ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ
ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?

ಸೀತಾರಾಂ ಯೆಚೂರಿ ಮನದ ಮಾತು | ಗೆಲುವಿಗಿಂತ ಯಾರನ್ನು ಸೋಲಿಸಬೇಕೆಂಬುದು ಮುಖ್ಯ

ಮೂಡಬಿದಿರೆಯಲ್ಲಿ ನಡೆದ ಸಿಪಿಎಂ ಪಕ್ಷದ ರಾಜ್ಯ ಸಮ್ಮೇಳನದಲ್ಲಿ ಹಿರಿಯ ನಾಯಕ ಸೀತಾರಾಂ ಯೆಚೂರಿ ಭಾಗವಹಿಸಿದ್ದರು. ಈ ವೇಳೆ, ‘ದಿ ಸ್ಟೇಟ್’ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪಕ್ಷಕ್ಕಿರುವ ಸವಾಲುಗಳು ಹಾಗೂ ಸಮಕಾಲೀನ ವಿಚಾರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು

ರಮೇಶ್ ಡಿ ಕೆ

ಇದು ಚುನಾವಣೆ ಹೊತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಇತರ ಪ್ರಾದೇಶಿಕ ಪಕ್ಷಗಳ ಹೊರತಾಗಿ ಸಿಪಿಎಂ ಹೇಗೆ ತನ್ನ ಅಸ್ತಿತ್ವ ವಿಸ್ತರಿಸಲು ಯತ್ನಿಸುತ್ತಿದೆ?

ದೇಶಕ್ಕೆ ಅಗತ್ಯವಾದ ಪರ್ಯಾಯ ನೀತಿಗಳ ಕುರಿತು ಎಡಪಂಥೀಯ ನಿಲುವಿನ ಹಾಗೂ ಪ್ರಜಾಪ್ರಭುತ್ವವಾದಿ ಪಕ್ಷಗಳ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರುವುದು ನಮ್ಮ ಮೊದಲ ಆದ್ಯತೆ. ಆ ಪರ್ಯಾಯ ನೀತಿಗಳ ಆಧಾರದ ಮೇಲೆ ಒಂದು ಒಕ್ಕೂಟ ರಚಿಸಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ. ದೇಶದ ರಕ್ಷಣೆಗೆ ಹಾಗೂ ಹೆಚ್ಚುತ್ತಿರುವ ಗಂಭೀರ ಸಮಸ್ಯೆಗಳಿಗೆ ಸ್ಪಂದಿಸಲು ಯಾರನ್ನು ಸೋಲಿಸಬೇಕೆಂಬುದು ಬಹಳ ಮುಖ್ಯ.

ಕರ್ನಾಟಕದಲ್ಲಿ ಪಕ್ಷಕ್ಕಿರುವ ಸವಾಲುಗಳು ಯಾವುವು?

ಕೋಮು ಧ್ರುವೀಕರಣ ಹೆಚ್ಚಿರುವುದು ಪಕ್ಷಕ್ಕೆ ಇರುವ ಮೊದಲ ಸವಾಲು. ಬಿಜೆಪಿ ಕೋಮುಗಲಭೆಗಳ ಮೂಲಕ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಅದೊಂದೇ ಅವರ ರಾಜಕೀಯ ಅಸ್ತ್ರ. ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ಇದು ಬಹುದೊಡ್ಡ ಸವಾಲಾಗಿ ಕಾಣುತ್ತಿದೆ. ಕೇರಳ ಮುಖ್ಯಮಂತ್ರಿಯನ್ನು ಇಲ್ಲಿಗೆ ಆಹ್ವಾನಿಸದಂತೆ ನಮ್ಮ ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಲಾಯಿತು. ಆದರೆ, ಅವರು ಮಂಗಳೂರಿಗೆ ಬಂದರು. ಇಂಥ ಸವಾಲುಗಳನ್ನು ಸ್ವೀಕರಿಸುತ್ತೇವೆ. ಇತರ ಸವಾಲು ಎಂದರೆ, ಜನರ ಹಿತಾಸಕ್ತಿಗೆ ಸಂಬಂಧಿಸಿದ ಸಮಸ್ಯೆಗಳು. ಬೌದ್ಧಿಕವಾಗಿ, ಆರ್ಥಿಕವಾಗಿ ಬೆಳೆಯಲು ಕರ್ನಾಟಕದಲ್ಲಿ ಅತ್ಯುತ್ತಮ ಅವಕಾಶಗಳಿವೆ. ಅದಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಭಾರತದ ಸಿಲಿಕಾನ್ ವ್ಯಾಲಿ ಇದು. ಇಲ್ಲಿ ಜನರ ಜೀವನಮಟ್ಟ ಸುಧಾರಿಸಲು ಶ್ರಮಿಸಬೇಕಿದೆ.

ಕರ್ನಾಟಕಕ್ಕೂ ಎಡಪಕ್ಷಗಳ ಅಸ್ತಿತ್ವವಿರುವ ಕೇರಳಕ್ಕೂ ಇರುವ ವ್ಯತ್ಯಾಸವೇನು?

ಕೇರಳದಲ್ಲಿರುವ ರಾಜಕೀಯ ಸವಾಲುಗಳು ಸಂಪೂರ್ಣ ಭಿನ್ನ. ನಲವತ್ತು ವರ್ಷಗಳಿಂದ ಅಧಿಕಾರಕ್ಕೆ ಹಾತೊರೆದ ಸಂಘಪರಿವಾರ ಉತ್ತರ ಕೇರಳದ ಮೇಲೆ ಕಣ್ಣಿಟ್ಟಿದೆ. ಏಕೆಂದರೆ, ಅದು ಮುಸ್ಲಿಂ ಬಾಹುಳ್ಯವಿರುವ ಪ್ರದೇಶ. ಕೋಮು ಧ್ರುವೀಕರಣ ನಡೆಸಲು ಅದು ಅವರಿಗೆ ಫಲವತ್ತಾದ ನೆಲ. ಎಡಪಕ್ಷ ಅಸ್ತಿತ್ವದಲ್ಲಿರುವುದರಿಂದ ಅಲ್ಲಿ ಅವರಿಗೆ ಯಶಸ್ಸು ಸಾಧ್ಯವಾಗುತ್ತಿಲ್ಲ. ಕೋಮು ಧ್ರುವೀಕರಣಕ್ಕೆ ನಾವು ಅವಕಾಶ ನೀಡದಿರುವುದರಿಂದ ನಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ. ಪ್ರಸ್ತುತ ಅಲ್ಲಿ ಅಸ್ತಿತ್ವದಲ್ಲಿರುವ ಎಲ್‌ಡಿಎಫ್ ಸರ್ಕಾರವನ್ನು ಅಲುಗಾಡಿಸಲು ಸಂಘಪರಿವಾರ ಯತ್ನಿಸುತ್ತಿದೆ. ನಾವು ಅದರ ವಿರುದ್ಧ ಹೋರಾಡುತ್ತಿದ್ದು, ಬಿಜೆಪಿ ಯಶಸ್ಸು ಕಾಣುವುದಿಲ್ಲ.

ಕೆಲ ಪ್ರದೇಶಗಳಲ್ಲಿ ಪಕ್ಷ ಚುರುಕಾಗಿದೆ. ಇನ್ನು ಕೆಲ ಪ್ರದೇಶಗಳಲ್ಲಿ ಅದು ಸಾಧ್ಯವಾಗಿಲ್ಲವೇಕೆ?

ತಮಿಳುನಾಡಿನಲ್ಲಿ ಪಕ್ಷವೊಂದರ ಯಶಸ್ಸನ್ನು ಚುನಾವಣಾ ರಾಜಕಾರಣ ಆಧರಿಸಿ ಅಳೆಯಲಾಗುತ್ತದೆ. ಪಕ್ಷವೊಂದರ ಬೆಳವಣಿಗೆಗೆ ಚುನಾವಣಾ ರಾಜಕಾರಣ ಮುಖ್ಯ ಸೂಚಕ ಎನ್ನುವುದು ನಿಜ. ಆದರೆ, ಜನರ ಹೋರಾಟವನ್ನು ಕಟ್ಟುವಲ್ಲಿ ಪಕ್ಷವೊಂದು ಹೇಗೆ ಶ್ರಮಿಸುತ್ತದೆ ಎಂಬುದೂ ಅಷ್ಟೇ ಮುಖ್ಯ. ಅದನ್ನು ಸಿಪಿಎಂ ತಮಿಳುನಾಡಿನಲ್ಲಿ ಮಾಡುತ್ತಿದೆ. ತಮಿಳುನಾಡಿನಲ್ಲಿ ಎರಡು ದ್ರಾವಿಡ ಪಕ್ಷಗಳ ನಡುವೆ ಶೇ.80ರಷ್ಟು ಮತಗಳು ಹಂಚಿಹೋಗಿವೆ. ಶೇ.೨-೩ರಷ್ಟು ಮತಗಳು ಆಚೀಚೆ ಹೋಗುವುದು ಬಿಟ್ಟರೆ ಬೇರೆ ಬದಲಾವಣೆ ಸಾಧ್ಯವಿಲ್ಲ. ಕಳೆದ ನಲವತ್ತು ವರ್ಷಗಳಿಂದ ಡಿಎಂಕೆ ಅಥವಾ ಎಐಡಿಎಂಕೆ ಪಕ್ಷಗಳು ಅಲ್ಲಿ ಗೆಲ್ಲುವುದು ಸಂಪ್ರದಾಯವಾಗಿದೆ. ಈ ಧ್ರುವೀಕರಣದ ಮಧ್ಯೆಯೇ ನಾವು ಜನರ ಹೋರಾಟವನ್ನು ಮುನ್ನೆಲೆಗೆ ತಂದಿದ್ದೇವೆ. ಆದರೆ, ಅದು ಇನ್ನೂ ಮತವಾಗಿ ಪರಿವರ್ತನೆಯಾಗಿಲ್ಲ.

ಕೋಮುವಾದಿ ಶಕ್ತಿಗಳ ವಿರುದ್ಧ ನೀವು ಹೇಗೆ ಹೋರಾಡುತ್ತೀರಿ?

ಕೋಮುವಾದಿ ಶಕ್ತಿಗಳ ವಿರುದ್ಧ ನಾವು ಕ್ರಿಯಾಶೀಲವಾಗಿ ಹೋರಾಡುತ್ತಿದ್ದೇವೆ. ನಮ್ಮ ಪಕ್ಷವನ್ನು ತಡೆಯಲು ಆರೆಸ್ಸೆಸ್ ಮತ್ತು ಬಿಜೆಪಿ ಯತ್ನಿಸಿದವು. ಫಲ ಸಿಗಲಿಲ್ಲ. ವಿಸ್ತರಣೆ ಕುರಿತಂತೆ ಮುಂದಿನ ದಿನಗಳಲ್ಲಿ ನಿಮಗೆ ತಿಳಿಯಲಿದೆ.

ದಲಿತ ಯುವಕರು ನಿಮ್ಮ ಪಕ್ಷವನ್ನು ನಂಬುತ್ತಿಲ್ಲವೇಕೆ?

ಇದು ಸತ್ಯವಲ್ಲ. ಹಲವು ವರ್ಷಗಳ ಹಿಂದೆ ಇಂಥ ಅಭಿಪ್ರಾಯವಿತ್ತು. ದೇಶದೆಲ್ಲೆಡೆ ಇಡೀ ಆಂದೋಲನವನ್ನು ‘ಜಯಭೀಮ್’ ಮತ್ತು ‘ಲಾಲ್ ಸಲಾಂ’ ಎಂಬ ಘೋಷಣೆಗಳಡಿ ಕೊಂಡೊಯ್ಯಲಾಗುತ್ತಿದೆ. ಮುಂಬೈ, ನಾಗಪುರದಲ್ಲಿ ನಡೆದ ದಲಿತಪರ ಕಾರ್ಯಕ್ರಮಗಳಲ್ಲಿ ಸ್ವತಃ ಭಾಗವಹಿಸಿದ್ದೇನೆ. ಅನೇಕರು ಒಂದು ಕೈಯಲ್ಲಿ ಕೆಂಪು ಧ್ವಜ ಹಿಡಿದಿದ್ದರೆ, ಮತ್ತೊಂದು ಕೈಯಲ್ಲಿ ನೀಲಿಧ್ವಜ ಹಿಡಿದಿದ್ದರು. ಕೆಲ ವಿಚಾರಗಳಿಗೆ ಉತ್ತರಿಸಬೇಕೆಂಬುದು ನಿಜ. ದಲಿತ ಚಳವಳಿ ಕೂಡ ಹೋಳಾಗಿದೆ. ಅದು ಕೂಡ ಏಕೀಕೃತಗೊಂಡ ಹೋರಾಟವಲ್ಲ. ಕೋಮುವಾದಿ ದಾಳಿಗಳ ಹಿನ್ನೆಲೆಯಲ್ಲಿ ಈಗ ಆ ಬಣಗಳೆಲ್ಲ ಒಂದಾಗುತ್ತಿವೆ. ಇದೊಂದು ಉತ್ತಮ ಬೆಳವಣಿಗೆ. ‘ಲಾಲ್-ನೀಲ್’ ಘೋಷಣೆ ದೇಶದ ಭವಿಷ್ಯವಾಗಲಿದೆ. ಪ್ರಕಾಶ್ ಅಂಬೇಡ್ಕರ್ ಸೇರಿದಂತೆ ಅನೇಕರು ನಮ್ಮೊಂದಿಗಿದ್ದಾರೆ. ದಲಿತರಿರಲಿ, ದಲಿತೇತರರಿರಲಿ, ಯಾವುದೇ ದುಡಿಯುವ ವರ್ಗವಿರಲಿ, ಅವರೆಲ್ಲ ಶೋಷಣೆಯ ವಿರುದ್ಧ ನಿಲ್ಲಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲದೆಹೋದರೆ ಮೋದಿ ಸರ್ಕಾರದ ಕೆಲ ನೀತಿಗಳಿಂದಾಗಿ ಉಳಿಗಾಲವಿಲ್ಲ ಎಂಬಂತಾಗಿದೆ.

ಅನೇಕರು ಹೇಳುವಂತೆ ಪಕ್ಷ ಜನರ ಜೊತೆಗಿದೆ. ಆದರೆ ಜನ ಪಕ್ಷದೊಂದಿಗಿಲ್ಲ. ಹೀಗೇಕೆ?

ಪಕ್ಷ ಜನರ ಜೊತೆಗಿದೆ ಎಂಬ ಅಭಿಪ್ರಾಯ ಸರಿ. ಆದರೆ ಜನ ಪಕ್ಷದೊಂದಿಗಿಲ್ಲ ಎಂಬ ಭಾವನೆ ಏಕೆ ಇದೆ ಎಂದರೆ, ಅವರು ಚುನಾವಣಾ ಯಶಸ್ಸನ್ನು ಮಾತ್ರ ಯಶಸ್ಸು ಎಂದು ಪರಿಗಣಿಸುತ್ತಿದ್ದಾರೆ. ಜನಾಂದೋಲನದೊಂದಿಗೆ ನಾವಿದ್ದೇವೆ. ಆದರೆ, ಚುನಾವಣೆ ವಿಷಯಕ್ಕೆ ಬಂದಾಗ ಸಾಮಾಜಿಕ ಚೌಕಟ್ಟಿನೊಂದಿಗೆ ಗುರುತಿಸಿಕೊಂಡುಬಿಡುತ್ತಾರೆ. ಆಗ ಜಾತಿ ರಾಜಕಾರಣ, ಕೋಮು ರಾಜಕಾರಣ ಮುನ್ನೆಲೆಗೆ ಬರುತ್ತದೆ. ಇದರ ವಿರುದ್ಧವೇ ನಾವು ಹೋರಾಡಬೇಕಿರುವುದು. ಕಳೆದ ಮೂರು ವರ್ಷಗಳಲ್ಲಿ ಎಡಪಕ್ಷ ಹಾಗೂ ದಲಿತರು ಒಗ್ಗೂಡುತ್ತಿರುವುದು ಮಹತ್ವದ ಬೆಳವಣಿಗೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ದಲಿತ ಹೋರಾಟದಲ್ಲಿ ನಮ್ಮ ಪಕ್ಷದ ಕಾರ್ಯದರ್ಶಿ ಮುಂತಾದ ನಾಯಕರು ಭಾಗವಹಿಸಿದ್ದನ್ನು ಮಾಧ್ಯಮಗಳಲ್ಲಿ ನೀವು ನೋಡಿರುತ್ತೀರಿ.

ಜಾತಿ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪಕ್ಷ ವಿಫಲವಾಗಿದೆ ಎಂಬ ಮಾತಿದೆಯಲ್ಲ?

ಆ ಅಭಿಪ್ರಾಯ ತಪ್ಪು ಎಂದು ನಾವು ಸಾಬೀತು ಮಾಡುತ್ತೇವೆ. ಈ ಬಗ್ಗೆ ವಾದ ಮಾಡುವುದಿಲ್ಲ. ಆ ಅಭಿಪ್ರಾಯ ಸರಿಯಲ್ಲ ಎಂಬುದನ್ನು ಮುಂದಿನ ದಿನಗಳಲ್ಲಿ ನಡೆಸುವ ಹೋರಾಟದ ಮೂಲಕ ತೋರಿಸುತ್ತೇವೆ.

ದೇಶದಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗದ ಮಾರ್ಕ್ಸ್‌ವಾದಕ್ಕೆ ಜನಮನ್ನಣೆ ಸಿಗುತ್ತದೆ ಎಂದು ನಿಮಗೆ ಅನ್ನಿಸುತ್ತದೆಯೇ?

ಮಾರ್ಕ್ಸಿಸಂ ಅದರ ವ್ಯಾಖ್ಯಾನದಲ್ಲೇ ಕಠಿಣವಾಗಿಲ್ಲ. ಸ್ಥಿರ ಪರಿಸ್ಥಿತಿಗಳ ಸ್ಥಿರವಾದ ವಿಶ್ಲೇಷಣೆಗಾಗಿಯೇ ಮಾರ್ಕ್ಸ್‌ವಾದ ಇದೆ. ಪರಿಸ್ಥಿತಿ ಬದಲಾದರೂ ನಿಮ್ಮ ವಿಶ್ಲೇಷಣೆ ಬದಲಾಗದಿದ್ದರೆ ನೀವು ಮಾರ್ಕ್ಸ್‌ವಾದಿಯಾಗಿ ಉಳಿಯಲಾರಿರಿ. ಹಾಗಾಗಿ ಕಠಿಣತೆ ಮತ್ತು ಮಾರ್ಕ್ಸ್‌ವಾದ ಒಟ್ಟಿಗೇ ಸಾಗುವುದಿಲ್ಲ. ನೀವು ಕಠೋರವಾಗಿದ್ದರೆ ಮಾರ್ಕ್ಸ್‌ವಾದಿಯಲ್ಲ ಎಂದರ್ಥ.

ರೈತ ಸಂಘ ನಡೆಸಿದಂಥ ಆಂದೋಲನವನ್ನು ಕೃಷಿಕರ ಪರವಾಗಿ ನಡೆಸಲು ಸಿಪಿಎಂಗೆ ಸಾಧ್ಯವಾಗಲಿಲ್ಲ ಏಕೆ?

ಇದನ್ನು ಪಕ್ಷದ ಸಮ್ಮೇಳನದಲ್ಲಿ ಚರ್ಚಿಸುತ್ತಿದ್ದೇವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಕ್ಷವಿಲ್ಲದೆ ರೈತ ಹೋರಾಟ ನಡೆದ ಉದಾಹರಣೆಗಳಿಲ್ಲ. ಪಕ್ಷದ ಅಂಗಸಂಸ್ಥೆಯಾದ ಅಖಿಲ ಭಾರತ ಕಿಸಾನ್ ಸಭಾ ಮುಂಚೂಣಿಯಲ್ಲಿರುವ ರೈತ ಸಂಘಟನೆಗಳಲ್ಲಿ ಒಂದು. ರೈತ ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಮೋದಿ ಸರ್ಕಾರ ನೀಡಿದ ಭರವಸೆಗಳು ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕಿದೆ.

ಇದನ್ನೂ ಓದಿ : ಜಿಗ್ನೇಶ್ ಮನದ ಮಾತು | ಮೋದಿ ಕಾಲ ಮುಗಿಯಿತು, ಬಿಜೆಪಿ ಹೊಸ ನಾಯಕನ ಹುಡುಕಲಿ

ನಿಮ್ಮ ಪಕ್ಷ ಅನುಭವದ ಆಧಾರದ ಮೇಲೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದೆಯೇ?

ನಮ್ಮ ಪಕ್ಷ ಸದಾ ಆತ್ಮವಿಮರ್ಶೆ ಮಾಡಿಕೊಳ್ಳುತ್ತದೆ. ತಳಮಟ್ಟದ ಪ್ರಜಾಪ್ರಭುತ್ವ ಇರುವುದು ಈ ಪಕ್ಷದಲ್ಲಿ ಮಾತ್ರ. ಪ್ರತಿ ಮೂರು ವರ್ಷಗಳಲ್ಲಿ ಹಿಂದೆ ಮಾಡಿದ, ಮುಂದೆ ಮಾಡುವ ಕಾರ್ಯಗಳ ಬಗ್ಗೆ ವಿಮರ್ಶೆ ನಡೆಯುತ್ತದೆ. ಪ್ರತಿ ಕಾರ್ಯಕರ್ತನೂ ತನ್ನ ಹಕ್ಕು ಎಂಬಂತೆ ಸಲ್ಲಿಸುವ ಅಭಿಪ್ರಾಯಗಳನ್ನೆಲ್ಲ ಒಗ್ಗೂಡಿಸಿ, ಪಕ್ಷದ ಸಮಾವೇಶದಲ್ಲಿ ನಿರ್ಣಯಕ್ಕೆ ಬರಲಾಗುತ್ತದೆ. ತಪ್ಪುಗಳಾದಾಗ ಒಪ್ಪಿಕೊಳ್ಳುವ ಏಕೈಕ ಪಕ್ಷ ನಮ್ಮದು.

ಪಕ್ಷದಲ್ಲಿ ಕ್ಲಾಸ್ ನಾಯಕರಿದ್ದಾರೆ. ಆದರೆ ಮಾಸ್ ನಾಯಕರ ಕೊರತೆ ಕಾಣುತ್ತಿದೆ ಎಂಬ ಅಭಿಪ್ರಾಯವಿದೆಯಲ್ಲ?

ಮಾಸ್ ಲೀಡರ್‌ಗಳು ಸ್ವರ್ಗದಿಂದ ಇಳಿದವರಲ್ಲ. ಅವರೆಲ್ಲ ಚಳವಳಿ, ಆಂದೋಲನದ ಮೂಲಕ ಬಂದವರು. ಜನ ಮತ್ತು ಚಳವಳಿಗಳಿಂದ ನಾಯಕರು ಸೃಷ್ಟಿಯಾಗುತ್ತಾರೆ. ಜ್ಯೋತಿ ಬಸು, ಮಾಣಿಕ್ ಸರ್ಕಾರ್ ಅವರಂಥ ಬಹುದೊಡ್ಡ ನಾಯಕರನ್ನು ನಾವು ನೋಡಿದ್ದೇವೆ. ಪಿಣರಾಯಿ ಸರ್ಕಾರದಲ್ಲಿ ಅನೇಕ ಮಾಸ್ ಲೀಡರ್‌ಗಳು ಇದ್ದಾರೆ. ಹೀಗಾಗಿ ಜನಾಂದೋಲನವಿಲ್ಲದೆ ಸಾಮೂಹಿಕ ನಾಯಕರು ಉದಯಿಸುವುದು ಸಾಧ್ಯವಿಲ್ಲ.

ಬಿಜೆಪಿ BJP Politics ರಾಜಕೀಯ ಸೀತಾರಾಂ ಯೆಚೂರಿ Sitaram Yechury Communal Violence ಕೋಮು ಗಲಭೆ Future of CPM Kerala Politics CPM in Tamilnadu Communal Polarisation ಸಿಪಿಎಂ ಭವಿಷ್ಯ ಕೇರಳ ರಾಜಕಾರಣ ತಮಿಳುನಾಡಿನಲ್ಲಿ ಸಿಪಿಎಂ ಕೋಮು ಧ್ರುವೀಕರಣ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ
ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು