ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ

ಜಾನುಲಿ | ಮಣ್ಣಿನ ಮಗನ ಮನದ ಮಾತು | ನನ್ನ ರಾಜಕಾರಣದ ಆರಂಭದ ದಿನಗಳು 

ರಾಜಕೀಯ ಗುರು ಎ ಜಿ ರಾಮಚಂದ್ರರಾಯರ ಪ್ರೋತ್ಸಾಹದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹೊಳೆನರಸೀಪುರದಲ್ಲಿ ರಾಜಕೀಯ ಜೀವನ ಆರಂಭಿಸಿ, ಚುನಾವಣೆ ಸ್ಪರ್ಧಿಸುವ ಉಮೇದಿನಲ್ಲಿದ್ದರು. ಆದರೆ ಕಾಂಗ್ರೆಸ್ ಟಿಕೆಟು ಸಿಗದೆ, ಪಕ್ಷೇತರರಾಗಿ ಮೊದಲ ಬಾರಿ ವಿಧಾನಸೌಧ ಪ್ರವೇಶಿಸಿದರು

 • ನನ್ನ ಜೀವನದಲ್ಲಿ ಸಾರ್ವಜನಿಕ ಬದುಕು ಹೆಚ್ಚು ಪರಿಣಾಮಕಾರಿಯಾದ ಪಾತ್ರ ವಹಿಸಿದೆ. ಹಾಗಾಗಿ ನನ್ನ ಆತ್ಮಚರಿಚತ್ರೆಯಲ್ಲಿ ರಾಜಕೀಯಕ್ಕೋಸ್ಕರವೇ ಒಂದು ಅಧ್ಯಾಯ ಮೀಸಲಿರಿಸುವುದು ಅಗತ್ಯ, ಅನಿವಾರ್ಯ.
 • ನನ್ನ ಸಾರ್ವಜನಿಕ ಬದುಕು ಬೇರೆ ರಾಜಕಾರಣಿಗಳಿಗೂ ನನಗೂ ಇರುವ ವಿಶೇಷವಾದ ಮತ್ತು ಭಿನ್ನವಾದ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಕೆಲವರಿಗೆ ಸಾರ್ವಜನಿಕ ಬದುಕು ಮತ್ತು ಖಾಸಗಿ ಬದುಕು ಬೇರೆ ಬೇರೆ.
 • ನನ್ನ ಮೇಲೆ ಸಾಮಾನ್ಯವಾಗಿ ಒಂದು ಟೀಕೆ ಇದೆ; “ದೇವೇಗೌಡರು 24 ಗಂಟೆಗಳ ರಾಜಕಾರಣಿ” ಎಂದು. ಇದರಿಂದ ನನಗೇನೂ ಬೇಸರವಿಲ್ಲ.
 • ನಾನು ಜನರ ಮಧ್ಯದಿಂದಲೇ ಬೆಳೆದು ಬಂದೆ. ಹಾಗಾಗಿ ಜನರು, ಸಮಾಜ ಮತ್ತು ನನ್ನ ಕುಟುಂಬವನ್ನು ನಾನೆಂದೂ ಬೇರೆ ಬೇರೆ ಎಂದು ಭಾವಿಸಲೇ ಇಲ್ಲ.
 • ಸಾರ್ವಜನಿಕ ಬದುಕಿನಲ್ಲಿ ನಾನು ಕಂಡುಂಡಂಥ ಕೆಲವು ಸಂಗತಿಗಳಿಂದ ನನ್ನ ಕುಟುಂಬದಲ್ಲಿ ನಾನು ಶಿಸ್ತು, ನಿಷ್ಠುರ ನಿರ್ಧಾರಗಳನ್ನು ಮತ್ತು ನನ್ನ ಮಕ್ಕಳಿಗೆ ತಿಳಿವಳಿಕೆ ನೀಡಿದ್ದೂ ಉಂಟು.
 • ಹಾಗೆಯೇ ನನ್ನ ವೈಯಕ್ತಿಕ ಬದುಕಿನಲ್ಲಿ ನಾನು ರೂಢಿಸಿಕೊಂಡಿರುವ ಶ್ರದ್ಧೆ, ನಂಬಿಕೆ , ದೈವದ ಮೇಲಿನ ಅಪಾರವಾದ ನಂಬಿಕೆ, ಕರ್ಮ ಸಿದ್ಧಾಂತದಲ್ಲಿನ ನಂಬಿಕೆಗಳೆಲ್ಲವೂ ಸಾರ್ವಜನಿಕ ಬದುಕಿನ ನಿರ್ಧಾರಗಳ ಮೇಲೆ ಪ್ರಭಾವ ಬೀರಿವೆ.
 • ನನ್ನ ಖಾಸಗಿ ಬದುಕು, ಸಾರ್ವಜನಿಕ ಬದುಕು ಒಂದಕ್ಕೊಂದು ಪೂರಕ, ಪ್ರೇರಕ, ಕಾರಕವಾಗಿವೆ.
 • ನಾನು ಸಾರ್ವಜನಿಕ ಬದುಕಿಗೆ ಕಾಲಿಟ್ಟಿದ್ದು 1957ರಲ್ಲಿ. ನಮಗೆ ಸ್ವಾತಂತ್ರ್ಯ ಬಂದಿದ್ದು 1947ರಲ್ಲಿ. ಸ್ವಾತಂತ್ರ್ಯ ಬಂದಾಗ ನಾನು ೧೪-೧೫ ವರ್ಷದ ಹುಡುಗ.
 • ಸ್ವಾತಂತ್ರ್ಯ ಬಂದ ಮೇಲೆ ಸರ್ದಾರ್ ವಲ್ಲಭಬಾಯಿ ಪಟೇಲ್ ನೇತೃತ್ವದಲ್ಲಿ ರಾಜಾಶ್ರಯದ ಸಂಸ್ಥಾನಗಳೆಲ್ಲವನ್ನೂ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಯಿತು.
