ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ
ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?

ಭಗವಾನ್ ಮನದ ಮಾತು | ಸತ್ಯ ಅರಿವಾದರೆ ಬಂದೂಕನ್ನು ಅವರತ್ತಲೇ ತಿರುಗಿಸುತ್ತಾರೆ!

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಪೊಲೀಸರಿಂದ ಬಂಧಿತರಾಗಿರುವ ಆರೋಪಿಗಳು ವಿಚಾರವಾದಿ ಕೆ ಎಸ್ ಭಗವಾನ್ ಹತ್ಯೆಗೂ ಸಂಚು ರೂಪಿಸಿದ್ದು ವಿಚಾರಣೆ ವೇಳೆ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಭಗವಾನ್ ‘ದಿ ಸ್ಟೇಟ್’ ಜೊತೆ ಮಾತನಾಡಿದ್ದಾರೆ

ಓಂಕಾರ್ ಪಿ

“ಯಾರು ಸತ್ಯ ಹೇಳುತ್ತಾರೆ. ಯಾರು ಹೇಳುವುದು ಸುಳ್ಳು ಎನ್ನುವುದರ ಸರಿಯಾದ ತಿಳಿವಳಿಕೆ ಅವರಿಗಿಲ್ಲ. ಕಷ್ಟಪಟ್ಟು ನನ್ನ ಕೃತಿಗಳನ್ನು ಓದಿದರೆ ಅವರೇ ಪರಿವರ್ತನೆ ಆಗಿಬಿಡುವರು. ಅಮಾಯಕರನ್ನು ಗುಂಡಿಟ್ಟು ಕೊಂದವರು ಆ ಬಂದೂಕನ್ನು ತಮಗೆ ಪ್ರೇರಣೆ ನೀಡಿದವರತ್ತಲೇ ತಿರುಗಿಸುತ್ತಾರೆ,’’ ಎನ್ನುವುದು ಕೆ ಎಸ್ ಭಗವಾನ್ ಅವರ ವಿಶ್ವಾಸ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಭಗವಾನ್ ಹತ್ಯೆಗೂ ಸಂಚು ರೂಪಿಸಿದನ್ನು ಬಹಿರಂಗಪಡಿಸಿದ್ದಾರೆ. ಅವರ ಸಂಚು ಫಲ ನೀಡಿದ್ದರೆ ಗೌರಿಗಿಂತ ಮೊದಲೇ ಭಗವಾನ್ ಹಂತಕರ ಗುಂಡಿಗೆ ಬಲಿಯಾಗುತ್ತಿದ್ದರೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭಗವಾನ್ ಅವರನ್ನು 'ದಿ ಸ್ಟೇಟ್' ಮಾತಿಗೆಳೆಯಿತು. ಭಗವಾನ್ ಅವರ ಮಾತಿನ ಸಾರಾಂಶ ಇಲ್ಲಿದೆ.

  • ತುಳಿತಕ್ಕೊಳಗಾದ ಜನರು ಮೌಢ್ಯಗಳನ್ನು ಕಳಚಿಕೊಂಡರೆ ಮೇಲೆ ಬರಲು ಸಾಧ್ಯವಾಗುತ್ತದೆಂದು ನನ್ನ ಹಲವು ಕೃತಿಗಳಲ್ಲಿ ಪ್ರತಿಪಾದಿಸಿದ್ದೇನೆ. ಆದರೆ, ಯಾರ ಪರವಾಗಿ ನಾನು ಬರೆದಿದ್ದೇನೋ ಅವರು ಆ ಬಗ್ಗೆ ಆಲೋಚನೆ ಮಾಡದೆ; ಸುಳ್ಳು ಹೇಳುವವರು, ಮೋಸ ಮಾಡುವವರು ಹೇಳುವುದನ್ನೇ ನಂಬುತ್ತಿದ್ದಾರೆ. ನನ್ನ ಕೃತಿಗಳನ್ನು ಓದಿದರೆ ಅವರೇ ಪರಿವರ್ತನೆಗೊಳ್ಳುತ್ತಾರೆ, ಸುಳ್ಳು ಹೇಳಿ ಪ್ರೇರೇಪಿಸಿದವರತ್ತ ಬಂದೂಕು ತಿರುಗಿಸುತ್ತಾರೆ. ಅದನ್ನೆಲ್ಲ ಮಾಡಲು ಸಾಕಷ್ಟು ಸಮಯ ಬೇಕು. ನನಗೆ ಅವಕಾಶ ಸಿಕ್ಕರೆ ವಾಘ್ಮೋರೆ, ಹೊಟ್ಟೆ ಮಂಜ ಮುಂತಾದವರ ಜೊತೆ ಮಾತನಾಡಿ ತಿದ್ದುವ ಪ್ರಯತ್ನ ಮಾಡುತ್ತೇನೆ. ನನ್ನ ತಿಳಿವಳಿಕೆಯೇ ತಪ್ಪು ಎಂದು ಅವರು ತೋರಿಸಿದರೆ, ನಾನೇ ತಿದ್ದಿಕೊಳ್ಳಲೂ ಸಿದ್ಧನಿದ್ದೇನೆ.
  • ಬಂಧಿತರಾಗಿರುವ ಕೆಲವರಷ್ಟೇ ಏಕಾಏಕಿ ಇಂಥ ಕೃತ್ಯ ಮಾಡಿರಲು ಸಾಧ್ಯವಿಲ್ಲ. ಇವರೆಲ್ಲರ ಹಿಂದೆ ದೊಡ್ಡ ಪಿತೂರಿ ಇದೆ. ದೊಡ್ಡ ತಂಡ ಕೂಟವಾಗಿ ಕೆಲಸ ಮಾಡುತ್ತಿದೆ. ಅವರನ್ನೆಲ್ಲ ಬಂಧಿಸುವ ಮೂಲಕ ಕೃತ್ಯದ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ಪತ್ತೆಹಚ್ಚಬೇಕು. ಈ ನಿಟ್ಟಿನಲ್ಲಿ ಎಸ್ಐಟಿ ಸಮಾಧಾನದಿಂದ, ಉತ್ತಮವಾಗಿ ಕೆಲಸ ಮಾಡುತ್ತಿದೆ. ಸರ್ಕಾರ ಇನ್ನೂ ಬಲ ನೀಡಬೇಕು.
  • ನನಗೆ ಇದೆಲ್ಲ ಹೊಸದಲ್ಲ. ಶಂಕರಾಚಾರ್ಯರ ಕುರಿತು ವಿಮರ್ಶಾತ್ಮಕ ಕೃತಿ ಬರೆದಾಗಿನಿಂದಲೂ (೧೯೬೮) ಬೆದರಿಕೆಗಳನ್ನು ಎದುರಿಸಿದ್ದೇನೆ. ಸುಳ್ಳು ಹೇಳುವವರಿಗೇ ಅಷ್ಟೊಂದು ಧೈರ್ಯ ಇರುವಾಗ, ಸತ್ಯ ಹೇಳುವ ನನಗೆಷ್ಟು ಧೈರ್ಯ ಇರಬೇಕು? ಬೆದರಿಕೆ ಬಂದಾಗಲೆಲ್ಲ ಪೊಲೀಸರಿಗೆ ತಿಳಿಸಿದ್ದೇನೆ. ಅವರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಈಗ ಒಂದೂವರೆ ವರ್ಷದಿಂದ ಅಂಥದೆಲ್ಲ ನಿಂತಿದೆ.
  • ವಿಚಾರವಾದ, ವೈಜ್ಞಾನಿಕ ಮನೋಧರ್ಮ ಹರಡುವುದು, ಸಮಾಜ ಸುಧಾರಣೆಯ ನಿಟ್ಟಿನಲ್ಲಿ ತಿಳಿವಳಿಕೆ ನೀಡುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಸಂವಿಧಾನದತ್ತ ಕರ್ತವ್ಯ. ಅದನ್ನು ನಾನು ಮಾಡುತ್ತಿದ್ದೇನಷ್ಟೆ. ಯಾವುದೇ ಭಯ, ತೊಳಲಾಟದ ಪ್ರಶ್ನೆಯೇ ಇಲ್ಲ. 'ರಾಮಮಂದಿರ ಯಾಕೆ ಬೇಡ’ ಎನ್ನುವ ಕುರಿತು ಬರೆದಿರುವ ಮತ್ತೊಂದು ಪುಸ್ತಕ ಈಗ ಮಾರುಕಟ್ಟೆಗೆ ಬಂದಿದೆ. ನಾನು ಭಯಗೊಂಡು ಸತ್ಯ ಹೇಳುವುದರಿಂದ ವಿಮುಖನಾಗಿಲ್ಲ ಎನ್ನುವುದಕ್ಕಿದು ನಿದರ್ಶನ.
  • ವಿಚಾರಗಳನ್ನು, ವೈಜ್ಞಾನಿಕ ಮನೋಧರ್ಮವನ್ನು ಯಾರೇ ಮಂಡಿಸಿದರೂ ಅವುಗಳ ಬಗ್ಗೆ ಸರಿಯೋ, ತಪ್ಪೋ ಚರ್ಚೆ ಮಾಡಿ ಸಮಾಜದ ಮುಂದೆ ಮಂಡಿಸಬೇಕು. ಸ್ವೀಕರಿಸುವುದು, ಬಿಡುವುದು ಸಮಾಜಕ್ಕೆ ಬಿಟ್ಟ ವಿಷಯ. ಅದು ಬಿಟ್ಟು ಗುಂಡಿನ ದಾಳಿಗೆ ಮುಂದಾಗುವುದು ಬೌದ್ಧಿಕವಾಗಿ ಸೋತವರ ಲಕ್ಷಣ. ಸೋತವರಷ್ಟೇ ಸಹನೆ ಕಳೆದುಕೊಂಡು ಎದುರಾಳಿಗಳ ಮೇಲೆ ದಾಳಿ ಮಾಡುತ್ತಾರೆ. ಆ ಕೆಲಸ ಈಗ ಆಗುತ್ತಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಂವಿಧಾನಿಕ ಆಶಯವಾದ ಜಾತ್ಯತೀತ ತತ್ವಕ್ಕೆ ಧಕ್ಕೆಯಾಗುತ್ತದೆ. ಮೂಲಭೂತವಾದ, ಮತಾಂಧತೆ ಹೆಚ್ಚುತ್ತಿದೆ. ಇದರ ಅಳಿವಿಗೆ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಒಗ್ಗೂಡಿ ಕೆಲಸ ಮಾಡಬೇಕು.
  • ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತಾಂಧ ರಾಜಕೀಯ ವ್ಯವಸ್ಥೆ ಪ್ರಬಲವಾಗುತ್ತಿದೆ. ಅತ್ಯುನ್ನತ ಎತ್ತರಕ್ಕೆ ಕೊಂಡೊಯ್ಯಬೇಕಾದ ನಾಗರಿಕತೆಯು ಮನುಷ್ಯನನ್ನು ಮೃಗೀಯಗೊಳಿಸುತ್ತಿದೆ, ಪಾತಾಳಕ್ಕೆ ಇಳಿಸುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು.
  • ಈಗ ನಮ್ಮನ್ನಾಳುತ್ತಿರುವವರಿಗೆ ಧರ್ಮವೂ ಗೊತ್ತಿಲ್ಲ, ರಾಜಕಾರಣವೂ ಗೊತ್ತಿಲ್ಲ. ಮತೀಯವಾದ, ಕಂದಾಚಾರ, ಮೌಢ್ಯ ಮತ್ತು ಹಳೆಯದೇ ದೊಡ್ಡದು ಎನ್ನುವ ಕುರುಡು ನಂಬಿಕೆಯನ್ನು ಹೊಂದಿದ್ದಾರೆ. ಮತಾಂಧತೆ ಹೆಚ್ಚುತ್ತಿದೆ. ಇದರಿಂದ ಮೂಲಭೂತವಾದವೂ ಹೆಚ್ಚುತ್ತಿದೆ. “ಮತಭ್ರಾಂತಿಯೇ ಮನುಷ್ಯನ ದೊಡ್ಡ ಶತ್ರು,’’ ಎಂದು ೧೨೫ ವರ್ಷದ ಹಿಂದೆ ವಿವೇಕಾನಂದರು ಹೇಳಿದರು. ಈಗಲೂ ನಾವು ಹಾಗೇ ಇದ್ದೇವೆ.
  • ಯುರೋಪಿನ ಚರ್ಚುಗಳಿಗೆ ಯುವಕರೇ ಬರುತ್ತಿಲ್ಲ ಎಂದು ಅಲ್ಲಿನ ಪಾದ್ರಿಗಳು ಬೇಸರಿಸುತ್ತಿದ್ದಾರೆ. ಇಂಥಲ್ಲಿ ಯಾವುದೇ ದೊಡ್ಡ ವಿಚಾರಗಳನ್ನು, ವೈಜ್ಞಾನಿಕ ಮನೋಧರ್ಮವನ್ನು ಹೇಳುತ್ತಿಲ್ಲ ಎನ್ನುವುದು ಇದಕ್ಕೆ ಕಾರಣ. ಅಂತ ಸ್ಥಿತಿ ನಮ್ಮ ದೇವಾಲಯ, ಚರ್ಚು, ಮಸೀದಿಗಳಿಗೂ ಬರಬೇಕು.
  • ನಾನು ಯಾವತ್ತೂ ಸಾವಿಗೆ ಅಂಜಿ ಕೂರುವುದಿಲ್ಲ. ಮಾಡುವುದನ್ನು ಮಾಡುತ್ತಲೇ ಇರುತ್ತೇನೆ. ಹೇಳುವುದನ್ನು ಹೇಳುತ್ತೇನೆ. ಎಲ್ಲ ವಿಚಾರವಂತರ ಬೆಂಬಲ ನನಗೆ ಇದ್ದೇ ಇದೆ. ನಾನು ಹೇಳುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಅದಕ್ಕೆ ವಿವಾದದ ಸ್ವರೂಪ ನೀಡುತ್ತಿದ್ದಾರೆ.
  • ಪ್ರಪಂಚಕ್ಕೆ ಬೆಳಕು ಕೊಟ್ಟ ಬುದ್ಧನನ್ನೇ ದೇಶದಿಂದ ಓಡಿಸಿದವರು ನಾವು. ಅಂದಿನಿಂದಲೇ ದೇಶದ ಪಥನ ಆರಂಭವಾಯಿತು.
ಇದನ್ನೂ ಓದಿ : ಭಗವಾನ್ ಮಾತಿನ ಕಿಡಿ, ಭರಪೂರ ಕಾವ್ಯಲಹರಿ; ಜನಜಾತ್ರೆಯಾದ ನುಡಿಹಬ್ಬ
Gauri Lankesh ಮನದ ಮಾತು ವಿಚಾರವಾದಿಗಳು Rationalist ಕೆ ಎಸ್ ಭಗವಾನ್ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಎಸ್ಐಟಿ ತನಿಖೆ ಹತ್ಯೆಗೆ ಸಂಚು K S Bhagwan Special Investigation Team Plot to Assassinate
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ
ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು