ಕೆಸಿಆರ್‌ಗೆ ತಿರುಗುಬಾಣ ಆಗಲಿದಿಯೇ ವಿಧಾನಸಭೆ ವಿಸರ್ಜನೆಯ ನಿರ್ಧಾರ?
ಆರ್‌ಎಸ್‌ಎಸ್ ನಾಯಕ ಭಾಗವತ್‌ ಅವರ ‘ಉದಾರವಾದಿ’ ಮಾತುಗಳ ಸಂದೇಶವೇನು?
ಬಿಜೆಪಿ ಮಣಿಸಲು ಶಿವಭಕ್ತ ರಾಹುಲ್ ಬ್ರಾಂಡ್ ಮೊರೆಹೋದ ಕಾಂಗ್ರೆಸ್

ಕಲ್ಲಡ್ಕ ಪ್ರಭಾಕರ ಭಟ್‌ ಸಂದರ್ಶನ | ‘ಹಿಂದೂಗಳು ಓಡಿಸೋರೂ ಅಲ್ಲ, ಓಡೋರೂ ಅಲ್ಲ’

ಸಾಮರಸ್ಯ ಜರ್ಝರಿತಗೊಂಡಿರುವ ಕರಾವಳಿಯ ಪರಿಸ್ಥಿತಿ ಸ್ಫೋಟಕ ಸಿಡಿಯುವ ಮುಂಚಿನ ಮೌನದಂತೆ ಗೋಚರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರ ಪ್ರತಿ ಮಾತೂ ಎಲ್ಲರ ಗಮನ ಸೆಳೆಯುವಷ್ಟು ಪ್ರಬಲ. ಕಲ್ಲಡ್ಕ ಪ್ರಭಾಕರ ಭಟ್ ಇಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ

ರಮೇಶ್ ಡಿ ಕೆ

ರಾಜ್ಯ ರಾಜಕಾರಣದಲ್ಲಿ ಪ್ರಸ್ತುತ ರಾಜಕೀಯೇತರವಾಗಿ ಸದ್ದು ಮಾಡುತ್ತಿರುವ ಪ್ರಬಲ ಹೆಸರುಗಳಲ್ಲಿ ಒಂದು ಕಲ್ಲಡ್ಕ ಪ್ರಭಾಕರ ಭಟ್. ಆರೆಸ್ಸೆಸ್ ಅನ್ನು ಕೇವಲ ಒಂದು ಸಾಂಸ್ಕೃತಿಕ ಸಂಘಟನೆಯೆಂದು ನೋಡುವವರಿಗೆ ಮೇಲಿನ ಮಾತು ಸರಿ ಎನಿಸಬಹುದು, ಆದರೆ, ಆರೆಸ್ಸೆಸ್ ಸಂಘಟನೆಯು ಹಿಂದೂ ರಾಷ್ಟ್ರೀಯವಾದದ, ಹಿಂದೂ ರಾಷ್ಟ್ರೀಯ ರಾಜಕಾರಣದ ಚಿಂತನೆಯ ತಾಯಿಬೇರು ಎಂದು ಪರಿಗಣಿಸುವವರಿಗೆ ಮೇಲಿನ ಮಾತು ಸತ್ಯಕ್ಕೆ ದೂರ ಎನಿಸಬಹುದು, ಕಾರಣ ಆರೆಸ್ಸೆಸ್ ಅನ್ನು ರಾಜಕೀಯೇತರ ಸಂಘಟನೆ ಎಂದು ಪರಿಗಣಿಸುವುದು ಅಂಥವರಿಗೆ ಕಷ್ಟ.

ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಶಿಕ್ಷಣ ಸಂಸ್ಥೆಗಳ ಪ್ರವರ್ತಕ ಎಂದು ಗುರುತಿಸಿದರೆ ಅದು ಅವರ ಒಟ್ಟು ವ್ಯಕ್ತಿತ್ವವನ್ನು ಮುಕ್ಕಾಗಿಸಿದಂತೆ. ರಾಷ್ಟ್ರೀಯವಾದದ ಪ್ರಬಲ ಪ್ರತಿಪಾದಕ ಎಂದು ಕರೆಯುವುದು ಅವರ ವ್ಯಕ್ತಿತ್ವಕ್ಕೆ ಹೆಚ್ಚು ಹತ್ತಿರ. ಅವರ ನೇತೃತ್ವದ ಶಿಕ್ಷಣ ಸಂಸ್ಥೆಯ ಪ್ರಮುಖ ಧ್ಯೇಯಗಳಲ್ಲಿ ‘ರಾಷ್ಟ್ರೀಯ ಚಿಂತನೆಯ ಸಂಸ್ಕಾರ ನೀಡುವುದು’ ಬಹುಮುಖ್ಯವಾದದ್ದು ಎನ್ನುವುದು ಈ ಮಾತಿಗೆ ಹೆಚ್ಚು ಪುಷ್ಟಿ ನೀಡುತ್ತದೆ.

ಸಹಿಷ್ಣುತೆ, ಸಾಮರಸ್ಯಗಳು ಜರ್ಝರಿತಗೊಂಡಿರುವ ರಾಜ್ಯದ ಕರಾವಳಿಯ ಪರಿಸ್ಥಿತಿ ಸ್ಫೋಟಕವೊಂದು ಸಿಡಿಯುವ ಪೂರ್ವದ ಮೌನದಂತೆ ಗೋಚರಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರ ಪ್ರತಿಯೊಂದು ಮಾತು, ಕೃತಿ ಅವರ ವಿಚಾರಧಾರೆಗಳನ್ನು ಪ್ರೀತಿಸುವವರು, ಖಂಡತುಂಡವಾಗಿ ವಿರೋಧಿಸುವವರೆಲ್ಲರ ವಿಶೇಷ ಗಮನಕ್ಕೆ ಕಾರಣವಾಗಿದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ವಿಶೇಷವಾಗಿ ಕರಾವಳಿ ಭಾಗದ ಅದರ ಶಾಸಕರು, ಮಂತ್ರಿಗಳು ಹಾಗೂ ಪ್ರಭಾಕರ ಭಟ್ ಅವರ ನಡುವೆ ಎಣ್ಣೆ ಸೀಗೇಕಾಯಿಯ ಸಂಬಂಧವಿದೆ. ಇದಕ್ಕೆ ಪೂರಕವಾಗಿ ರಾಜ್ಯ ಬಿಜೆಪಿಯ ನಾಯಕರು ಪ್ರಭಾಕರ ಭಟ್ ಅವರ ಬೆಂಬಲಕ್ಕೆ ಸದಾ ನಾಮುಂದು, ತಾಮುಂದು ಎಂದು ನಿಂತಿದ್ದಾರೆ. ಇದರ ಪರಿಣಾಮ ಎನ್ನುವಂತೆ, ಕರಾವಳಿಯ ಶಾಂತಿ, ಸುವ್ಯವಸ್ಥೆಯ ಪ್ರಶ್ನೆಗಳು ಉದ್ಭವಿಸಿದಾಗಲೆಲ್ಲ ಎರಡೂ ಬದಿಯಲ್ಲೂ ಮಾತಿನ ಕಿಡಿಗಳು ಹಾರಿವೆ. ವಾದ-ವಿವಾದಗಳು, ಆರೋಪ-ಪ್ರತ್ಯಾರೋಪಗಳು ಸಿಡಿದಿವೆ. ಪ್ರಭಾಕರ ಭಟ್ ಬಂಧನ ಸಾಧ್ಯತೆಯ ಬಗ್ಗೆ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರ ಕೆಲವು ದಿನಗಳ ಹಿಂದೆ ತಾರಕಕ್ಕೇರಿತ್ತು. ತದನಂತರ ಪ್ರಭಾಕರ ಭಟ್ ಅವರ ನೇತೃತ್ವದ ಶಾಲೆಗೆ ಸರ್ಕಾರದಿಂದ ನೀಡಲಾಗುವ ಬಿಸಿಯೂಟ ನಿಲ್ಲಿಸಿದ್ದರ ಬಗ್ಗೆ ಮತ್ತೆ ಸರ್ಕಾರ ಹಾಗೂ ಬಿಜೆಪಿಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಿಚಾರದಲ್ಲಿ ಬಿಜೆಪಿಯು ‘ಮುಷ್ಟಿಅಕ್ಕಿ’ ಅಭಿಯಾನವನ್ನೂ ನಡೆಸಿತು, ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆದ ಸಂಸದೆ ಶೋಭಾ ಕರಂದ್ಲಾಜೆ ಇದರ ನೇತೃತ್ವ ವಹಿಸಿದ್ದರು. ಪ್ರಭಾಕರ ಭಟ್ ಕರಾವಳಿ ಮಟ್ಟಿಗೆ ಬಿಜೆಪಿಯ ಟ್ರಂಪ್ ಕಾರ್ಡ್ ಎಂದು ಆ ಪಕ್ಷದ ಸ್ಥಳೀಯ ನಾಯಕರೇ ಹೇಳುತ್ತಾರೆ.

ಈ ಎಲ್ಲದರ ಹಿನ್ನೆಲೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ತಮ್ಮ ಸುತ್ತಣ ಪರಿಸ್ಥಿತಿಗಳನ್ನು ಹೇಗೆ ವಿವರಿಸಿಕೊಳ್ಳುತ್ತಾರೆ, ಹೇಗೆ ಅರ್ಥೈಸುತ್ತಾರೆ ಎನ್ನುವುದನ್ನು ಅವರದ್ದೇ ಮಾತುಗಳಲ್ಲಿ ‘ದಿ ಸ್ಟೇಟ್’ ನಿಮ್ಮ ಮುಂದಿರಿಸಿದೆ.

ದಕ್ಷಿಣ ಕನ್ನಡದೊಂದಿಗಿನ ನಿಮ್ಮ ಬಾಂಧವ್ಯದ ಮೂಲಕ ಮಾತನ್ನು ಆರಂಭಿಸೋಣ. ಪ್ರಭಾಕರ್ ಭಟ್ ಎನ್ನುವ ಶಕ್ತಿ ಉದ್ಭವಿಸಿದ್ದು ಹೇಗೆ?

ಪ್ರಭಾಕರ್ ಭಟ್ ಸ್ವತಃ ಶಕ್ತಿಯಲ್ಲ. ಆರೆಸ್ಸೆಸ್ ಶಕ್ತಿ. ಆರೆಸ್ಸೆಸ್‌ನ ಅನೇಕ ಕಾರ್ಯಕರ್ತರಲ್ಲಿ ನಾನೂ ಒಬ್ಬ.1940ರಿಂದ ದಕ್ಷಿಣ ಕನ್ನಡದಲ್ಲಿ ಸಂಘ ಬೆಳೆದಿದೆ.

ಸಮಾಜ ಸೇವಕ, ಶಿಕ್ಷಣ ತಜ್ಞ, ಸಂಘಟಕ ಆಗದೆ ಹೋಗಿದ್ದರೆ ಪ್ರಭಾಕರ್ ಭಟ್ ಏನಾಗಿರುತ್ತಿದ್ದರು?

ಸಮಾಜಸೇವೆ ಇಲ್ಲದಿದ್ದರೆ ಶೂನ್ಯವಾಗಿರುತ್ತಿದ್ದೆ. ಸಮಾಜವನ್ನು ಬೆಳೆಸುವಂಥ ಪವಿತ್ರ ಕೆಲಸವನ್ನು ಸಂಘ ಕಲಿಸಿದೆ.

ಬಿಜೆಪಿಯಲ್ಲಿ ನೀವು ಇಷ್ಟಪಡುವ ರಾಜಕಾರಣಿ ಯಾರು ಮತ್ತು ಯಾಕೆ?

ಶ್ಯಾಂಪ್ರಸಾದ್ ಮುಖರ್ಜಿ, ದೀನ್‌ದಯಾಳ್ ಶರ್ಮ, ಅಟಲ್ ಇಷ್ಟದ ರಾಜಕಾರಣಿಗಳು. ಆಡ್ವಾಣಿ ಆಧುನಿಕ ರಾಮ ಎನಿಸಿಕೊಂಡರು. ಮೋದಿ, ಜಗತ್ತೇ ದೇಶವನ್ನು ನೋಡುವಂತೆ ಎತ್ತರಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದು ನಿಮ್ಮ ಬಯಕೆ?

ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ. ಅಮಿತ್ ಶಾರಿಂದ ಈಗಾಗಲೇ ಘೋಷಣೆಯಾಗಿದೆ. ಪಕ್ಷ ನಿರ್ಣಯ ಮಾಡಿಯಾಗಿದೆ.

ಶೋಭಾ ಕರಂದ್ಲಾಜೆ ದಕ್ಷಿಣ ಕನ್ನಡದಿಂದಲೇ ಸ್ಪರ್ಧಿಸುವರಂತೆ? ಆದರೆ ಈ ಬಗ್ಗೆ ಜಿಲ್ಲಾ ಬಿಜೆಪಿಯಲ್ಲಿ ಅಪಸ್ವರ ಎದ್ದಿದೆಯಂತೆ?

ಶೋಭಾ ದಕ್ಷಿಣ ಕನ್ನಡದಿಂದ ಸ್ಪರ್ಧಿಸುವ ಬಗ್ಗೆ ಮಾಹಿತಿ ಇಲ್ಲ. ಶೋಭಾ ಕೂಡ ಇಲ್ಲಿಂದ ಸ್ಪರ್ಧಿಸುವುದನ್ನು ನಿರಾಕರಿಸಿದ್ದರು.

ದಕ್ಷಿಣ ಕನ್ನಡ ಕೋಮುವಾದದ ಪ್ರಯೋಗಶಾಲೆಯಾದದ್ದು ಹೇಗೆ? ಅದಕ್ಕೆ ಕಾರಣಗಳೇನು?

ಹಿಂದೂಗಳು ಕೋಮುವಾದಿಗಳಲ್ಲ. ಅವರು ಎಲ್ಲ ದೇವರ ಆರಾಧಕರು. ಬೇರೆ ಸಮಾಜದ ವ್ಯಕ್ತಿಗಳು ಹಿಂದೂಗಳನ್ನು ನಾಶ ಮಾಡಲು, ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ. ಈ ಪ್ರಯತ್ನಕ್ಕೆ ಅಡ್ಡಿಯಾದಾಗ ಅನ್ಯ ಸಮಾಜದವರು ದಕ್ಷಿಣ ಕನ್ನಡವನ್ನು ಕೋಮುವಾದದ ಪ್ರಯೋಗಶಾಲೆ ಎಂದು ವ್ಯಾಖ್ಯಾನಿಸಿದರು.

ನಿಮ್ಮ ಪ್ರಕಾರ ದೇಶದ್ರೋಹಿ ಯಾರು? ದೇಶಭಕ್ತ ಯಾರು?

ಈ ದೇಶ ಗೆದ್ದಾಗ ಸಂತೋಷಪಡುವವರು ಮತ್ತು ಸೋತಾಗ, ಅಪಮಾನವಾದಾಗ ದುಃಖಪಡುವವರೆಲ್ಲರೂ ದೇಶಭಕ್ತರು. ದೇಶ ಸೋತಾಗ ಸಂಭ್ರಮಿಸುವವರು ದೇಶದ್ರೋಹಿಗಳು.

ನೀವು ಮುಸ್ಲಿಮರ ಮದುವೆಗೂ ಹೋಗುತ್ತೀರಿ, ಇತ್ತ ದಲಿತ ಅರ್ಚಕರಿಂದ ಪೂಜೆಯನ್ನೂ ಮಾಡಿಸುತ್ತೀರಿ. ಆದರೂ ನಿಮ್ಮ ಈ ನಡೆಯನ್ನು ಹಿಂದೂ ಸಮಾಜ ಅನುಸರಿಸುತ್ತಿಲ್ಲ ಎಂಬ ನೋವು ಅನೇಕರಲ್ಲಿದೆ. ಈ ನೋವು, ಕೊರಗು ನಿಮ್ಮಲ್ಲೂ ಇದೆಯೇ?

ಹಿಂದೂ ಸಮಾಜ ತಿದ್ದಿಕೊಳ್ಳಬೇಕು. ನಮ್ಮನ್ನು ಮುಸ್ಲಿಂ ವಿರೋಧಿ, ಕ್ರೈಸ್ತ ವಿರೋಧಿ ಎನ್ನುತ್ತಾರೆ. ಆದರೆ ನಾವು ಯಾರ ವಿರೋಧಿಗಳೂ ಅಲ್ಲ. ಹಿಂದೂ ಸಮಾಜದೊಳಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆರೆಸ್ಸೆಸ್ ಕೆಲಸ ಮಾಡುತ್ತಿದೆ. ಹಿಂದೂಗಳು ಓಡಿಸುವವರೂ ಅಲ್ಲ, ಓಡುವವರೂ ಅಲ್ಲ. ಬೇರೆಬೇರೆ ದೇಶದ ಜನ ನಿರಾಶ್ರಿತರಾಗಿ, ಮತಪ್ರಚಾರಕರಾಗಿ ಇಲ್ಲಿಗೆ ಬಂದಿದ್ದಾರೆ. ಅವರ್ಯಾರನ್ನೂ ಓಡಿಸಲಿಲ್ಲ ನಾವು. ಭಾರಿ ದೊಡ್ಡ ಔದಾರ್ಯ, ವಿಶಾಲತೆಯ ದೃಷ್ಟಿಕೋನ ಹಿಂದೂ ಧರ್ಮದಲ್ಲಿದೆ.

ಆದರೆ ಹಿಂದೂ ಧರ್ಮದ ಔದಾರ್ಯ, ವಿಶಾಲ ಮನೋಧರ್ಮ ಸಂಕುಚಿತಗೊಳ್ಳುತ್ತಿದೆಯಲ್ಲ?

ಹಿಂದೂಗಳು ಹಿಂದೆ ಜಾಗೃತರಾಗಿರಲಿಲ್ಲ. ಹಿಂದೂ ಹುಡುಗಿಯರನ್ನು ಹಾರಿಸಿಕೊಂಡು ಹೋಗುವ ಪರಿಪಾಠವಿತ್ತು. ಆಗ ಹಿಂದೂ ಸಮಾಜ ನಿದ್ರಿಸುತ್ತಿತ್ತು. ಇಂಥದ್ದಕ್ಕೆ ಪ್ರತಿಕ್ರಿಯಿಸುತ್ತಿರಲಿಲ್ಲ.

ಹಿಂದೂ ಧರ್ಮೀಯರೂ ಅನ್ಯಧರ್ಮದವರನ್ನು ಮದುವೆಯಾದ ಉದಾಹರಣೆಗಳಿವೆಯಲ್ಲ? ಆದರೆ ಇದನ್ನು ಯಾಕೆ ನೀವು ಪ್ರಶ್ನಿಸುವುದಿಲ್ಲ?

ಧರ್ಮದ ಒಳಗೆ ಅಂತರ್ಜಾತಿ ವಿವಾಹವಾದರೆ ನಮಗೆ ಸಮಸ್ಯೆಯಿಲ್ಲ. ಅಂತರ್ಜಾತಿ ವಿವಾಹಿತರು ದೇಶಕ್ಕೆ ನಿಷ್ಠರು.

ಬಿಜೆಪಿ ವಿರುದ್ಧ ಟೀಕೆ, ಅಸಮಾಧಾನ ವ್ಯಕ್ತಪಡಿಸುವ ಬದಲು ಆರೆಸ್ಸೆಸ್ ಯಾಕೆ ಸ್ವತಃ ಚುನಾವಣಾ ರಾಜಕಾರಣಕ್ಕೆ ಬರಬಾರದು?

ಮೊದಲಿನಿಂದಲೂ ಆರೆಸ್ಸೆಸ್‌ಗೆ ಚುನಾವಣಾ ರಾಜಕೀಯದಲ್ಲಿ ಆಸಕ್ತಿ ಇಲ್ಲ. ದೇಶಸೇವೆಗೆ ಆರೆಸ್ಸೆಸ್ ಸಾಂಸ್ಕೃತಿಕ  ಹಾದಿ ಹಿಡಿದಿದೆ. ರಾಜಕೀಯ ವ್ಯವಸ್ಥೆ ಅನಿಶ್ಚಿತ, ಸಾಂಸ್ಕೃತಿಕ ವ್ಯವಸ್ಥೆ ಶಾಶ್ವತ.

ಸಂಸದ ನಳಿನ್‌ಕುಮನಾರ್ ಕಟೀಲ್ ಮತ್ತು ನಿಮ್ಮ ನಡುವಿನ ಮುಸುಕಿನ ಗುದ್ದಾಟ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೇಲೆ ಅಡ್ಡಪರಿಣಾಮ ಬೀರಲಿದೆ ಎಂಬ ಮಾತುಗಳಿವೆಯಲ್ಲ?

ಕಟೀಲ್ ಮತ್ತು ನನ್ನ ನಡುವೆ ಯಾವುದೇ ರೀತಿಯ ಮುಸುಕಿನ ಗುದ್ದಾಟ ಇಲ್ಲ. ಅವರ ಎತ್ತಿನಹೊಳೆ ಹೋರಾಟ ಸೇರಿದಂತೆ ಅನೇಕ ಕಾರ್ಯಗಳಿಗೆ ಬೆಂಬಲ ನೀಡಿದ್ದೇನೆ.

ಕಾರ್ಕಳದ ಆರೆಸ್ಸೆಸ್ ಸಭೆಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಮಟ್ಟಹಾಕಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಗುರುತರ ಆರೋಪವಿದೆ. ಇದರಿಂದ ಸಂಘಕ್ಕೆ ಆಗುವ ಅನುಕೂಲಗಳು ಏನು?

ಸಂಘದ ಬೈಠಕ್‌ನಲ್ಲಿ ವ್ಯಕ್ತಿಗತ ಚರ್ಚೆ ನಡೆಸುವುದಿಲ್ಲ. ದಿನೇಶ್ ಅಮಿನ್‌ಮಟ್ಟು ಮುಖ್ಯಮಂತ್ರಿಗಳ ಹೊಗಳುಭಟರು.

ಸರ್ಕಾರ ತಮ್ಮ ಆಡಳಿತದ ಎರಡು ಶಾಲೆಗಳಿಗೆ ಬಿಸಿಯೂಟ ನೀಡಲು ಸಿದ್ಧವಿದ್ದರೂ ತಾವು ಒಪ್ಪುತ್ತಿಲ್ಲವಂತೆ. ಯಾಕೆ?

ಶಾಲೆಗೆ ಬರುತ್ತಿದ್ದ ಕೊಲ್ಲೂರು ಮೂಕಾಂಬಿಕೆಯ ಪ್ರಸಾದವನ್ನು ಮುನ್ಸೂಚನೆ ನೀಡದೆ ನಿಲ್ಲಿಸಿದರು. ಸಿದ್ದರಾಮಯ್ಯ ಬಡಿದುಕೊಳ್ಳುವ ಅಹಿಂದ ವರ್ಗದ ಮಕ್ಕಳೂ ನಮ್ಮ ಶಾಲೆಯಲ್ಲಿದ್ದಾರೆ. ದಂಡಿಸಿದ ನಂತರ ಉಪಚಾರ ಮಾಡುವುದು ಬೇಕಿಲ್ಲ. ಭಿಕ್ಷೆ ಬೇಡಿ ಮಕ್ಕಳಿಗೆ ಅನ್ನ ಕೊಡುತ್ತೇವೆ.

ದೇವಸ್ಥಾನಗಳು ಯಾಕೆ ಸರ್ಕಾರದ ಹಿಡಿತದಲ್ಲಿವೆ?

ಅನ್ಯಧರ್ಮೀಯರಿಗೆ ಇರುವಂತೆ ಹಿಂದೂಧರ್ಮೀಯರಿಗೂ ಮಂಡಳಿ ರಚನೆಯಾಗಲಿ. ದೇವಸ್ಥಾನದ ಹಣವನ್ನು ಸರ್ಕಾರ ಲಪಟಾಯಿಸುತ್ತಿದೆ. ದೇವಸ್ಥಾನಗಳು ಮುಕ್ತವಾಗಿ ಅನ್ನದಾನ, ವಿದ್ಯಾದಾನ ಮಾಡುವಂತಾಗಬೇಕು. ರಾಜಕೀಯದಲ್ಲಿ ಧರ್ಮ ಇರಬೇಕೇ ವಿನಾ ಧರ್ಮದಲ್ಲಿ ರಾಜಕೀಯ ಬೆರೆಯಬಾರದು.

ನಿಮ್ಮನ್ನು ಸಚಿವ ರಮಾನಾಥ ರೈ ಹೀರೋ ಮಾಡುತ್ತಿದ್ದಾರೋ ಅಥವಾ ನೀವೇ ಅವರನ್ನು ಹೀರೋ ಮಾಡುತ್ತಿದ್ದೀರೋ?

ನಾವು ಹೀರೋ ಮಾಡುತ್ತಿರುವುದು ನಮ್ಮ ಸಮಾಜವನ್ನು. ದೇಶವನ್ನು ಹೀರೋ ಮಾಡಲು ಬಲವಾದ ಸಮಾಜ ಕಟ್ಟುತ್ತಿದ್ದೇವೆ. ನಾನು ಹೀರೋ ಆಗುವ ಅಥವಾ ಬೇರೊಬ್ಬರನ್ನು ಹೀರೋ ಮಾಡುವ ಪ್ರಶ್ನೆ ಇಲ್ಲ. ದೇಶವನ್ನು ಝೀರೋ ಮಾಡಲು ಹೊರಟಾಗ ನಾವು ಸೆಟೆದೇಳುತ್ತೇವೆ.

ನಿಮ್ಮ ವಿರುದ್ಧವೇ ಸದಾ ಸೇಡಿನ ರಾಜಕಾರಣ ನಡೆಯುತ್ತದೆ, ನಿಮ್ಮ ವಿರುದ್ಧವೇ ಸದಾ ಪ್ರಕರಣಗಳು ದಾಖಲಾಗುತ್ತವೆ ಎಂಬ ಅಸಮಾಧಾನ ನಿಮಗೆ ಇದೆಯೇ?

ಪ್ರಕರಣಗಳ ಬಗ್ಗೆ ನನಗೆ ತಲೆಬಿಸಿ ಇಲ್ಲ. ಸಂಘ ದಿಕ್ಕುದೆಸೆ ನೀಡಿದೆ, ಅದರಂತೆ ನಡೆಯುತ್ತೇನೆ. ಉಳಿದವರ ಟೀಕೆಯ ಅವಶ್ಯಕತೆ ಇಲ್ಲ.

ದೇಶದ ಮಾಜಿ ಪ್ರಧಾನಿಗಳಾದ ದೇವೇಗೌಡರು ಕೂಡ ನಿಮ್ಮ ಬಂಧನಕ್ಕೆ ಸರ್ಕಾರದ ಮೇಲೆ ಒತ್ತಡ ತಂದರಲ್ಲ?

ದೇವೇಗೌಡರು ಕಾಂಗ್ರೆಸ್ಸಿನ ಮತ್ತೊಂದು ಕೊಂಬೆ. ಕಾಂಗ್ರೆಸ್ಸಿನವರು ಕೂಡ ವೈಚಾರಿಕವಾಗಿ ಕೆಲಸ ಮಾಡುತ್ತಿಲ್ಲ. ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದಿದ್ದರು. ಅವರ ಬಗ್ಗೆ ಕನಿಕರ ಇದೆ. ದೇವೇಗೌಡರು ರಮಾನಾಥ ರೈ ಅವರ ಇನ್ನೊಂದು ರೂಪ ಅಷ್ಟೆ. ನನ್ನನ್ನು ಬಂಧಿಸುವುದು ಏಕೆ ಎನ್ನುವುದನ್ನು ಸ್ಪಷ್ಟಪಡಿಸಲಿ. ದುರ್ದೈವ ಎಂದರೆ, ತುರ್ತುಪರಿಸ್ಥಿತಿ ವೇಳೆ ಆರೆಸ್ಸೆಸ್ ದೇವೇಗೌಡರ ಪರವಾಗಿ ನಿಂತಿತ್ತು. ಹಿಂದೆ ದೇವೇಗೌಡರೇ ಆರೆಸ್ಸೆಸ್ ಅನ್ನು ಹೊಗಳಿದ್ದರು. ಮುಸಲ್ಮಾನರ ಓಟಿಗಾಗಿ ದೇವೇಗೌಡರು ರಮಾನಾಥ ರೈ ಅವರ ಬಾಲಂಗೋಚಿಯಂತೆ ವರ್ತಿಸಿದ್ದಾರೆ. ದೇವೇಗೌಡರು ಮುತ್ಸದ್ಧಿ ಅವರು ಕೆಟ್ಟ ಮಾತುಗಳನ್ನಾಡಬಾರದು. ದೇವರು ಅವರಿಗೆ ಒಳ್ಳೆ ಬುದ್ಧಿ ನೀಡಲಿ.

ಸಿದ್ದರಾಮಯ್ಯ Siddaramaiah ಹಿಂದುತ್ವ Hindutva ಸಂದರ್ಶನ ಕಲ್ಲಡ್ಕ ಕಲ್ಲಡ್ಕ ಪ್ರಭಾಕರ ಭಟ್ ಕೋಮುವಾದ Kalladka Kalladka Prabhakar Bhat RSS Communalism ಆರೆಸ್ಸೆಸ್‌ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದೂರಾಷ್ಟ್ರ Rashtriya Swayamsevaka Sangha Hindu National Modi
ಕೆಸಿಆರ್‌ಗೆ ತಿರುಗುಬಾಣ ಆಗಲಿದಿಯೇ ವಿಧಾನಸಭೆ ವಿಸರ್ಜನೆಯ ನಿರ್ಧಾರ?
ಆರ್‌ಎಸ್‌ಎಸ್ ನಾಯಕ ಭಾಗವತ್‌ ಅವರ ‘ಉದಾರವಾದಿ’ ಮಾತುಗಳ ಸಂದೇಶವೇನು?
ಬಿಜೆಪಿ ಮಣಿಸಲು ಶಿವಭಕ್ತ ರಾಹುಲ್ ಬ್ರಾಂಡ್ ಮೊರೆಹೋದ ಕಾಂಗ್ರೆಸ್
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು