ವ್ಯಕ್ತಿ ಆರಾಧನೆಯಲ್ಲಿ ಸಿಲುಕಿದ ಬಿಜೆಪಿಗೆ ಬುದ್ಧಿ ಕಲಿಸಲು ಹೊರಟರೇ ಭಾಗವತ್‌?

ಬಿಜೆಪಿ ಹಿಂದೂ ಮತ ಧ್ರುವೀಕರಣದ ತಂತ್ರಕ್ಕಷ್ಟೇ ಸೀಮಿತವಾಗದೆ, ಅಧಿಕಾರ ರಾಜಕಾರಣದ ಸಲುವಾಗಿ ಜಾತಿ ಸಮೀಕರಣಗಳ ರಾಜಕೀಯದಲ್ಲಿಯೂ ತೊಡಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಸಂಘವು ಸಮಾನ ಶತ್ರುವಿನ ಪರಿಕಲ್ಪನೆಯಿಂದ ದೂರ ಸರಿದು ಎಲ್ಲರನ್ನೂ ಒಳಗೊಳ್ಳುವ ಮಾತನಾಡುತ್ತಿದೆ

ನಟರಾಜು ವಿ

ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂರು ದಿನಗಳ ಸಮಾವೇಶದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್ ಅವರು ಹಿಂದುತ್ವದ ಕುರಿತಾಗಿ ಮಾಡಿರುವ ವ್ಯಾಖ್ಯಾನದ ಬಗ್ಗೆ ಸಾಕಷ್ಟು ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ. ಸಂಘ ಈವರೆಗೆ ಪ್ರತಿಪಾದಿಸಿಕೊಂಡು ಬಂದ ಗೋಳವಾಲ್ಕರ್‌ ಪ್ರಣೀತ ಹಿಂದುತ್ವವಾದಕ್ಕೆ ತಿಲಾಂಜಲಿ ನೀಡುವಂತೆ ಮಾತನಾಡಿರುವ ಭಾಗವತ್‌ ಅವರು, ಹಿಂದುತ್ವದ ಪರಿಕಲ್ಪನೆಯನ್ನು ಬಹುತ್ವದ ಪರಿಕಲ್ಪನೆಯೊಂದಿಗೆ ಸಮೀಕರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಹೆಡಗೇವಾರ್, ಗೋಳವಾಲ್ಕರ್‌ ಅವರಿಗಿಂತ ಗಾಂಧೀಜಿ ಹಾಗೂ ರಾಧಾಕೃಷ್ಣನ್‌ ಅವರ ಹಿಂದುತ್ವದ ವ್ಯಾಖ್ಯಾನಗಳಿಗೆ ಮೊರೆಹೋಗಿದ್ದಾರೆ. ಭಾಗವತ್‌ ಅವರ ಈ ನಡೆ ಸಹಜವಾಗಿಯೇ ವಿವಿಧ ಆಯಾಮಗಳಿಂದ ಚರ್ಚೆಗೊಳಪಟ್ಟಿದೆ.

ಸಂಘದ ಈ ನಡೆಯ ಹಿಂದೆ ಕೇವಲ ಸಾಮಾಜಿಕ, ಸಾಂಸ್ಕೃತಿಕ ಕಾರಣಗಳಷ್ಟೇ ಅಲ್ಲ, ಖಚಿತ ರಾಜಕೀಯ ಕಾರಣಗಳಿವೆ ಎನ್ನುವ ಬಲವಾದ ಅನಿಸಿಕೆ ವ್ಯಕ್ತವಾಗಿದೆ. ಇದೇ ವೇಳೆ, ಸಂಘ ಹಾಗೂ ಬಿಜೆಪಿ ನಡುವೆ ಇದಾಗಲೇ ಕೆಲ ವರ್ಷಗಳಿಂದ ನಡೆಯುತ್ತಿರುವ ಹಗ್ಗಜಗ್ಗಾಟದ ಮುಂದುವರಿಕೆಯ ಭಾಗವಾಗಿಯೇ ಭಾಗವತ್‌ ಅವರ ಮಾತುಗಳನ್ನೂ ನೋಡಲಾಗುತ್ತಿದೆ. ನರೇಂದ್ರ ಮೋದಿಯವರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಂಘದ ಪ್ರಭಾವ ಅತ್ಯಲ್ಪ ಎನಿಸುವ ಮಟ್ಟದಲ್ಲಿದೆ. ಪಕ್ಷದೊಳಗೆ ಮೋದಿ ಹಾಗೂ ಅಮಿತ್‌ ಶಾ ಅವರ ಮಾತುಗಳೇ ಅಂತಿಮವಾಗಿವೆ. ಮೂಲತಃ ಸಂಘದೊಳಗೆ ಬಹುಕಾಲವಿದ್ದು, ಆಂತರಿಕವಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಪಕ್ಷ ರಾಜಕೀಯಕ್ಕೆ ಹೊರಳಿದ ಮೋದಿಯವರಲ್ಲಿ ಸಂಘದ ಬಗ್ಗೆ ಪ್ರೇಮ, ಕಟುವಿಮರ್ಶೆಗಳೆರಡೂ ಇವೆ. ಗಮನಾರ್ಹ ಅಂಶವೆಂದರೆ, ‘ಹಿಂದುತ್ವ’, ‘ಹಿಂದೂ ರಾಷ್ಟ್ರೀಯತೆ’, ‘ಬಲಿಷ್ಠ ಹಿಂದೂ ರಾಷ್ಟ್ರ’ದಂತಹ ಸಂಘ ಪ್ರಣೀತ ಪರಿಕಲ್ಪನೆಗಳೇನಿವೆ, ಅವೆಲ್ಲವುಗಳ ಸಮರ್ಥ ಪ್ರತಿನಿಧಿಯಾಗಿ ಇಂದು ಸಂಘಕ್ಕಿಂತಲೂ ಹೆಚ್ಚಾಗಿ ಮೋದಿಯವರನ್ನು ಪರಿಗಣಿಸಲಾಗುತ್ತದೆ. ಇದು ಸಂಘಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ ಎನ್ನಲಾಗುತ್ತದೆ.

ಹಿಂದುತ್ವದ ‘ಐಕಾನ್‌’ ಆಗುವುದರ ಜೊತೆಗೇ, ಸಂಘದ ಪರಿಧಿಯಾಚೆಗಿನ ಜನಸಾಮಾನ್ಯರಲ್ಲಿಯೂ ಮೋದಿ ಪ್ರಭಾವ ದೊಡ್ಡ ಮಟ್ಟದಲ್ಲಿದೆ. ಈ ಬಗ್ಗೆ ವಿಮರ್ಶೆಗಳೇನೇ ಇದ್ದರೂ, ಮೋದಿ ಸದ್ಯದ ಪರಿಸ್ಥಿತಿಯಲ್ಲಿ ಸಂಘಕ್ಕಿಂತ ಹೆಚ್ಚು ಪ್ರಭಾವಶಾಲಿಯಾಗಿ ಜನರನ್ನು ತಲುಪಬಲ್ಲವರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆಂತರಿಕವಾಗಿಯೂ ಗಮನಿಸುವುದಾದರೆ, ಹಿಂದಿನಂತೆ ಇಂದು ಬಿಜೆಪಿಗೆ ಚುನಾವಣೆಗಳನ್ನು ಗೆಲ್ಲಲು ಸಂಘದ ಬೆಂಬಲ ಅತ್ಯಗತ್ಯ ಎನ್ನುವ ಪರಿಸ್ಥಿತಿ ಇಲ್ಲ. ಸಂಘ ಒಪ್ಪಲಿ ಬಿಡಲಿ, ಅದರೊಳಗಿನ ಬಹುತೇಕ ನಾಯಕರೂ ಸೇರಿದಂತೆ, ಬೃಹತ್‌ ಮಟ್ಟದ ಕಾರ್ಯಕರ್ತರ ಪಡೆ ಮೋದಿ-ಶಾ ನೇತೃತ್ವದಲ್ಲಿ ಅವರ ರಣತಂತ್ರಕ್ಕೆ ಅನುಗುಣವಾಗಿ ಚುನಾವಣೆಗಳನ್ನು ಎದುರಿಸಲು ಉತ್ಸುಕವಾಗಿದೆ. ಇದರ ಹೊರತಾಗಿಯೂ, ಬಿಜೆಪಿ ಇಂದು ತನ್ನದೇ ಆದ ಬೃಹತ್ ಕಾರ್ಯಕರ್ತರ ಪಡೆಯನ್ನು, ಆಧುನಿಕ ಪ್ರಚಾರ ತಂಡಗಳನ್ನು ಹೊಂದಿದೆ. ಸಂಘ ಸರ್ಕಾರದ ಮೇಲೆ ಹೊಂದಿರುವ ಪ್ರಭಾವಕ್ಕಿಂತ ಹೆಚ್ಚಿನ ಪ್ರಭಾವವನ್ನು ಮೋದಿ ಸಂಘದ ಮೇಲೆ ಹೊಂದಿದ್ದಾರೆ ಎನ್ನುವುದೂ ಸುಳ್ಳಲ್ಲ. ಮೋದಿಯವರ ಮುಂದೆ ಸಂಘದ ಶಕ್ತಿ ಕುಂದಿರುವುದಂತೂ ನಿಜ.

ಆಧುನಿಕ ಪ್ರಚಾರ ತಂತ್ರಗಳನ್ನು, ಮಾಧ್ಯಮಗಳನ್ನು ಮೋದಿ ತಮ್ಮ ಪ್ರಚಾರಕ್ಕೆ ದುಡಿಸಿಕೊಂಡಿರುವ, ದುಡಿಸಿಕೊಳ್ಳುವ ರೀತಿ ಸಂಘವನ್ನು ಇಕ್ಕಟ್ಟಿಗೆ ದೂಡಿದೆ. ಮೋದಿ ಏಕಕಾಲಕ್ಕೆ ತಮ್ಮನ್ನು ವಿಕಾಸಪುರುಷನಾಗಿ, ಹಿಂದುತ್ವದ ಪ್ರಬಲ ಮುಖವಾಗಿ, ಸಾಂಪ್ರದಾಯಿಕ ಹಿಡಿತದ ಪಕ್ಷದಲ್ಲಿ ಮೂಡಿದ ಹಿಂದುಳಿದ ವರ್ಗಗಳ ಪ್ರಬಲ ನೇತಾರನಾಗಿ, ಹೀಗೆ ಏನೆಲ್ಲವೂ ಆಗಿ ಬಿಂಬಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ, ಸದ್ಯದ ಪರಿಸ್ಥಿತಿಯಲ್ಲಿ ಸಂಘ ತನ್ನನ್ನು ತಾನು ‘ಜಾತ್ಯತೀತವಾದಿ’ ಎಂದು ಕರೆದುಕೊಂಡರೂ ಮೋದಿ ಬೆಂಬಲಿಗರು ಆ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ತಮಗೆ ಬೇಕಾದ ಬಲಿಷ್ಠ ಹಿಂದೂ ನಾಯಕ ಸಿಕ್ಕಿದ್ದಾನೆ. ಈ ಎಲ್ಲ ಕಾರಣಗಳು ಇಂದು ಸಂಘ ತನ್ನ ರಾಜಕೀಯ ಅಸ್ತಿತ್ವವನ್ನು ಬಿಜೆಪಿಯಾಚೆಗೂ ವಿಸ್ತರಿಸಿಕೊಳ್ಳುವ ಕಡೆಗೆ ಗಮನ ಹರಿಸುವಂತೆ ಮಾಡಿದೆ. ಗಮನಿಸಬೇಕಾದ ಸಂಗತಿ ಎಂದರೆ, ಸಂಘವು ಈ ಮುಂಚಿನಿಂದಲೂ ವಿವಿಧ ಪಕ್ಷಗಳಲ್ಲಿ, ಸಂಘಸಂಸ್ಥೆಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದೆ. ಅದನ್ನು ಇನ್ನಷ್ಟು ವ್ಯಾಪಕಗೊಳಿಸಿಕೊಂಡಾಗ ಮಾತ್ರವೇ ವ್ಯಕ್ತಿ ಆರಾಧನೆಯ ನಡುವೆಯೂ ತಾನು ಗಟ್ಟಿಯಾಗಿ ಉಳಿಯಲು ಸಾಧ್ಯ ಎನ್ನುವುದು ಸಂಘಕ್ಕೆ ಅರ್ಥವಾದಂತಿದೆ. ಒಂದು ಸಂಘಟನೆಯಾಗಿ ತನ್ನನ್ನು ಹೆಚ್ಚು ಹೆಚ್ಚು ಪ್ರಭಾವಶಾಲಿ ಆಗಿಸಿಕೊಳ್ಳುವ, ಸಮಕಾಲೀನ ಆಗಿಸಿಕೊಳ್ಳುವ ಸವಾಲು ಒಂದೆಡೆಯಾದರೆ, ಭವಿಷ್ಯದಲ್ಲಿನ ಅಸ್ತಿತ್ವದ ದೃಷ್ಟಿಯಿಂದ ಬಲಪಂಥೀಯತೆಯ ಆಚೆಗೂ ತನ್ನನ್ನು ವಿಸ್ತರಿಸಿಕೊಳ್ಳಬೇಕಾದ ಅನಿವಾರ್ಯತೆ ಮತ್ತೊಂದೆಡೆ ಸಂಘಕ್ಕೆ ಎದುರಾಗಿದೆ. ಪರಿಣಾಮ, ಎಡ-ಬಲ ಚಿಂತನೆಯಿಂದ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ದೂರವಿರುವ ಬಹುಸಂಖ್ಯಾತ ಮಧ್ಯಮ ಸಮಾಜವೇನಿದೆ, ಅದರ ವಿಶ್ವಾಸವನ್ನು ಗಳಿಸುವ ತವಕದಲ್ಲಿ ಸಂಘವಿದೆ.

ಇಂದು ಮೇಲ್ವರ್ಗಗಳಾಚೆಗೂ ಜಾತಿ ಹಾಗೂ ರಾಜಕೀಯ ಪ್ರಜ್ಞೆ ವಿಸ್ತರಿಸಿದೆ. ಅದರಲ್ಲಿಯೂ ಕೃಷಿಕ, ಶ್ರಮಿಕ ಜಾತಿಗಳಲ್ಲಿ ಜಾಗೃತಗೊಂಡಿರುವ ಜಾತಿಪ್ರಜ್ಞೆ ಈ ವರ್ಗಗಳ ಪಾಲಿಗೆ ರಾಜಕೀಯ ಬಲವನ್ನು ಪಡೆಯುವ ಸಾಮುದಾಯಿಕ ಅಸ್ತ್ರವಾಗಿ ಪರಿಣಮಿಸಿದೆ. ಅಧಿಕಾರ ರಾಜಕಾರಣದಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆ ಪ್ರಬಲವಾಗಿ ಮೂಡಿದೆ. ಇಂತಹ ಸನ್ನಿವೇಶದಲ್ಲಿ ಗೋಳವಾಲ್ಕರ್‌ ಪ್ರತಿಪಾದನೆಯ ಹಿಂದುತ್ವವಾದಿ ಸಿದ್ಧಾಂತದ ಪ್ರಭಾವ ಕುಗ್ಗಲಿದೆಯೇ ಹೊರತು ಹಿಗ್ಗಲಾರದು ಎನ್ನುವ ಅರಿವು ಸಂಘಕ್ಕಿದೆ. ಈವರೆಗೆ ಸಂಘ ಅನುಸರಿಸಿಕೊಂಡು ಬಂದಿರುವ ಹಿಂದುತ್ವ ಧ್ರುವೀಕರಣದ ಸಾಂಸ್ಕೃತಿಕ ರಾಜಕಾರಣವೇನಿತ್ತು, ಅದು ಅತಿಲಂಬಿತವಾಗಿದ್ದು ಮುಂದಿನ ದಿನಗಳಲ್ಲಿ ಅದರ ಪರಿಣಾಮ ಕುಗ್ಗಲಿದೆ. ಹಾಗಾಗಿಯೇ, ‘ಒಳಗೊಳ್ಳುವಿಕೆ’ಯ ಆಶಯದ ಹಿಂದುತ್ವದ ರಾಜಕಾರಣವೇ ಸೂಕ್ತ ಎನ್ನುವ ನಿರ್ಧಾರ ಸಂಘದಲ್ಲಿ ಮೂಡಿದೆ.

ಈ ವಿಚಾರದಲ್ಲಿ ಸಂಘಕ್ಕೆ ಸದ್ಯ ತೊಡಕಾಗಿರುವುದು ಬಿಜೆಪಿಯ ಚುನಾವಣಾ ತಂತ್ರಗಳು. ಮೋದಿ-ಶಾ ಜೋಡಿಯ ರಣತಂತ್ರ ಇತ್ತೀಚಿನ ದಿನಗಳಲ್ಲಿ ಮತೀಯ ಧ್ರುವೀಕರಣಕ್ಕೆ ಮಾತ್ರವೇ ಸೀಮಿತವಾಗದೆ, ವ್ಯಾಪಕ ಜಾತಿ ಸಮೀಕರಣಗಳಿಗೂ ವಿಸ್ತಾರಗೊಂಡಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಇಂದು ಅನೇಕ ದೊಡ್ಡ ರಾಜ್ಯಗಳಲ್ಲಿ ಪ್ರಬಲ ಜಾತಿಯ ವಿರುದ್ಧ ಉಳಿದ ಜಾತಿಗಳನ್ನು ಒಗ್ಗೂಡಿಸುವ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಯಾದವರ ವಿರುದ್ಧ ಉಳಿದ ಜಾತಿಗಳನ್ನು, ಹರಿಯಾಣದಲ್ಲಿ ಜಾಟರ ವಿರುದ್ಧ ಇತರರನ್ನೂ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಪಟೇಲ್‌ ಹಾಗೂ ಮರಾಠರ ವಿರುದ್ಧ ಇತರ ಜಾತಿಗಳನ್ನು ಒಗ್ಗೂಡಿಸುವ ರಾಜಕಾರಣ ನಡೆಸಿದೆ. ಇದು ಎಲ್ಲೆಡೆಯೂ ನಡೆದಿದೆ ಎಂದೇನೂ ಅಲ್ಲ, ಉದಾಹರಣೆಗೆ ಕರ್ನಾಟಕದಲ್ಲಿ ಇಲ್ಲಿನ ಪ್ರಬಲ ಜಾತಿಯಾದ ಲಿಂಗಾಯತ ಸಮುದಾಯವನ್ನೇ ಬಿಜೆಪಿ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ಅದರೊಟ್ಟಿಗೇ ಹಿಂದೆಂದೂ ಕಾಣದಷ್ಟು ವ್ಯಾಪಕವಾಗಿ ಹಿಂದುಳಿದ ವರ್ಗಗಳನ್ನು ಸೆಳೆಯುವ ಪ್ರಯತ್ನಕ್ಕೂ ಅದು ಕೈಹಾಕಿದೆ. ಲಿಂಗಾಯತ ಮತ್ತು ಒಬಿಸಿ ಮತಗಳನ್ನು ಕೇಂದ್ರೀಕರಿಸಿ ಚುನಾವಣಾ ತಂತ್ರಗಳನ್ನು ರೂಪಿಸಿತ್ತು. ಆದರೆ. ಸಂಘವು ಇದಕ್ಕೆ ವ್ಯತಿರಿಕ್ತವಾದ ನಿಲುವು ಹೊಂದಿದೆ.

ಈ ಹಿಂದೆ ಸಮಾನ ಶತ್ರು ಅಥವಾ ಸಮಾನ ಅಪಾಯವನ್ನು ತೋರಿಸುವ ಮೂಲಕ ಹಿಂದೂಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದ ಸಂಘಕ್ಕೆ ಈಗ ಬಿಜೆಪಿಯ ಜಾತಿ ಸಮೀಕರಣದ ರಾಜಕೀಯ ತನ್ನ ಅಸ್ತಿತ್ವಕ್ಕೇ ಕೊಡಲಿಪೆಟ್ಟು ನೀಡುತ್ತಿದೆ ಎನ್ನುವ ಭಾವನೆ ಮೂಡಿಸಿದೆ. ಹಾಗಾಗಿಯೇ ಅದು, ಸಮಾನ ಶತ್ರು ಎನ್ನುವ ಪರಿಕಲ್ಪನೆಯನ್ನು ತೊಡೆದು ಎಲ್ಲರನ್ನೂ ಒಳಗೊಳ್ಳುವ ‘ಭಾರತೀಯತೆ’ಯ ಕಡೆಗೆ ಗಮನ ಹರಿಸಿದೆ. ‘ಭಾರತೀಯತೆ ಹಾಗೂ ಹಿಂದುತ್ವ ಎರಡೂ ಒಂದೇ’ ಎನ್ನುವ ವ್ಯಾಖ್ಯಾನದಡಿ ತನ್ನ ಬೇರುಗಳನ್ನು ವ್ಯಾಪಕಗೊಳಿಸಲು ಮುಂದಾಗಿದೆ.

ಇದನ್ನೂ ಓದಿ : ಸರಸಂಘಚಾಲಕ ಭಾಗವತ್‌ ಬೋಧಿಸಿದ ಹಿಂದುತ್ವದ ಹಿಂದಿನ ಅಸಲಿಯತ್ತೇನು?

ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಮೋದಿಯವರು ಈಚಿನ ವರ್ಷಗಳಲ್ಲಿ ತಮ್ಮನ್ನು ಹಿಂದುಳಿದ ವರ್ಗದ ಬಡ ಕೌಟುಂಬಿಕ ಹಿನ್ನೆಲೆಯಿಂದ ಬಂದ ನೇತಾರ ಎಂದು ಬಿಂಬಿಸಿಕೊಳ್ಳಲು ತೋರುವ ಅಪರಿಮಿತ ಉತ್ಸಾಹವನ್ನು ತಾವೊಬ್ಬ ಸಂಘದ ಹಿನ್ನೆಲೆಯಿಂದ ಬಂದ ನೇತಾರ ಎಂದು ತೋರಿಸಲು ಬಳಸಿದ್ದು ಕಡಿಮೆ. ಸಂಘದ ಪ್ರಭಾವ ಕಡಿಮೆ ಇರುವ ಕೆಳಸಮುದಾಯಗಳ ಜಾತಿಗಳಲ್ಲಿಯೂ ಇದೇ ಕಾರಣಕ್ಕೆ ಮೋದಿಯವರ ಪ್ರಭಾವ ಹೆಚ್ಚಿದೆ. ಈ ಅಂಶವೂ ಸಂಘವನ್ನು ತನ್ನ ಅಸ್ತಿತ್ವ ಹಾಗೂ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಬಹುತ್ವಕ್ಕೆ ಮೊರೆಹೋಗುವಂತೆ ಪ್ರೇರೇಪಿಸಿವೆ. ವ್ಯಕ್ತಿ ಆರಾಧನೆಗೆ ತನ್ನ ಕಾರ್ಯಕರ್ತರು ಮರುಳಾಗದಂತೆ ಹಾಗೂ ಸಂಘದ ಹೊರತಾದ ಶಕ್ತಿಕೇಂದ್ರಗಳತ್ತ ವಲಸೆ ಹೋಗದಂತೆ ತಡೆಯಲು ಅದು ಮುಂಬರುವ ದಿನಗಳಲ್ಲಿ ಇನ್ನಷ್ಟು ಚರ್ಚಾರ್ಹ ಹೆಜ್ಜೆಗಳನ್ನುಇರಿಸಬಹುದು.

ವಿಪರ್ಯಾಸ ಎಂದರೆ, ಶಿವಭಕ್ತನಾಗಲು ಹೊರಟಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೂ, ಬಹುತ್ವವೇ ಹಿಂದುತ್ವ ಎಂದು ಜಪಿಸಲು ತೊಡಗಿರುವ ಸಂಘ ಪರಿವಾರಕ್ಕೂ ಹೆಚ್ಚೇನೂ ವ್ಯತ್ಯಾಸ ಗೋಚರಿಸುತ್ತಿಲ್ಲ. ರಾಹುಲ್‌ ಗಾಂಧಿಯವರ ನಡೆ ಮೃದು ಹಿಂದುತ್ವವಾಗಿ ಕಂಡರೆ, ಸಂಘದ ನಡೆ ತೋರಿಕೆಯ ಜಾತ್ಯತೀತತೆಯ ತೆಳು ಲೇಪನವಾಗಿಯಷ್ಟೇ ಗೋಚರಿಸುತ್ತಿದೆ. ಅಧಿಕಾರ ರಾಜಕಾರಣ, ಅಸ್ತಿತ್ವದ ಪ್ರಶ್ನೆಗಳಿಂದಾದರೂ ‘ಒಳಗೊಳ್ಳುವಿಕೆಯ’ ಮಾತುಗಳಿಗೆ ಚಾಲನೆ ಸಿಕ್ಕಿದೆಯಲ್ಲ ಎನ್ನುವ ಅಲ್ಪ ಖುಷಿಯನ್ನಷ್ಟೇ ಪ್ರಜಾಪ್ರಭುತ್ವವಾದಿಗಳು ಸದ್ಯದ ಸಂದರ್ಭದಲ್ಲಿ ಪಡಬಹುದು.

ಬಿಜೆಪಿ BJP Amit Shah ಅಮಿತ್ ಶಾ RSS PM Narendra Modi ಮೋಹನ್ ಭಾಗವತ್‌ ಪಿಎಂ ನರೇಂದ್ರ ಮೋದಿ RSS Chief Mohan Bhagwat ಆರ್ ಎಸ್ ಎಸ್
ದೇವೇಗೌಡರ ಕುಟುಂಬದಲ್ಲಿ ಹೊಸ ಶಕ್ತಿಕೇಂದ್ರವಾಗಿ ಉದಯಿಸಿದರೇ ಶೈಲಜಾ?
ಪರಿಷತ್ ಉಪಚುನಾವಣೆ: ಕೃತಕ ಬಿಕ್ಕಟ್ಟು ಸೃಷ್ಟಿಸಿದ್ದನ್ನು ಒಪ್ಪಿತೇ ಬಿಜೆಪಿ?
ಟ್ವಿಟರ್ ಸ್ಟೇಟ್ | ರಾಜತಾಂತ್ರಿಕ ಭಾಷೆಯ ಮೌಲ್ಯ ತಗ್ಗಿಸಿದ ಭಾರತ-ಪಾಕ್ ಬಗ್ಗೆ ಆಕ್ರೋಶ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?