 • ಕೆಲ ಮಂದಿ ಮೈಸೂರು ಸಂಸ್ಥಾನ ರಾಜಾಳ್ವಿಕೆಯ ರಾಜ್ಯವಾಗಿ ಮುಂದುವರಿಯಬೇಕೆಂಬ ಮನಸ್ಸು ಹೊಂದಿದ್ದರು. ಕೆಲವರು ಮೈಸೂರು ಸಂಸ್ಥಾನ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು.
 • ಮೈಸೂರು ಸಂಸ್ಥಾನ ಭಾರತದ ಒಕ್ಕೂಟ ವ್ಯವಸ್ಥೆ ಸೇರಬೇಕೆಂಬ ಹೋರಾಟ ಚಳವಳಿಯಲ್ಲಿ ನಾನೂ ವಿದ್ಯಾರ್ಥಿಯಾಗಿ, ಆದರೆ, ಮೈನರ್ (ಅಪ್ರಾಪ್ತ) ಆಗಿ ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿದ್ದೆ.
 • ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ನನ್ನ ಬಾಲ್ಯಾವಸ್ಥೆಯನ್ನು ನೋಡಿ, ಸಂಜೆವರೆಗೆ ಕೋರ್ಟ್‌ನಲ್ಲಿ ಕೂರಿಸಿ ಆನಂತರ ಬುದ್ಧಿ ಹೇಳಿ ಕಳುಹಿಸಿದ್ದರು.
 • ಆ ದಿನಗಳಲ್ಲೇ ನನ್ನ ಮೇಲೆ ಸಾರ್ವಜನಿಕ ಹೋರಾಟಗಳು, ಚಳವಳಿಗಳು ಪ್ರಭಾವ ಬೀರಿದ್ದವು.
 • ಆದರೆ 1952ರಲ್ಲಿ ಹತ್ತೊಂಬತ್ತು ಇಪ್ಪತ್ತು ವಯಸ್ಸಿನವನಾಗಿದ್ದ ನನಗೆ ರಾಜಕೀಯ ಗುರುಗಳಾಗಿ ಸಿಕ್ಕಿದವರು ಎ ಜಿ ರಾಮಚಂದ್ರರಾಯರು.
 • ಏಕಲವ್ಯನಿಗೆ ದ್ರೋಣಾಚಾರ್ಯರು ಇದ್ದಹಾಗೆ ರಾಮಚಂದ್ರರಾಯರು ನನ್ನ ರಾಜಕೀಯ ಗುರು.
 • ರಾಮಚಂದ್ರ ರಾಯರು 1952ರಲ್ಲಿ ಕೆಂಗಲ್ ಹನುಮಂತಯ್ಯನವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು.
 • ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೊಸತನ ತರಬೇಕು, ಶೈಕ್ಷಣಿಕ ಪರಿಸರ ಆರೋಗ್ಯಪೂರ್ಣವಾಗಿರಬೇಕು, ಗುಣಮಟ್ಟ ಹೆಚ್ಚಾಗಬೇಕು ಎಂಬ ದೃಷ್ಟಿಯಿಂದ ರಾಮಚಂದ್ರ ರಾಯರು ನೀತಿ ಜಾರಿಗೆ ತರಲು ಮುಂದಾಗಿದ್ದರು. ಅದುವರೆಗೂ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವಾಗ ಏಳನೇ ತರಗತಿ ಓದಿರಬೇಕು ಎಂಬ ನಿಯಮವನ್ನು ತೆಗೆದುಹಾಕಿ, ಎಸ್ಎಸ್ಎಲ್‌ಸಿ ಪಾಸಾಗಿರಬೇಕು ಎಂಬ ನಿಯಮ ಜಾರಿಗೆ ತಂದಿದ್ದರು. ಶಿಕ್ಷಣ ಗುಣಮಟ್ಟ ಹೆಚ್ಚಲು ಈ ನಿಯಮ ಸಹಕಾರಿ ಎಂದು ರಾಮಚಂದ್ರ ರಾಯರೂ ಭಾವಿಸಿದ್ದರು.
 • ಆದರೆ, “ಬಡವರು, ಕೆಳಸ್ತರದ ಜಾತಿ ಜನಾಂಗದವರು ಏಳನೇ ತರಗತಿವರೆಗೆ ಓದಿಕೊಂಡು ಶಿಕ್ಷರಾಗುತ್ತಿದ್ದರು. ಆದರೆ, ಹೊಸ ನಿಯಮ ಜಾರಿಗೆ ತಂದು ರಾಮಚಂದ್ರರಾಯರು ಬಡವರ ಹೊಟ್ಟೆ ಮೇಲೆ ಹೊಡೆದರು,” ಎಂದು ಅವರ ವಿರುದ್ಧ ಅಪಪ್ರಚಾರ ನಡೆದು, 1957ರಲ್ಲಿ ಹೊಳೆನರಸೀಪುರ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋತರು.
 • ಈ ನಿಯಮ ಅವರ ರಾಜಕೀಯ ಜೀವನವನ್ನೇ ಕೊನೆಗೊಳಿಸಲು ಕಾರಣವಾಯಿತು. ರಾಜಕಾರಣಿಯೊಬ್ಬ ಸದಾಶಯದಿಂದ ತೆಗೆದುಕೊಳ್ಳುವ ನಿರ್ಧಾರಗಳು ಅವರ ರಾಜಕೀಯ ಜೀವನವನ್ನೇ ನಾಶ ಮಾಡಿಬಿಡಬಹುದು ಎಂಬುದಕ್ಕೆ ರಾಮಚಂದ್ರರಾಯರ ನೀತಿ ಒಂದು ಉದಾಹರಣೆ.
 • ಅಂಥ ಅನೇಕ ಕಠೋರ ಸಂಗತಿಗಳನ್ನು ನನ್ನ ರಾಜಕೀಯ ಹೋರಾಟದಲ್ಲಿ ನಾನು ಕಂಡುಕೊಂಡಿದ್ದೂ ಉಂಟು. ಅದನ್ನು ಉಂಡಿರುವುದೂ ಉಂಟು. ಆದರೆ ಅವೆಲ್ಲವುಗಳಿಂದ ನಾನು ವಿಚಲಿತನಾಗಿಲ್ಲ. ಅಂಥ ಸಂದರ್ಭಗಳು ಬಂದಾಗ ವೈಯಕ್ತಿಕವಾಗಿ ಬೆಲೆ ತೆರಬೇಕಾಗುತ್ತದೆ ಎಂದು ಗೊತ್ತಿದ್ದರೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ನಾನು ಹಿಂಜರಿದಿಲ್ಲ.
 • 1957ರಲ್ಲಿ ರಾಮಚಂದ್ರ ರಾಯರು ಸೋತ ಮೇಲೆ ಮತ್ತೆ ಸ್ಪರ್ಧಿಸಲು ಅವರು ಮನಸ್ಸು ಮಾಡಲಿಲ್ಲ. ಬಹುಶಃ ಆ ಸೋಲು ಅವರ ಮನಸ್ಸಿನ ಮೇಲೆ ಘಾಸಿ ಉಂಟುಮಾಡಿತ್ತು.
 • ನನ್ನ ವಿರುದ್ಧ ಸದಾ ಒಂದು ಟೀಕೆ ಮಾಡಲಾಗುತ್ತದೆ. ದೇವೇಗೌಡರು ಬ್ರಾಹ್ಮಣರ ಧ್ವೇಷಿ. ಜ್ಯೋತಿಷಿಗಳನ್ನು ಜಾಸ್ತಿ ನಂಬುತ್ತಾರೆ. ದೇವೇಗೌಡರು ಕಂಡ ಕಂಡ ದೇವಸ್ಥಾನಗಳಿಗೆ ಹೋಗ್ತಾರೆ. ಹೋಮ ಹವನಗಳನ್ನು ಮಾಡಿಸ್ತಾರೆ ಎಂದು. ಅಂಥ ಮಾತುಗಳಿಗೆ ನೀವೇ ( ಕೃತಿ ಓದುವ ಜನ) ತೀರ್ಪುಗಾರರಾಗುತ್ತೀರಿ.
 • ನನಗೆ ಶೃಂಗೇರಿ ಮಠದ ಬಗ್ಗೆ ವಿಶೇಷವಾದ ಶ್ರದ್ಧಾ ಭಕ್ತಿ ಇದೆ. ಅದಕ್ಕೆ ರಾಮಚಂದ್ರರಾಯರು ಹೇಳಿದ ಒಂದು ಪ್ರಸಂಗವೇ ಕಾರಣ. ನಾನು ಕರ್ಮ ಸಿದ್ಧಾಂತ ಮೇಲೆ ನಂಬಿಕೆ ಹೊಂದಲು ಆ ಪ್ರಸಂಗ ಕಾರಣವಾಯಿತು.
 • ಒಂದು ಸಲ ನಾನು ಅವರ ಮನೆಗೆ ಹೋಗಿದ್ದಾಗ ರಾಮಚಂದ್ರರಾಯರು ತಾವು ಕಣ್ಣಮುಂದೆ ಕಂಡಿದ್ದ ಒಂದು ಪ್ರಸಂಗವನ್ನು ನನಗೆ ಹೇಳಿದರು. ಶೃಂಗೇರಿಯ ಜಗದ್ಗುರುಗಳು ರಾಮಚಂದ್ರ ರಾಯರ ಮನೆಗೆ ಬಂದಿದ್ದು, ಅನಾರೋಗ್ಯದ ನಡುವೆಯೂ ತಮ್ಮ ಪೂಜಾಕಾರ್ಯಗಳಲ್ಲಿ ಭಾಗವಹಿಸಿದ್ದು, ಅನಾರೋಗ್ಯವನ್ನು ದೇಹದಿಂದ ತ್ಯಜಿಸಲು ಸಾಧ್ಯವಿದ್ದರೂ ಸ್ವಾಮೀಜಿ ಅದನ್ನು ಅನುಭವಿಸಿ ನರಳಿದ್ದು, ಅದು ಮಾನವನ ಪೂರ್ವನಿರ್ಧರಿತ ಕರ್ಮಗಳ ಫಲ ಎಂದು ರಾಮಚಂದ್ರರಾಯರಿಗೆ ವಿವರಿಸಿದ್ದು ನನ್ನ ಮೇಲೆ ಪ್ರಭಾವ ಬೀರಿತು.
 • ಆ ಘಟನೆಯನ್ನು ರಾಮಚಂದ್ರ ರಾಯರ ಬಾಯಲ್ಲಿ ಕೇಳಿದ ನಂತರ ಕರ್ಮ ಸಿದ್ದಾಂತದಲ್ಲಿ ನನಗೆ ಬಹಳ ನಂಬಿಕೆ ಬಂದಿತು. ಆ ಘಟನೆ ನಂತರ ಶೃಂಗೇರಿ ಪೀಠದ ಬಗ್ಗೆಯೂ ನನಗೆ ಅಪಾರ ಶ್ರದ್ಧೆ, ಭಯಭಕ್ತಿ ಮೂಡಿಸಿತು.
 • ನಾನು ರಾಜಕೀಯ ಏಳುಬೀಳುಗಳಲ್ಲಿ ಪೆಟ್ಟು ತಿಂದಿದ್ದೇನೆ, ಎದ್ದಿದ್ದೇನೆ, ಬಿದ್ದಿದ್ದೇನೆ. ಅನೇಕ ಸಂಕಷ್ಟ, ದುಃಖ-ದುಮ್ಮಾನ ಉಂಡಿದ್ದೇನೆ. ಅದೆಲ್ಲವೂ ಎದುರಾದಾಗ ಇದು ಯಾವುದೋ ಪೂರ್ವಾಶ್ರಮದ ಫಲ ಎಂದು ಹೇಳುತ್ತೇನೆ. ಹೀಗೆ ಹೇಳಿದರೆ, "ದೇವೇಗೌಡರು ಗೊಡ್ಡು ಪುರಾಣ ಹೇಳುತ್ತಾರೆ," ಎಂದು ಜನ ಮಾತಾಡಿಕೊಳ್ಳುತ್ತಾರೆ.
 • ಡಿವಿಜಿಯವರೂ ಹೇಳುತ್ತಾರೆ, 'ಬದುಕು ಎಂಬುದು ಊಳಿಗವೋ ಕಾಳಗವೊ, ಕೂಳು ಕರೆಯೋ, ಗೋಳು ಕರೆಯೋ, ಬದುಕು ಬಾಳು ಬಾಳದೇ ಬಿಡದು ಮಂಕುತಿಮ್ಮ’ ಎಂದು. ‘ಬದುಕು ಬಾಳು ಬಾಳದೇ ಬಿಡುದು’ ಎಂದರೆ ಅದರರ್ಥ, ನಾನು ನಂಬಿರುವ ಕರ್ಮ ಸಿದ್ದಾಂತವೇ. ಹೀಗಾಗಿ ನಾನು ನನ್ನ ರಾಜಕೀಯ ಏಳುಬೀಳುಗಳಲ್ಲಿ ವಿಕ್ಷಿಪ್ತ ಮನಸಿನವನಾಗಿಲ್ಲ. ನಿರಾಸೆಗೊಂಡಿಲ್ಲ. ಸೋತೆ ಎಂದು ಕಂಗಾಲಾಗಿಲ್ಲ.
 • ನನಗೆ ದೇವರು ಆಯಸ್ಸು ಕೊಟ್ಟಿದ್ದಾನೆ. ಆರೋಗ್ಯ ಕೊಟ್ಟಿದ್ದಾನೆ. ಗುರಿಸಾಧನೆಗೆ ಇದೆಲ್ಲ ಸಿಕ್ಕಿದೆ ಎಂದು ನಾನು ಭಾವಿಸಿದ್ದೇನೆ. ಇದು ಕರ್ಮದ ಫಲ. ನಾನು ಅನುಭವಿಸಬೇಕು. ಸೋಲುತ್ತೇನೋ, ಗೆಲ್ಲುತ್ತೇನೋ. ಆದರೆ ಈ ಹೋರಾಟ ಇದೆಯಲ್ಲ, ಅದು ನಾನು ನಂಬಿರುವ ಕರ್ಮಸಿದ್ದಾಂತದ ಫಲ ಎಂದೇ ನಾನು ಹೋರಾಟ ಮಾಡುತ್ತಿದ್ದೇನೆ.
ಇದನ್ನೂ ಓದಿ : ಜಾನುಲಿ | ‘ನಾನು ಹಿಂದೆ ಸರಿದಿದ್ದರಿಂದಲೇ ರಾಮಕೃಷ್ಣ ಹೆಗಡೆ ಸಿಎಂ ಆದರು’

ಹಠ ಮತ್ತು ಛಲ ಈಗಿನದ್ದಲ್ಲ, ಅದು ನನ್ನ ಹುಟ್ಟುಗುಣ

 • 1957ರ ಚುನಾವಣೆಯ ನಂತರ ನಿಷ್ಕ್ರಿಯರಾಗಿ, ನಿರಾಸಕ್ತರಾಗಿದ್ದ ಎಜಿ ರಾಮಚಂದ್ರರಾಯರು ಅವರ ಉತ್ತರಾಧಿಕಾರಿಯಾಗಿ ನನ್ನನ್ನು ಗುರುತಿಸಿದ್ದರು.
 • ೧೯೬೨ರ ವಿಧಾನಸಭೆ ಚುನಾವಣೆ ಬಂದಾಗ ಹೊಳೆನರಸೀಪುರದ ಟಿಕೆಟ್ಅನ್ನು ನನಗೇ ನೀಡಬೇಕು ಎಂದು ಎಜಿ ರಾಮಚಂದ್ರರಾಯರೂ ಶಿಫಾರಸು ಮಾಡಿದ್ದರು. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದರಿಂದ, ರಾಮಚಂದ್ರರಾಯರ ಮಾನಸಪುತ್ರನಾಗಿದ್ದರಿಂದ ಟಿಕೆಟ್ ಸಿಗುವ ವಿಶ್ವಾಸ ನನಗೂ ಇತ್ತು.
 • ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಎಚ್ ಡಿ ದೇವೇಗೌಡ ಎಂದು ಹೆಸರಿತ್ತು. ಎ ಜಿ ರಾಮಚಂದ್ರರಾಯರ ಆಶೀರ್ವಾದ ಇದ್ದದ್ದರಿಂದ ನಾನು ಗೆದ್ದು ಬರುವ ನಂಬಿಕೆ ಹೊಂದಿದ್ದೆ.
 • ಹೊಳೆನರಸೀಪುರದಲ್ಲಿ ನಾನು ಗಳಿಸಿಕೊಂಡಿದ್ದ ಜನಸಂಪರ್ಕ ಮತ್ತು ವಿಶ್ವಾಸ ಹಣಕ್ಕಿಂತಲೂ ಮಿಗಿಲಾಗಿತ್ತು. ಹೀಗಾಗಿ ಹಣವಿಲ್ಲದಿದ್ದರೂ ಗೆದ್ದು ಬರುತ್ತೇನೆ ಎಂಬ ನಂಬಿಕೆಯಲ್ಲಿದ್ದೆ.
 • ಜನರ ವಿಶ್ವಾಸ ಗೆಲ್ಲಲೂ ಒಂದು ಕಾರಣವಿತ್ತು. ನೆಹರು ಅವರ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ಆಡಳಿತ ಬಲಪಡಿಸಲು ರಾಷ್ಟ್ರೀಯ ವಿಸ್ತರಣಾ ಯೋಜನೆ (ಎನ್ಇಎಸ್-ನ್ಯಾಷನಲ್ ಎಕ್ಸ್ಟೆನ್ಷನ್ ಸ್ಕೀಮ್) ಎಂಬ ಕಾರ್ಯಕ್ರಮ ಜಾರಿಗೆ ತಂದಿತ್ತು. ಅದು ಇಂದಿನ ಪಂಚಾಯತ್ ರಾಜ್ ವ್ಯವಸ್ಥೆಯಂತೇ ಪ್ರಬಲವಾಗಿತ್ತು. ಎಸ್‌ಕೆಡೇ ಎಂಬುವವರು ರಾಷ್ಟ್ರ ಮಟ್ಟದಲ್ಲಿ ಅದರ ನೇತೃತ್ವ ವಹಿಸಿದ್ದರು.
 • ನಮ್ಮ ಕ್ಷೇತ್ರದ ಎನ್ಇಎಸ್ ಸಮಿತಿಯಲ್ಲಿ ನಾನೂ ಸದಸ್ಯನಾಗಿದ್ದೆ. ಎಜಿ ರಾಮಚಂದ್ರರಾಯರನ್ನು ಸೋಲಿಸಿ ಗೆದ್ದಿದ್ದ ಶಾಸಕ ವೀರಪ್ಪ ಅವರು ಅಧಿಕಾರ ನಿಮಿತ್ತ ಸದಸ್ಯರೋ, ಅಧ್ಯಕ್ಷರೋ ಆಗಿದ್ದರು. ಈ ಸಮಿತಿಯ ಸಭೆ ನಮ್ಮ ಕ್ಷೇತ್ರದ ಹಳ್ಳಿಯೊಂದರಲ್ಲಿ ನಡೆದಿತ್ತು. ಅದಕ್ಕೆ ಭಾಗವಹಿಸಲು ಇತರ ಸದಸ್ಯರು ಮತ್ತು ನಾನು ಬಸ್‌ನಲ್ಲಿ ಹೋಗಿದ್ದೆವು. ಆದರೆ, ಅದೇ ಸಮಿತಿಯಲ್ಲಿದ್ದ ಶಾಸಕ ವೀರಪ್ಪ ಅವರು ಸರ್ಕಾರದ ಜೀಪ್‌ನಲ್ಲಿ ಅದೂ ತಡವಾಗಿ ಬಂದಿದ್ದರು. ಅದು ನನಗೆ ಸರಿ ಕಾಣಲಿಲ್ಲ. ಹೀಗಾಗಿ ತುಂಬಿದ ಸಭೆಯಲ್ಲಿ ಜನರು, ಸದಸ್ಯರ ಎದುರೇ ಅವರ ನಡೆಯನ್ನು ಪ್ರಶ್ನಿಸಿದ್ದೆ. ಆಗ ನನಗೆ 24-25 ವರ್ಷವಿರಬಹುದು. ನಾನು ಎದ್ದು ನಿಂತು ದಿಟ್ಟತನದಿಂದ ಪ್ರಶ್ನೆ ಕೇಳುತ್ತಲೇ ಸಾರ್ವಜನಿಕರೆಲ್ಲ ನನಗೆ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದರು. ಶಾಸಕ ವೀರಪ್ಪ ಅವರಿಗೆ ಮುಖಭಂಗವಾಗಿತ್ತು. ಈ ಹುಡುಗ ಗಟ್ಟಿಗನಿದ್ದಾನೆ ಎಂಬ ಭಾವನೆ ಜನರಿಗೆ ಮೂಡಿದ್ದೇ ಆಗ.
 • ಇದೇ ರೀತಿಯ ಹಲವು ಘಟನೆಗಳು, ಜನರೊಂದಿಗಿನ ಬಾಂಧವ್ಯ ನನ್ನ ಮೇಲೆ ಕ್ಷೇತ್ರದಲ್ಲಿ ವಿಶ್ವಾಸ ಮೂಡುವಂತೆ ಮಾಡಿತ್ತು. ಹೀಗಾಗಿ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ನಾನು ಗೆಲ್ಲಲು ಸಾಧ್ಯವಿದೆ ಎಂದು ಭಾವಿಸಿದ್ದೆ.
 • ಕೊನೆಗಳಿಗೆಯಲ್ಲಿ ನಿಜಲಿಂಗಪ್ಪ ಅವರು ಕಾಂಗ್ರೆಸ್ ಪಟ್ಟಿಯಲ್ಲಿದ್ದ ನನ್ನ ಹೆಸರನ್ನು ತೆಗೆದು ಹಾಕಿ ದೊಡ್ಡೇಗೌಡ ಎಂಬುವವರಿಗೆ ಟಿಕೆಟ್ ನೀಡಿದ್ದರು.
 • ಕೂಡಲೇ ಎಜಿ ರಾಮಚಂದ್ರರಾಯರ ಬಳಿ ಹೋದೆ. "ನೋಡಿ… ನನಗೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಆದರೆ, ನಾನು ಕ್ಷೇತ್ರದಲ್ಲಿ ಎಲ್ಲ ತಯಾರಿ ಮಾಡಿಕೊಂಡಿದ್ದೇನೆ. ಹೀಗಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ನಿಮ್ಮ ಅಭಿಪ್ರಾಯ ತಿಳಿಸಿ,” ಎಂದು ಹೇಳಿದೆ.
 • ಅದಕ್ಕೆ ಅವರು, "ನಾನು ನಿಷ್ಠಾವಂತ ಕಾಂಗ್ರೆಸ್ಸಿಗ. ನಿನ್ನ ಆಸೆಗೆ ಅಡ್ಡಿಯಾಗಲಾರೆ. ನಿನ್ನ ಪರ ಪ್ರಚಾರಕ್ಕೂ ಬರಲಾರೆ. ನನ್ನ ಆಶೀರ್ವಾದ ಮಾತ್ರ ನೀಡಬಲ್ಲೆ,” ಎಂದು ನನಗೆ ತಿಳಿಸಿದ್ದರು. ಅವರು ದ್ರೋಣಾಚಾರ್ಯರು, ನಾನು ಏಕಲವ್ಯ ಎಂದೇ ಭಾವಿಸಿಕೊಂಡಿದ್ದ ನಾನು ಅವರ ಆಶೀರ್ವಾದವಷ್ಟೇ ಸಾಕು ಎಂದು ಅಲ್ಲಿಂದ ಹೊರಟು ಬಂದಿದ್ದೆ. ನಂತರ ನಾಮಪತ್ರ ಸಲ್ಲಿಸಲು ತೆರಳಿದೆ.
 • ಆಗ, ದೊಡ್ಡೇಗೌಡರು ನನ್ನನ್ನು ನೋಡಿ, "ಓ ಐದು ದಿನ ಶಾಸಕರು,” ಎಂದು ನನ್ನನ್ನು ಮೂದಲಿಸಿ ಗಹಗಹಿಸಿ ನಕ್ಕರು. ನಾಮಪತ್ರ ಸಲ್ಲಿಕೆಯಿಂದ ಹಿಡಿದು ನಾಮಪತ್ರ ಹಿಂತೆಗೆದುಕೊಳ್ಳುವ ಅವಧಿಯವರೆಗೆ ನಮ್ಮ ಉಮೇದುವಾರಿಕೆ ಇರುತ್ತದೆ. ಅಲ್ಲಿಯವರೆಗಷ್ಟೇ ನಾನು ಶಾಸಕ ಸ್ಥಾನದ ಕನಸು ಕಾಣಬಹುದು ಎಂಬುದು ಅವರ ಭಾವನೆಯಾಗಿತ್ತು.
 • ದೊಡ್ಡೇಗೌಡರ ಆ ಮಾತು ನನ್ನನ್ನು ಚುಚ್ಚಿತ್ತು. ನನ್ನ ಭಾವನೆಗಳನ್ನು ಕೆರಳಿಸಿದವು. ಗೆಲ್ಲಲೇಬೇಕು ಎಂಬ ಹಠ ಮತ್ತು ಛಲ ನನ್ನಲ್ಲಿ ಆವರಿಸಿತು. "ದೇವೇಗೌಡರೆಂದರೆ ಹಠವಾದಿ, ಛಲ ಜಾಸ್ತಿ," ಎಂಬ ಮಾತಿದೆ. ಅದು ಇಂದಿನದಲ್ಲ. ಅದು ನನ್ನ ಹುಟ್ಟುಗುಣ.
 • ಆ ಚುನಾವಣೆಯಲ್ಲಿ ನಾನು 29ರ ಹುಡುಗ. ಹಣವಿಲ್ಲ. ದೇಶದೆಲ್ಲೆಡೆ ಕಾಂಗ್ರೆಸ್ ಪ್ರಬಲವಾಗಿದ್ದ ಕಾಲ. ಜನರೂ ಕಣ್ಣು ಮುಚ್ಚಿ ಕಾಂಗ್ರೆಸ್‌ಗೆ ಮತ ನೀಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಸ್ವಾತಂತ್ರ ಚಳವಳಿಯ ಪ್ರಭಾವ ಇನ್ನೂ ಕಡಿಮೆಯಾಗಿರಲಿಲ್ಲ. ಕಾಂಗ್ರೆಸ್ ಎಂದರೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂಬಷ್ಟರ ಮಟ್ಟಿಗೆ ಪ್ರಭಾವ ಇತ್ತು. ಇಂಥ ಹೊತ್ತಲ್ಲಿ ನನ್ನಂಥ ಹುಡುಗ ಸ್ವತಂತ್ರವಾಗಿ ಗೆಲ್ಲುವುದು ಕಷ್ಟದ ಮಾತಾಗಿತ್ತು.
 • ದೈವದಲ್ಲಿ ಅಪಾರ ನಂಬಿಕೆ ಹೊಂದಿದ್ದ ನಾನು, ಮುಂದೆ ನನ್ನ ಹೋರಾಟ ಹೇಗಿರಬೇಕು? ಗೆಲ್ಲುತ್ತೀನೋ ಇಲ್ಲವೋ ? ನನಗೆ ದೇವರ ಕೃಪೆ ಇದೆಯೋ, ಇಲ್ಲವೋ ಎಂಬುದನ್ನೇ ಮನದಲ್ಲಿ ತುಂಬಿಕೊಂಡು ಮಲಗಿದೆ. ಬೆಳಗಿನ ಜಾವ ನನಗೊಂದು ಕನಸು ಬಿದ್ದಿತ್ತು. ನನ್ನ ಆರಾಧ್ಯ ದೈವ ಮಾವಿನಕೆರೆ ರಂಗನಾಥ ಸ್ವಾಮಿ ಪ್ರತ್ಯಕ್ಷನಾಗಿ ‘ಧೈರ್ಯವಾಗಿ ಹೋಗು ಮಗು’ ಎಂದು ನನಗೆ ಆಶಿರ್ವಾದವಾದ ನೀಡಿದಂತೆ ಭಾಸವಾಯಿತು.
 • ನಂತರ ನನಗೆ ಸೈಕಲ್ ಗುರುತು ಚಿಹ್ನೆಯಾಗಿ ಸಿಕ್ಕಿತ್ತು. ಪ್ರಚಾರ ಕೈಗೊಂಡೆ. ಹಳ್ಳಿ ಹಳ್ಳಿ ಸುತ್ತಿ ಪ್ರಚಾರ ಮಾಡಿದ್ದೆ. ಸೈಕಲ್‌ನಲ್ಲೇ ತೆರಳಿ ಚುನಾವಣೆ ಎದುರಿಸಿದೆ. ಜನರೇ ಹಣ ಕೊಡುತ್ತಿದ್ದರು. ಜನ ಆರತಿ ಎತ್ತಿದರು, ಮುತ್ತಿಟ್ಟರು. ಹಾರೈಸಿದರು.
 • ಕಾಂಗ್ರೆಸ್‌ನಿಂದ ಬಂಡೆದ್ದು ಪಕ್ಷೇತರನಾಗಿ ಸ್ಪರ್ಧೆ ಮಾಡಿದ ಕಾರಣಕ್ಕೆ ನನ್ನನ್ನು ನಿಜಲಿಂಗಪ್ಪನವರು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದರು.
 • ಇದೆಲ್ಲದರ ನಡುವೆ ನಾನು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದೆ. ಅಲ್ಲಿಂದ ನನ್ನ ರಾಜ್ಯ ರಾಜಕಾರಣದ ಬೀಜಾಂಕುರವಾಗಿತ್ತು. ಅದು 1962, ಇದು 2017. ಇಲ್ಲಿಗೆ ನಾನು ರಾಜಕೀಯಕ್ಕೆ ಬಂದು 55 ವರ್ಷವಾಗಿದೆ.
 • ಕಾಂಗ್ರೆಸ್ ಬಲಿಷ್ಠವಾಗಿದ್ದ ಸನ್ನಿವೇಶದಲ್ಲಿ, ಸಮಾಜದಲ್ಲಿ ಅನಕ್ಷರತೆ ಇದ್ದ ಕಾಲದಲ್ಲಿ, ಹಣ ಬಲವಿಲ್ಲದ 29 ವರ್ಷದ ಹುಡುಗ ನಾನು ಆರಿಸಿ ಬಂದಿದ್ದೆ. ಅಂದಿನ ಜನರಲ್ಲಿದ್ದ ರಾಜಕೀಯ ಪ್ರಜ್ಞಾವಂತಿಕೆಯನ್ನು ಮತ್ತು ಇಂದಿನ ಸುಶಿಕ್ಷಿತ ಜನರ ರಾಜಕೀಯ ಪ್ರಜ್ಞಾವಂತಿಕೆಯಲ್ಲಿನ ವ್ಯತ್ಯಾಸಗಳನ್ನು ನನ್ನ ಮೊದಲ ಚುನಾವಣೆಯ ಆಧಾರದಲ್ಲಿ ವಿಶ್ಲೇಷಿಸಬಹುದು.
 • ಶಾಸಕನಾಗಿ ಆಯ್ಕೆಯಾದ ನನಗೆ ಬೆಂಗಳೂರಿಗೆ ಬಂದು ಪ್ರಮಾಣವಚನ ಸ್ವೀಕರಿಸಲೂ ಹಣವಿರಲಿಲ್ಲ. 5 ರುಪಾಯಿ ಸಾಲ ಪಡೆದು, ಬೆಳಗಿನ ಜಾವವೇ ಹೊಳೆನರಸೀಪುರದಿಂದ ಬಸ್ ಹತ್ತಿ ಬೆಂಗಳೂರಿಗೆ ಬಂದು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ್ದೆ.
 • ಮೊದಲ ಅಧಿವೇಶನ ನಡೆಯುತ್ತಿರುವಾಗಲೇ ನನ್ನ ಪತ್ನಿ ಚೆನ್ನಮ್ಮ ಅವರಿಂದ ಕಾಗದ ಬಂದಿತ್ತು. ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಕೂಡಲೇ ಹಣ ಕಳಿಸಿ ಎಂದು ಪತ್ರ ಬರೆದಿದ್ದರು. ಆಗ ವಿರೋಧಪಕ್ಷದ ನಾಯಕರಾಗಿದ್ದ ಶಿವಪ್ಪ ಅವರ ಬಳಿ ಹೋಗಿ, 25 ರೂಪಾಯಿ ಸಾಲ ಮಾಡಿ, ಊರಿಗೆ ಮನಿ ಆರ್ಡರ್ ಮಾಡಿದ್ದೆ.
 • ಶಾಸಕನಾದ ನಂತರ ನನಗೆ ಶಾಸಕರ ಭವನದಲ್ಲಿ ಒಂದು ಕೊಠಡಿ ನೀಡಿದ್ದರು. ಇಬ್ಬರು ಶಾಸಕರಿಗೆ ಒಂದು ಕೊಠಡಿ. ಅದರಲ್ಲೇ ಅಟ್ಯಾಚ್ಡ್ ಬಾತ್‌ರೂಂ ಇರುತ್ತಿತ್ತು. ನನ್ನ ಜತೆಗೆ ಇದ್ದ ಶಾಸಕರಿಗೆ ವಿಪರೀತ ಇಸ್ಪೀಟ್ ಹುಚ್ಚಿತ್ತು. ರಾತ್ರಿ ಇಡೀ ಅವರು ಸ್ನೇಹಿತರೊಂದಿಗೆ ಇಸ್ಪೀಟ್ ಆಡುತ್ತಿದ್ದರಿಂದ ನನಗೆ ನಿದ್ದೆಯೂ ಬರುತ್ತಿರಲಿಲ್ಲ. ಇಸ್ಪೀಟ್‌ನಿಂದ ಹಿಂಸೆಯೂ ಆಗುತ್ತಿತ್ತು.
 • ಹೊಸದಾಗಿ ಶಾಸಕನಾಗಿದ್ದ ನನಗೆ ವಿಧಾನಮಂಡಲದ ಕಾರ್ಯಕಲಾಪಗಳ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಬೆಳಗ್ಗೆ ಕಲಾಪಕ್ಕೆ ಹೋದರೆ ಮುಗಿದಾಗಲೇ ಹೊರಬರುತ್ತಿದ್ದೆ. ಉತ್ತಮ ಸಂಸದೀಯಪಟು ಎನಿಸಿಕೊಳ್ಳುವ ಹಂಬಲ ಇತ್ತು. ಕಲಾಪ ಮುಗಿಸಿ ನನ್ನ ಕೊಠಡಿಗೆ ಬಂದರೆ ನನ್ನೊಂದಿಗಿದ್ದ ಶಾಸಕರ ತಾಪತ್ರಯ ಇತ್ತು. ಅವರ ಇಸ್ಪೀಟ್ ನನಗೆ ಸಮಸ್ಯೆಯಾಗುತ್ತಿತ್ತು. ಆದ್ದರಿಂದ ನಾನು ಸ್ಪೀಕರ್‌ಗೆ ಪತ್ರ ಬರೆದು, ಪ್ರತ್ಯೇಕ ಕೊಠಡಿ ಕೊಡುವಂತೆ ಕೋರಿದೆ. ಆಗ ಅವರು, “ತಮಗೆ ಜನರಲ್ ಹಾಸ್ಟೆಲ್‌ನಲ್ಲಿ ಒಂದು ಪ್ರತ್ಯೇಕ ಕೊಠಡಿ ಕೊಡಿಸುತ್ತೇನೆ. ಆದರೆ ಅದರಲ್ಲಿ ಕಾಮನ್ ಬಾತ್‌ರೂಂ, ಕಾಮನ್ ಟಾಯ್ಲೆಟ್ ಇದೆ, ಒಪ್ಪಿಗೆಯೇ?” ಎಂದು ಕೇಳಿದರು. ನನಗೆ ಪ್ರತ್ಯೇಕ ಕೊಠಡಿ ಸಿಕ್ಕರೆ ಸಾಕು ಎಂದು ಹೇಳಿ ಜನರಲ್ ಹಾಸ್ಟೆಲಿಗೇ ಹೋದೆ.
 • ನನಗೆ ಜನರಲ್ ಹಾಸ್ಟೆಲಿನಲ್ಲಿ 6ನೇ ನಂಬರಿನ ಕೊಠಡಿ ಸಿಕ್ಕಿತ್ತು. ಮುಂದೆ ನಾನು ಸಚಿವನಾಗುವವರೆಗೆ ಅದೇ ರೂಂ ನಂ.6ರಲ್ಲಿಯೇ ನನ್ನ ಐದು ಶಾಸಕಾವಧಿಯನ್ನು ಕಳೆದಿದ್ದೆ. ಜನರಲ್ ಹಾಸ್ಟೆಲಿನ ನಂ.6ರ ಕೊಠಡಿಯನ್ನು ನನ್ನ ಜೀವಮಾನದಲ್ಲಿ ಮರೆಯಲಾರೆ.
 • ನನ್ನ ವಿಧಾನಸಭೆ ಪ್ರವೇಶ ರೋಮಾಂಚನಕಾರಿಯಾದದ್ದು, ಅಪರೂಪದ್ದು. ನನ್ನ ಪಾಲಿಗೆ ಅನಿರೀಕ್ಷಿತ ಕೂಡ. ಮುಂದೆ ನಾನು 12-13 ಚುನಾವಣೆ ಎದುರಿಸಿದ್ದೇನೆ. ಬಹುತೇಕ ಗೆದ್ದಿದ್ದೇನೆ. ಒಂದೆರಡರಲ್ಲಿ ಸೋತಿದ್ದೇನೆ. ಅದೆಲ್ಲಕ್ಕಿಂತ ನನಗೆ 1962ರ ನನ್ನ ಮೊದಲ ಚುನಾವಣೆ ಅವಿಸ್ಮರಣೀಯ. ಅದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More

ಕೇರಳದಲ್ಲಿ ನಡೆದದ್ದು ಲವ್ ಜಿಹಾದ್ ಅಲ್ಲ, ಪ್ರೇಮ ಪ್ರಕರಣಗಳಷ್ಟೆ ಎಂದ ಎನ್‌ಐಎ

ನಿಷೇಧಿತ ಪೊಲಿಯೋ ಲಸಿಕೆ ಬೆಂಗಳೂರಿನಲ್ಲಿ ಬಳಕೆ? ಕಾಡಲಿದೆಯೇ ಪೊಲಿಯೋ ವೈರಸ್‌

ತಮ್ಮ ರಾಜ್ಯದವರ ಮೇಲಿನ ದಾಳಿ ಬಗ್ಗೆ ಬಿಹಾರ ರಾಜಕಾರಣಿಗಳೇಕೆ ಮಾತನಾಡಿಲ್ಲ?

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪಸರಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?

ರೆಹಾನಾ ಫಾತಿಮಾ ಎಂಬ ನುಂಗಲಾಗದ, ಉಗುಳಲೂ ಆಗದ ಬಿಸಿತುಪ್ಪ!

ಸ್ಟೇಟ್‌ಮೆಂಟ್‌ | ಮೋದಿಯವರ ಆರ್ಥಿಕ ನೀತಿಯಿಂದ ಜನಸಾಮಾನ್ಯನಿಗೆ ದಕ್ಕಿದ್ದೇನು?

ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು