ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?
ರಾಜಕೀಯ ಮೇಲಾಟದಿಂದ ವೈಯಕ್ತಿಕ ಲಾಭಕ್ಕೆ ಇಳಿದ ಕಾಂಗ್ರೆಸ್‌ ನಾಯಕರಿಗೆ ಸಿದ್ದು ಮದ್ದೇನು?
ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಜಿಗ್ನೇಶ್ ಮನದ ಮಾತು | ಮೋದಿ ಕಾಲ ಮುಗಿಯಿತು, ಬಿಜೆಪಿ ಹೊಸ ನಾಯಕನ ಹುಡುಕಲಿ

ಈಚೆಗೆ ಗುಜರಾತ್‌ನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಹೊಸ ರಾಜಕೀಯ ಸಾಧ್ಯತೆಯೊಂದನ್ನು ತೆರೆದಿಟ್ಟಿರುವವರು ಜಿಗ್ನೇಶ್ ಮೇವಾನಿ. ಕೋಮು ಸೌಹಾರ್ದ ವೇದಿಕೆಯ ‘ಸೌಹಾರ್ದ ಮಂಟಪ’ ಸಮಾವೇಶದಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರಿಗೆ ಬಂದಿದ್ದಾಗ ‘ದಿ ಸ್ಟೇಟ್’ಗೆ ನೀಡಿದ ಸಂದರ್ಶನವಿದು

ಓಂಕಾರ್ ಪಿ

ಮುಂಬರುವ ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡ್ತೀರಾ?

ಇಲ್ಲ , ನಾನು ಯಾವ ಪಕ್ಷದ ಪರವೂ ಪ್ರಚಾರ ಮಾಡುವುದಿಲ್ಲ. ನನ್ನ ಪ್ರಚಾರ ಏನಿದ್ದರೂ ಅದು ಬಿಜೆಪಿ ವಿರುದ್ಧ. ಅದೇ ನಮ್ಮೆಲ್ಲರ ಮೊದಲ ಶತ್ರು. ಜನರ ಹೋರಾಟಗಳನ್ನು ನಾನು ಬೆಂಬಲಿಸುವೆ. ಜನ ಹೋರಾಟದ ಹಿನ್ನೆಲೆಯಿದ್ದು ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ನನ್ನ ಬೆಂಬಲ ಇದ್ದೇ ಇರುತ್ತದೆ. ಚಳವಳಿಯ ಹಿನ್ನೆಲೆ ಇರುವವರು ಚುನಾವಣೆಗೆ ನಿಲ್ಲುವಂತೆ ನಾನು ಮನವಿ ಮಾಡುವೆ. ತಳಮಟ್ಟದಲ್ಲಿ ಕೆಲಸ ಮಾಡುವವರು, ನೈತಿಕತೆ ಇರುವವರನ್ನು ಆಯ್ಕೆ ಮಾಡುವಂತಾಗಬೇಕು. ಇಂಥ ಅಭ್ಯರ್ಥಿಗಳು ಸ್ಪರ್ಧಿಸಿದ ಕಡೆ ಅಭ್ಯರ್ಥಿಗಳನ್ನು ಹಾಕದಂತೆ ಕಾಂಗ್ರೆಸ್ ಪಕ್ಷವನ್ನು ಮನವೊಲಿಸಬಹುದು. ಎಲ್ಲೆಲ್ಲಿ ಚುನಾವಣೆ ಆಗುತ್ತೋ ಅಲ್ಲೆಲ್ಲ ನಾನು ಪ್ರಚಾರಕ್ಕೆ ಹೋಗುವೆ. ಯಾವ ಪಕ್ಷ ಗೆಲ್ಲುತ್ತೆ ಅನ್ನೋದು ಮುಖ್ಯವಲ್ಲ ನನಗೆ. ಬಿಜೆಪಿಯ ಸೋಲಷ್ಟೆ ಮುಖ್ಯ.

ಕರ್ನಾಟಕದಲ್ಲಿ ಪ್ರಚಾರಕ್ಕೆ ಯಾವಾಗ ಬರ್ತೀರಿ?

ಪ್ರಚಾರಕ್ಕಾಗಿ ಇಲ್ಲಿಗೆ ಬರುತ್ತಿದ್ದೇನೆ. ನಾನು ಸಾಕಷ್ಟು ಜನಪರ ಸಂಘಟನೆಗಳ ಒಡನಾಟ ಹೊಂದಿದ್ದೇನೆ. ಗೌರಿ ಲಂಕೇಶ್ ಮೂಲಕ ಕೂಡ ಅನೇಕರ ಒಡನಾಟ ಪ್ರಾಪ್ತವಾಗಿದೆ. ಮುಂದಿನ ಏಪ್ರಿಲ್‌ ವೇಳೆಗೆ ಒಂದು ವೇದಿಕೆ ಸಿದ್ಧವಾಗಬಹುದು ಎಂದು ಭಾವಿಸುವೆ. ಮುಂದಿನ ಫೆಬ್ರವರಿಯಲ್ಲಿ ಗುಜರಾತ್ ವಿಧಾನ ಸಭೆ ಅಧಿವೇಶನ ಇರುತ್ತೆ. ಅದು ಮುಗಿಯುತ್ತಿದ್ದಂತೆ ನನ್ನ ದೃಷ್ಟಿ ಕರ್ನಾಟಕದ ಕಡೆಯೇ ಹೆಚ್ಚಿರುತ್ತದೆ.

ನರೇಂದ್ರ ಮೋದಿಯನ್ನು ಮುದುಕ ಎಂದು ಜರಿಯುತ್ತೀರಿ. ಮೋದಿ ಬ್ರಾಂಡ್‌ ಮತ್ತು ರಾಹುಲ್‌ ಬ್ರಾಂಡ್‌ ಮಧ್ಯೆ ನಿಮ್ಮ ಆಯ್ಕೆ ಯಾವುದು?

ನನ್ನ ಆಯ್ಕೆ “ವೀ ದ ಪೀಪಲ್‌’’. ಜನ ಸಂಘಟನೆಗಳ ಜೊತೆ ನಾನಿರುತ್ತೇನೆ. ಮೋದಿ ಹಸಿ ಸುಳ್ಳುಗಳನ್ನೇ ಮತ್ತೆ ಮತ್ತೆ ಹೇಳಿ ಬೋರ್ ಹೊಡೆಸುತ್ತಿದ್ದಾರೆ. ಜನರಿಗೆ ನೀಡಿದ ಭರವಸೆಗಳನ್ನು ಅವರು ಈಡೇರಿಸಿಲ್ಲ. ಅವರಿಗೆ ಹೇಳಲು ಮತ್ತೇನೂ ಉಳಿದಿಲ್ಲ. ಮೋದಿ ದಿನಗಳು ಮುಗಿದಿವೆ. ಅವರು ಅಪ್ರಸ್ತುತವಾಗುತ್ತಿರುವ ಈ ಹೊತ್ತಿನಲ್ಲಿ ಪೈಪೋಟಿ ನೀಡಬಲ್ಲಂಥ ಹೊಸ ಮುಖವೊಂದನ್ನು ಬಿಜೆಪಿ ಹುಡುಕಿಕೊಳ್ಳುವುದು ಒಳ್ಳೆಯದು.

ಶೆಹ್ಲಾ, ಕನ್ಹಯ್ಯ ಅವರಂಥ ಯುವ ಹೋರಾಟಗಾರರ ಜೊತೆ ಮಾತನಾಡಿದ್ದೀರಾ?

ಶೆಹ್ಲಾ, ರಶೀದ್, ಕನ್ಹಯ್ಯ ಕುಮಾರ್, ಹಾರ್ದಿಕ್‌ ಪಟೇಲ್‌, ಅಲ್ಪೇಶ್ ಠಾಕೂರ್ ಥರದವರು ಮತ್ತು ಪುಣೆಯ ಎಫ್‌ಟಿಐ ಹುಡುಗರು ಪ್ರಗತಿಪರ ಆಲೋಚನೆಗಳನ್ನು ಹೊಂದಿದ್ದು,ಜನರ ಕಲ್ಪನೆಯನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಜನಹಿತವನ್ನು ಬಯಸುವ; ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ಇವರು ಮುಖ್ಯವಾಹಿನಿ ರಾಜಕೀಯಕ್ಕೆ ಬರುವಂತಾಗಬೇಕು. ದಲಿತರು, ಮುಸ್ಲಿಮರು, ರೈತಾಪಿ ಜನರು ಮತ್ತು ಜನಸಾಮಾನ್ಯರ ಹಿತ ಕಾಯುವವರು ಒಟ್ಟಾಗಬೇಕು. ನಾನು ಈ “ಪ್ಯಾಕೇಜ್‌’’ನೊಂದಿಗೆ ಸದಾ ಇರುತ್ತೇನೆ. ಅವರೆಲ್ಲ ತಮ್ಮ ಹೋರಾಟಗಳಿಗೆ ನನ್ನನ್ನು ಕರೆದಿದ್ದಾರೆ. ಎಲ್ಲರೂ ಒಟ್ಟಾಗಿ 2019 ರಲ್ಲಿ ಬಿಜೆಪಿಯನ್ನು ಸೋಲಿಸಬೇಕು.

ಗುಜರಾತ್‌ನಲ್ಲಿ ಮುಸ್ಲಿಂ ಹಾಗೂ ಯುವಕರ ಏಕತೆ ಹೇಗಿತ್ತು?

ವಡ್ಗಾಂವ್‌ ನಲ್ಲಿ ದಲಿತ-ಮುಸ್ಲಿಂ ಏಕತೆ ಮತ್ತು ನನಗೆ ಅವರ ಒಟ್ಟು ಬೆಂಬಲ ಅಭೂತಪೂರ್ವ ವಾಗಿತ್ತು. ಶೇ.೮೦ ಮಂದಿ ನನ್ನನ್ನು ಬೆಂಬಲಿಸಿದರು. ಅವರಿಗೆ ಬಿಜೆಪಿ ಸೋಲಬೇಕಿತ್ತು. ಅದಕ್ಕಾಗಿ ಜಿಗ್ನೇಶ್ ಮೇವಾನಿಯನ್ನು ಶಾಸನ ಸಭೆಗೆ ಕಳುಹಿಸಿದರು. ಅವರ ಪ್ರೀತಿ,ವಿಶ್ವಾಸ ನನಗಿದೆ. ಮುಸ್ಲಿಂ ಮಹಿಳೆಯರು ನನಗಾಗಿ ಉಪವಾಸ ಮಾಡಿದರು. ಧರ್ಮಗುರುಗಳು ನನ್ನ ಗೆಲುವಿಗೆ ಪ್ರಾರ್ಥಿಸಿದರು.

ಈ ಏಕತೆ ದೇಶಾದ್ಯಂತ ವಿಸ್ತರಿಸಬಹುದು ಎನ್ನಿಸುತ್ತದೆಯೇ?

ಊನಾ ಘಟನೆಯ ನಂತರದ ಬೆಳವಣಿಗೆಗಳು ‘ಜನ ಸಂಘರ್ಷ ಮಂಚ್’ ಹುಟ್ಟಿಗೆ ಕಾರಣವಾದವು. ಈ ಸಂಘಟನೆ ಗಲಭೆಗಳಲ್ಲಿ ಸಂತ್ರಸ್ತರಾದವರ ಪರ ಹೋರಾಟ ನಡೆಸಿತು. ಈ ಏಕತೆ ಅತ್ಯಂತ ಮಹತ್ವದ್ದು. ಶೈಲಾ ರಶೀದ್-ಕನ್ನಯ್ಯ ಕುಮಾರ್ ಮುಂತಾದ ಯುವ ಹೋರಾಟಗಾರರು ಈ ಏಕತೆಯನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುವಂತಾಗಬೇಕು.

ಎಲ್ಲರೂ ಯುವ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಯುವಕನಾಗಿ, ಯುವಜನರ ರಾಜಕೀಯ ಆಲೋಚನೆ, ಒಲವು- ನಿಲುವು ಹೇಗಿರಬೇಕು ಎನ್ನುತ್ತೀರಿ?

ಯುವ ಹೋರಾಟಗಾರರು, ಸಮಾನ ಮನಸ್ಕ ಯುವಕರೆಲ್ಲ ಒಟ್ಟಾಗಿ ಸಮಾನ ವೇದಿಕೆ ನಿರ್ಮಾಣ ಮಾಡಿಕೊಳ್ಳಬೇಕು. ನಾನು ಕನ್ಹಯ್ಯ, ಶೈಲಾ ಮುಂತಾದವರೊಂದಿಗೆಲ್ಲ ಮಾತುಕತೆ ನಡೆಸಿದ್ದೇನೆ. ಮುಂದಿನ ಎರಡು ವಾರದಲ್ಲಿ ದೆಹಲಿಗೆ ಹೋಗಿ ಸಮಾನ ವೇದಿಕೆ ರಚನೆ ಕುರಿತು ಚರ್ಚಿಸುತ್ತೇನೆ. ವಿದ್ಯಾರ್ಥಿ ಸಂಘಟನೆಗಳನ್ನೆಲ್ಲ ಹೆಣೆಯಬೇಕಿದೆ. ಈ ಮೂಲಕವೇ ಬಿಜೆಪಿಯನ್ನು, ಯುವಜನರಿಗೆ ಅದು ಮಾಡುತ್ತಿರುವ ಅನ್ಯಾಯವನ್ನು ಬೆತ್ತಲು ಮಾಡಬೇಕಿದೆ. ವರ್ಷಕ್ಕೆ ೨ಕೋಟಿ ಉದ್ಯೋಗ ನೀಡುತ್ತೇವೆಂದು ಹೇಳಿ ಮೋಸ ಮಾಡಿದ್ದಾರೆ. ಭರವಸೆ ನೀಡಿದಂತೆ ಆಗಿದ್ದರೆ ೪ ವರ್ಷದಲ್ಲಿ ೮ ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಅದರ ಶೇ.ಅರ್ಧದಷ್ಟೂ ಈಡೇರಿಲ್ಲ. ಮೋದಿ ಜನಸಾಮಾನ್ಯರ ಜೀವನದ ಕುರಿತು ಯೋಚಿಸುವುದಿಲ್ಲ. ಯುವಕರ ಕನಸು, ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ಮೋದಿ ದೇಶವನ್ನು ವಂಚಿಸುತ್ತಿದ್ದಾರೆ. ಯುವಜನರನ್ನಂತೂ ಹೆಚ್ಚೇ ಮೋಸಗೊಳಿಸಿದ್ದಾರೆ.

ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ದಲಿತೇತರರ ಮತಗಳನ್ನು ಪಡೆದು ಗೆದ್ದವರು ದಲಿತರ ಸಮಸ್ಯೆಗಳ ಬಗ್ಗೆ, ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತಂತೆ ಗಟ್ಟಿಯಾಗಿ ಮಾತನಾಡುವುದಿಲ್ಲ ಯಾಕೆ?

ಹೌದು, ಗೆದ್ದ ನಂತರ ಮಾತನಾಡುವವರು ಕಡಿಮೆ. ದಲಿತೇತರರ ಬೆಂಬಲ ಕಳೆದಕೊಳ್ಳುವ ಭೀತಿ ಅದಕ್ಕೆ ಕಾರಣ. ರಾಜಕೀಯವೇ ಹಾಗೆ. ನನ್ನ ವಿಷಯದಲ್ಲೂ ಹಾಗಾಗಬಹುದು. ಆದರೆ,ಸೋತರೂ ಚಿಂತೆಯಿಲ್ಲ. ನಾನು ಮೌನವಾಗಿರಲು ಬಯಸುವುದಿಲ್ಲ. ಮಾತನಾಡುತ್ತಲೇ ಇರುತ್ತೇನೆ.

ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ದಲಿತರಲ್ಲೂ ‘ಸ್ಪೃಶ್ಯ’ರನ್ನು ಅಭ್ಯರ್ಥಿಗಳನ್ನಾಗಿಸಿ, ಇತರರ ಬೆಂಬಲ ಪಡೆದು ಮೀಸಲು ಕ್ಷೇತ್ರಗಳಲ್ಲಿ ಗೆದ್ದಿತ್ತು?

ಬಿಜೆಪಿ ಉಳ್ಳವರ, ಮೇಲುಜಾತಿಯವರ ಪಕ್ಷ. ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುವವರಿಗೆ ಜಾತಿಯ ಕಾರಣಕ್ಕೆ ಹೆಚ್ಚು ಹೊರೆ, ಸವಾಲುಗಳಿರುತ್ತವೆ. ಆತ ಪ್ರತಿ ಮತದಾರರ ಮನ ಗೆಲ್ಲಬೇಕಿರುತ್ತದೆ. ತುಸು ಜಾಣ್ಮೆಯಿಂದ ಹೆಜ್ಜೆ ಇಟ್ಟು, ಇದೆಲ್ಲವನ್ನೂ ನಿರ್ವಹಿಸಬೇಕಾಗುತ್ತದೆ.

ಕರ್ನಾಟಕದಲ್ಲಿಯೂ ದಲಿತ-ಮುಸ್ಲಿಂ ಮತ ಸಮೀಕರಣ ಸಾಧ್ಯ ಎನ್ನಿಸುತ್ತಾ?

ಸಾಧ್ಯವಾಗಬಹುದು. ದಲಿತ-ಮುಸ್ಲಿಂ ಒಗ್ಗಟ್ಟು ಇಲ್ಲಿಯೂ ಕೆಲಸ ಮಾಡುತ್ತದೆಂದು ನಾನು ನಂಬುವೆ. ಕರ್ನಾಟಕದಲ್ಲಿ ಯುವಶಕ್ತಿ ಇದೆ. ಅವರೆಲ್ಲರ ಒಗ್ಗೂಡುವಿಕೆಗೆ ಮಹತ್ವವಿದೆ. ಈ ಒಗ್ಗಟ್ಟು ಇಂದಲ್ಲದಿದ್ದರೂ ಭವಿಷ್ಯದಲ್ಲಿ ಫಲ ನೀಡುತ್ತದೆ. ಚುನಾವಣೆ ದೃಷ್ಟಿಯಲ್ಲಿ ಸದ್ಯಕ್ಕೆ ಮಹತ್ವದ್ದೇನೂ ಆಗದಿದ್ದರೂ ಮುಂದೆ ಒಳ್ಳೆಯ ಫಲಿತಾಂಶ ಹೊರಬರಬಹುದು.

ಕರ್ನಾಟಕದ ಚಳವಳಿಗಳ ಸ್ನೇಹಿತರು ನಿಮ್ಮ ಚುನಾವಣಾ ಪ್ರಚಾರಕ್ಕೆ ಬಂದಿದ್ದರಲ್ಲಾ?

ಹೌದು. ಕರ್ನಾಟಕ, ಕೇರಳ,ಪಂಜಾಬ್, ಜಮ್ಮು ಕಾಶ್ಮೀರ್, ದೆಹಲಿ, ಮುಂಬಯಿ ಸಹಿತ ಬೇರೆ ಬೇರೆ ರಾಜ್ಯಗಳಿಂದ ಬಂದು ನನ್ನನ್ನು ಬೆಂಬಲಿಸಿದರು. ಅದು ಒಬ್ಬ ಜಿಗ್ನೇಶ್ ಮೇವಾನಿಗಾಗಿ ಅಲ್ಲ. ಎಲ್ಲ ಪ್ರಗತಿಪರ ಶಕ್ತಿಗಳ ಗೆಲುವಾಗಬೇಕು ಎಂದು ಹಂಬಲಿಸಿ ಅವರೆಲ್ಲ ಬಂದಿದ್ದರು. ಚುನಾವಣೆಗಾಗಿ ಅಷ್ಟೆ ಅಲ್ಲ. ಕೃಷಿ, ನೀರು ಹಂಚಿಕೆ, ಸೋಲಾರ್ ಶಕ್ತಿ ಮುಂತಾದ ರಚನಾತ್ಮಕ ಕೆಲಸಗಳಿಗಾಗಿಯೂ ಈ ಎಲ್ಲ ಪ್ರಗತಿಪರ ಶಕ್ತಿಗಳು ವಡ್ಗಾಂವ್‌ಗೆ ಬರುತ್ತಿದ್ದರೆ ನಾನು ಹೆಚ್ಚು ಖುಷಿಪಡುತ್ತೇನೆ. ಅವರೆಲ್ಲರ ಬೆಂಬಲ ನನಗೆ ಬೇಕು.

ಗೆಲುವಿನ ನಂತರ ಭವಿಷ್ಯದ ನಿಮ್ಮ ಯೋಜನೆಗಳೇನು? ಯಾವುದಾದರೂ ಪಕ್ಷವನ್ನು ಬೆಂಬಲಿಸುವಿರಾ?

ಇಷ್ಟರಲ್ಲೇ ಮಾಯಾವತಿಯವರನ್ನು ಕಾಣಬೇಕಿದೆ. ಅಖಿಲೇಶ್ ಯಾದವ್‌ ಅವರನ್ನೂ ಬೇಟಿ ಮಾಡುತ್ತೇನೆ. ಮಮತಾ ದೀದಿ ಕೆಲವು ದಿನಗಳ ಹಿಂದೆ ಕರೆ ಮಾಡಿ ಮಾತನಾಡಿದರು. ಹೀಗೆ, ಎಲ್ಲರೂ ಒಟ್ಟು ಸೇರಿ ಕೆಲಸ ಮಾಡಬೇಕಿದೆ.

ಸೌಹಾರ್ದ ಮಂಟಪಕ್ಕಾಗಿ ದೂರದ ಗುಜರಾತ್‌ನಿಂದ ಇಲ್ಲಿಗೆ ಬಂದಿದ್ದೀರಿ. ಯಾವ ಕಾಳಜಿ, ಆಕರ್ಷಣೆ ನಿಮ್ಮನ್ನಿಲ್ಲಿಗೆ ಬರುವಂತೆ ಮಾಡಿತು?

ಹೌದು. ಕೋಮುವಾದಿ ಪಕ್ಷಗಳು ಇಲ್ಲಿ ಕೋಮು ಗಲೀಜನ್ನು ವಿಸ್ತರಿಸುತ್ತಿರುವ ಬಗ್ಗೆ ಸುದ್ದಿಗಳು ಬರುತ್ತಲೇ ಇವೆ. ಅವು ಕರ್ನಾಟಕವನ್ನು ಗುಜರಾತ್ ಮಾಡಲು ಹೊರಟಿವೆ. ಹಿಂದುತ್ವವನ್ನು ವಿಸ್ತರಿಸುವ, ರಕ್ತಸಿಕ್ತಗೊಳಿಸುವ, ಸಮಾಜದ ಸಾಮರಸ್ಯಕ್ಕೆ ಹುಳಿ ಹಿಂಡುವ ಹುನ್ನಾರ ನಡೆಸಿವೆ. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಇದರ ವಿರುದ್ಧ ಧ್ವನಿ ಎತ್ತುತ್ತಲೇ ಇದೆ. ನನ್ನ ಅಮ್ಮ ಗೌರಿ ಲಂಕೇಶ್ ಈ ಸಂಘಟನೆ ಜೊತೆಗಿದ್ದರು. ಕೋಮು ಸೌಹಾರ್ದ ನನಗೆ ಮುಖ್ಯ. ಆದ್ದರಿಂದ ನಾನು ಈ ಸಂಘಟನೆ ಜೊತೆಗಿದ್ದೇನೆ. ನಾವು ಸಂವಿಧಾನದ ಪ್ರಸ್ತಾವನೆಯ ಆಶಯದಂತೆ ಕೆಲಸ ಮಾಡಬೇಕು. ಹಿಂದುತ್ವದ ಹೆಸರಿನಲ್ಲಿ ರಾಜಕೀಯ -ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಹೊರಟವರನ್ನು ಖಂಡಿಸಬೇಕು.

ನಿಮ್ಮ ರಾಜಕೀಯ ಮಹತ್ವಾಕಾಂಕ್ಷೆ ಏನು?

ರಾಜಕೀಯವಾಗಿ ಹೊಸ ಸಾಧ್ಯತೆಗಳನ್ನು ಹುಡುಕುತ್ತಿರುತ್ತೇನೆ. ನಾನೊಬ್ಬ ಹೋರಾಟಗಾರ. ಹಾಗೆಯೇ ಮುಂದುವರಿಯ ಬಯಸುತ್ತೇನೆ. ನನ್ನಂತೆಯೇ ಇತರರನ್ನು ಪ್ರೇರೇಪಿಸಲಿಚ್ಚಿಸುತ್ತೇನೆ. ಶಾಸಕ ಎನ್ನು ಟ್ಯಾಗ್‌ ಅನ್ನು ಹೆಚ್ಚು ಹಚ್ಚಿಕೊಳ್ಳುವುದಿಲ್ಲ. ತಳಸ್ತರದ ಕೆಲಸ ನನಗೆ ಮುಖ್ಯ. ಅದನ್ನು ವಿಸ್ತರಿಸಬಯಸುತ್ತೇನೆ. ಚುನಾವಣಾ ರಾಜಕಾರಣದ ವ್ಯಾಕರಣ ನನಗೆ ಅಷ್ಟೊಂದು ಒಗ್ಗದು. ನೋಡೋಣ ಏನಾಗುತ್ತೋ.

karnataka ಕರ್ನಾಟಕ ಗೌರಿ ಲಂಕೇಶ್ ಗುಜರಾತ್ Politics ರಾಜಕೀಯ Gujarath Jignesh Mevani PM Narendra Modi ಪ್ರಧಾನಮಂತ್ರಿ ನರೇಂದ್ರ ಮೋದಿ ಜಿಗ್ನೇಶ್ ಮೇವಾನಿ Gowri Lankesh
ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?
ರಾಜಕೀಯ ಮೇಲಾಟದಿಂದ ವೈಯಕ್ತಿಕ ಲಾಭಕ್ಕೆ ಇಳಿದ ಕಾಂಗ್ರೆಸ್‌ ನಾಯಕರಿಗೆ ಸಿದ್ದು ಮದ್ದೇನು?
ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು