ಬೆಳಗಾವಿ ಅಧಿವೇಶನದಲ್ಲಿ ಇದ್ದಾಗಲೇ ಬೆಂಗಳೂರಿನಲ್ಲಿ ಕಾರು ಬಳಸಿದ 27 ಶಾಸಕರು!

ಬೆಳಗಾವಿಯಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಅಧಿವೇಶನಕ್ಕೆ ಹಾಜರಾಗಿದ್ದ ಶಾಸಕರು (ವಿಧಾನಸಭೆ ಸದಸ್ಯರು) ಅದೇ ದಿನಗಳಂದು ಬೆಂಗಳೂರಿನ ಶಾಸಕರ ಭವನದಲ್ಲಿನ ಕಾರುಗಳನ್ನೂ ಬಳಸಿದ್ದಾರೆ! ಇದು ಹೇಗೆ ಸಾಧ್ಯ? ಇದರ ದಾಖಲೆಗಳನ್ನೀಗ ‘ದಿ ಸ್ಟೇಟ್‌’ ನಿಮ್ಮ ಮುಂದಿಡುತ್ತಿದೆ

ಮಹಾಂತೇಶ್ ಜಿ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನಕ್ಕೆ ಹಾಜರಾಗಿದ್ದ ದಿನಗಳಂದೇ ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕ ಕೆ ಜಿ ಬೋಪಯ್ಯ ಸೇರಿದಂತೆ ಒಟ್ಟು ೨೭ ಮಂದಿ ಶಾಸಕರು ಬೆಂಗಳೂರಿನಲ್ಲಿರುವ ಶಾಸಕರ ಭವನದಲ್ಲಿನ ವಾಹನಗಳನ್ನು ಬಳಸಿರುವುದು ತಿಳಿದುಬಂದಿದೆ.

೨೦೧೭ರ ನ.೧೩ರಿಂದ ೨೪ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಿತ್ತು. ಬೆಳಗಾವಿ ಅಧಿವೇಶನಕ್ಕೆ ಹಾಜರಾಗಿ ವಾಹನ ಭತ್ಯೆ ಪಡೆದಿದ್ದಾರೆ. ವಿಶೇಷ ಎಂದರೆ, ಅದೇ ದಿನದಂದೇ ಬೆಂಗಳೂರಿನ ಶಾಸಕರ ಭವನದಲ್ಲಿನ ವಾಹನಗಳನ್ನು ಶಾಸಕರು ಬಳಸಿರುವುದು ದಾಖಲೆಯಿಂದ ಗೊತ್ತಾಗಿದೆ. ಪಾವತಿ ಆಧಾರದ ಮೇಲೆ ವಾಹನಗಳನ್ನು ಬಳಕೆ ಮಾಡಿದ್ದರೂ ಅಧಿವೇಶನಕ್ಕೆ ಹಾಜರಾದ ದಿನದಂದೇ ಶಾಸಕರ ಭವನದಲ್ಲಿನ ವಾಹನಗಳನ್ನು ಶಾಸಕರು ಹೇಗೆ ಬಳಸಲು ಸಾಧ್ಯ ಎಂಬ ಪ್ರಶ್ನೆಯೂ ಈಗ ಎದುರಾಗಿದೆ.

ಅಧಿವೇಶನಕ್ಕೆ ಹಾಜರಾಗಿದ್ದ ಶಾಸಕರ ಹಾಜರಾತಿ ದಾಖಲೆ, ಹಾಜರಾತಿ ಭತ್ಯೆ ಮತ್ತು ಬೆಂಗಳೂರಿನ ಶಾಸಕರ ಭವನದಿಂದ ವಾಹನಗಳನ್ನು ಬಳಸಿರುವ ಶಾಸಕರ ವಿವರಗಳ ದಿನಾಂಕವಾರು ಪಟ್ಟಿಯನ್ನು ‘ದಿ ಸ್ಟೇಟ್‌’ ಮಾಹಿತಿ ಹಕ್ಕಿನಡಿಯಲ್ಲಿ ಪಡೆದುಕೊಂಡಿದೆ.

ಬೆಳಗಾವಿ ಅಧಿವೇಶನಕ್ಕೆ ಹಾಜರಾಗಿದ್ದ ಶಾಸಕರ ಹಾಜರಾತಿ ದಾಖಲೆ

ಶಾಸಕರ ಭವನದಲ್ಲಿನ ವಾಹನಗಳನ್ನು ಬಳಸಿರುವ ದಿನಾಂಕ ಮತ್ತು ಅಧಿವೇಶನಕ್ಕೆ ಹಾಜರಾಗಿರುವ ದಿನಾಂಕಕ್ಕೆ ಹೋಲಿಸಿ ನೋಡಿದಾಗ, ೨೨೪ ಶಾಸಕರ ಪೈಕಿ ೨೭ ಮಂದಿ ಶಾಸಕರು ವಾಹನಗಳನ್ನು ಬೆಂಗಳೂರಿನಲ್ಲಿ ಬಳಸಿರುವುದು ಗೊತ್ತಾಗಿದೆ. ಇದರಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಪಕ್ಷೇತರ ಶಾಸಕರೂ ಇದ್ದಾರೆ. ಅಧಿವೇಶನಕ್ಕೆ ಹಾಜರಾಗಿದ್ದ ಶಾಸಕರ ಪೈಕಿ ಕೆಲ ಶಾಸಕರು ಹಾಜರಾಗಿದ್ದ ದಿನದಂದೇ ಐದಾರು ಬಾರಿ ವಾಹನಗಳನ್ನು ಬೆಂಗಳೂರಿನಲ್ಲಿ ಬಳಸಿಕೊಂಡಿದ್ದಾರೆ.

ಬೆಳಗಾವಿ ಅಧಿವೇಶನಕ್ಕೆ ಹಾಜರಾಗಿದ್ದ ಶಾಸಕರು ಬೆಂಗಳೂರಿನ ಶಾಸಕರ ಭವನದ ವಾಹನಗಳನ್ನು ಬಳಸಿರುವ ದಾಖಲೆ
ಇದನ್ನೂ ಓದಿ : ಕಾಂಗ್ರೆಸ್‌ ಶಾಸಕರ ವಿರುದ್ಧ ನ್ಯಾಯಾಂಗ ನಿಂದನೆ; ಲೋಕಾ ಆದೇಶ ಪ್ರಶ್ನಿಸಿ ರಿಟ್

ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ದಿನಗಳಲ್ಲಿ ಬೆಂಗಳೂರಿನ ಶಾಸಕರ ಭವನದಲ್ಲಿನ ವಾಹನ ಬಳಸುವ ಸಂಬಂಧ ಇದುವರೆಗೂ ಯಾವುದೇ ನಿಯಮಗಳನ್ನಾಗಲೀ, ಮಾರ್ಗಸೂಚಿಗಳನ್ನಾಗಲೀ ವಿಧಾನಸಭೆ ಸಚಿವಾಲಯ ರೂಪಿಸಿಲ್ಲ ಎಂದು ಗೊತ್ತಾಗಿದೆ.

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಓಂಪ್ರಕಾಶ್‌ ಅವರು ಶಾಸಕರ ಭವನದಲ್ಲಿನ ಕಾರುಗಳ ಬಳಕೆ ಸಂಬಂಧಿಸಿದಂತೆ ಪ್ರಕಟಣೆಯೊಂದನ್ನು ೨೦೧೩ ಫೆ.೧೨ರಂದು ಹೊರಡಿಸಿದ್ದರು. “ಶಾಸಕರ ಭವನದಲ್ಲಿನ ವಾಹನಗಳು ಶಾಸಕರ ಬಳಕೆಗಷ್ಟೇ ಮೀಸಲು. ಶಾಸಕರಿಗೆ ಮೀಸಲಾಗಿರಿಸಿರುವ ವಾಹನ ಸೌಲಭ್ಯವನ್ನು ಅವರುಗಳೇ ಬಳಸಿಕೊಳ್ಳಬೇಕು. ಶಾಸಕರ ಕೋರಿಕೆ ಪತ್ರದ ಆಧಾರದ ಮೇಲೆ ಅವರ ಆಪ್ತ ಸಹಾಯಕರು, ಪರಿಚಯಸ್ಥರು, ಅತಿಥಿಗಳು ಬೆಂಗಳೂರು ನಗರ ಮಾತ್ರವಲ್ಲದೆ, ಹೊರ ಜಿಲ್ಲೆಗಳಲ್ಲೂ ಕಾರು ಬಳಸುತ್ತಿದ್ದಾರೆ. ಶಾಸಕರಿಗಾಗಿ ಇರುವ ವಾಹನಗಳನ್ನು ಶಾಸಕರೇ ಬಳಕೆ ಮಾಡುವುದರಿಂದ ಶಾಸಕರ ಭವನದಲ್ಲಿ ಲಭ್ಯ ಇರುವ ವಾಹನಗಳನ್ನು ಕೋರುವ ಎಲ್ಲ ಶಾಸಕರಿಗೂ ವಾಹನ ಸೌಲಭ್ಯ ಸಮರ್ಪಕವಾಗಿ ಒದಗಿಸಲು ಸಾಧ್ಯ. ಹೀಗಾಗಿ, ಶಾಸಕರಿಗೆಂದೇ ಮೀಸಲಾಗಿರಿಸಿದ ವಾಹನ ಸೌಲಭ್ಯವನ್ನು ಅವರುಗಳೇ ಬಳಸಿಕೊಳ್ಳಬೇಕು. ಅವರ ಆಪ್ತ ಸಹಾಯಕರು, ಅತಿಥಿಗಳಿಗೆ ಶಿಫಾರಸು ಮಾಡಬಾರದು ಹಾಗೂ ವಾಹನಗಳು ದುರುಪಯೋಗವಾಗದಂತೆ ಸಹಕರಿಸಬೇಕು,” ಎಂದು ಪ್ರಕಟಣೆಯಲ್ಲಿ ಓಂಪ್ರಕಾಶ್‌ ಕೋರಿದ್ದರು.

ವಿಧಾನಸಭೆಯ ಅಂದಿನ ಕಾರ್ಯದರ್ಶಿ ಓಂಪ್ರಕಾಶ್‌ ಹೊರಡಿಸಿದ್ದ ಪ್ರಕಟಣೆಯ ಪ್ರತಿ

ಅಧಿವೇಶನಕ್ಕೆ ಹಾಜರಾದ ದಿನದಂದೇ ವಾಹನ ಬಳಸಿರುವ ಶಾಸಕರು

 1. ಅಬ್ಬಯ್ಯ ಪ್ರಸಾದ್‌
 2. ಹಂಪನಗೌಡ ಬಾದರ್ಲಿ
 3. ಐಹೊಳೆ ದುರ್ಯೋಧನ್‌ ಮಹಾಲಿಂಗಪ್ಪ
 4. ಭೀಮಾನಾಯಕ್‌
 5. ಮಾಜಿ ಸ್ಪೀಕರ್‌ ಕೆ ಜಿ ಬೋಪಯ್ಯ
 6. ಚೆಲುವರಾಯಸ್ವಾಮಿ
 7. ಬಿ ಬಿ ಚಿಮ್ಮನಕಟ್ಟಿ
 8. ದೊಡ್ಡನಗೌಡ ಪಾಟೀಲ್‌
 9. ಮಾಲಕರೆಡ್ಡಿ
 10. ಶಿವರಾಜ್‌ ಪಾಟೀಲ್‌
 11. ಗೋವಿಂದ ಕಾರಜೋಳ
 12. ಸಾ ರಾ ಮಹೇಶ್‌
 13. ಮಲ್ಲಿಕಾರ್ಜುನ ಸಿದ್ದರಾಮಪ್ಪ ಖೂಬಾ
 14. ಮಾನಪ್ಪ ಡಿ ವಜ್ಜಲ್‌
 15. ಮೊಹಿದ್ದೀನ್‌ ಬಾವಾ
 16. ಪಿಳ್ಳ ಮುನಿಸ್ವಾಮಪ್ಪ
 17. ಪ್ರಸನ್ನಕುಮಾರ್
 18. ರಾಘವೇಂದ್ರ ಹಿಟ್ನಾಳ್‌
 19. ಟಿ ರಘುಮೂರ್ತಿ
 20. ರಾಜಾ ವೆಂಕಟಪ್ಪ ನಾಯಕ್
 21. ರಾಜಶೇಖರ್‌ ಪಾಟೀಲ್‌
 22. ಪಿ ರಾಜೀವ್‌
 23. ರಾಮಕೃಷ್ಣ ಜಿ
 24. ಶಿವಾನಂದ ಎಸ್‌ ಪಾಟೀಲ್‌
 25. ವಸಂತ ಬಂಗೇರ
 26. ಕೆ ಎಸ್ ಪುಟ್ಟಣ್ಣಯ್ಯ
 27. ವಿನಿಷಾ ನಿರೋ

ಹಾಗೆಯೇ, ಮಾಜಿ ಸ್ಪೀಕರ್‌ ಕೆ ಜಿ ಬೋಪಯ್ಯ (ವಾಹನ ಸಂಖ್ಯೆ: ಕೆಜಿ ೦೧ ಜಿ-೫೭೦೬, ಕೆಜಿ ೦೧-೫೫೬೯, ಕೆಜಿ೦೧ ೫೫೭೩) ಅಬ್ಬಯ್ಯ ಪ್ರಸಾದ್‌ (ಕೆಎ ೦೧ ಜಿ-೫೫೭೧, ಕೆಎಜಿ ೦೧-೪೯೨೯) ಪ್ರಸನ್ನಕುಮಾರ್ (ಕೆಎಜಿ ೦೧-೪೯೩೦, ಕೆಎಜಿ ೦೧-೫೫೭೩, ಕೆಎಜಿ ೦೧-೫೫೫೯, ಕೆಎಜಿ ೦೧ ೫೫೬೯), ಚೆಲುವರಾಯಸ್ವಾಮಿ, ಬಿ ಬಿ ಚಿಮ್ಮನಕಟ್ಟಿ, ಶಿವಾನಂದ ಎಸ್‌ ಪಾಟೀಲ್‌, ಗೋವಿಂದ ಕಾರಜೋಳ, ಸಾ ರಾ ಮಹೇಶ್, ಮಲ್ಲಿಕಾರ್ಜುನ ಖೂಬಾ, ಮೊಹಿದ್ದೀನ್‌ ಬಾವಾ, ರಾಘವೇಂದ್ರ ಹಿಟ್ನಾಳ್‌, ರಾಮಕೃಷ್ಣ ಜಿ, ಶಿವರಾಜ್‌ ಪಾಟೀಲ್‌ ಅವರು ಅತ್ತ ಬೆಳಗಾವಿಯಲ್ಲಿ ಅಧಿವೇಶನಕ್ಕೆ ಹಾಜರಾದ ದಿನದಂದೇ ಇತ್ತ ಬೆಂಗಳೂರಿನಲ್ಲಿ ೨,೩,೪, ೫ ವಾಹನಗಳನ್ನು ಬಳಸಿರುವುದು ಗೊತ್ತಾಗಿದೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ದಿನಗಳಲ್ಲಿ ಮುಖ್ಯ ಕಾರ್ಯದರ್ಶಿಯೂ ಒಳಗೊಂಡಂತೆ ಸರ್ಕಾರದ ಉನ್ನತ ಅಧಿಕಾರಿಗಳು ಮಾತ್ರವಲ್ಲ ಇಡೀ ಸರ್ಕಾರವೇ ಅಲ್ಲಿರುತ್ತದೆ. ಹೀಗಿರುವಾಗ ಶಾಸಕರು ಅಧಿವೇಶನಕ್ಕೆ ಹಾಜರಾದ ದಿನದಂದೇ ಬೆಂಗಳೂರಿನಲ್ಲಿಯೂ ವಾಹನ ಬಳಸಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನು, ಬೆಳಗಾವಿಯಲ್ಲಿ ಇಡೀ ಆಡಳಿತ ವ್ಯವಸ್ಥೆಯೇ ಇರುವಾಗ ಬೆಂಗಳೂರಿನಲ್ಲಿರುವ ಶಾಸಕರ ಭವನದಲ್ಲಿನ ವಾಹನಗಳನ್ನು ಬಳಸುವ ಔಚಿತ್ಯವಾದರೂ ಏನು ಎಂಬ ಪ್ರಶ್ನೆಯೂ ಕೇಳಿಬಂದಿವೆ.

“ಬೆಂಗಳೂರಿನ ಶಾಸಕರ ಭವನದಲ್ಲಿನ ವಾಹನ ಬಳಸಿದ ನಂತರ ಆಯಾ ಶಾಸಕರೇ ಲಾಗ್‌ ಬುಕ್‌ನಲ್ಲಿ ಸಹಿ ಮಾಡಬೇಕು. ಒಂದು ವೇಳೆ ಲಾಗ್‌ ಬುಕ್‌ನಲ್ಲಿ ಸಹಿ ಮಾಡಿದ್ದೇ ನಿಜವಾದಲ್ಲಿ ಆ ಶಾಸಕರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನಕ್ಕೆ ಹಾಜರಾಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸುತ್ತಾರೆ ವಿಧಾನಸಭೆ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು.

ಬೆಳಗಾವಿಯಲ್ಲಿ ಅಧಿವೇಶನಕ್ಕೆ ಹಾಜರಾಗುವ ಶಾಸಕರು ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದಲ್ಲಿ ಅಂಥವರಿಗೆ ದಿನವೊಂದಕ್ಕೆ ೫,೦೦೦ ರು. ವಾಹನ ಭತ್ಯೆ ನೀಡಲಾಗುತ್ತದೆ. ಬೆಳಗಾವಿಯಲ್ಲಿ ವಾಸ್ತವ್ಯ ಹೂಡುವ ಶಾಸಕರಿಗೂ ದಿನವೊಂದಕ್ಕೆ ೨,೫೦೦ ರು.; ಬೆಳಗಾವಿಯ ಶಾಸಕರಿಗೂ ಇದೇ ಮೊತ್ತ ನೀಡಲಾಗುತ್ತದೆ. ಅದೇ ರೀತಿ, ವಾಸಸ್ಥಳದಿಂದ ನೇರವಾಗಿ ಬೆಳಗಾವಿಗೆ ಬರುವ ಇತರ ಶಾಸಕರಿಗೆ ಪ್ರತಿ ಕಿಮೀಗೆ ೨೫ ರು. ಅಲ್ಲದೆ ಪ್ರತ್ಯೇಕ ವಾಹನ ಭತ್ಯೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಕರ್ನಾಟಕ ಸರ್ಕಾರ Government of Karnataka ಚಳಿಗಾಲದ ಅಧಿವೇಶನ Winter Session MLA Karnataka Legislative Assembly Secretariat ಕರ್ನಾಟಕ ವಿಧಾನಸಭೆ ಸಚಿವಾಲಯ Belagavi Suvarna Soudha ಬೆಳಗಾವಿ ಸುವರ್ಣ ವಿಧಾನಸೌಧ Misuse of Vehicle ವಾಹನ ದುರ್ಬಳಕೆ ಶಾಸಕರು
ತಂತ್ರಗಾರಿಕೆಯಿಂದ ರಾಜಕಾರಣಿಯಾಗಿ ಪದೋನ್ನತಿ ಪಡೆದ ಪ್ರಶಾಂತ್‌ ಕಿಶೋರ್‌
ಕುಮಾರಸ್ವಾಮಿ ಕಿಂಗ್‌ಪಿನ್‌ ಆರೋಪಕ್ಕೆ ಬಿಜೆಪಿಯ ಮಾಸ್ಟರ್‌ಪಿನ್‌ ಪ್ರತ್ಯಾರೋಪ
ಡಿ ಕೆ ಶಿವಕುಮಾರ್‌ ಪದೇಪದೇ ಅತಿರೇಕದ ಹೇಳಿಕೆಗಳಿಗೆ ಮೊರೆ ಹೋಗುವುದೇಕೆ?
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು