧಾನ ಕಾರ್ಯದರ್ಶಿಯಾಗಿ ಅಗಾಗ ಸಲಹೆ ಮಾರ್ಗದರ್ಶನ ನೀಡುತ್ತಿದ್ದರು. ಅದೇ ಹೊತ್ತಲ್ಲಿ ಅಖಿಲ ಭಾರತ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರು ಭಾರತ ಯಾತ್ರೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಕೇರಳದಿಂದ, ಕನ್ಯಾಕುಮಾರಿಯ ಮಾರ್ಗವಾಗಿ ದೆಹಲಿಯವರೆಗೆ ಪಾದಯಾತ್ರೆ ನಡೆಸುತ್ತಿದ್ದರು. ಇಂಥ ಸನ್ನಿವೇಶದಲ್ಲೇ 1983ರ ಚುನಾವಣೆ ನಡೆಯಿತು.

ಇಷ್ಟೆಲ್ಲ ನಾಯಕರಿದ್ದರೂ ಜನತಾ ಪಕ್ಷ ಮತ್ತು ಕ್ರಾಂತಿ ರಂಗದ ಪರವಾಗಿ ರಾಜ್ಯಾದ್ಯಂತ ವ್ಯಾಪಕ ಪ್ರಚಾರ ಮತ್ತು ಪ್ರವಾಸ ಮಾಡಿದ್ದು ನಾನು ಮತ್ತು ಬಂಗಾರಪ್ಪನವರು. ಪರಿಣಾಮ 1983ರ ಚುನಾವಣೆಯಲ್ಲಿ ಗುಂಡೂರಾಯರ ಸರ್ಕಾರದ ವಿರುದ್ಧ ಜನಾದೇಶ ಬಂದಿತ್ತು. ಆದರೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲಿಲ್ಲ. ಜನತಾ ಕ್ರಾಂತಿ ರಂಗ ಒಕ್ಕೂಟಕ್ಕೆ ಅತಿ ಹೆಚ್ಚಿನ ಸ್ಥಾನಗಳು ಲಭಿಸಿದ್ದವು. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇತ್ತು, ಆನಂತರದಲ್ಲಿ ಬಿಜೆಪಿ ಇತ್ತು. ಇದರ ಜತೆಗೆ ಕಮ್ಯುನಿಸ್ಟ್ ಪಕ್ಷದವರು ಮತ್ತು ಪಕ್ಷೇತರರು ಆರಿಸಿ ಬಂದಿದ್ದರು. ಏಕೈಕ ದೊಡ್ಡ ಪಕ್ಷವಾದ್ದರಿಂದ ಜನತ ಕ್ರಾಂತಿ ರಂಗ ಒಕ್ಕೂಟವನ್ನು ಅಧಿಕಾರ ರಚಿಸಲು ಆಹ್ವಾನಿಸುವಂತಾಯಿತು. ಅದಕ್ಕೆ ಪೂರಕವಾಗಿ ಸಂಖ್ಯಾ ಬಲ ಪಡೆಯಲು ಒಂದೆಡೆ ಬಿಜೆಪಿಯವರು, ಕಮ್ಯುನಿಸ್ಟ್ ಪಕ್ಷ ಮತ್ತು ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಒಟ್ಟಿನಲ್ಲಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದು ಕಾಂಗ್ರೆಸ್ಸೇತರ ಸರ್ಕಾರ ಜನತಾ ಕ್ರಾಂತಿ ರಂಗ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಭೂಮಿಕೆಯಾಯಿತು. ಆದರೆ, ಇದರ ಮುಖ್ಯಮಂತ್ರಿ ಯಾರಾಗಬೇಕೆಂಬುದು ಒಂದು ಯಕ್ಷ ಪ್ರಶ್ನೆಯಾಯಿತು. ಜನರಲ್ಲೂ ಈ ಸರ್ಕಾರಕ್ಕೆ ಎಷ್ಟು ತಾಳಿಕೆ ಬಾಳಿಕೆ ಇರಲಿದೆ ಎಂಬ ಚರ್ಚೆಯೂ ಶುರವಾಯಿತು.

ಸಹಜವಾಗಿ ಮುಖ್ಯಮಂತ್ರಿ ಸ್ಥಾನಕ್ಕೆಸ್ಪರ್ಧಾಳುಗಳಾಗಿದ್ದವರೆಂದರೆ ನಾನು, ಬಂಗಾರಪ್ಪ ಮತ್ತು ಬೊಮ್ಮಾಯಿ. ಆಗ ನಾಗರಕೊಯಿಲಿನಲ್ಲಿದ್ದ ಜನತಾ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಅವರು ನನಗೆ ದೂರವಾಣಿ ಕರೆ ಮಾಡಿ ಈ ಸಂದರ್ಭದಲ್ಲಿ ನೀನು ಮುಖ್ಯಮಂತ್ರಿ ಸ್ಥಾನಕ್ಕೆ ದುಡುಕುವುದು ಬೇಡ. ಸ್ಪರ್ಧಿಯಾಗಿ ಭಾಗವಹಿಸುವುದೂ ಬೇಡ. ಈ ಸಂದರ್ಭ ಬಹಳ ಸೂಕ್ಷ್ಮವಾಗಿದೆ. ಬಹುಮತವಿಲ್ಲ. ಇಂಥ ಸರ್ಕಾರದಲ್ಲಿ ನೀನು ಮುಖ್ಯಮಂತ್ರಿಯಾದರೂ ನೀನು ಹೆಚ್ಚು ಸಮಯ ಉಳಿಯಲು ಸಾಧ್ಯವಿಲ್ಲ. ನನಗೂ ಸೂಕ್ಷ್ಮಗಳು ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿದೆ. ನಿನಗೇನೇ ಅನೇಕ ಜನ ಹಿತ ಶತ್ರುಗಳಿದ್ದಾರೆ. ನನ್ನ ಸಲಹೆ ಮತ್ತು ಕೋರಿಕೆ ಎಂದರೆ ನೀನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗುವ ಬದಲಿಗೆ ನಿನ್ನೊಂದಿಗಿರುವ ಶಾಸಕರೊಂದಿಗೆ ರಾಮಕೃಷ್ಣ ಹೆಗಡೆ ಅವರಿಗೆ ಬೆಂಬಲ ನೀಡುವುದು ಒಳಿತು ಎಂದು ನನಗೆ ತಿಳಿಸಿದರು. ನಾನು ಚಂದ್ರಶೇಖರ್ ಅವರ ಮಾತಿಗೆ ಸಮ್ಮತಿ ಸೂಚಿಸಿ ಮುಖ್ಯಮಂತ್ರಿ ಆಗುವ ಸ್ಪರ್ಧೆಯಿಂದ ಹಿಂದೆ ಸರಿದು ನೇರವಾಗಿ ರಾಮಕೃಷ್ಣ ಹೆಗಡೆ ಅವರ ಮನೆಗೆ ತೆರಳಿದೆ.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಬಂಗಾರಪ್ಪನವರು ಸಂಪೂರ್ಣವಾಗಿ ಕೃದ್ಧರಾದರು. ಅವರೂ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಅಲ್ಲದೆ, ಸರ್ಕಾರ ರಚನೆಯಾಗುವಲ್ಲಿ ಅವರದ್ದೂ ಅವಿರತ ಶ್ರಮವಿತ್ತು. ಆದರೂ ಅವರು ಹಠ ಮತ್ತು ಸಿಟ್ಟಿನ ಸ್ವಭಾವದವರಾಗಿದ್ದರಿಂದ ತಕ್ಷಣವೇ ತಮ್ಮ ಬೆಂಬಲಿಗರ ಶಾಸಕರನ್ನು ಮನೆಗೆ ಕರೆಸಿಕೊಂಡು ಭಿನ್ನಮತೀಯ ಆಕ್ರೋಶ ವ್ಯಕ್ತಪಡಿಸಿದರು. ಒಂದೆಡೆ ಕ್ಲಿಷ್ಟಕರ ಸನ್ನಿವೇಶದಲ್ಲಿ ಸೃಷ್ಟಿಯಾದ ಕಾಂಗ್ರೇಸ್ಸೇತರ ಸರ್ಕಾರ, ಅದಕ್ಕೆ ಆರಂಭದಲ್ಲೇ ವಿಘ್ನ, ಇನ್ನೊಂದೆಡೆ ಕುದಿಯುತ್ತಿರುವ ಬಂಗಾರಪ್ಪನವರು. ಈ ಸಂದರ್ಭವನ್ನು ತಿಳಿಸಿಗೊಳಿಸಿ ಎಲ್ಲರನ್ನೂ ಸಮಾಧಾನ ಗೊಳಿಸುವ ಹೊಣೆಯನ್ನು ಹೊತ್ತವನು ಪುನಾ ನಾನೇ. ಬೊಮ್ಮಾಯಿ ಅವರೂ ಬರಲಿಲ್ಲ, ಲಕ್ಷ್ಮೀ ಸಾಗರ್ ಅವರೂ ಬರಲಿಲ್ಲ. ಯಾರೂ ಆ ಜವಾಬ್ದಾರಿ ಹೊರಲು ಸಿದ್ಧರಾಗಿರಲಿಲ್ಲ.

ರಾಮಕೃಷ್ಣ ಹೆಗಡೆ ಅವರು ಮನೆಯಲ್ಲಿ ಏಕಾಂಗಿಯಾಗಿ ಕುಳಿತಿದ್ದರು. ಅವರನ್ನು ಭೇಟಿಯಾದ ನಾನು ನೇರವಾಗಿ “ನಿಮಗೆ ಮುಖ್ಯಮಂತ್ರಿ ಆಗುವ ಬಯಕೆ ಇದೆಯೇ” ಎಂದು ಕೇಳಿದೆ. ಅದಕ್ಕೆ ಅವರು “ ನೀವು ಬೆಂಬಲ ಕೊಟ್ಟರೆ ನಾನು ಸಿದ್ಧನಿದ್ದೇನೆ” ಎಂದರು. ಅದಕ್ಕೆ ನಾನು “ ಹಾಗಾದರೆ ನಾಳೆ ಪ್ರಮಾಣವಚನಕ್ಕೆ ಸಿದ್ಧರಾಗಿ,” ಎಂದು ಹೇಳಿದೆ. ನನಗೆ ಸಿಗಬೇಕಾದ ಮುಖ್ಯಮಂತ್ರಿ ಸ್ಥಾನವನ್ನು ನಾನು ತ್ಯಾಗ ಮಾಡಿ, ಚಂದ್ರಶೇಖರ್ ಅವರ ಮಾತಿಗೆ ಬೆಲೆ ಕೊಟ್ಟು ರಾಮಕೃಷ್ಣ ಹೆಗಡೆ ಅವರ ಬೆಂಬಲಕ್ಕೆ ಗಟ್ಟಿಯಾಗಿ ನಿಂತು ಅವರಿಗೆ ಧೈರ್ಯ ತುಂಬಿದೆ. ನಂತರ ಅಲ್ಲಿಂದ ನೇರವಾಗಿ ಬೊಮ್ಮಾಯಿ ಅವರಿಗೆ ಈ ಸಂದೇಶವನ್ನು ರವಾನಿಸಿದೆ. ಅದರೆ ಬೊಮ್ಮಾಯಿ ಮನೆಯಲ್ಲಿ ಸೇರಿದ್ದ ಗುರುಪಾದಸ್ವಾಮಿ, ಬೊಮ್ಮಾಯಿ ಅವರು ಅಲ್ಲಿಂದ ನನಗೊಂದು ಸಂದೇಶವನ್ನು ನೀಡಿದ್ದರು. ಅದೇನೆಂದರೆ ರಾಮಕೃಷ್ಣ ಹೆಗಡೆ ಅವರ ಬದಲಿಗೆ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವುದು, ನನ್ನನ್ನು ಉಪಮುಖ್ಯಮಂತ್ರಿ ಮಾಡುವುದು ಎಂದು ಗುರುಪಾದಸ್ವಾಮಿ ಅವರು ಸಂದೇಶ ನೀಡಿದರು. ಆದರೆ ನಾನು ಈಗಾಗಲೇ ರಾಮಕೃಷ್ಣ ಹೆಗಡೆ ಅವರಿಗೆ ಮಾತು ನೀಡಿದ್ದೇನೆ. ನನ್ನ ಬೆಂಬಲ ಏನಿದ್ದರೂ ರಾಮಕೃಷ್ಣ ಹೆಗಡೆ ಅವರಿಗೆ ಎಂದು ಹೇಳಿ ಗುರುಪಾದಸ್ವಾಮಿ ಅವರು ನೀಡಿದ್ದ ಸೂತ್ರವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ಅದಾದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಚುನಾವಣೆ ವೀಕ್ಷಕರು ಆಗಮಿಸಿದ್ದರು. ಅವರು ಶಾಸಕರೆಲ್ಲರ ಅಭಿಪ್ರಾಯ ಸಂಗ್ರಹಣೆ ಮಾಡಿದರು. ಆಗ ನಾನು ನನ್ನ ಪರವಾಗಿದ್ದ ಶಾಸಕರೆಲ್ಲರ ಬೆಂಬಲವನ್ನು ರಾಮಕೃಷ್ಣ ಹೆಗಡೆ ಅವರ ಪರವಾಗಿ ಚಲಾಯಿಸಿದ್ದರಿಂದ, ಹೆಗಡೆ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಭೂಮಿಕೆಯೂ ಸಿದ್ಧವಾಯಿತು.

ಬಂಗಾರಪ್ಪ ಅವರ ಮನವೊಲಿಸಲು ಅವರ ಮನೆಗೆ ತೆರಳಿದೆ. “ನಾವೆಲ್ಲರೂ ಒಂದು ದೊಡ್ಡ ಉದ್ದೇಶಕ್ಕಾಗಿ ತ್ಯಾಗಕ್ಕೆ ಸಿದ್ಧರಾಗಬೇಕಿದೆ. ನಾನೂ ಕೂಡ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ್ದೇನೆ. ನೀವೂ ಕೂಡ ಸಮಾಜವಾದದ ಸಿದ್ಧಾಂತದ ಹಿನ್ನೆಲೆಯಲ್ಲಿ ಬಂದವರು. ಅಪರೂಪಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಮತ್ತು ನೀವು ಮನಸ್ಸು ಗಟ್ಟಿ ಮಾಡಬೇಕಿದೆ. ತ್ಯಾಗ ಮಾಡಬೇಕಿದೆ. ಈ ಸರ್ಕಾರವನ್ನು ಉಳಿಸೋಣ ಎಂದು ಮನವೊಲಿಸಲೆಂದು ಅವರ ಮನೆಗೆ ಹೋಗಿದ್ದೆ. ಆದರೆ ಬಂಗಾರಪ್ಪ ಅವರ ಬೆಂಬಲಿಗರು ಎಷ್ಟು ಆಕ್ರೋಶಭಭರಿತರಾಗಿದ್ದರೆಂದರೆ ನಾನು ಬಂದ ತಕ್ಷಣವೇ ರಾಮಕೃಷ್ಣ ಹೆಗಡೆ ಅವರನ್ನು ದೇವೇಗೌಡರು ಮುಖ್ಯಮಂತ್ರಿ ಮಾಡಿದ್ದಾರೆ ಎಂಬ ಕಾರಣಕ್ಕೆ ಸಿಟ್ಟಾಗಿ ನನ್ನ ಜುಬ್ಬಾ ಹರಿದು ತಮ್ಮ ಪ್ರತಿಭಟನೆ ಮತ್ತು ಸಿಟ್ಟನ್ನು ಪ್ರದರ್ಶಿಸಿದರು. ರಾಮಕೃಷ್ಣ ಹೆಗೆಡೆ ಅವರನ್ನು ಮುಖ್ಯಮಂತ್ರಿ ಮಾಡಿದ್ದ ಕಾರಣಕ್ಕೆ ಬಂಗಾರಪ್ಪ ಅವರ ಬೆಂಬಲಿಗರ ಸಿಟ್ಟು ಮತ್ತು ಆಕ್ರೋಶವನ್ನು ಎದುರಿಸಬೇಕಾಗಿ ಬಂತು. ಅಲ್ಲದೆ, ಬಂಗಾರಪ್ಪ ಅವರ ಮನೆ ಎದುರು ನಾನು ಅವಮಾನಕ್ಕೂ ತುತ್ತಾದೆ. ರಾಜಕೀಯ ಬೆಳವಣಿಗೆಗಳಲ್ಲಿ ಇವೆಲ್ಲವೂ ನಡೆಯುತ್ತವೆ ಎಂಬ ಕಾರಣಕ್ಕೆ ಅವಮಾನಗಳನ್ನೆಲ್ಲ ನಾನು ಸಹಿಸಿಕೊಂಡೆ. ಅದಾದ ಮೇಲೆ ನಾನು ರಾಮಕೃಷ್ಣ ಹೆಗಡೆ ಅವರ ಮನೆಗೆ ಬಂದು ಅವರಿಗೂ ಧೈರ್ಯ ತುಂಬಿದೆ. ಅದಾದ ನಂತರ ಸಚಿವ ಸಂಪುಟ ರಚನೆಯ ಕಸರತ್ತು ಆರಂಭವಾಯಿತು.

ನಾನು ಬೊಮ್ಮಾಯಿ ಪಕ್ಷದ ಅಧ್ಯಕ್ಷರಾಗಿದ್ದವರು. ನಮಗೆ ಹಿರಿತನವಿತ್ತು. ಆದರೂ ರಾಚಯ್ಯನವರನ್ನು, ನಜೀರ್ ಸಾಬ್ ಅವರನ್ನು ಹಿರಿತನದಲ್ಲಿ ಕೂರಿಸಿ ನಮ್ಮನ್ನು ಕೆಳಸ್ತರದಲ್ಲಿ ಪರಿಗಣಿಸಿದರೂ ಕೂಡ ಅಂದಿನ ಸಂದರ್ಭ ಸೂಚನೆಗಳನ್ನೆಲ್ಲ ಅರ್ಥ ಮಾಡಿಕೊಂಡ ನಾವೆಲ್ಲರೂ ರಾಮಕೃಷ್ಣ ಹೆಗಡೆ ಅವರ ಪರವಾಗಿ ಗಟ್ಟಿಯಾಗಿ ನಿಂತೆವು. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿ ಮಾಡಲು ನನ್ನ ಬೆಂಬಲವನ್ನು ನೀಡಿದ್ದು, ಇದೇ ಕಾರಣಕ್ಕೆ ಬಂಗಾರಪ್ಪ ಅವರ ಬೆಂಬಲಿಗರಿಂದ ಅಪಮಾನಕ್ಕೆ ಗುರಿಯಾಗಿದ್ದು ಇದೆಲ್ಲವೂ ಒತ್ತಟ್ಟಿಗಿರಲಿ ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಎರಡೂ ಸದನದ ಸದಸ್ಯರೇ ಅಲ್ಲದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗಿದ್ದು ರಾಮಕೃಷ್ಣ ಹೆಗಡೆ ಅವರು ಎಂಬುದನ್ನು ಈ ಸಂದರ್ಭದಲ್ಲಿ ನಾನು ಹೇಳಲೇಬೇಕು.

ರಾಮಕೃಷ್ಣ ಹೆಗಡೆ ಅವರು ಎರಡೂ ಸದನಗಳ ಸದಸ್ಯರಾಗಿರದೇ ಇದ್ದಿದ್ದರಿಂದ ಅವರನ್ನು ತಕ್ಷಣವೇ ಸದನಕ್ಕೆ ಕರೆತರಬೇಕಾದಂಥ ಇನ್ನೊಂದು ಜವಾಬ್ದಾರಿಯೂ ಕೂಡ ನಮ್ಮ ಪಕ್ಷದ ಮೇಲೆ ಬಿತ್ತು. ಹಾಗೆಯೇ ನಾಯಕರು ಎನಿಸಿಕೊಂಡ ನಮ್ಮ ಜವಾಬ್ದಾರಿಯೂ ಆಗಿತ್ತು. ಅದರಲ್ಲೂ ರಾಮಕೃಷ್ಣ ಹೆಗಡೆಯವನ್ನು ಮುಖ್ಯಮಂತ್ರಿ ಮಾಡಲು ನಾನು ಹೆಚ್ಚು ಶ್ರಮಪಟ್ಟಿದ್ದರಿಂದ ಇದರಲ್ಲಿ ನನ್ನದೇ ಹೆಚ್ಚು ಹೊಣೆಗಾರಿಕೆಯಾಗಿತ್ತು. ಹಾಗಾಗಿ ನಾನು ಮೊದಲ ಬಾರಿಗೆ ನನ್ನಬೆಂಬಲದಿಂದ ನನ್ನ ಸಮುದಾಯದ ಬೆಂಬಲದಿಂದ ಆರಿಸಿ ಬಂದಿದ್ದ ಸಿಂಧ್ಯಾ ಅವರಿಂದ ರಾಜೀನಾಮೆ ಕೊಡಿಸಿ ಕನಕಪುರದಿಂದ ರಾಮಕೃಷ್ಣ ಹೆಗಡೆ ಅವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರಬೇಕೆಂದು ತೀರ್ಮಾನ ಮಾಡಿದೆ. ಅದನ್ನು ಪಕ್ಷದ ಒಳಗೆ ಚರ್ಚೆ ಮಾಡಿದೆವು. ಇದಕ್ಕೆ ಪಕ್ಷದಲ್ಲೂ ತೀರ್ಮಾನವೂ ಆಯಿತು. ಅದರಂತೆ ಸಿಂಧ್ಯಾ ಅವರಿಂದ ಕನಕಪುರ ಕ್ಷೇತ್ರಕ್ಕೆ ರಾಜೀನಾಮೆ ಕೊಡಿಸಿ ಅಲ್ಲಿಂದ ರಾಮಕೃಷ್ಣ ಹೆಗಡೆ ಅವನ್ನು ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿಸಿದೆವು. ರಾಮಕೃಷ್ಣ ಹೆಗಡೆ ಅವರಿಗೆ ಗುರುತು ಪರಿಚಯವಿರದ, ರಾಮಕೃಷ್ಣ ಹೆಗಡೆ ಅವರ ಸಮುದಾಯವೇ ಇಲ್ಲದಿದ್ದ ಆದರೆ ನನ್ನ ಸಮುದಾಯದ ಜನರೇ ಹೆಚ್ಚಿರುವ ಕನಕಪುರದಲ್ಲಿ ಹೆಗಡೆ ಅವರನ್ನು ಗೆಲ್ಲಿಸಬೇಕೆಂಬ ಜವಾಬ್ದಾರಿ ನನಗೆ ಹೆಚ್ಚಿತ್ತು. ಏಕೆಂದರೆ ಇದು ಒಂದು ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿತ್ತು.

ರಾಮಕೃಷ್ಣ ಹೆಗಡೆ ಅವರನ್ನು ನಾನು ಮುಖ್ಯಮಂತ್ರಿ ಮಾಡಿದ್ದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ ಎಂಬ ಅರಿವೂ ನನಗಿತ್ತು. ಆದರೆ ಯಾವ ಹಂತಕ್ಕೆ ನನ್ನ ವಿರುದ್ಧ ಎಷ್ಟರ ಮಟ್ಟಿಗೆ ಅಪಪ್ರಚಾರ ನಡೆಯಿತು ಎಂದರೆ “ದೇವೇಗೌಡರು ಕನಕಪುರದಲ್ಲಿ ಹೆಗಡೆ ಅವರನ್ನು ನಿಲ್ಲಿಸಿ ಸೋಲಿಸುವ ಹುನ್ನಾರ ಮಾಡಿದ್ದಾರೆ,” ಎಂದು ಬಿಂಬಿಸಲಾಯಿತು. ಆದರೆ ನಾನು ಅದ್ಯಾವುದನ್ನೂ ಲೆಕ್ಕಿಸದೇ 48 ದಿನಗಳ ಕಾಲ ಕನಕಪುರದ ಹಳ್ಳಿ ಹಳ್ಳಿ ತಿರುಗಿ, ಗುಡಿಸಲು ಜೋಪಡಿಗಳಿಗೆಲ್ಲ ಹೋಗಿ, ಪಾದಯಾತ್ರೆ ಮಾಡಿ , ಗ್ರಾಮ ವಾಸ್ತವ್ಯ ಮಾಡಿ ನಿರಂತರ ಪರಿಶ್ರಮ ಹಾಕಿ ರಾಮಕೃಷ್ಣ ಹೆಗಡೆ ಅವರನ್ನು ಕನಕಪುರದಿಂದ ಗೆಲ್ಲಿಸಿಕೊಂಡು ಬಂದೆ. ಕಾಂಗ್ರೆಸ್ಸೇತರ ಸರ್ಕಾರದ ಮೊಟ್ಟಮೊದಲ ಮುಖ್ಯಮಂತ್ರಿಯನ್ನಾಗಿ ರಾಮಕೃಷ್ಣ ಹೆಗಡೆಯವನ್ನು ಮಾಡುವುದರಲ್ಲೂ, ಅವರನ್ನು ಆ ಸ್ಥಾನದಲ್ಲಿ ಭದ್ರವಾಗಿ ಕೂರಿಸುವುದರಲ್ಲೂ ನನ್ನ ಕಾಣಿಕೆ ಅಷ್ಟರ ಮಟ್ಟಿಗೆ ಪ್ರಧಾನವಾಗಿತ್ತು ಎಂಬುದನ್ನು ನಾನು ಸ್ಪಷ್ಟವಾಗಿ ತಿಳಿಸಲು ಇಷ್ಟಪಡುತ್ತೇನೆ.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆದ ನಂತರ ಸಚಿವ ಸಂಪುಟದಲ್ಲಿ ಆದ ಪ್ರಕರಣಗಳ ಬಗ್ಗೆ ನಾನು ವಿಷದವಾಗಿ ಹೇಳಲು ಹೋಗುವುದಿಲ್ಲ. ಅದು ನನ್ನ ಆತ್ಮ ಚರಿತ್ರೆಯಲ್ಲಿ ಅಪ್ರಕೃತ. ಆದರೆ ಒಂದೆರಡು ಘಟನೆಗಳನ್ನು ನಾನು ಇಲ್ಲಿ ಹೇಳಲೇಬೇಕಾಗುತ್ತದೆ. ಸಚಿವ ಸಂಪುಟ ರಚನೆ ಮಾಡುವ ಹೊತ್ತಿನಲ್ಲಿ ನಾನು ಮೊದಲೇ ಹೇಳಿದಂತೆ ಕಮ್ಯುನಿಸ್ಟ್ ಮತ್ತು ಬಿಜೆಪಿ ಪಕ್ಷಗಳು ನಮಗೆ ಬಾಹ್ಯ ಬೆಂಬಲ ನೀಡಿದ್ದವು. ಪಕ್ಷೇತರರ ಬೆಂಬಲ ಪಡೆದು ನಾವು ಸರ್ಕಾರವನ್ನು ರಚನೆ ಮಾಡಿದ್ದೆವು. ಸಚಿವ ಸಂಪುಟ ರಚನೆಯ ಕಸರತ್ತು ಕೂಡ ಅಷ್ಟು ಸುಲಭದ್ದಾಗಿರಲಿಲ್ಲ. ಅದು ತಂತಿಯ ಮೇಲಿನ ನಡುಗೆಯೇ ಆಗಿತ್ತು. ಎಲ್ಲ ಸಮುದಾಯಗಳ ಎಲ್ಲ ಪ್ರದೇಶಿಕತೆ ದೃಷ್ಟಿಕೋನದಿಂದ ಸಚಿವ ಸಂಪುಟ ರಚನೆ ಮಾಡುವುದು ಒಂದು ದೊಡ್ಡ ಜವಾಬ್ದಾರಿಯಾಗಿತ್ತು. ಅದೂ ಅಲ್ಲದೆ ಒಂದು ಅಲ್ಪಮತದ ಸರ್ಕಾರವಾದ್ದರಿಂದ ಅದನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಕಷ್ಟಕರವಾಗಿತ್ತು. ಪಕ್ಷಾಂತರ ನಿಷೇಧ ಕಾಯಿದೆ ಆಗ ಜಾರಿಯಾಗಿರಲಿಲ್ಲವಾದ್ದರಿಂದ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದಾದ ಅತಂತ್ರ ಸ್ಥಿತಿಯ ಆತಂಕ ಕಾಡುತ್ತಲೇ ಇತ್ತು. ಆದ್ದರಿಂದ ಪಕ್ಷದಲ್ಲಿ ಗಟ್ಟಿತನ ಮತ್ತು ಆ ಮೂಲಕ ಸರ್ಕಾರಕ್ಕೆ ಭದ್ರತೆ ಒದಗಿಸಲು ನಾವೆಲ್ಲರೂ ನಿರಂತರವಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆವು.

ರಾಮಕೃಷ್ಣ ಹೆಗಡೆ ಅವರಿಗೆ ನನ್ನ ಬೆಂಬಲ ಅಚಲವಾಗಿತ್ತು. ನಿಷ್ಠೆಯಿಂದ ಕೂಡಿತ್ತು ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ. ಆದರೂ ದೇವೇಗೌಡರು ಎಲ್ಲೋ ಒಂದು ಕಡೆ ಪರ್ಯಾಯ ನಾಯಕರಾಗಿ, ಪರ್ಯಾಯ ಅಧಿಕಾರ ಕೇಂದ್ರವಾಗಿ ಹೊರಹೊಮ್ಮುತ್ತಿದ್ದಾರೆ. ರಾಮಕೃಷ್ಣ ಹೆಗಡೆ ಒಂದು ಕೇಂದ್ರವಾದರೆ ದೇವೇಗೌಡರು ಒಂದು ಪರ್ಯಾಯ ಕೇಂದ್ರ ಎಂಬ ರೀತಿಯಲ್ಲಿ ಅದಕ್ಕೆ ಉಪ್ಪು, ಹುಳಿ ಖಾರ ಹಾಕಿ ನನ್ನ ಮತ್ತು ಹೆಗಡೆ ಅವರ ನಡುವೆ ಅಪನಂಬಿಕೆ ಸೃಷ್ಟಿ ಮಾಡಲು ಪ್ರಯತ್ನ ನಡೆಯುತ್ತಾ ಬಂತು. ಆ ವ್ಯಕ್ತಿಗಳನ್ನು ನನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಲು ನಾನು ಇಷ್ಟಪಡುವುದಿಲ್ಲ. ಆದರೆ ಅಂಥ ಪ್ರಕರಣಗಳು ಆಗಾಗ್ಗೆ ನುಸುಳಿ ಬರುತ್ತಲೇ ಇದ್ದವು. ಅದೇ ಹೊತ್ತಿಗೆ 1983 ದಾಟಿ ನಾವು 84ಕ್ಕೆ ಬರುವ ಹೊತ್ತಿಗೆ ದುರಾದೃಷ್ಟವೆಂಬಂತೆ ಇಂದಿರಾ ಗಾಂಧಿಯವರ ಹತ್ಯೆ ಸಂಭವಿಸಿತ್ತು. ಹತ್ಯೆ ನಂತರದಲ್ಲೇ ದಿಢೀರನೇ ಲೋಕಸಭಾ ಚುನಾವಣೆಯೂ ಘೋಷಣೆಯಾಯಿತು. ಅದೇ ಸಂದರ್ಭದಲ್ಲೇ ನಮ್ಮಲ್ಲಿ ಸಚಿವ ಸಂಪುಟ ವಿಸ್ತರಿಸುವ ಅನಿವಾರ್ಯ ಪರಿಸ್ಥಿತಿಯೂ ಎದುರಾಯಿತು. ಇದ್ದಂಥ ಸಂಪುಟದಲ್ಲಿ ಇನ್ನಷ್ಟು ಮಂದಿಯನ್ನು ಸೇರಿಸಿಕೊಂಡು ನಲವತ್ತು ಜನರ ಸಂಪುಟವನ್ನು ರಚನೆ ಮಾಡುವುದು ಅನಿವಾರ್ಯ ಎಂಬ ನಿರ್ಣಯಕ್ಕೆ ರಾಮಕೃಷ್ಣ ಹೆಗಡೆಯವರು ಬಂದಿದ್ದರು.

ಆಗ ನಾನು ರಾಮಕೃಷ್ಣ ಹೆಗಡೆ ಅವರಿಗೆ ಹೇಳಿದೆ, "ನವಲತ್ತು ಸಚಿವರ ಸಂಪುಟ ಮಾಡಿದರೆ ಖಂಡಿತಾ ನಮಗೆ ಘನತೆ ಸಿಗುವುದಿಲ್ಲ. ಜನರ ಮುಂದೆ ನಾವು ಬಹಳ ತುಚ್ಛರಾಗುತ್ತೇವೆ. ಸರ್ಕಾರವನ್ನು ಉಳಿಸಿಕೊಳ್ಳುವ ಕಾರಣಕ್ಕೆಂದೇ ಇದ್ದಬದ್ದವರನ್ನೆಲ್ಲ ಸಚಿವರನ್ನಾಗಿ ಮಾಡಿದ ಅಪಖ್ಯಾತಿಗೆ ನೀವು ಗುರಿಯಾಗುತ್ತೀರಿ. ಸರ್ಕಾರವನ್ನು ಉಳಿಸಿಕೊಳ್ಳುವುದಷ್ಟೇ ನಮ್ಮ ಗುರಿಯಲ್ಲ. ಒಳ್ಳೆಯ ಸರ್ಕಾರ ನೀಡುವುದು ನಮ್ಮ ಕೆಲಸ. ನೀವು ಒಂದು ವೇಳೆ ಸಚಿವ ಸಂಪುಟ ವಿಸ್ತರಣೆ ಮಾಡಲೇ ಬೇಕು ಎಂದಿದ್ದರೆ ನಲವತ್ತು ಜನರನ್ನು ಮಾಡಬೇಡಿ. ಬೇಕಿದ್ದರೆ ನಾವು ಕೆಲವರು ರಾಜೀನಾಮೆ ನೀಡುತ್ತೇವೆ. ನಮಗೆ ಪಕ್ಷದ ಜವಾಬ್ದಾರಿ ಹಚ್ಚಿ. ನಮ್ಮಿಂದ ಖಾಲಿಯಾದ ಜಾಗಕ್ಕೆ ನೀವು ಯಾರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೀರೋ ಅವರನ್ನು ಸೇರಿಸಿಕೊಳ್ಳಿ," ಎಂದು ಸಲಹೆ ನೀಡಿದೆ. ನನ್ನ ಆ ಮಾತು ಹೆಗಡೆ ಅವರಿಗೆ ಪಥ್ಯವಾಯಿತೆಂದು ಕಾಣಿಸುತ್ತದೆ "ಆಯ್ತು ಹಾಗೆ ಮಾಡಿ," ಎಂದರು. ಆಗ ನಾನು, ವಿಶ್ವನಾಥ್ ರೆಡ್ಡಿ ಮುದ್ನಾಳು, ಜೆ ಎಚ್ ಪಟೇಲ್ ಮೂರು ಜನ ನಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಪಕ್ಷದ ಕೆಲಸಕ್ಕೆ ಬಂದೆವು. ನಾನು ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡುವುದು, ವಿಶ್ವನಾಥ ರೆಡ್ಡಿ ಮುದ್ನಾಳು ಅವರು ಪಕ್ಷದ ಹಿರಿಯ ಉಪಾಧ್ಯಕ್ಷರಾಗಿ ಕೆಲಸ ಮಾಡುವುದು, ಜೆ ಎಚ್ ಪಟೇಲ್ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುವುದು ಎಂದು ತೀರ್ಮಾನವಾಯಿತು. ಅದಾಗಲೇ ಎದುರಾಗಿದ್ದ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವುದು, ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುವುದು ಎಂದು ತೀರ್ಮಾನವಾಯಿತು.

ಅದರಂತೆ ನಾವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷದ ಕೆಲಸಕ್ಕೆ ನಿಯೋಜನೆಗೊಂಡೆವು. ಹಾಗಾಗಿ 1984ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕೆಲಸಕ್ಕೆ ಬಂದೆವು. ಆ ಚುನಾವಣೆ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾಗಿತ್ತು. ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದರು. ಸಹಜವಾಗಿಯೇ ರಾಷ್ಟ್ರಾದ್ಯಂತ ಅನುಕಂಪದ ಅಲೆ ಇತ್ತು. ದೇಶದಲ್ಲಿ ಜನಾಭಿಪ್ರಾಯವೂ ಕಾಂಗ್ರೆಸ್ ಕಡೆಗಿತ್ತು. ಕರ್ನಾಟಕವೂ ಕೂಡ ಅದರಿಂದ ಹೊರತಾಗಿರಲಿಲ್ಲ. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರೂ ಅನುಕಂಪದ ಆಧಾರದಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರು. ಕೇವಲ ನಾಲ್ಕು ಸ್ಥಾನಗಳನ್ನು ಮಾತ್ರ ನಮ್ಮ ಜನತಾ ಪಕ್ಷ ಗೆಲ್ಲಲ್ಲು ಸಾಧ್ಯವಾಯಿತು. ನಮ್ಮ ಸರ್ಕಾರವಿದ್ದರೂ ನಾಲ್ಕು ಸ್ಥಾನಗಳನ್ನು ಗೆದ್ದ ಹಿನ್ನಲೆಯಲ್ಲಿ ತಕ್ಷಣವೇ ಸಚಿವ ಸಂಪುಟ ಸಭೆ ನಡೆಯಿತು. ಚುನಾವಣೆ ತೀರ್ಪು ಸರ್ಕಾರದ ಅಸ್ತಿರತೆಗೆ ಕಾರಣವಾಗಬಹುದು. ಸರ್ಕಾರದ ವಿರುದ್ಧ ಒಂದು ಜನಾದೇಶ ಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸಂಸದರು ಗೆದ್ದಿದ್ದಾರೆ. ನಾವು ನಾಲ್ಕು ಸ್ಥಾನಗಳನ್ನಷ್ಟೇ ಗಳಿಸಿದ್ದೇವೆ. ಆದ್ದರಿಂದ ಈ ಸರ್ಕಾರವನ್ನು ಉಳಿಸಿಕೊಳ್ಳುವ ಬಗೆ ಹೇಗೆ ಎಂಬ ಚರ್ಚೆ ಆರಂಭವಾಯಿತು.

ಸಭೆಯಲ್ಲಿ ಎಲ್ಲರೂ ಭಿನ್ನ ಭಿನ್ನ ಸಲಹೆ ಉಪಾಯಗಳನ್ನು ನೀಡಿದರು. ನಾನು ಮಾತ್ರ ನೇರವಾಗಿ ರಾಮಕೃಷ್ಣ ಹೆಗಡೆ ಅವರಿಗೆ ಹೇಳಿದೆ "ನೋಡಿ ಈ ಸಂದರ್ಭದಲ್ಲಿ ನಾವು ಸರ್ಕಾರಕ್ಕೆ ಎಷ್ಟೇ ತೇಪೆ ಹಾಕಿದರೂ ಕೂಡ ಈ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹೊಡೆತ ಬಿದ್ದಿದೆ. ಆದ್ದರಿಂದ ನನ್ನ ಸ್ಪಷ್ಟ ಅಭಿಪ್ರಾಯವೆಂದರೆ ನೀವು ಸರ್ಕಾರವನ್ನು ವಿಸರ್ಜನೆ ಮಾಡಿ, ಸಂಪುಟ ವಿಸರ್ಜನೆ ಮಾಡಿ ನಾವು ಮತ್ತೆ ಜನಾಭಿಪ್ರಾಯಕ್ಕೆ ಹೋಗುವುದು ರಾಜಮಾರ್ಗ. ಜನರ ದೃಷ್ಟಿಯಲ್ಲೂ ನಾವು ದೊಡ್ಡವರಾಗುತ್ತೇವೆ. ನೀವು ಲೋಕಸಭೆಯಲ್ಲಿ ಈ ತೀರ್ಪು ನೀಡಿದ್ದೀರಿ ಹಾಗಾಗಿ ನಮಗೆ ಅನುಮಾನ ಬಂದಿದೆ. ನೀವು ಒಂದು ವರ್ಷದ ನಮ್ಮ ಈ ಸರ್ಕಾರದ ಕೆಲಸವನ್ನು ವಿಮರ್ಶೆ ಮಾಡಿ ತೀರ್ಮಾನಿಸಿ ಎಂದು ಮತ್ತೆ ಜನಗಳ ಬಳಿಗೆ ಹೋಗುವುದು ಒಳಿತು” ಎಂದು ನನ್ನ ಅಭಿಪ್ರಾಯವನ್ನು ತಿಳಿಸಿದೆ. ಅದಕ್ಕೆ ಜೆ ಎಚ್ ಪಟೇಲರೂ ಸೇರಿ ಬಹುತೇಕ ನಾಯಕರು ಸಮ್ಮತಿ ನೀಡಿದ ಮೇಲೆ ಒಲ್ಲದ ಮನಸ್ಸಿನಿಂದಲೇ ರಾಮಕೃಷ್ಣ ಹೆಗಡೆ ಅವರು ಒಪ್ಪಿಕೊಂಡು ಪುನಃ ಜನರ ಎದುರು ಹೋಗುವುದು ಎಂದು ತೀರ್ಮಾನ ಮಾಡಿ ಸಂಪುಟ ವಿಸರ್ಜಿಸಿ ಹೊಸ ಜನಾಭಿಪ್ರಾಯ ಪಡೆಯಲು ತೀರ್ಮಾನಿಸಿದರು. ಇದಿಷ್ಟೂ ಹೇಗೆ ಕಾಂಗ್ರೆಸ್ಸೇತರ ಸರ್ಕಾರವೊಂದು ರಾಜ್ಯದಲ್ಲಿ ಮೊದಲಬಾರಿಗೆ ರಚನೆಯಾಯಿತು, ಒಂದೇ ವರ್ಷದಲ್ಲಿ ಹೇಗೆ ಜನರ ಬಳಿಗೆ ಹೋಗುವಂತಾಯಿತು ಎಂಬುದನ್ನು ನಾನಿಲ್ಲಿ ವಿವರಿಸಿದ್ದೇನೆ.

ಆದರೆ, ಇಲ್ಲಿ ಒಂದು ಮಾತನ್ನು ಹೇಳಲೇ ಬೇಕಾಗುತ್ತದೆ. 1984ರ ಲೋಕಸಭೆ ಚುನಾವಣೆಯಲ್ಲಿ ನಾವು ನಾಲ್ಕೇ ಸ್ಥಾನಗಳನ್ನು ಗೆದ್ದಾಗ ಕೆಲವು ಪತ್ರಿಕೆಗಳಲ್ಲಿ ಎಲ್ಲ ಪತ್ರಿಕೆಗಳೂ ಅಲ್ಲ. ಕೆಲವು ಪತ್ರಿಕೆಗಳಲ್ಲಿ ಬೇಕೆಂದೇ ಕೆಲವು ಲೇಖನಗಳನ್ನು ಕೆಲವರು ಬರೆಸಿದರು. ಈ ಸೋಲಿಗೆ ಪಕ್ಷದ ಅಧ್ಯಕ್ಷರು ಹೊಣೆ ಹೊರಬೇಕಾಗುತ್ತದೆ ಎಂದು ಬರೆಸಲಾಗಿತ್ತು. ಅಂದರೆ ರಾಮಕೃಷ್ಣ ಹೆಗಡೆ ಅವರಿಗೆ ಜನಪ್ರಿಯತೆ ಇದೆ, ಅವರು ಒಳ್ಳೆಯವರು, ಒಳ್ಳೆ ಮುಖ್ಯಮಂತ್ರಿಗಳು. ಆದರೆ, ಪಕ್ಷ ಸೋಲಲು, ನಾಲ್ಕೇ ಸ್ಥಾನಗಳನ್ನು ಗೆಲ್ಲಲು ಪಕ್ಷದ ಅಧ್ಯಕ್ಷರಾಗಿ ದೇವೇಗೌಡರು ವಿಫಲರಾದರು, ಪಕ್ಷ ಮುನ್ನಡೆಸಲು, ಹೆಚ್ಚಿನ ಸ್ಥಾನ ಗಳಿಸಲು ಅವರು ಸಫಲರಾಗಲಿಲ್ಲ ಎಂಬ ರೀತಿಯಲ್ಲಿ ಕೆಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಸಲಾಗಿತ್ತು. ಆದರೆ, ಅವೆಲ್ಲವನ್ನೂ ಕೂಡ ನಾನು ಉಪೇಕ್ಷಿಸುತ್ತಲೇ ಬಂದೆ. ಆದರೆ, ನನ್ನ ಸಲಹೆಯಂತೆ ಸರ್ಕಾರವನ್ನು ವಿಸರ್ಜನೆ ಮಾಡಿ, ಹೊಸ ಜನಾದೇಶಕ್ಕಾಗಿ 1985ರಲ್ಲಿ ವಿಧಾನಸಭೆ ಚುನಾವಣೆ ನಡೆಯಿತು.

1985ಕ್ಕೂ ಹಿಂದೆ ಮತ್ತು 1985ರ ಚುನಾವಣೆಯಲ್ಲಿ ನಾನು ಅಧ್ಯಕ್ಷನಾಗಿ ಮತ್ತೆ ಗೆಲುವು ಸಾಧಿಸಬೇಕೆಂಬ ಹಠದಿಂದ ಪಕ್ಷದ ಅಧ್ಯಕ್ಷನಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಮಾಡಿದ್ದೆ. ಆರ್ ಎಲ್ ಜಾಲಪ್ಪ ಅವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಹಿಂದುಳಿದ ಜನಾಂಗಗಳ ಸಮಾವೇಶ ಮಾಡಲಾಗಿತ್ತು, ರಾಚಯ್ಯ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ಪರಿಶಿಷ್ಠರ ಸಮಾವೇಶ ಮಾಡಲಾಗಿತ್ತು, ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ಮಾಡಲಾಗಿತ್ತು, ಬೆಂಗಳೂರಿನ ಗಾಜಿನ ಮನೆಯಲ್ಲಿ ನಜೀರ್ ಸಾಬ್ ಹಾಗೂ ರೋಷನ್ ಬೇಗ್ ನೇತೃತ್ವದಲ್ಲಿ ಅಲ್ಪ ಸಂಖ್ಯಾತರ ಸಮಾವೇಶ ಮಾಡಲಾಯಿತು. ಹೀಗೆ ಎಲ್ಲ ಕಡೆಗಳಲ್ಲೂ ಉತ್ಸಾಹ ತುಂಬುವ, ಕಾರ್ಯಕರ್ತರಲ್ಲಿ ಹುರುಪು ತುಂಬುವ ಕಾರ್ಯಕ್ರಮಗಳನ್ನು ಮಾಡಲಾಗಿತ್ತು. ಪರಿಶಿಷ್ಟ ಜಾತಿ ಜನಾಂಗಗಳನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಪಕ್ಷದ ವಿಶ್ವಾಸಕ್ಕೆ ತೆಗೆದುಕೊಳ್ಳಲು ಪಕ್ಷದ ಅಧ್ಯಕ್ಷನಾಗಿ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡಿದ್ದೆ. ಪಕ್ಷಕ್ಕಾಗಿ ಹಗಲಿರುಳೆನ್ನದೇ ದುಡಿದೆ, ಪ್ರವಾಸ ಮಾಡಿದೆ. ಪಕ್ಷ ಕಟ್ಟುವ ಕೆಲಸದಲ್ಲಿ ನನ್ನ ಅನುಭವವನ್ನು ಧಾರೆ ಎರೆದೆ.

1985ರ ಚುನಾವಣೆಯಲ್ಲಿ ಜನತಾ ಪಕ್ಷಕ್ಕೆ ಅಭೂತಪೂರ್ವ ಗೆಲವು ಸಿಕ್ಕು, ನಮ್ಮ ಸರ್ಕಾರ ಬಂದ ಹಿನ್ನೆಲೆಯಲ್ಲಿ ಮತದಾರರೆಲ್ಲರಿಗೂ ಕೃತಜ್ಞತೆ ಅರ್ಪಿಸಬೇಕೆಂದು ಪಕ್ಷದ ಅಧ್ಯಕ್ಷನಾಗಿ ನಾನು ಜಯನಗರದ ಚಾಮರಾಜ ಕಲ್ಯಾಣ ಮಂಟಪದಲ್ಲಿ ಸಮಾವೇಶ ಕರೆದೆ. ಕಾರ್ಯಕರ್ತರನ್ನೆಲ್ಲರನ್ನು ಸೇರಿಸಿದ್ದ ಆ ಸಮಾವೇಶದಲ್ಲಿ "ಪಕ್ಷಕ್ಕೆ ಸಿಕ್ಕ ಈ ಗೆಲುವು ಯಾವುದೇ ಒಬ್ಬ ವ್ಯಕ್ತಿಗೆ ಸಲ್ಲುವುದಲ್ಲ, ಅಧ್ಯಕ್ಷನಾಗಿ ನನಗೂ ಸಲ್ಲುವುದಲ್ಲ, ರಾಮಕೃಷ್ಣ ಹೆಗಡೆ ಅವರಿಗೂ ಸಲ್ಲುವುದಲ್ಲ. ಇದು ಸಂಘಟಿತವಾದ ಪ್ರಯತ್ನ. ಈ ಗೆಲುವಿನ ಯಶಸ್ಸು ಪಕ್ಷಕ್ಕೆ ದುಡಿದ ಕಾರ್ಯಕರ್ತರೆಲ್ಲರಿಗೂ ಸಲ್ಲುತ್ತದೆ," ಎಂದು ನಾನು ಹೇಳಿದೆ. ಮರುದಿನ ನನ್ನ ಭಾಷಣ ಪತ್ರಿಕೆಗಳಲ್ಲಿ ಬಂದಿದ್ದೇ ಸರಿ, ಅಲ್ಲಿಂದಲೇ ಹೆಗಡೆ ಅವರ ಮನಸ್ಸಿನಲ್ಲಿ ಅಪನಂಬಿಕೆಯ ಸಂಶಯದ ದೊಡ್ಡ ಬೀಜ ಬಿತ್ತನೆಯಾಯಿತು. "ಓ ಹೋ ನನ್ನ ಬೆಳವಣಿಗೆಯನ್ನು ಈ ದೇವೇಗೌಡ ಸಹಿಸುವುದಿಲ್ಲ," ಎಂಬ ಅಪನಂಬಿಕೆ ಅವರಿಗೆ ಬರಲು ಆರಂಭವಾಯಿತು. ಬರು ಬರುತ್ತ ನಮ್ಮ ನಡುವಿನ ಬಿರುಕು ದೊಡ್ಡದಾಗುತ್ತಲೇ ಹೋಯಿತು. ನಮ್ಮಿಬ್ಬರ ನಡುವಿನ ಅಂತರ ಕಡಿಮೆಯಾಗದೇ ಹೋಗಿದ್ದು ನಿಜಕ್ಕೂ ದುರದೃಷ್ಟಕರ.

ಇದನ್ನೂ ಓದಿ : ಜಾನುಲಿ | ಮಣ್ಣಿನ ಮಗನ ಮನದ ಮಾತು | ನನ್ನ ರಾಜಕಾರಣದ ಆರಂಭದ ದಿನಗಳು 

ಪರಿಣಾಮವಾಗಿ 1985 ರ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರಿಗೆ ವ್ಯಕ್ತಿಗತವಾದ ವರ್ಚಸ್ಸಿತ್ತು ನಿಜ. ಜನಪ್ರಿಯತೆಯೂ ಇತ್ತು. ಅದಕ್ಕೆ ನಮ್ಮಸಣ್ಣ ಕಾಣಿಕೆ ಕೊಡುಗೆಯೂ ಇತ್ತು. ಹಾಗಾಗಿ ಒಂದು ಸಾಮೂಹಿಕ ನಾಯಕತ್ವದ ಪರಿಣಾಮವಾಗಿ, ಸಂಘಟಿತ ಪ್ರಯತ್ನದಿಂದಾಗಿ, ಕಾರ್ಯಕರ್ತರ ದುಡಿಮೆ ಶ್ರಮದಿಂದಾಗಿ 1985ರ ಚುನಾವಣೆಯಲ್ಲಿ ಅಭೂತಪೂರ್ವವಾದಂಥ ಗೆಲುವು ಪಕ್ಷಕ್ಕೆ ಲಭ್ಯವಾಯಿತು. 1983ರಲ್ಲಿ ಅಲ್ಪ ಮತದ್ದಾಗಿದ್ದ ಸರ್ಕಾರ 1985ರಲ್ಲಿ ಜನತಾ ಪಕ್ಷದ ನೇತೃತ್ವದಲ್ಲಿ ಬಹುಮತದ ಸರ್ಕಾರವಾಗಿತ್ತು. ಪ್ರಬಲ ಸರ್ಕಾರವಾಗಿತ್ತು. ಎರಡನೇ ಬಾರಿಯೂ ನಾವು ರಾಮಕೃಷ್ಣ ಹೆಗಡೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆವು. ಆದರೆ, 1984ರ ಲೋಕಸಭೆ ಚುನಾವಣೆ ಸೋಲಿಗೆ ಪಕ್ಷ ಅಧ್ಯಕ್ಷರಾಗಿ ದೇವೇಗೌಡರು ಕಾರಣಕರ್ತರು ಎಂದು ಯಾವ ಪತ್ರಿಕೆಗಳು ಬರೆದಿದ್ದವೋ ಅದೇ ಪತ್ರಿಕೆಗಳು 1985ರ ವಿಧಾನಸಭೆ ಚುನಾವಣೆ ಗೆಲುವಿಗೆ ರಾಮಕೃಷ್ಣ ಹೆಗಡೆ ಅವರ ಜನಪ್ರಿಯತೆಯೇ ಕಾರಣ ಎಂದು ಬರೆದವೇ ಹೊರತು, ಗೆಲುವಿನ ಸಂದರ್ಭದಲ್ಲಿ ಅಧ್ಯಕ್ಷನಾಗಿದ್ದವನು ದೇವೇಗೌಡ ಎಂದು ಯಾವ ಪತ್ರಿಕೆಗಳೂ ಗುರುತಿಸಲಿಲ್ಲ. ಅಂದರೆ ಸೋಲು, ವೈಫಲ್ಯಕ್ಕೆ ಅಧ್ಯಕ್ಷನಾಗಿದ್ದ ದೇವೇಗೌಡ ಕಾರಣ, ಗೆಲುವು ಸಿಕ್ಕಾಗ ಅದೇ ಅಧ್ಯಕ್ಷನಾಗಿದ್ದ ದೇವೇಗೌಡ ಕಾರಣನಲ್ಲ. ರಾಮಕೃಷ್ಣ ಹೆಗಡೆ ಅವರ ಜನಪ್ರಿಯತೆ ಕಾರಣ ಎಂಬರ್ಥದ ವಿಮರ್ಶೆಗಳು ಬಂದವು. ಅದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ, ಎಲ್ಲೋ ಒಂದು ಕಡೆ ರಾಮಕೃಷ್ಣ ಹೆಗಡೆ ಅವರು ಇದು ನನ್ನ ಗೆಲುವು, ನನ್ನ ಜನಪ್ರಿಯತೆಗೆ ಸಿಕ್ಕ ಗೆಲುವು ಎಂದಾಗ ನನ್ನ ಸ್ವಾಭಿಮಾನಕ್ಕೆ ದಕ್ಕೆಯಾಯಿತು.

ರಾಜ್ಯ ರಾಜಕಾರಣದಲ್ಲಿ ಜನಪ್ರಿಯತೆಯ ಮೇರುಗತಿಯಲ್ಲಿ ಸಾಗುತ್ತಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಅದ್ಯಾರು ಅದ್ಯಾವ ರೀತಿಯ ಸಲಹೆ ಸೂಚನೆಗಳನ್ನು ನೀಡಿದರೋ ಏನೋ ರಾಜ್ಯ ರಾಜಕಾರಣದ ಮೇಲೆ ಅವರಿಗೆ ವಾಂಛಲ್ಯ ಕಡಿಮೆಯಾಗುತ್ತಾ ಬಂತು. ರಾಷ್ಟ್ರ ರಾಜಕಾರಣದ ಗೀಳು ಹೆಚ್ಚುತ್ತಾ ಹೋಯಿತು. ಅದರಂತೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಒಂದು ಚಿಮ್ಮುವ ಹಲಗೆಯಂತೆ ಮಾಡಿಕೊಂಡು ತಾವು ರಾಷ್ಟ್ರ ರಾಜಕಾರಣಕ್ಕೆ ಜಿಗಿಯಬೇಕು ಎಂಬ ಪ್ರಯತ್ನಕ್ಕೆ ರಾಮಕೃಷ್ಣ ಹೆಗಡೆಯವರು ಮುಂದಾದರು. ಅವರಿಂದ ಅಂಥ ಪ್ರಯತ್ನಗಳು ಆರಂಭವಾಗುತ್ತಲೇ ರಾಜ್ಯದಲ್ಲಿ ಹತ್ತು ಹಲವು ಹೊಲಸುಗಳು ಘಟಿಸಿದವು.

1983ರಲ್ಲಿ ಜನಪ್ರಿಯ ಕಾರ್ಯಕ್ರಮಗಳೊಂದಿಗೆ, ಎಚ್ಚರಿಕೆಯಿಂದ ನಡೆದು ಹೋಗುತ್ತಿದ್ದ ಸರ್ಕಾರ 1985ರ ಹೊತ್ತಿಗೆ ಸ್ವೇಚ್ಛೆಯ ಹೆಜ್ಜೆಗಳನ್ನು ಇಡಲು ಆರಂಭಿಸಿತು. ಆ ಸಂದರ್ಭದಲ್ಲಿ ನಮ್ಮಂಥ ಹಿರಿಯ ಸಚಿವರು ಅವರ ಅವಕೃಪೆಗೆ, ಅವಗಣನೆಗೆ ಪಾತ್ರರಾಗುತ್ತಾ ಬಂದೆವು. ಹೆಗಡೆ ಅವರ ರಾಷ್ಟ್ರ ರಾಜಕಾರಣದ ತುಡಿತ ಮತ್ತು ಮಿಡಿತಕ್ಕೆ ಪೂರಕವಾಗಿ ಕೆಲ ಪತ್ರಿಕೆಗಳು ಮತ್ತು ಅವರಿಗೆ ಅನುಯಾಯಿಗಳಾಗಿದ್ದ ಕೆಲ ಪರ್ತಕರ್ತರ ಸಮೂಹವೇ ಸೃಷ್ಟಿಯಾಯಿತು. ಆಗ ಹೆಗಡೆ ವಿರುದ್ಧವಾಗಿ ನಾವು ವಾಸ್ತವದ, ಆರೋಗ್ಯಕರ ಸಲಹೆ ನೀಡಿದರೂ ನಮ್ಮನ್ನು ಹೆಗಡೆ ವಿರೋಧಿಗಳೆಂದೂ, ಬ್ರಾಹ್ಮಣ ವಿರೋಧಿಗಳೆಂದೂ ಬಿಂಬಿಸಲಾಗುತ್ತಿತ್ತು ಮತ್ತು ನಮ್ಮನ್ನು ಸೀಮಿತ ಪರಿದಿಗೆ ಕಟ್ಟಿಹಾಕಿ ಕೂಪ ಮಂಡೂಕ ನಾಯಕರೆಂದು, ಒಂದು ಸಮುದಾಯದ ನಾಯಕರೆಂದು ಬಣ್ಣಿಸಲಾಯಿತು. ಇದೆಲ್ಲ ಪಕ್ಷದೊಳಗಿನ ಬೆಳವಣಿಗೆಗಳಾದರೂ ಎಲ್ಲವನ್ನೂ ಸಹಿಸಿಕೊಂಡು ನಾವು ರಾಮಕೃಷ್ಣ ಹೆಗಡೆಯವರಿಗೆ ಅಚಲವಾದ ಬೆಂಬಲಿಗರಾಗಿ, ಜನತಾ ಪಕ್ಷದ ಸರ್ಕಾರವನ್ನು ಕಾಂಗ್ರೆಸ್ಸೇತರ ಸರ್ಕಾರವಾಗಿ ಉಳಿಸಿಕೊಂಡು ಹೋಗಲೆಂದು, ನಮ್ಮದು ಜನಪರ ಸರ್ಕಾರವಾಗಿರಬೇಕೆಂದು ನಾವೂ ಹೊರಟೆವು.

ಆ ಸರ್ಕಾರ ಮಾಡಿದ ಒಳ್ಳೆ ಕೆಲಸಗಳಲ್ಲಿ ಬರೀ ಹೆಗಡೆಯವರು ಮಾತ್ರವಲ್ಲ ನಜೀರ್ ಸಾಬ್ ಅವರ ಕೊಡುಗೆ ಇತ್ತು, ನನ್ನಕೊಡುಗೆ ಇತ್ತು, ಬೊಮ್ಮಾಯಿ ಅವರ ಕೊಡುಗೆ ಇತ್ತು, ರಾಚಯ್ಯ ಅವರ ಕೊಡುಗೆ ಇತ್ತು, ಎಲ್ಲರ ಸಂಘಟಿತ ಕೊಡುಗೆ ಇತ್ತು ಎಂಬುದನ್ನು ನಾನು ಜ್ಞಾಪಿಸಬೇಕಾಗುತ್ತದೆ. ಅಬ್ದುಲ್ ನಜೀರ್ ಸಾಬ್ ಅವರು ತಂದ ಅಧಿಕಾರ ವಿಕೇಂದ್ರೀಕರಣದ ಕಾಯಿದೆಯಿಂದಾಗಿ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ವ್ಯವಸ್ಥೆ ಜಾರಿಗೆ ಬಂತು. ಇವೆಲ್ಲ ಅತ್ಯಂತ ಕ್ರಾಂತಿಕಾರಕ ಬದಲಾವಣೆಗಳು. ಇವೆಲ್ಲವೂ ಹೆಗಡೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ವರ್ಚಸ್ಸು ಪ್ರತಿಷ್ಠೆಹೆಚ್ಚಲು ಕಾರಣವಾಯಿತು. ಆದರೆ, ಅದರಲ್ಲಿ ನಮ್ಮೆಲ್ಲರ ಸಂಘಟಿತ ಪ್ರಯತ್ನವೂ ಇತ್ತು ಎಂಬುದನ್ನು ನಾನು ಇಲ್ಲಿ ಉಲ್ಲೇಖಿಸಲೇ ಬೇಕು. ಇಲ್ಲವಾದರೆ ಇತಿಹಾಸ ತಿರುಚಿದಂತಾಗುತ್ತದೆ, ಸತ್ಯವನ್ನು ಮರೆಮಾಚಿದಂತಾಗುತ್ತದೆ.

ಎಚ್.ಡಿ.ದೇವೇಗೌಡ ಎಸ್ ಬಂಗಾರಪ್ಪ S Bangarappa ರಾಮಕೃಷ್ಣ ಹೆಗಡೆ DeveGowda KannadaPodcast JDS Ramakrishna Hegde ಜೆಡಿಎಸ್ ಎಸ್ ಆರ್ ಬೊಮ್ಮಾಯಿ
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More

ಕೇರಳದಲ್ಲಿ ನಡೆದದ್ದು ಲವ್ ಜಿಹಾದ್ ಅಲ್ಲ, ಪ್ರೇಮ ಪ್ರಕರಣಗಳಷ್ಟೆ ಎಂದ ಎನ್‌ಐಎ

ನಿಷೇಧಿತ ಪೊಲಿಯೋ ಲಸಿಕೆ ಬೆಂಗಳೂರಿನಲ್ಲಿ ಬಳಕೆ? ಕಾಡಲಿದೆಯೇ ಪೊಲಿಯೋ ವೈರಸ್‌

ತಮ್ಮ ರಾಜ್ಯದವರ ಮೇಲಿನ ದಾಳಿ ಬಗ್ಗೆ ಬಿಹಾರ ರಾಜಕಾರಣಿಗಳೇಕೆ ಮಾತನಾಡಿಲ್ಲ?

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪಸರಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?

ರೆಹಾನಾ ಫಾತಿಮಾ ಎಂಬ ನುಂಗಲಾಗದ, ಉಗುಳಲೂ ಆಗದ ಬಿಸಿತುಪ್ಪ!

ಸ್ಟೇಟ್‌ಮೆಂಟ್‌ | ಮೋದಿಯವರ ಆರ್ಥಿಕ ನೀತಿಯಿಂದ ಜನಸಾಮಾನ್ಯನಿಗೆ ದಕ್ಕಿದ್ದೇನು?

ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು